Advertisement

ಗಮನಾರ್ಹ ಅಭಿವೃದ್ಧಿಯಾಗಿದ್ದರೂ ಚರಂಡಿ ವ್ಯವಸ್ಥೆ ಸುಧಾರಿಸಬೇಕಿದೆ!

10:15 PM Oct 16, 2019 | mahesh |

ಮಹಾನಗರ: ಸ್ಮಾರ್ಟ್‌ ಸಿಟಿ, ಎಬಿಡಿ ಯೋಜನೆಯ ಕಾಮಗಾರಿಗೆ ಆಯ್ಕೆಯಾದ ಮಹಾನಗರ ಪಾಲಿಕೆ ವ್ಯಾಪ್ತಿಯ ಏಳು ವಾರ್ಡ್‌ಗಳ ಪೈಕಿ ಕಂಟೋನ್ಮೆಂಟ್‌ ವಾರ್ಡ್‌ ಕೂಡ ಒಂದು. ಪಾಲಿಕೆಯಲ್ಲಿ 46ನೇ ವಾರ್ಡ್‌ ಆಗಿ ಗುರುತಿಸಿಕೊಂಡಿರುವ ಇಲ್ಲಿ ಹೆಚ್ಚಿನ ರಸ್ತೆಗಳಿಗೆ ಈಗ ಡಾಮರು, ಕಾಂಕ್ರೀಟ್‌ ಹಾಕಲಾಗಿದೆ. ಕೆಲವೊಂದು ಒಳ ರಸ್ತೆಗಳು ಕಿರಿದಾಗಿದ್ದು, ಲಘು ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ. ಉಳಿದಂತೆ ಕೆಲವೊಂದು ಕಾಮಗಾರಿ ಪ್ರಗತಿಯಲ್ಲಿದೆ. ಐದು ವರ್ಷಗಳಲ್ಲಿ ಸುಮಾರು 4 ಕೋಟಿ ರೂ. ಹೆಚ್ಚಿನ ಪಾಲಿಕೆ ಅನುದಾನವನ್ನು ವಾರ್ಡ್‌ನ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ.

Advertisement

ಈ ವಾರ್ಡ್‌ನ ಜಟಿಲ ಸಮಸ್ಯೆಗಳಲ್ಲಿ ಒಳಚರಂಡಿ ವ್ಯವಸ್ಥೆ ಮುಖ್ಯವಾದುದು. ನಗರದಲ್ಲಿ ಭಾರೀ ಮಳೆ ಸುರಿದರೆ ವೈದ್ಯನಾಥ ನಗರ, ದೂಮಪ್ಪ ಕಾಂಪೌಂಡ್‌, ಶಿವನಗರ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸುತ್ತದೆ. ಅತ್ತಾ ವರ, ಮಿತ್ತ ಮುಗೇರು ಕಡೆ ಯಿಂದ ಬರುವ ಒಳಚರಂಡಿ ಕೃಷ್ಣ ಭಜನ ಮಂದಿರ 5ನೇ ಅಡ್ಡ ರಸ್ತೆ ಬಳಿ ಸೇರುತ್ತದೆ. ಭಾರೀ ಮಳೆ ಬಂದರೆ ಇದ ರಿಂದ ಕೊಳಚೆ ನೀರು ರಸ್ತೆಗೆ ಬರುತ್ತದೆ.

