ಬಿದನೂರಿನಲ್ಲಿ ಇಬ್ಬರು ಸಹೋದರಿಯರಿದ್ದರು ಒಬ್ಬಳು ಸೀತಾ, ಇನ್ನೊಬ್ಬಳು ಗೀತಾ. ಪಠ್ಯೇತರ ಚಟುವಟಿಕೆಗಳಲ್ಲಿ ಸೀತಾ ಮುಂಚೂಣಿಯಲ್ಲಿದ್ದರೆ ಓದು, ಬರಹ ಪಠ್ಯ ಚಟುವಟಿಕೆಗಳಲ್ಲಿ ಗೀತಾ ಎತ್ತಿದ ಕೈ. ಶಾಲೆಯಲ್ಲಿ ಗೀತಾಳ ಸಾಧನೆ ಕಂಡು ಮೇಸ್ಟ್ರೆ ಹೆಮ್ಮೆಯಿಂದ ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು. ಸೀತಾ, ಗೀತಾಳ ತಂದೆಯನ್ನು ಕರೆದು ಗೀತಾಳನ್ನು ತುಂಬಾ ಹೊಗಳುತ್ತಿದ್ದರೆ, ಸೀತಾಳ ಕಳಪೆ ಸಾಧನೆ ಬಗ್ಗೆ ದೂರುತ್ತಿದ್ದರು. ಇದು ಸೀತಾಳಿಗೂ ಬೇಸರ ಉಂಟು ಮಾಡುತ್ತಿತ್ತು. ಆದರೆ ಏನು ಮಾಡುವುದು ಗುರುಗಳು ಹೇಳಿದ ಹಾಗೆ ಕೇಳಬೇಕು ಎಂದು ತಂದೆ ಸೀತಾಳಿಗೆ ಬುದ್ಧಿ ಮಾತು ಹೇಳುತ್ತಿದ್ದರು.
ಇನ್ನೇನು ಪರೀಕ್ಷೆ ಹತ್ತಿರದಲ್ಲಿತ್ತು. ಇದಕ್ಕಾಗಿ ಸೀತಾಳೂ ತುಂಬಾ ಕಷ್ಟಪಟ್ಟು ಓದಿನಲ್ಲಿ ತೊಡಗಿಕೊಂಡಳು. ಆದರೆ ಗುರುಗಳಿಂದಾದ ಅವಮಾನದ ಮಾತುಗಳು ಅವಳ ಮನಸ್ಸನ್ನು ಕೊರೆಯುತ್ತಿತ್ತು. ಹೀಗಾಗಿ ಸರಿಯಾಗಿ ಓದಲು ಆಗಲಿಲ್ಲ. ಇದು ಫಲಿತಾಂಶದ ಮೇಲೂ ಪರಿಣಾಮ ಬಿತ್ತು. ಗೀತಾ ತರಗತಿಯಲ್ಲಿ ಫಸ್ಟ್ ಬಂದಿದ್ದಳು. ಇದರಿಂದ ಮತ್ತೆ ಗುರುಗಳು ಸೀತಾಳನ್ನು ಕರೆದು ಅವಮಾನ ಮಾಡಿದರು. ಹೀಗಾಗಿ ಬೇಸರಗೊಂಡ ಸೀತಾ ತಂದೆಯ ಬಳಿ ಬಂದು ನಾನು ಇನ್ನು ಶಾಲೆಗೆ ಹೋಗುವುದಿಲ್ಲ. ನನಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದೆ. ಹೀಗಾಗಿ ಇದರ ಬಗ್ಗೆ ಮುಂದಿನ ಅಧ್ಯಯನ ನಡೆಸುತ್ತೇನೆ ಎಂದು ಬಿಟ್ಟಳು.
ತಂದೆಗೆ ಬೇಸರವಾದರೂ ಸೀತಾಳ ಆಸಕ್ತಿಯನ್ನು ಅವರು ಗಮನಿಸಿದರು. ಹೀಗಾಗಿ ಒಳ್ಳೆಯ ಫೋಟೋಗ್ರಾಫರ್‌ನಿಂದ ಸೀತಾಳಿಗೆ ತರಬೇತಿ ಕೊಡಿಸಲು ಪ್ರಾರಂಭಿಸಿದರು. ಅಷ್ಟರಲ್ಲಿ ಗೀತಾ ಪದವಿಯನ್ನು ಮುಗಿಸಿ ಸರಕಾರಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಒಳ್ಳೆಯ ಆದಾಯ ಅವಳಿಂದ ಮನೆಗೆ ಸಿಗಲಾಂಭಿಸಿತು. ಹೀಗಾಗಿ ಮನೆಯ ಕಷ್ಟಗಳೆಲ್ಲ ಒಂದೊಂದಾಗಿ ನಿವಾರಣೆಯಾಯಿತು. ಸೀತಾ, ಗೀತಾಳ ಮೇಸ್ಟ್ರೆ ಆಗಾಗ ಮನೆಗೆ ಬಂದು ಗೀತಾಳ ಸಾಧನೆಯ ಬಗ್ಗೆ ಕೊಂಡಾಡುತ್ತಿದ್ದರು. ಇದರಿಂದ ಗೀತಾಳಿಗೂ ಈಗ ಖುಷಿಯಾಗುತ್ತಿತ್ತು. ಸ್ವಲ್ಪ ಅಹಂ ಕೂಡ ತುಂಬಿಕೊಂಡಿತ್ತು. ಹೀಗಾಗಿ ಮನೆಯಲ್ಲಿ ತನ್ನದೇ ಅಧಿಕಾರವಿದೆ ಎಂದು ಭಾವಿಸಿಕೊಂಡು ಅದರಂತೆ ವರ್ತಿಸತೊಡಗಿದಳು.
