Advertisement
ಇದರ ಪರಿಣಾಮಮವೇ ಸ್ಕಾಟ್‌ಲ್ಯಾಂಡ್‌ಗೆ ಸೆಪ್ಟಂಬರ್ ತಿಂಗಳ ಮಧ್ಯೆ ಬಂದಿಳಿದೆ. ಬೆಳಗ್ಗೆ 9 ಗಂಟೆ ಸಮಯಕ್ಕೆ ಹೊಟೇಲ್ ತಲುಪಿದ್ದೆ. ತುಂಬಾ ಆಯಾಸವಾಗಿದ್ದರೂ ಮೊದಲ ದಿನವೇ ರಜೆ ಕೇಳಿದರೆ ನೆಪ ಹೇಳ್ತಾಳೆ ಅಂದು ಕೊಳ್ತಾರೇನೋ ಎಂದು ಅಂಜುತ್ತಲೇ ಮ್ಯಾನೇಜರ್‌ಗೆ ಫೋನ್ ಮಾಡಿದೆ.
Related Articles
Advertisement
ಎಂದಿಗೂ ಮೊಟ್ಟೆ ತಿನ್ನದ ನನಗೆ ಹೊರದೇಶಕ್ಕೆ ಬಂದ ಮೊದಲ ದಿನವೇ ಮೊಟ್ಟೆ ಇರೋ ಬ್ರೆಡ್ ತಿನ್ಬೇಕಾಗಿ ಬಂತೆ ಎಂದು ಭಯದಿಂದ ಸುಮಾರು ಅರ್ಧ ಗಂಟೆ ಹುಡುಕಾಡಿದರೂ ಮೊಟ್ಟೆ ಬಳಸದ ಬ್ರೆಡ್, ಕೇಕ್ ಸಿಗಲಿಲ್ಲ. ಕೊನೆಗೆ ಬಾಳೆಹಣ್ಣು ನೋಡಿದೆ. ಅರ್ಧ ಡಜನ್ ಬಾಳೆ ಹಣ್ಣಿಗೆ 50ಕ 60ಕ ಎಂದು ಬರೆದಿತ್ತು. 1 ಪೌಂಡ್ ಅಂದರೆ 80 ರೂ. ಎಂದು ಆ ದಿನ ನೋಡಿದ್ದೆ. ಬಾಳೆಹಣ್ಣು 40 ರೂ., ಸೇಬು ನೂರು ರೂ. ಗಳು ಅಂತ ತಲೆಯಲ್ಲೆ ಗುಣಾಕಾರ ಶುರು ಮಾಡಿದೆ.
ನೂರಾರು ರೂ.ಗಳನ್ನು ಕೊಟ್ಟು ಕೆಲವೇ ಕೆಲವು ಹಣ್ಣುಗಳನ್ನು ತಗೋಬೇಕಾದ್ರೆ ಖಂಡಿತ ತುಂಬಾ ಸಲ ಯೋಚನೆ ಮಾಡಿದ್ದೆ.ಹಾಗೆ ಪ್ರತಿ ಒಂದು ವಸ್ತುವನ್ನೂ ನೋಡಿದಾಗಲೂ ಅದರ ಬೆಲೆ x 80 ರೂ.ಗಳು ಅಂತ ಲೆಕ್ಕಾಚಾರ ಮಾಡಿದ್ದೇ ಮಾಡಿದ್ದು. ಏನೇ ಆದರೂ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳನ್ನೇ ತಗೋಬೇಕು ಅಂತ ನಿರ್ಧಾರ ಮಾಡಿ ಕಾರ್ನ್ಫ್ಲೆಕ್ಸ್, ಹಾಲು, ಹಣ್ಣು ತೆಗೆದುಕೊಂಡು ಇನ್ನೇನಾದರೂ ಸಿಗಬಹುದೇ ಎಂದು ಬೇರೆ ಕಡೆ ಬಂದೆ. ಮದ್ಯದ ಬಾಟಲು ಕಾಣಿಸಿತು. ತಪ್ಪಾಗಿ ಇಟ್ಟಿರಬೇಕು ಅಂದುಕೊಂಡು ಮುಂದೆ ಹೋದೆ. ಮತ್ತಷ್ಟು ನೀಲಿ, ಗುಲಾಬಿ, ಬಿಳಿ ಗಾಜಿನ ಬಾಟಲುಗಳಲ್ಲಿ ಅಮಲನ್ನು ತುಂಬಿ ತುಂಬಿ ಇಟ್ಟಿದ್ದಾರೆ.
