Advertisement

ಮೊದಲ ಬಡಾವಣೆ ಪಟ್ಟ ಗಿಟ್ಟಿಸಿದ್ದರೂ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ !

09:36 PM Oct 11, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆಯಲ್ಲಿ ಅತಿ ವಿಸ್ತಾರವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್‌ಗಳಲ್ಲಿ ದೇರೆ ಬೈಲು ವಾರ್ಡ್‌ ಕೂಡ ಒಂದು. ಆದರೆ ವಾರ್ಡ್‌ ಸಾಕಷ್ಟು ಅಭಿವೃದ್ಧಿ ಆಗಿದ್ದರೂ ಪ್ರಮುಖ ಮೂಲ ಸೌಕರ್ಯಗಳ ಸಮಸ್ಯೆ ಹಾಗೆಯೇ ಇವೆ.

Advertisement

ಪಾಲಿಕೆಯ 23ನೇ ವಾರ್ಡ್‌ ಆಗಿರುವ ಇದು ನಗರ ಪ್ರದೇಶದಿಂದ ಕೊಂಚ ದೂರವಿದ್ದು, ಗುಡ್ಡ-ತೋಟಗಳಿಂದ ಕೂಡಿದೆ. ಜಿಲ್ಲೆಯ ಪ್ರಥಮ ಬಡಾವಣೆ ಎಂದು ಹೆಸರು ಪಡೆದಿರುವ ಲ್ಯಾಂಡ್‌ಲಿಂಕ್ಸ್‌ ಈ ವಾರ್ಡ್‌ನ ಪ್ರಮುಖ ಭಾಗ. ಹಲವು ವರ್ಷಗಳ ಹಿಂದೆ ಗುಡ್ಡವಾಗಿದ್ದ ಪ್ರದೇಶವನ್ನು ಬಡಾವಣೆಯಾಗಿ ಬ¨ಲಾಯಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಕೀರ್ತಿ ಈ ವಾರ್ಡ್‌ಗೆ ಇದೆ.

ಇಲ್ಲಿ ಇದೀಗ ಸುಮಾರು ಮೂರು ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಇದರಿಂದ ಬಡಾವಣೆ ನಿರ್ಮಿಸುವ ಸಮಯ ದಲ್ಲಿ ಮಾಡಲಾಗಿದ್ದ ಮೂಲ ಸೌಕರ್ಯಗಳು ಜನಸಂಖ್ಯೆ ಹೆಚ್ಚಾದಾಗ ಸಮಸ್ಯೆಗಳಾಗಿ ಬದಲಾಗಿದ್ದು, ಇದನ್ನು ಹಂತ-ಹಂತವಾಗಿ ಪರಿಹರಿಸುವುದು ಇಲ್ಲಿನ ಜನಪ್ರತಿನಿಧಿಯ ಜವಾಬ್ದಾರಿ.

ಒಳಚರಂಡಿ ಕಾಮಗಾರಿ ಇನ್ನೂ ಬಾಕಿ
23ನೇ ವಾರ್ಡ್‌ನಲ್ಲಿ ಒಳಚರಂಡಿ, ಚರಂಡಿ ಸಮಸ್ಯೆಗಳು ಪ್ರಮುಖವಾಗಿ ಕಾಡುತ್ತಿವೆ. ಬಡಾವಣೆ ನಿರ್ಮಿಸುವ ವೇಳೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಈಗ ಸಮಸ್ಯೆಗಳಾಗಿ ಬದ ಲಾಗಿವೆ. ಲ್ಯಾಂಡ್‌ಲಿಂಕ್ಸ್‌ನಲ್ಲಿ ರಸ್ತೆಗಳು ಸಾಕಷ್ಟು ಅಭಿವೃದ್ಧಿ ಯಾಗಿದ್ದರೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.