ಇನ್ನೇನು ಪರಿಪೂರ್ಣವಾಗಬೇಕಿದ್ದ ಸೀತಾಳ ಫೋಟೋಗ್ರಫಿ ಕೋರ್ಸ್ ಬಗ್ಗೆ ಆಕ್ಷೇಪ ಎತ್ತಿ ಅವಳು ಅದನ್ನು ಬಿಡುವಂತೆ ಮಾಡಿದಳು. ಇದರಿಂದ ತಂದೆಗೂ ಬೇಸರವಾಗಿತ್ತು. ಅವರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಿಂದ ಸೀತಾಳಿಗೆ ಒಂದು ಸ್ಟುಡಿಯೋ ಮಾಡಿಕೊಟ್ಟರು. ಇದರಿಂದ ಸೀತಾ ಕೂಡ ಸ್ವಾವಲಂಬಿ ಜೀವನ ನಡೆಸಲು ಪ್ರಾರಂಭಿಸಿದಳು. ಇದು ಗೀತಾಳ ಅಸಮಾಧಾನಕ್ಕೆ ಕಾರಣವಾದರೂ ಆದರೆ ಹೆಚ್ಚು ಮಾತನಾಡಲಿಲ್ಲ. ಆದರೆ ಆಗಾಗ್ಗೆ ಕೊಂಕು ಮಾತನಾಡಿ ಸೀತಾಳಿಗೆ ನೋವುಂಟು ಮಾಡುತ್ತಿದ್ದಳು.
ಒಂದು ದಿನ ತಂದೆಯ ಆರೋಗ್ಯ ಕೆಟ್ಟಿತು. ಹೀಗಾಗಿ ಸೀತಾ ಬೇಗನೆ ಸ್ಟುಡಿಯೋ ಮುಚ್ಚಿ ಮನೆಗೆ ಬಂದಾಗ ಗೀತಾ ಆಗಲೇ ಮನೆಗೆ ಬಂದು ಒಂದು ನರ್ಸ್ ಒಬ್ಬಳನ್ನು ತಂದೆಯ ಆರೈಕೆಗೆಂದು ಇಟ್ಟಿದ್ದಳು. ಈ ಬಗ್ಗೆ ಸೀತಾ ಆಕ್ಷೇಪ ವ್ಯಕ್ತಪಡಿಸಿದಾಗ, ನಿನಗೆ ಸ್ಟುಡಿಯೋ ಇದೆ. ನನಗೆ ಕೆಲಸಕ್ಕೆ ಹೋಗಬೇಕು. ಅಲ್ಲದೇ ತಂದೆಯ ಆರೈಕೆಗೆ ಯಾರಾದರೂ ಜತೆ ಇರುವುದು ಒಳ್ಳೆಯದು. ಹೀಗಾಗಿ ನರ್ಸ್ ಎಲ್ಲ ನೋಡಿಕೊಳ್ಳುತ್ತಾರೆ. ಅವರಿಗೆ ನೀನೇನೂ ಹಣ ಕೊಡಬೇಕಿಲ್ಲ. ಎಲ್ಲ ನಾನೇ ನೋಡಿಕೊಳ್ಳುತ್ತೇನೆ ಎಂದು ಬಿಟ್ಟಳು. ಆದರೆ ಸೀತಾಳಿಗೆ ಇದು ಸರಿ ಕಾಣಲಿಲ್ಲ. ಹೀಗಾಗಿ ಅವಳು ಮನೆಯಲ್ಲಿದ್ದಾಗ ತಂದೆಯ ಎಲ್ಲ ಸೇವೆಯನ್ನೂ ಮಾಡುತ್ತಿದ್ದಳು. ಇದು ಗೀತಾಳ ಗಮನಕ್ಕೆ ಬಂದಾಗ ನೀನು ಈ ರೀತಿ ಮಾಡುವುದಾದರೆ ನಾನು ನರ್ಸ್‌ಗೆ ಯಾಕೆ ಹಣ ಕೊಡಬೇಕು, ಅವಳನ್ನು ಯಾಕೆ ಇಟ್ಟುಕೊಳ್ಳಬೇಕು ಎಂದು ಹೇಳಿ ನರ್ಸ್‌ಗೆ ಬಾಕಿ ಪಾವತಿ ಮಾಡಿ, ನೀವಿನ್ನು ಬರುವುದು ಬೇಡ ಎಂದುಬಿಟ್ಟಳು. ಈಗ ಸೀತಾಳೇ ತಂದೆಯ ಸೇವೆ ಮಾಡತೊಡಗಿದಳು. ಇದರಿಂದ ಅವಳಿಗೆ ಸ್ಟುಡಿಯೋಗೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ಬಿಡುವಿನಲ್ಲಿ ತಾನು ತೆಗೆದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು.
