ರಾಯ್ಪುರ: ಇದು ಸುದ್ದಿ ವಾಚಕಿಯೊಬ್ಬರು ಅಪ್ಪಟ ವೃತ್ತಿಪರತೆ ತೋರಿದ ಘಟನೆ.ಛತ್ತೀಸ್‌ಗಢದಲ್ಲಿ “ಐಬಿಸಿ-24′ ಎಂಬುದು ಜನಪ್ರಿಯ ಸುದ್ದಿವಾಹಿನಿ. ಅಲ್ಲಿ ಸುದ್ದಿ ವಾಚಕಿಯಾಗಿ ಕಾರ್ಯನಿರ್ವಹಿಸುವ ಸುಪ್ರೀತ್ ಕೌರ್, ಶನಿವಾರ ಮುಂಜಾನೆ ನಡೆದ ರಸ್ತೆ ಅಪಘಾತವೊಂದರ ಬ್ರೇಕಿಂಗ್ ನ್ಯೂಸ್ ಓದುತ್ತಾರೆ. ಆ ಅಪಘಾತದಲ್ಲಿ ಐವರು ಮೃತಪಟ್ಟಿರುತ್ತಾರೆ. ಮೃತರ ಪೈಕಿ ಒಬ್ಬರು, ಸುದ್ದಿ ವಾಚಕಿ ಸುಪ್ರೀತ್ ಕೌರ್ ಅವರ ಪತಿ!
ಸುಪ್ರೀತ್ ಕೌರ್ ಶನಿವಾರ ಬೆಳಗಿನ ಲೈವ್ ಬುಲೆಟಿನ್ ಓದುತ್ತಿರುತ್ತಾರೆ. ಅವರಿಗೆ ಕರೆ ಮಾಡುವ ವರದಿಗಾರ, ಮಹಾಸಮುಂದ್ ಜಿಲ್ಲೆಯ ಪಿಠಾರಾ ಎಂಬಲ್ಲಿ ಅಪಘಾತವಾಗಿದ್ದು, ರೆನೋ ಡಸ್ಟರ್ ವಾಹನದಲ್ಲಿದ್ದ ಐದು ಮಂದಿ ಮೃತಪಟ್ಟಿರುವುದಾಗಿ “ಬ್ರೇಕಿಂಗ್ ನ್ಯೂಸ್’ ಕೊಡುತ್ತಾನೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನುತ್ತಾನೆ. ಆದರೆ ಅಪಘಾತದಲ್ಲಿ ಮೃತಪಟ್ಟಿದ್ದು ಬೇರಾರೂ ಅಲ್ಲ, ನನ್ನ ಪತಿ ಎನ್ನುವುದು ಸುಪ್ರೀತ್ ಕೌರ್‌ಗೆ ಮನವರಿಕೆಯಾಗುತ್ತದೆ. ಕಾರಣ, ಆಕೆಯ ಪತಿ ಕೂಡ ಶನಿವಾರ ಮುಂಜಾನೆ ಅದೇ ಸಮಯದಲ್ಲಿ ನಾಲ್ವರು ಗೆಳೆಯರೊಂದಿಗೆ ಡಸ್ಟರ್ ವಾಹನದಲ್ಲಿ ಅದೇ ಮಾರ್ಗದಲ್ಲಿ ಹೋಗಿದ್ದರು.
ಸುದ್ದಿ ಓದಿದ ಬಳಿಕ ಕುಸಿದರು: ವಿಷಯ ತಿಳಿದ ನಂತರವೂ ನೋವನ್ನು ನುಂಗಿಕೊಂಡು, ಕರ್ತವ್ಯ ಪ್ರಜ್ಞೆ ಮೆರೆದ ಕೌರ್, ತನ್ನ ಪತಿಯನ್ನು ಬಲಿ ತೆಗೆದುಕೊಂಡ ಅಪಘಾತದ ಸುದ್ದಿಯನ್ನು ವಾಹಿನಿ ಮೂಲಕ ಇಡೀ ರಾಜ್ಯದ ಮುಂದೆ ಓದುತ್ತಾರೆ. ಬುಲೆಟಿನ್ ಮುಗಿಸಿ ಸ್ಟುಡಿಯೋದಿಂದ ಹೊರಬರುತ್ತಲೇ ದುಃಖ ತಡೆಯಲಾಗದೇ, ಒಮ್ಮೆಲೇ ಕುಸಿದು ಬೀಳುತ್ತಾರೆ.
“ಅಪಘಾತದಲ್ಲಿ ಕೌರ್ ಅವರ ಪತಿ ಮೃತಪಟ್ಟಿರುವ ವಿಚಾರವು ನಮಗೆ ತಿಳಿದಿತ್ತು. ಆದರೆ ನಮಗ್ಯಾರಿಗೂ ಆ ವಿಷಯವನ್ನು ಆಕೆಗೆ ತಿಳಿಸುವ ಧೈರ್ಯ ಬರಲಿಲ್ಲ. ಅಪಘಾತದ ದೃಶ್ಯದಲ್ಲಿದ್ದ ವಾಹನವನ್ನು ನೋಡುತ್ತಿದ್ದಂತೆಯೇ ಅಲ್ಲಿ ಮೃತಪಟ್ಟಿದ್ದು ತಮ್ಮ ಪತಿ ಎಂಬುದು ಕೌರ್ ಅವರಿಗೆ ಗೊತ್ತಾಗಿತ್ತು.
ಆದರೆ ಬುಲೆಟಿನ್ ಪೂರ್ಣಗೊಳ್ಳುವವರೆಗೆ ಅವರು ತಮ್ಮಲ್ಲಿನ ನೋವು, ಆತಂಕವನ್ನು ತೋರಿಸಿಕೊಳ್ಳಲಿಲ್ಲ. ವಾರ್ತೆ ಓದಿ ಮುಗಿಸಿ, ಸ್ಟುಡಿಯೋದಿಂದ ಹೊರಬರುತ್ತಿದ್ದಂತೆ ಅವರ ದುಃಖದ ಕಟ್ಟೆಯೊಡೆಯಿತು. ಅವರು ಸಂಬಂಧಿಕರಿಗೆ ಕರೆ ಮಾಡ ತೊಡಗಿದರು.
ನಿಜಕ್ಕೂ ಕೌರ್ ಒಬ್ಬ ದಿಟ್ಟ ಮಹಿಳೆ,’ ಎಂದು ಸುದ್ದಿವಾಹಿನಿಯ ಹಿರಿಯ ಸಂಪಾದಕರೊಬ್ಬರು ಹೇಳಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲರೂ ಕೌರ್‌ಳ ದಿಟ್ಟತನವನ್ನು ಶ್ಲಾ ಸುತ್ತಿದ್ದಾರೆ.