ನಿಕಟಪೂರ್ವ ಕಾರ್ಪೊ ರೇಟರ್‌ ಹೇಳುವ ಪ್ರಕಾರ ವಾರ್ಡ್‌ ನಲ್ಲಿ ಈ ಹಿಂದೆ ಶೇ.25ರಷ್ಟು ಭಾಗದಲ್ಲಿ ಮಾತ್ರ ಚರಂಡಿ ವ್ಯವಸ್ಥೆ ಇತ್ತು. ಈಗ ಸುಮಾರು ಶೇ.60ರಷ್ಟು ಭಾಗದಲ್ಲಿ ಚರಂಡಿ ವ್ಯವಸ್ಥೆ ಮಾಡ ಲಾಗಿದೆ. ಇನ್ನೂ ಶೇ.40ರಷ್ಟು ಬಾಕಿಯಿದೆ. ಅದನ್ನು ಪೂರ್ಣಗೊಳಿಸುವ ಇರಾದೆ ಇತ್ತು ಎನ್ನು ತ್ತಾರೆ. ಇನ್ನೂ ಉಳಿದ ಭಾಗಗಳಲ್ಲಿ ಅಡ್ಡರಸ್ತೆ, ಒಳರಸ್ತೆಗಳ ಅಭಿವೃದ್ಧಿಯಾಗಬೇಕಾಗಿದೆ. ಮಂದಾರಬೈಲ್‌, ನೆಕ್ಕಿಲಗುಡ್ಡೆ, ಬೋರುಗಡ್ಡೆ, ಭಾಮರಕೋಡಿ ಮೊದಲಾದ ಸ್ಥಳಗಳಲ್ಲಿ ರಸ್ತೆಗಳ ಅಭಿವೃದ್ಧಿ ಸಾಕಷ್ಟು ಆಗಬೇಕಾಗಿದೆ.

Advertisement

ಪಾರ್ಕ್‌ ನಿರ್ವಹಣೆ ನನೆಗುದಿಗೆ
ಲ್ಯಾಂಡ್‌ ಲಿಂಕ್ಸ್‌ ಎರಡನೇ ಮುಖ್ಯ ರಸ್ತೆಯ 6ನೇ ಅಡ್ಡರಸ್ತೆಯಲ್ಲಿರುವ ಮಕ್ಕಳ ಆಟದ ಪಾರ್ಕ್‌ ನಿರ್ವಹಣೆಯನ್ನು ಸರಿ ಯಾಗಿ ಮಾಡಲಾಗಿಲ್ಲ. ಬಡಾವಣೆಯಲ್ಲಿ ಪಾರ್ಕ್‌ ಇರಬೇಕು ಎಂಬುದಾಗಿ ಕಡ್ಡಾಯ ನಿಯಮವಿರುವುದರಿಂದ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಆದರೆ ಅದರ ನಿರ್ವಹಣೆ ಸರಿಯಾಗಿ ಮಾಡದೆ ಇರುವುದು ಬೇಸರಕ್ಕೆ ಕಾರಣವಾಗಿದೆ. ಸ್ಥಳೀಯ ರಾದ ವಿನಯ್‌ ಪ್ರಕಾರ, ಈ ಪಾರ್ಕ್‌ನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಮಕ್ಕಳು ಆಡಲು ಸರಿಯಾದ ಜಾಗ ಇಲ್ಲದ ಕಾರಣ ನಾವೆಲ್ಲ ಒಟ್ಟಾಗಿ ಪಾರ್ಕ್‌ ಶುಚಿ ಮಾಡುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ.

