Advertisement

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

12:50 PM Nov 03, 2024 | Team Udayavani |

ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್‌ ರಾಜ್ಯ ಸರಕಾರವು ರಾಜಧಾನಿ ಆಲ್ಬನಿಯಲ್ಲಿ ದೀಪಾವಳಿ ಹಬ್ಬವನ್ನು  ಇದೇ ಅ.19ರಂದು ಅದ್ದೂರಿಯಾಗಿ ಆಚರಿಸಲಾಯಿತು. ಇದರಲ್ಲಿ ಸಾವಿರಾರು ಜನರು ಅತೀ ಉತ್ಸಾಹದಿಂದ ಭಾಗವಹಿಸಿದ್ದರು. ಭಾರತ ದೇಶದ ಹಿಂದೂಗಳು ಮಾತ್ರವಲ್ಲದೆ, ಗಯಾನ, ಬಾಂಗ್ಲಾ,  ನೇಪಾಲ ಹೀಗೆ ವಿವಿಧ ದೇಶಗಳ ಹಿಂದೂಗಳು ಸಹಿತ ಇದರಲ್ಲಿ ಭಾಗವಹಿಸಿದ್ದರು. ಜತೆಗೆ ಸ್ಥಳೀಯ ಅಮೆರಿಕನ್ನರೂ ಸಹಿತ ಭಾಗವಹಿಸಿದ್ದರು.

Advertisement

ದೀಪಾವಳಿ ಕಾರ್ಯಕ್ರಮವು ಎಂಪೈರ್‌ಸ್ಟೇಟ್‌ ಪ್ಲಾಜದ ಕನ್ವೆನ್‌ಶನ್‌ ಸೆಂಟನರ್‌ಲ್ಲಿ  ಡೊಳ್ಳು ಕುಣಿತ, ಮೆರವಣಿಗೆ ಮತ್ತು ಪೂಜೆಯೊಂದಿಗೆ ಪ್ರಾರಂಭವಾಯಿತು.  ಅನಂತರ ಭಾರತ ದೇಶದ ವಿವಿಧ ರಾಜ್ಯಗಳ ಸಂಘ ಸಂಸ್ಥೆಗಳಿಂದ ದೀಪಾವಳಿ ಆಚರಣೆಯ ಕುರಿತಾದ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಲ್ಪನಿ ಕನ್ನಡ ಸಂಘವು ಒಂದು ವೈವಿಧ್ಯಮಯ ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ನಡೆಸಿಕೊಟ್ಟಿತು. ಇದರಲ್ಲಿ ಕನ್ನಡ ಕಲಿ ಶಾಲೆಯ ಮಕ್ಕಳು ದೀಪಾವಳಿ ಮಹತ್ವ ತಿಳಿಸುವ ಪುರಾಣ ಕಥೆಗಳ ಚಿಕ್ಕ ನಾಟಕವನ್ನು ಮತ್ತು ಕನ್ನಡ ಮಹಿಳೆಯರು  ಕಂಸಾಳೆ ನೃತ್ಯವನ್ನು ಹಾಗೂ ಎಲ್ಲರೂ ಒಟ್ಟಾಗಿ ಫ್ಯಾಶನ್‌ ಶೋ ಅನ್ನು ಮನೋರಂಜಕವಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕನ್ನಡ ಕೂಟದ ಸುಮಾರು 50 ಜನ ಭಾಗವಹಿಸಿದ್ದರು.  ಜತೆಗೆ ತಮಿಳು, ತೆಲಗು, ಗುಜರಾತಿ, ರಾಜಸ್ಥಾನಿ, ಮರಾಠಿ, ಸಿಕ್ಖ್ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆಲ್ಬನಿ ಧೋಲ್‌ ತಾಷಾ ಪಟಾಕ್‌ ತಂಡ ನಡೆಸಿಕೊಟ್ಟ ಲೆಜಿಮು ಮತ್ತು ಡೊಳ್ಳು ಕುಣಿತ ಪ್ರಮುಖ ಆಕರ್ಷಣೆಯಾಗಿತ್ತು.