ಹೆಂಡದ ಅಂಗಡಿಯ ಮುಂದೆ ಹೋದವರೆಲ್ಲ ಹೆಂಡ ಕುಡಿದವರು ಅನ್ನೋ ಮನಸ್ಥಿತಿಯಲ್ಲಿದ್ದ ನನಗೆ ಸಿಕ್ಕಾಪಟ್ಟೆ ಹೆದರಿಕೆ ಶುರುವಾಯಿತು. ಯಾರಾದ್ರು ನೋಡಿದ್ರೆ, ಹೊರದೇಶಕ್ಕೆ ಬಂದ ಹಾಗೆ ಕುಡಿಯಲು ಕಲಿತಳು ಎಂದು ಕೊಳ್ತಾರೆ ಎಂಬ ಭಯವಾಗಿತ್ತು. ಒಂದು ನಿಮಿಷ! ಜನ ಏನಂತಾರೆ ಅಂತ ಇಲ್ಲದ ಜನರ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದೆ. ಆದರೆ ಇಲ್ಲಿ ಯಾರೂ ಏನೂ ಅಂದುಕೊಳ್ಳೋದೆ ಇಲ್ಲ ! ಅಬ್ಟಾ ಎಂಥ ಒಳ್ಳೆ ಫೀಲಿಂಗ್ಸ್ . ಈಗ್ಲೂ ಮದ್ಯದ ಸರದಿಯಲ್ಲಿ ಹೋಗೋಕೆ ಹೆದರಿಕೆ.
ಜನ ಏನಂತಾರೊ ಅಂತಲ್ಲ, ಬಾಟಲಿಯ ಬೆಲೆ ನೋಡಿ ಈ ಬೆಲೆಯನ್ನು ಕೊಟ್ಟು ಜನ ಕುಡಿತಾರೆ ಅಂದ್ರೆ ನಾವೆಲ್ಲ ಕಡು ಬಡವರು ಎನ್ನೋ ಫೀಲಿಂಗ್.ಅಂತೂ ಇಂತೂ ಮೊದಲ ದಿನದ ಶಾಪಿಂಗ್ ಮುಗಿಸಿ ಲಾಡ್ಜ್ಗೆ ವಾಪಸ್ ಬಂದೆ. ನನ್ನ ಕೆಲವು ಸಹೋದ್ಯೋಗಿಗಳು ಅದೇ ಲಾಡ್ಜ್ನಲ್ಲಿ ತಂಗಿದ್ದರು.
ಅವರು ಸಂಜೆ ಆಫೀಸ್‌ನ ಕಥೆಗಳನ್ನೆಲ್ಲ ಹೇಳಿದರು. ಸ್ಕಾಟ್‌ಲ್ಯಾಂಡ್‌ಗೆ ಬಂದು 15 ದಿನವಾದರೂ ಉಳಿಯಲು ಮನೆ ಸಿಗದೆ ಲಾಡ್ಜ್ನಲ್ಲಿ ಠಿಕಾಣಿ ನಡಿತಿದೆ ಎಂದು ಹೇಳಿದರು.ರಾತ್ರಿ ಊಟ ಬೇಕಿತ್ತು. ಏನು ತಿನ್ನಲಿ ಎಂದು ಅರ್ಥ ಆಗ್ತಿರಲಿಲ್ಲ. ಅನ್ನ, ಸಾರು, ಚಪಾತಿ ಸಿಗೋ ಹೊಟೇಲ್ ಸಿಗಲು 1 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿತ್ತು. ಹಾಗಾಗಿ ಸಹೋದ್ಯೋಗಿಗಳ ಜತೆ ಕೆಎಫ್ಸಿಗೆ ಬರಲು ಒಪ್ಪಿಕೊಂಡೆ.ಕೆಎಫ್ಸಿಯಲ್ಲಿ ಬರ್ಗರ್ ಬಿಟ್ರೆ ಬೇರೇನೂ ಕಾಣಿಸಲಿಲ್ಲ. ಅದೂ ಕೂಡ ಚಿಕನ್ ಬರ್ಗರ್. ಎಂದೂ ತಿನ್ನದ ನನಗೆ ಹಾಟ್ ಚಾಕಲೇಟ್ ಮತ್ತು ಚಿಪ್ಸ್ ಕೊಡಿಸಿದರು. ಹೊಟ್ಟೆ ತುಂಬಲಿಲ್ಲ.