ಪ್ರಮುಖ ಕಾಮಗಾರಿ
– ವಾರ್ಡ್‌ನ ನೀರಿನ ಸಮಸ್ಯೆ ಮೂರು ವರ್ಷಗಳಲ್ಲಿ ಭಾಗಶಃ ಪರಿಹಾರ.
-ಮಹಾಗುಡ್ಡೆ, ಬೋರುಗುಡ್ಡೆ, ಲ್ಯಾಂಡ್‌ಲಿಂಕ್ಸ್‌ನ ನೀರಿನ ಸಮಸ್ಯೆಗೆ ಪರಿಹಾರ.
– ಒಳರಸ್ತೆಗಳಿಗೂ ಹೈಟೆಕ್‌ ಬೀದಿ ದೀಪಗಳ ಅಳವಡಿಕೆ.
-ರಾಮಾಶ್ರಮದಿಂದ ಲ್ಯಾಂಡ್ಸ್‌ ಲಿಂಕ್ಸ್‌ ಗೆ ಬರಲು ಹೊಸ ಕಾಂಕ್ರೀಟ್‌ ರಸ್ತೆ ನಿರ್ಮಾಣ.
-ಕಟ್ಟೆಯಿಂದ ಮಹಾಕಾಳಿದೇವಿ ದೇವಸ್ಥಾನ ಕೆಳಗಿನ ಕೊಂಚಾಡಿಗೆ ಹೋಗುಲು ನೂತನ ಕಾಂಕ್ರೀಟ್‌ ರಸ್ತೆ ನಿರ್ಮಾಣ.
– ನಾಗಕನ್ನಿಕಾ – ಮಂದಾರಬೈಲು ಲಿಂಕಿಂಗ್‌ ರಸ್ತೆ.
–  ಲ್ಯಾಂಡ್‌ಲಿಂಕ್ಸ್‌ ಶ್ವೇತಾ ಜನರಲ್‌ ಸ್ಟೋರ್‌ ಬಳಿಯಿಂದ ನಾಗಕನ್ನಿಕಾ ಬಳಿಗೆ ಹೋಗುವ ರಸ್ತೆ ಅಭಿವೃದ್ಧಿ.
–  ನಾಗಕನ್ನಿಕಾ, ಮಾಲೇಮಾರ್‌ ಅಡ್ಡರಸ್ತೆಗಳಿಗೆ ಕಾಂಕ್ರೀಟ್‌.

ದೇರೆಬೈಲು ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಮೇರಿಹಿಲ್‌ ಪೆಟ್ರೋಲ್‌ ಬಂಕ್‌ನಿಂದ ಹರಿಪದವು, ಪ್ರಿಯದರ್ಶಿನಿ ಶಾಲೆಯಾಗಿ ಲ್ಯಾಂಡ್‌ಲಿಂಕ್ಸ್‌, ಹೆಲಿಪ್ಯಾಡ್‌ ಮೈದಾನದ ಒಂದು ಬದಿಯಾಗಿ ಲ್ಯಾಂಡ್‌ಲಿಂಕ್ಸ್‌, ಗಡುಕಲ್ಲು , ಬೋರುಗುಡ್ಡೆ, ಮಾಲೇಮಾರ್‌ ಒಂದು ಪಾರ್ಶ್ವವಾಗಿ ಕುಂಟಿಕಾನ, ಮಂದಾರಬೈಲು ಪ್ರದೇಶ.

ಒಟ್ಟು ಮತದಾರರು 8500
ನಿಕಟಪೂರ್ವ ಕಾರ್ಪೊರೇಟರ್‌- ಕೆ. ರಾಜೇಶ್‌ (ಬಿಜೆಪಿ)

5 ವರ್ಷಗಳ‌ಲ್ಲಿ ಬಂದ ಅನುದಾನ
2014-15 1.14 ಕೋಟಿ ರೂ.
2015- 16 1.29 ಕೋಟಿ ರೂ.
2016- 17 2.29 ಕೋಟಿ ರೂ.
2017 -18 1.24 ಕೋಟಿ ರೂ.
2018- 19 1.21 ಕೋಟಿ ರೂ.

ಬಡಾವಣೆಗಳಿಂದ ನಗರ ಅಭಿವೃದ್ಧಿಗೆ ವೇಗ
ನಗರಗಳಲ್ಲಿ ಬಡಾವಣೆಗಳಿದ್ದರೆ ಆ ನಗರದ ಅಭಿವೃದ್ಧಿ ವೇಗವನ್ನು ಪಡೆದು ಕೊಳ್ಳುತ್ತದೆ. ಬಡಾವಣೆ ನಿರ್ಮಾಣ ಹಂತದಲ್ಲೇ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಲ್ಲಿ ಜನರಿಗೆ ಸಮಸ್ಯೆಯಾಗುವುದಿಲ್ಲ. ವಾರ್ಡ್‌ನ ಕೆಲವು ಭಾಗಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಪೂರ್ಣವಾಗಿಲ್ಲ. ಪ್ರಾರಂಭಗೊಂಡಿವೆ.
-ಕೆ. ರಾಜೇಶ್‌

-  ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next