ಹೊಸದಿಲ್ಲಿ : ಕರ್ನಾಟಕದ ರಾಜಕೀಯ ಬೆಳವಣಿಗೆಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಲು ಹಣಬಲ ಬಳಸುವುದಕ್ಕೆ ಬಿಜೆಪಿಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟ ವ್ಯಕ್ತಿ’ ಎಂದು ನೇರವಾಗಿ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಾಗಿ ಪ್ರಧಾನಿ ಮೋದಿ ನಡೆಸಿರುವ ಭ್ರಷ್ಟಾಚಾರವನ್ನು ರಾಹುಲ್ ಉಗ್ರವಾಗಿ ಖಂಡಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ನಾಯಕರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ಪ್ರತಿಫಲವಾಗಿ ಬಿ ಎಸ್ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
“ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸುವುದಕ್ಕೆ ಅನುಮೋದನೆ ನೀಡಿರುವುದನ್ನು ನೀವೆಲ್ಲ ಬಹಿರಂಗವಾಗಿ ಕಂಡಿದ್ದೀರಿ; ಪ್ರಧಾನಿಯವರು ತಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ; ಆದರೆ ವಾಸ್ತವದಲ್ಲಿ ಅದು ಶುದ್ಧ ಸುಳ್ಳು. ಅವರು ನಿಜಕ್ಕೂ ಓರ್ವ ಭ್ರಷ್ಟ ವ್ಯಕ್ತಿ’ ಎಂದು ರಾಹುಲ್ ಗಾಂಧಿ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
“ಬಿಜೆಪಿ ದೇಶದ ಪ್ರಜಾಸತ್ತೆಯ ಪ್ರತಿಯೊಂದು ಸಂಸ್ಥೆಯ ಮೇಲೆ ದಾಳಿ ನಡೆಸುತ್ತಿದೆ; ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿನ ವಿರೋಧ ಪಕ್ಷಗಳು ಒಗ್ಗೂಡಿ ನಿಂತಿರುವುದಕ್ಕೆ ಮತ್ತು ಬಿಜೆಪಿಯನ್ನು ಸೋಲಿಸಿರುವುದಕ್ಕೆ (ಕರ್ನಾಟಕದಲ್ಲಿ) ನಾನು ಹೆಮ್ಮೆ ಪಡುತ್ತೇನೆ; ಹೀಗೆ ಮಾಡುವುದನ್ನು ನಾವು ಮುಂದುವರಿಸಲಿದ್ದೇವೆ’ ಎಂದು ರಾಹಲ್ ಗುಡುಗಿದರು.