ಬೇರೇನು ತಿನ್ನಲು ಮನಸ್ಸೂ ಆಗಲಿಲ್ಲ. ಉಳಿಯಲು ಮನೆ ಹುಡುಕುವುದಿತ್ತು. ಕೆಲಸ ಹೊಸತು, ತರಬೇತಿ, ಪರೀಕ್ಷೆಗಳೂ ಇದ್ದವು. ಇಂಗ್ಲಿಷ್ ಕೂಡ ಅಷ್ಟಕಷ್ಟೆ. ಊಟದ ಬಗ್ಗೆ ಗಮನ ಕಡಿಮೆ ಮಾಡುವುದು ಒಳ್ಳೆಯದು ಅನ್ನಿಸಿತು. ಕೆಲಸದ ಮೊದಲನೇ ದಿನ ಎಲ್ಲರ ಪರಿಚಯ ಆಗಬೇಕಿತ್ತು. ಒಂದು ಗಂಟೆಯಲ್ಲಿ ಎಲ್ಲ ಇಂಗ್ಲಿಷ್ ಮಯ ಅಂತ ಗೊತ್ತಾಯಿತು. ಎಲ್ಲರ ಪರಿಚಯವಾಯ್ತು ಆಗಲೇ ಗೊತ್ತಾಗಿದ್ದು ಅಲ್ಲಿದ್ದ ಕೆಲವೇ ಕೆಲವು ಹುಡುಗಿಯರಲ್ಲಿ ನಾನೂ ಕೂಡ ಒಬ್ಬಳು ಎಂದು. ಸುಮಾರು ಇಂಗ್ಲಿಷ್‌ನಲ್ಲಿ ಮಾತಾಡಿದೆ.
ನನ್ನ ಇಂಗ್ಲಿಷ್‌ನ ಎಲ್ಲ ಪದಗಳೂ ಅರ್ಧ ದಿನಕ್ಕೆ ಖರ್ಚಾದವು. ಮಧ್ಯಾಹ್ನದ ವೇಳೆಗೆ ಉಳಿದದ್ದು ಮಂದಹಾಸ ಮಾತ್ರ.ಮಧ್ಯಾಹ್ನ ಮತ್ತೆ ಊಟದ ಸಮಯ, ಆಫೀಸ್ ಕ್ಯಾಂಟೀನ್‌ನಲ್ಲಿ ಕೆಲವು ಸ್ಯಾಂಡ್‌ವಿಚ್, ಸೂಪ್, ಸಲಾಡ್‌ಗಳಿದ್ದವು. ಸ್ಯಾಂಡ್‌ವಿಚ್ ತಿಂದ್ರೆ ಹೊಟ್ಟೆ ಹಸಿವಿಲ್ಲ ಎಂದು ಭಾವಿಸಿ ಸಸ್ಯಹಾರಿ ಎಂದು ಬರೆದಿದ್ದ ಸ್ಯಾಂಡ್‌ವಿಚ್ ಎತ್ತಿಕೊಂಡೆ. ಇರುವ ಮುಕ್ಕಾಲು ಗಂಟೆಯಲ್ಲಿ ಊಟ ಮಾಡಬೇಕಿತ್ತು. ಕೆಲವು ಗೆಳತಿಯರನ್ನು ಭೇಟಿ ಮಾಡಿ ಮನೆ ಬಗ್ಗೆ ಕೇಳುವುದಿತ್ತು. ಸ್ಯಾಂಡ್‌ವಿಚ್ ಸ್ವಲ್ಪ ಬಾಯಿಗೆ ಹಾಕಿಕೊಂಡೆ. ಒಳಗೆ ಹೋಗಲೇ ಇಲ್ಲ. ಅದರಲ್ಲಿದ್ದ ಗೋಟ್ ಚೀಸ್ ಇತ್ತು. ಅದೊಂದು ಬೇರೆಯೇ ರುಚಿ, ವಾಸನೆ. ತಿನ್ನಲಾಗದೆ ಬಿಸ್ಕೆಟ್, ಚಹಾ ಕುಡಿದು ಊಟ ಮುಗಿಸಿದೆ. ಆಗ ನಿಧಾನಕ್ಕೆ ಅರ್ಥ ಆಯಿತು.
