Advertisement
ಬಡರೋಗಿಗಳಿಗೆ ಶೇ.30ರಿಂದ ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಅಂತೆಯೇ ವಿಕ್ಟೋರಿಯಾ ಸಮುತ್ಛಯ ಆಸ್ಪತ್ರೆಗಳು, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸೇರಿದಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು 2-3 ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಆದರೆ, ಈ ಕೇಂದ್ರಗಳು ಸದಾ ಬಾಗಿಲು ಮುಚ್ಚಿರುತ್ತವೆ. ಬಾಗಿಲು ತೆರೆದಿದ್ದರೂ ಅಗತ್ಯ ಔಷಧಗಳು ಸಿಗುವುದಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಮಹಾತ್ವಾಂಕ್ಷಿ ಯೋಜನೆ ಬಡರೋಗಿಗಳಿಗೆ ಮರೀಚಿಕೆಯಾಗಿದ್ದು, ಅವರು ಖಾಸಗಿ ಔಷಧ ಮಳಿಗೆಗಳಿಗೆ ತೆರಳಿ ಹೆಚ್ಚು ಹಣ ವ್ಯಯಿಸುವುದು ತಪ್ಪಿಲ್ಲ.
Related Articles
Advertisement
ಮಳಿಗೆ ಮುಚ್ಚಿ ಒಂದೂವರೆ ವರ್ಷವಾಯ್ತು!: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿದ್ದ ಜನೌಷಧ ಮಳಿಗೆಯಲ್ಲಿ ಖಾಸಗಿ ಕಂಪನಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಹಾಗೂ ಹೆಚ್ಚು ದರಕ್ಕೆ ಔಷಧ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಮಳಿಗೆಯನ್ನು ಮುಚ್ಚಲಾಗಿದೆ. ಆದರೆ, ಈವರೆಗೂ ಈ ಜನೌಷಧ ಕೇಂದ್ರ ಪುನರಾರಂಭವಾಗಿಲ್ಲ. ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಯೂ ಜನೌಷಧ ಮಳಿಗೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಜನರು ಪಡಿತರಕ್ಕೆ ಕಾದಂತೆ ಇಲ್ಲಿ ಔಷಧ ಖರೀದಿಗೆ ಕಾಯಬೇಕಾದ ಸ್ಥಿತಿ ಇದೆ. ಇನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯಸ ರ್ಕಾರದ ನೆರವಿನೊಂದಿಗೆ ನಗರದ ವಿವಿಧೆಡೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ 122 ಜನೌಷಧ ಮಳಿಗೆಗಳಿದ್ದು, ಬಹುತೇಕ ಮಳಿಗೆಗಳ ಸ್ಥಿತಿ ಹೀಗೇ ಇದೆ.
ಪಾಲನೆ ಆಗದ ಇಲಾಖೆ ಆದೇಶ: “ಆಯಾ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಿರುವ ಜನೌಷಧ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆ ಹೊಣೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿದೆ’ ಎಂದು ಆರೋಗ್ಯ ಇಲಾಖೆ ಕಳೆದ ತಿಂಗಳು ಸುತ್ತೋಲೆ ಹೊರಡಿಸಿದೆ. ಜತೆಗೆ ವಾರಕ್ಕೊಮ್ಮೆ ಕೇಂದ್ರಗಳು ನಿಯಮ ಪಾಲಿಸುತ್ತಿವೆಯೇ ಎಂಬ ಕುರಿತು ತಪಾಸಣೆ ನಡೆಸಿ ಆಯುಕ್ತರ ಕಚೇರಿಗೆ ವರದಿ ನೀಡಲು ಆದೇಶಿಸಿದೆ. ಈ ನಿಯಮ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆ ಸೇರಿದಂತೆ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
“24*7 ಸೇವೆ’ ಎಂದು ಬೋರ್ಡ್ ಇದ್ದರೂ ವಿಕ್ಟೋರಿಯಾ ಆಸ್ಪತ್ರೆ ಜನೌಷಧ ಕೇಂದ್ರ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ತೆರೆದಿರುತ್ತದೆ. ಕಡಿಮೆ ಬೆಲೆ ಎಂದು ಔಷಧ ಖರೀದಿಸಲು ಹೋದರೆ, ಪ್ರತಿ ಬಾರಿಯೂ “ನಮ್ಮಲ್ಲಿ ಈ ಔಷಧ ಇಲ್ಲ’ ಎನುತ್ತಾರೆ.-ಆನಂದಪ್ಪ, ರೋಗಿ ಸಂಬಂಧಿ ಆಸ್ಪತ್ರೆ ಆವರಣದ ಜನೌಷಧ ಕೇಂದ್ರಗಳ ನಿರ್ವಹಣೆ ಆಯಾ ಆಸ್ಪತ್ರೆ ಆಡಳಿತಾಧಿಕಾರಿಗಳದ್ದು. ಗುತ್ತಿಗೆ ಪಡೆದಿರುವ ಸಂಸ್ಥೆ, ವ್ಯಕ್ತಿಗಳು ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಕಷ್ಟ ಎನ್ನುತ್ತಿದ್ದಾರೆ. ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
-ವಿವೇಕ್ ದೊರೈ, ಆರೋಗ್ಯ ಇಲಾಖೆ ಉಪನಿರ್ದೇಶಕ * ಜಯಪ್ರಕಾಶ್ ಬಿರಾದಾರ್