Advertisement
ಭಾರತವು ಪಾಶ್ಚಾತ್ಯ ದೇಶಗಳಿಂದ ಯಾವಾಗಲೂ ಪ್ರತೀ ವಿಷಯಗಳಲ್ಲಿ ಭಿನ್ನ ಎಂದು ಸಾಬೀತುಪಡಿಸುತ್ತಲೇ ಬಂದಿದೆ. ಈ ಭಿನ್ನತೆ ಹಲವು ವಿಷಯಗಳಲ್ಲಿ ಧನಾತ್ಮಕವಾಗಿಯೂ ಇನ್ನು ಕಲವು ವಿಷಯಗಳಲ್ಲಿ ಋಣಾತ್ಮಕವಾಗಿಯೂ ಇದೆ ಎಂದರೆ ಅತಿಶಯೋಕ್ತಿಯಲ್ಲ. ಈ ವ್ಯತ್ಯಾಸಗಳು ನಮಗೆ ಭಾರತದಲ್ಲಿದ್ದಾಗ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಆದರೆ ಬೇರೆ ದೇಶಕ್ಕೆ ಬಂದು ಉಳಿದ ಮೇಲೆ ಇಲ್ಲಿನ ರೀತಿನೀತಿಗಳು ನಮ್ಮ ಪರಿಸರವನ್ನು, ನಾವು ಬದುಕುವ, ಯೋಚಿಸುವ, ಚಿಂತಿಸುವ ರೀತಿಯನ್ನು ಬದಲಾಯಿಸುವಂತೆ ಮಾಡುತ್ತದೆ.
Related Articles
Advertisement
ಮೊನ್ನೆ ಒಂದೇ ದಿನ ಇಬ್ಬರು ತಂತನತೆಯುಳ್ಳ ಮಕ್ಕಳನ್ನು ಪರೀಕ್ಷಿಸಿದೆ. ಇಬ್ಬರೂ ಮಕ್ಕಳಿಗೆ 4 ವರ್ಷ. ಇಬ್ಬರೂ ಹುಡುಗಿಯರು. ಒಂದು ಮಗು ಆಸ್ಟ್ರೇಲಿಯನ್ನರದ್ದು ಹಾಗೂ ಇನ್ನೊಂದು ಮಗು ಭಾರತೀಯರದ್ದು. ಇಬ್ಬರೂ ತಮ್ಮ ತಂದೆ-ತಾಯಿಯ ಜತೆ ಬಂದಿದ್ದರು. ಇಬ್ಬರೂ ಮಾತಿನಲ್ಲಿ, ಭಾಷೆಯಲ್ಲಿ, ಬೇರೆ ಕೌಶಲಗಳಲ್ಲಿ ಅವರ ವಯಸ್ಸಿನ ಮಕ್ಕಳಿಗಿಂತ ಹಿಂದಿದ್ದರು. ಒಂದೇ ವ್ಯತ್ಯಾಸವೆಂದರೆ, ಒಬ್ಬಳಿಗೆ ಮಾತ್ರ “ತಂತನತೆ’ ಉಳ್ಳವಳು ಎಂದು “ಲೇಬಲ್’ ಆಗಿತ್ತು, ಇನ್ನೊಬ್ಬಳಿಗೆ ಆಗಿರಲಿಲ್ಲ.
ನಾನು ಪರೀಕ್ಷೆ ನಡೆಸಿದ ಅನಂತರ ಭಾರತೀಯ ಪೋಷಕರಿಗೆ ಕೇಳಿದೆ, ನಿಮ್ಮ ಮಗುವಿನ ಸಮಸ್ಯೆಯ ಬಗ್ಗೆ ನಿಮಗೆ ಅರಿವಿದೆಯಾ ಎಂದು.
ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು. “ಮೇಡಮ್, ನಮ್ಮ ಮಗು ಬೇರೆಯವರಂತಿಲ್ಲ ಎಂದು ಗೊತ್ತು. ಇದರಿಂದ ನಮ್ಮ ಮನೆಯವರಿಗೆ ಬೇಜಾರಾಗಬಹುದು ಎಂದು ನಾವು ದೇಶ ಬಿಟ್ಟು ಬಂದು ಬಿಟ್ಟೆವು. ಇನ್ನೂ ಇವಳಿಗೆ ತಂತನತೆ ಇದೆ ಎಂದು “ಲೇಬಲ್’ ಮಾಡಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ನಮ್ಮ ಮಗಳ ಹೆಸರು ಆಕೆಯ ಗುರುತಾಗಬೇಕೇ ಹೊರತು ಆಕೆಯ “ತಂತನತೆ’ ಅಲ್ಲ. ಅವಳಿಗಾದ ತೊಂದರೆಯನ್ನು “ಲೇಬಲ್’ ಮಾಡಿಬಿಟ್ಟರೆ, ಅದು ಎಲ್ಲರಿಗೂ ತಿಳಿಯುತ್ತದೆ. ಶಾಲೆಯಲ್ಲಿ ಜಾಗ ಸಿಗೋದು ಕಷ್ಟ !, ಸಿಕ್ಕರೂ ಅವಳ ಸಾಧ್ಯತೆಗಳನ್ನು ಯಾರೂ ಗಮನಿಸೋದೇ ಇಲ್ಲ. ಅವಳ “ತಂತನತೆ’ ಎದ್ದು ನಿಲ್ಲುತ್ತದೆ. ನಾವು ಇದಕ್ಕೆ ತಯಾರಿಲ್ಲ. ನೀವು ಈಕೆಗೆ ಮಾತು ಹೇಳಿಕೊಡಿ. ಬೇರೆ ಮಕ್ಕಳಂತೆಯೇ ನೋಡಿ. ಆದರೆ “ತಂತನತೆ’ ಇರುವವಳು ಎಂದು ಕರೆಯಬೇಡಿ ಎಂದರು.