ನೆಹರೂ ಮೈದಾನ ಇದೇ ವಾರ್ಡ್‌ಗೆ ಒಳಪಟ್ಟಿದೆ. ಅಲ್ಲೇ ಪಕ್ಕ ದಲ್ಲಿರುವ ಫುಟ್‌ಬಾಲ್‌ ಮೈದಾನಕ್ಕೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ಫುಟ್‌ಬಾಲ್‌ ಕ್ರೀಡಾಂಗಣದ ಹುಲ್ಲುಹಾಸಿಗೆ ರಾಜ್ಯ ಸರಕಾರವು ಒಂದು ಕೋಟಿ ರೂ. ಅನುದಾನವನ್ನು ಈಗಾಗಲೇ ಮಂಜೂರು ಮಾಡಿದ್ದು, ಇದರಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಿದೆ. ಮಂಗಳಾ ಕ್ರೀಡಾಂಗಣ ಸಮಿತಿಯಿಂದ 8 ಲಕ್ಷ ರೂ. ಸೇರಿ ಒಟ್ಟಾರೆ 33 ಲಕ್ಷ ರೂ. ಹಣವನ್ನು ಕ್ರೀಡಾ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ನೀಡಿದೆ. ಆದರೆ ಕೆಲವೊಂದು ತೊಡಕಿನ ಕಾರಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಸಾರ್ವಜನಿಕರೊಬ್ಬರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ವಾರ್ಡ್‌ನ ಕೆಲವೊಂದು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ನೀರು ಬರುವ ಸಮಯ ಸಾಕಾಗುತ್ತಿಲ್ಲ. ದಿನದ 24 ಗಂಟೆಯೂ ನೀರಿನ ಸೌಲಭ್ಯ ನೀಡಬೇಕು. ಇನ್ನು, ಸ್ಟೇಟ್‌ಬ್ಯಾಂಕ್‌ ಬಳಿಯ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಡಾಮರು, ಕಾಂಕ್ರೀಟ್‌ ಕಾಮಗಾರಿ ನಡೆದಿಲ್ಲ. ಈ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ ಪರಿಹರಿಸಬೇಕಿದೆ’ ಎನ್ನುತ್ತಾರೆ.

ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಡೇಂಜರ್‌ !
ಪಾಂಡೇಶ್ವರ ರೈಲು ಹಳಿಯ ಎರಡೂ ಕಡೆಗಳಲ್ಲಿ ರಸ್ತೆಗೆ ಕಾಂಕ್ರೀಟ್‌ ಹಾಕಿ ಚತುಷ್ಪಥವಾಗಿದ್ದರೂ ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಇನ್ನೂ ಕೂಡ ಅಗಲ ಕಿರಿದಾಗಿದೆ. ರೈಲು ಸಂಚರಿಸುವ ವೇಳೆ ರಸ್ತೆ ಸಂಚಾರ ನಿಲ್ಲಿಸಲು ಕಬ್ಬಿಣದ ಗೇಟ್‌ ಮುಚ್ಚಲಾಗುತ್ತದೆ. ಕೆಲವೊಮ್ಮೆ ಗೂಡ್ಸ್‌ ರೈಲು ಆಗಮಿಸಿದಾಗ ರೈಲ್ವೇ ಗೇಟ್‌ ಹಾಕುವುದರಿಂದ ಕನಿಷ್ಠ 15ರಿಂದ 20 ನಿಮಿಷ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

Advertisement

ಪ್ರಗತಿಯಲ್ಲಿರುವ ಕಾಮಗಾರಿ
ಕಂಟೋನ್ಮೆಂಟ್‌ ವಾರ್ಡ್‌ನ ಅನೇಕ ಕಡೆಗಳಲ್ಲಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆ ಯಲ್ಲಿಕೆಲವೊಂದು ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಖ್ಯವಾಗಿ, ಸುಮಾರು 50 ಲಕ್ಷ ರೂ.ನಲ್ಲಿ ಪೊಲೀಸ್‌ ಲೇನ್‌ ಸಮುದಾಯ ಭವನ ನಿರ್ಮಾಣ, 50 ಲಕ್ಷ ರೂ.ನಲ್ಲಿ ಪೊಲೀಸ್‌ ಲೇನ್‌ ಮುಖ್ಯ ರಸ್ತೆ ಕಾಂಕ್ರೀಟ್‌ ಕಾಮಗಾರಿ, ಶಿವನಗರದ ಮೂರುಕಡೆಗಳಲ್ಲಿ 25.5 ಲಕ್ಷ ರೂ.ನಲ್ಲಿ ಕಾಲುಸಂಕ, 1 ಕೋಟಿ ರೂ. ವೆಚ್ಚದಲ್ಲಿ ಅತ್ತಾವರ 5ನೇ ಅಡ್ಡರಸ್ತೆಯ ರಾಜಕಾಲುವೆ ತಡೆಗೋಡೆ ಕಾಮಗಾರಿ ನಡೆಯಲಿದೆ. ಪಾಂಡೇಶ್ವರ ಅಗ್ನಿಶಾಮಕ ಇಲಾಖೆಯಿಂದ ಪಾಂಡೇಶ್ವರ ಕಟ್ಟೆಯವರೆಗೆ ಒಳಚರಂಡಿ, ರಸ್ತೆ ವಿಸ್ತರಣೆ ನಡೆಯುತ್ತಿದೆ. ಆರ್‌ಟಿಒ ಬಳಿಯ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ಪಾತ್‌ ಕಾಮಗಾರಿ, ಅತ್ತಾವರ ಮುಖ್ಯ ರಸ್ತೆಯ ಚಕ್ರಪಾಣಿ ದೇವಸ್ಥಾನದ ಮುಂಭಾಗ ಫುಟ್‌ಪಾತ್‌ ಕಾರ್ಯ ಆರಂಭಗೊಂಡಿದೆ.