ಭಾರತದಲ್ಲಿ ಏನು ಬಿಟ್ಟು ಬಂದೆ ಎಂದು.ಹೊಟೇಲ್‌ನಲ್ಲಿ ನೀರಿರಲಿಲ್ಲ . ಖರೀದಿ ಮಾಡಬೇಕಿತ್ತು. ಲಾಡ್ಜ್ಗೆ ಹೋಗುವ ದಾರಿಯಲ್ಲಿ ಒಂದು ಬಾಟಲಿಗೆ ನೂರು ರೂ.ಗಳನ್ನು ಕೊಟ್ಟು ನೀರು ಖರೀದಿಸಿ ಹೊರಟೆ. ಮೊದಲನೇ ದಿನ ಹೇಗೋ ಮುಗಿಯಿತು. ರಾತ್ರಿ ಮತ್ತೆ ನೀರು ಬೇಕಿತ್ತು. ಮುಕ್ಕಾಲು ಲೀಟರ್ ನೀರಿಗೆ ಮುನ್ನೂರು ರೂ. ಕೊಟ್ಟು ತರಿಸಿಕೊಂಡೆ. ಒಂದು ಬಾಟಲಿನಲ್ಲಿದ್ದ ನೀರು ಕುಡಿದೆ ಯಾಕೋ ಬೇರೆ ರುಚಿ, ಮದ್ಯದ ಬಾಟಲಿಗಳನ್ನು ನೋಡಿದ್ದ ನನಗೆ ಮತ್ತೆ ಹೆದರಿಕೆ ಶುರುವಾಯ್ತು. ನೀರು ತಂದ ಹುಡುಗನನ್ನು ಕೇಳಿ ಖಚಿತಪಡಿಸಿಲ್ಲದೆ Sparkling water ಬದಲು still water ಖರೀದಿ ಮಾಡಲು ಹೇಳಿದ.
ಹಾಗೆ ಇನ್ನೊಂದು ದಿನ ಕೂಡ ಕಳೆಯಿತು. ರಾತ್ರಿ ಊಟಕ್ಕೆ ಮತ್ತೆ ಹಾಟ್ ಚಾಕಲೇಟ್ ಮತ್ತು ಚಿಪ್ಸ್ .15 ದಿನ ಲಾಡ್ಜ್ನಲ್ಲಿ ಕಳೆದು ಒಂದು ವಾರ ಮನೆ ಹುಡುಕಿ ತರಬೇತಿ ಮುಗಿಸಿ, ಅನ್ನವನ್ನು ಮಾಡಿಕೊಂಡು ಸುಸ್ತಾಗಿದ್ದೆ. ಯಾರೋ ಒಬ್ಬಳು ನಮ್ಮ ಕಂಪೆನಿಯಿಂದ ಮನೆ ಪಡೆದುಕೊಂಡಿದ್ದರು.
ಮಧ್ಯ ವಯಸ್ಸು ದಾಟಿದ ಬೆಂಗಾಲಿ ಹುಡುಗಿ. ಏನೂ ಹೆಚ್ಚು ಕೇಳದೆ ಅವಳ ಮನೆ ಸೇರಿಕೊಂಡೆ. ಸ್ಕಾಟ್‌ಲ್ಯಾಂಡ್‌ನಲ್ಲಿ ನವೆಂಬರ್- ಡಿಸೆಂಬರ್ ಬಂದರೆ ಸಾಕು ಬೆನ್ನು ಹುರಿಯಲ್ಲಿ ನಡುಕ ಬರುವಷ್ಟು ಚಳಿ. ಅಂಥ ಸಮಯದಲ್ಲಿ ನನ್ನ ರೂಮ್‌ಮೇಟ್‌ಗೆ ಸೆಕೆ, ಅವಳು ಹೀಟರ್ ಬಂದ್ ಮಾಡಿ ಮಲಗುವವಳು. ಬೆಳಗಾಗುವಷ್ಟರಲ್ಲಿ ನನಗೆ ತಲೆನೋವು, ಥಂಡಿ, ಜ್ವರ.ತುಂಬಾ ದಿನ ಕೇಳಿಕೊಂಡೆ, ಮನೆ ಬೇರೆ ಮಾಡಲೂ ಕೂಡ ನೋಡಿದೆ. ಸಾಧ್ಯವಾಗಲಿಲ್ಲ.