ಅರೆ! ಆದರೆ ತೊಂದರೆ ಇದ್ದದ್ದಾಗಿದೆ. ಆ ತೊಂದರೆಗೊಂದು ಹೆಸರು ಕೊಡಲು ಅದೆಷ್ಟು ಯೋಚನೆ ಮಾಡುತ್ತಿದ್ದಾರಲ್ಲ.. ಎಂದು ಮನಸ್ಸು ನನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕತೊಡಗಿತ್ತು. ನಮ್ಮ ದೇಶದಲ್ಲಿ ಕೆಲಸ ಮಾಡುವಾಗ ಅದೆಷ್ಟೋ ತಂದೆತಾಯಂದಿರು ತಮ್ಮ ಮಗುವಿಗೆ ಕಿವಿ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿಕೊಂಡ ಅನಂತರವೂ ಅತ್ತುಅತ್ತು ನಂಬದೇ ಕಿವಿಯ ಸಾಧನವನ್ನೂ ಕೊಳ್ಳದೇ ಹೋದವರು, ಮಗು ಎಲ್ಲರಿಗಿಂತ ಭಿನ್ನವಿದೆ, ತೋರಿಸಿಕೊಂಡರೆ ನಮ್ಮ ಅಕ್ಕಪಕ್ಕದ ಮನೆಯವರು ಏನು ಹೇಳುತ್ತಾರೋ ಎಂಬ ಭಯವಿರುವ ಪೋಷಕರು, ನನ್ನ ಗಂಡನಿಗೂ ಮಾತು ಬರಲು ತಡವಾಗಿತ್ತು ಎಂದು, ಮಗು ಮಾತಾಡುತ್ತದೆ ಎಂದು ಕಾದು ಕುಳಿತಿರುವರು… ಎಲ್ಲರೂ ಒಮ್ಮೆಲೆ ನೆನಪಾದರು.
ಮಗುವಿನ ತೊಂದರೆ ಒಂದೇ ಆದರೂ ಪೋಷಕರು ಅದನ್ನು ಸ್ವೀಕರಿಸುವ ರೀತಿ ನನಗೆ ಅಚ್ಚರಿ ಉಂಟು ಮಾಡಿದೆ. ಡಾಕ್ಟರು ಹಾಗೂ ನಾವುಗಳು ನಿಮ್ಮಲ್ಲಿ ಅಥವಾ ನಿಮ್ಮ ಮಗುವಿನಲ್ಲಿ ಈ ತೊಂದರೆಯಿದೆ. ಆ ತೊಂದರೆಗೆ ಈ ಹೆಸರು ಎಂದು ಹೇಳಿಬಿಟ್ಟರೆ ನಮ್ಮ ಕೆಲಸವಾಯಿತು ಎಂದು ಅಂದುಕೊಂಡರೆ ಅದು ಭ್ರಮೆ. ನಾವು ಕೊಡೋ ಹೆಸರಿನಲ್ಲಿ ಆ ಮಗುವಿನ “ಭವಿಷ್ಯ’ ಅಡಗಿದೆ ಎಂದು ಎಷ್ಟೋ ಬಾರಿ ಯೋಚಿಸುವುದೇ ಇಲ್ಲ. ಅಷ್ಟಕ್ಕೂ ವೈದ್ಯರಿಗೆ ಅವರು ಸಾವಿರದ ಒಂದನೇ ವ್ಯಕ್ತಿಯಾಗಿರಬಹುದು. ಹೀಗಾಗಿ ಅವರಿಗೆ ಏನೂ ಅನಿಸದಿದ್ದರೆ ಆಶ್ಚರ್ಯವಿಲ್ಲ. ಆದರೆ ವ್ಯಕ್ತಿಗೆ ಇದೇ ಮೊದಲು. ಆತ ನೀವು ಹೆಸರಿಸಿದ ತೊಂದರೆಯನ್ನು ಮೊದಲ ಬಾರಿಗೆ ಕೇಳಿದ್ದಿರಬಹುದು. ಈ ಹೆಸರಿಗೆ ಬೇರೆ ಅರ್ಥ ನೀಡೋಣ. ಮಗುವಿನ ತೊಂದರೆಯನ್ನು ಒಪ್ಪಿಕೊಂಡು ಅವರ ಭವಿಷ್ಯವನ್ನು ಚಂದಗಾಣಿಸಲು ಬದ್ಧರಾಗೋಣ.
ಸ್ಫೂರ್ತಿ, ತಸ್ಮೇನಿಯಾ