ಪ್ರಮುಖ ಕಾಮಗಾರಿ
– ವೈದ್ಯನಾಥ ನಗರದ ರಸ್ತೆಗೆ ಡಾಮರು ಕಾಮಗಾರಿ
– ವೈದ್ಯನಾಥ ಲೇಔಟ್‌ ಇಂಟರ್‌ಲಾಕ್‌ ಅಳವಡಿಕೆ, ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ
– ಪೊಲೀಸ್‌ ಲೇನ್‌ ರಸ್ತೆಗೆ ಡಾಮರು ಹಾಕಲಾಗಿದೆ
– ಅತ್ತಾವರ 5ನೇ ಅಡ್ಡರಸ್ತೆ, ಪರಿಶಿಷ್ಟ ಜಾತಿ ಸಮುದಾಯ ಭವನ
– ಸ್ಮಾರ್ಟ್‌ಸಿಟಿ ಯೋಜನೆ ಯಲ್ಲಿ ಫುಟ್‌ಪಾತ್‌ ನಿರ್ಮಾಣ

ಕಂಟೋನ್ಮೆಂಟ್‌ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಪಾಂಡೇಶ್ವರ ಕಟ್ಟೆಯಿಂದ ಓಲ್ಡ್‌ ಕೆಂಟ್‌ ರಸ್ತೆ, ಪೊಲೀಸ್‌ ಲೇನ್‌, ಅತ್ತಾವರ ವೈದ್ಯನಾಥ ನಗರ, ದೂಮಪ್ಪ ಕಂಪೌಂಡ್‌, ಶಿವನಗರದ ಒಂದು ಭಾಗ, ನೆಹರೂ ಮೈದಾನ, ಸರ್ವಿಸ್‌ ಬಸ್‌ ನಿಲ್ದಾಣ, ಆರ್‌ಟಿಒ, ಟೌನ್‌ಹಾಲ್‌, ಮಧುಸೂದನ್‌ ಕುಶೆ ಶಿಕ್ಷಣ ಸಂಸ್ಥೆ ಇತ್ಯಾದಿ.

ಒಟ್ಟು ಮತದಾರರು: 6400
ನಿಕಟಪೂರ್ವ ಕಾರ್ಪೊರೇಟರ್‌-ದಿವಾಕರ ಪಾಂಡೇಶ್ವರ (ಬಿಜೆಪಿ)

ಮೂಲ ಸೌಕರ್ಯ ಗಳಿಗೆ ಆದ್ಯತೆ
ನನ್ನ ಅವಧಿಯಲ್ಲಿ ಜನರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ನಿರ್ವಹಿಸಿದ್ದೇನೆ. ವಾರ್ಡ್‌ನ ಕೆಲವೊಂದು ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ, ನೀರಿನ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಒತ್ತು ನೀಡಲಾಗುವುದು.
-ದಿವಾಕರ ಪಾಂಡೇಶ್ವರ

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next