ಸ್ನಾನಕ್ಕೆ ಹೋದಾಗ ಬಿಸಿ ನೀರನ್ನು ಬಂದ್ ಮಾಡಿ ಕೊರೆ ಯುವ ಚಳಿಯಲ್ಲಿ ತಣ್ಣೀರಿನ ಸ್ನಾನ ಮಾಡುವಂತೆ ಮಾಡುತ್ತಿದ್ದಳು. ನಾನು ಹೆದರಲಿಲ್ಲ. ಎಲ್ಲ ಕಡೆ ಹುಡುಕಿ ಒಂದು ಚಿಕ್ಕ ಹೀಟರ್ ತಂದು ರೂಮಿನಲ್ಲಿ ಇಟ್ಟುಕೊಂಡೆ. ಇನ್ನು ಮುಂದೆ ಬಿಸಿ ನೀರನ್ನು ಸ್ನಾನ ಮಾಡುವ ಸಂದರ್ಭದಲ್ಲಿ ಬಂದ್ ಮಾಡಿದರೆ ನಿಮಗೂ ಕೂಡ ಹಾಗೆ ಮಾಡುವೆ ಎಂದೆ. ಅರ್ಥ ಆಯಿತೋ, ಹೆದರಿದಳೊ ಗೊತ್ತಿಲ್ಲ. ಸ್ವಲ್ಪ ದಿನ ಸುಮ್ಮನಾದಳು.ಇದಾಗಿ ಎಷ್ಟೋ ವರ್ಷಗಳು ಕಳೆದವು. ತುಂಬಾ ಶುದ್ಧ ಸಸ್ಯಾಹಾರ ಪದಾರ್ಥಗಳು, ಬ್ರೆಡ್, ಕೇಕ್ ಹಾಗೆ ಅನ್ನ ಸಾಂಬಾರ್ ಕೂಡ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತವೆ. ಬಾಳೆಹಣ್ಣಿನ ಬೆಲೆ ಈಗಲೂ ಅಷ್ಟೆ ಇದೆ.
ಈಗಲೂ ಅಗತ್ಯವಿದ್ದ ಹಾಗೂ ಕಡಿಮೆ ಬೆಲೆಯ ವಸ್ತುಗಳನ್ನೇ ಕೊಳ್ಳುತ್ತೇನೆ.ತುಂಬಾ ಬದಲಾಗಿದ್ದೇನೆ. ಹೆದರದೆ ಮಾತನಾಡುತ್ತೇನೆ. ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಏನೇ ಆದರೂ ಇನ್ನೂ ಹತ್ತು ವರ್ಷಗಳು ಕಳೆದರೂ ಕಷ್ಟದಲ್ಲಿ ಕಳೆದ ಆ ಕೆಲವು ತಿಂಗಳುಗಳ ನೆನಪು ಹಸುರಾಗಿದೆ.
ಬೇರೆ ದೇಶಕ್ಕೆ ಹೋಗಬೇಕು ಬದುಕಬೇಕು. ಗೆಲ್ಲಬೇಕು ಎಂಬ ಕನಸು ನನಸಾಗಿದೆ. ದೂರದ ಬೆಟ್ಟ ಈಗ ನುಣ್ಣಗೆ ಕೂಡ ಅನಿಸುತ್ತಿದೆ.ನನಗೆ ಗೊತ್ತಿರುವ ವಿಷಯಗಳನ್ನು ಸಾಧ್ಯವಾದಷ್ಟು ಜನರು ತಿಳಿಸಿಕೊಡಲು cookgreenfoof vlogs ಅನ್ನುವ ಯೂಟ್ಯೂಬ್ ಚಾನಲ್ ಕೂಡ ಹೆಣೆದಿದ್ದೇವೆ. ದೂರದ ಬೆಟ್ಟ ನೋಡುವ ರೀತಿ ಬದಲಾಗಬೇಕು, ಬೆಟ್ಟದಲ್ಲಿ ಬದುಕುವ ರೀತಿ ಬದಲಾಗಬೇಕಿದೆ.
ನಯನಾ, ಸ್ಕಾಟ್‌ಲ್ಯಾಂಡ್