ಈ ನಡುವೆ ಗೀತಾ ಯಾವುದೋ ಟೆನ್ಶನ್‌ನಲ್ಲಿ ಇರುವುದು ಗೊತ್ತಾದರೂ ಸೀತಾ ವಿಚಾರಿಸಲು ಹೋಗಲಿಲ್ಲ. ಕೆಲವು ದಿನಗಳು ಕಳೆದಾಗ ಮೇಸ್ಟ್ರೆ ಮನೆಗೆ ಬಂದರು. ತಂದೆಯ ಸೇವೆ ಮಾಡುತ್ತಿದ್ದ ಸೀತಾಳನ್ನು ನೋಡಿ, ಮಗಳೇ ನಾನು ಯಾವತ್ತೂ ನಿನ್ನ ಬಗ್ಗೆ ತಂದೆಗೆ ದೂರು ಕೊಡುತ್ತಿದ್ದೆ. ಆದರೆ ಇವತ್ತು, ನಿನ್ನ ಸಾಧನೆ ಏನು ಎಂಬುದು ಜಗತ್ತಿಗೆ ಗೊತ್ತಾಗಿದೆ. ಮಾತ್ರವಲ್ಲ ತಂದೆಯ ನಿಜವಾದ ಮಗಳಾಗಿ ನೀನು ಇಲ್ಲಿ ಅವರ ಸೇವೆ ಮಾಡುತ್ತಿದ್ದರೆ, ಗೀತಾ ಅಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣದಿಂದ ಎಲ್ಲರ ನೆಮ್ಮದಿಯನ್ನೂ ಹಾಳು ಮಾಡಿದ್ದಾಳೆ ಎಂದರು.
ಸೀತಾಳಿಗೆ ಏನೆಂದು ಗೊತ್ತಾಗಲಿಲ್ಲ. ಅಷ್ಟರಲ್ಲಿ ಮೇಸ್ಟ್ರೆ ಆ ದಿನದ ಪತ್ರಿಕೆಯನ್ನು ಅವಳ ಮುಂದೆ ಹಿಡಿದರು. ಅದರಲ್ಲಿ ಒಂದು ಬದಿಯಲ್ಲಿ ಸೀತಾಳ ಫೋಟೋಗ್ರಫಿಗೆ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರ ಬಂದಿದ್ದರೆ, ಇನ್ನೊಂದು ಬದಿಯಲ್ಲಿ ಗೀತಾ ಮಾಡಿದ ಅಕ್ರಮಗಳ ವರದಿ ಪ್ರಕಟವಾಗಿತ್ತು. ಮುಂದೆ ಅವಳಿಗೆ ತಕ್ಕುದಾದ ಶಿಕ್ಷೆ ದೊರೆತರೆ ಸೀತಾಳಿಗೆ ಎಲ್ಲರಿಂದಲೂ ಸಮ್ಮಾನ, ಪುರಸ್ಕಾರಗಳು ಬಂದವು. ಇದನ್ನು ನೋಡಿ ತಂದೆಗೂ ಹೆಮ್ಮೆಯಾಯಿತು. ಆದರೆ ಇನ್ನೊಬ್ಬ ಮಗಳಿಂದಾದ ನೋವನ್ನು ಅವರಿಗೆ ಮರೆಯಲಾಗಲಿಲ್ಲ.
ಕೆಲವು ವರ್ಷಗಳ ಬಳಿಕ ಗೀತಾಳಿಗೂ ತನ್ನ ತಪ್ಪಿನ ಅರಿವಾಗಿ ಅವಳು ತಂದೆ ಮತ್ತು ಸೀತಾಳ ಬಳಿ ಬಂದು ಕ್ಷಮೆ ಕೇಳಿದಳು. ಮುಂದೆ ಸೀತಾಳೇ ಮನೆಯ ಅಧಿಕಾರಿ ಯಾದಳು. ಆದರೆ ಅವಳು ಗೀತಾಳಿಗೂ ಸರಿಯಾಗಿ ಬದುಕುವ ದಾರಿಯೊಂದನ್ನು ತೋರಿಸಿಕೊಟ್ಟಳು. ಇದರಿಂದ ತಂದೆ ಮತ್ತು ಗುರುಗಳು ಸೀತಾಳ ಬಗ್ಗೆ ಮತ್ತಷ್ಟು ಹೆಮ್ಮೆ ಪಟ್ಟುಕೊಳ್ಳುವಂತಾಯಿತು.