ಗಂಗಾ ಪೂಜೆ

Advertisement

OGS ಕಮಿಷನರ್‌ ಜನೆಟ್‌ ಮೊಯ್‌ ಮುಖ್ಯ ಅತಿಥಿಯಾಗಿ ರಾತ್ರಿ 8 ಗಂಟೆಗೆ ಗಂಗಾ ಪೂಜೆಯನ್ನು ನೆರವೇರಿಸಿದರು.  ನೂರಾರು ಜನರು ಗಂಗಾ ಪೂಜೆಯನ್ನು ಮಾಡಿ  ಕೊಳದ ನೀರಿನಲ್ಲಿ ದೀಪಗಳನ್ನು ತೇಲಿ ಬಿಟ್ಟರು.  ಅನಂತರ ರಾತ್ರಿಯ ಬಾನಂಗಳದಲ್ಲಿ ಮಿನಿಗಿದ “ಫೈಯರ್‌ವರ್ಕ್‌’ ಸಾವಿರಾರು ಜನರನ್ನು ಆಕರ್ಷಿಸಿತು. ನ್ಯೂಯಾರ್ಕ್‌ ರಾಜ್ಯ ಸರಕಾರದ  ಆಫೀಸ್‌ ಆಫ್‌ ಜನರಲ್‌ ಸರ್ವೀಸಸ್‌ (OGS)ನ  ರೋಹಿತ್‌ ಭಾತೇಜ ಈ ಪ್ರಪ್ರಥಮ ದೀಪಾವಳಿ ಕಾರ್ಯಕ್ರಮದ ಆಯೋಜಕರಾಗಿದ್ದರು. ಇವರಿಗೆ ಬೆಂಬಲವಾಗಿ ನಿಂತು ಸಹಾಯ ಮಾಡಿದವರು ಸ್ಥಳೀಯ ಭಾರತೀಯ ಸಂಘದ ನಾಯಕರಾದ ಬೆಂಕಿ ಬಸಣ್ಣ,  ಕಲ್ಯಾಣ್‌ ಗುಲೆ , ವೆಂಕಟ್‌ ಜಸ್ತಿ ಮತ್ತು ಮನೋಜ್‌ ಅಜಮೇರಾ ಮುಂತಾದವರು.

ನ್ಯೂಯಾರ್ಕ್‌ ರಾಜ್ಯದ ಗವರ್ನರ್‌ ಕ್ಯಾತಿ ಹೋಕಲ್‌ ಇನ್ನು ಮುಂದೆ ಪ್ರತೀ ವರ್ಷ  ದೀಪಾವಳಿ ಮತ್ತು ಹೋಳಿ ಹಬ್ಬಗಳನ್ನು  ನ್ಯೂಯಾರ್ಕ್‌ ರಾಜ್ಯ ಸರಕಾರ ಅಧಿಕೃತವಾಗಿ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಿದೆ  ಎಂದು ಘೋಷಿಸಿದ್ದಾರೆ.  ಇದು ಅಮೆರಿಕದಲ್ಲಿರುವ ಭಾರತೀಯರಿಗೆ ಸಂದ ಬಹು ದೊಡ್ಡ ವಿಜಯ.  ಅನೇಕ ವರ್ಷಗಳ ಅವರ ಬೇಡಿಕೆ ಕೊನೆಗೂ ಈಡೇರಿದೆ.ಹೋದ ವರ್ಷ 2023ರಲ್ಲಿ ನ್ಯೂಯಾರ್ಕ್‌ ಸಿಟಿಯ ಸರಕಾರಿ ಶಾಲೆಗಳಲ್ಲಿ ದೀಪಾವಳಿ ಹಬ್ಬವನ್ನು  ರಜಾ ದಿನವನ್ನಾಗಿ ಘೋಷಿಸುವ ಶಾಸನಕ್ಕೆ ಗವರ್ನರ್‌ ಕ್ಯಾತಿ ಹೋಕಲ್‌ ಸಹಿ ಹಾಕಿದ್ದರು. ಈ ವರ್ಷ ನ್ಯೂಯಾರ್ಕ್‌ ರಾಜ್ಯ ಸರಕಾರವು  ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ.

ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next