Advertisement

ಅತಿಥಿ ದೇವೋಭವ

06:56 PM Jul 17, 2021 | Team Udayavani |

ಟ್ರೂéಲಿ ಏಷ್ಯಾ ಎಂದೇ ಕರೆಯಲ್ಪಡುವ ಮಲೇಷ್ಯಾ ಪ್ರವಾಸೋದ್ಯಮ ವರ್ಷಕ್ಕೆ ಲಕ್ಷಾಂತರ ವಿದೇಶಿಗರನ್ನು ತನ್ನತ್ತ ಸೆಳೆಯುತ್ತದೆ.

Advertisement

2018ರ ಸಮೀಕ್ಷೆಯಲ್ಲಿ ಸುಮಾರು 2 ರಿಂದ 3 ಕೋಟಿ ಪ್ರವಾಸಿಗರಿದ್ದು, 1,000 ಕೋಟಿಗೂ ಹೆಚ್ಚು ರೂ. ಆದಾಯ ತಂದುಕೊಟ್ಟಿತು. ವಿಶ್ವದ ಪ್ರವಾಸೋದ್ಯಮ ದೇಶಗಳ ಪೈಕಿ ಮಲೇಷ್ಯಾ ಮೊದಲ ಹತ್ತು ದೇಶಗಳಲ್ಲಿ ಒಂದಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರವಾಸೋದ್ಯಮಕ್ಕೆ ಇಲ್ಲಿ ಮೂರನೇ ಸ್ಥಾನವಿದೆ.

ಆಗ್ನೇಯ ಏಷ್ಯಾ ದ್ವೀಪವಾಗಿರುವ ಮಲೇಷ್ಯಾ ತನ್ನ ಅನೇಕ ಆಚಾರ-ವಿಚಾರ, ವೈವಿಧ್ಯಮಯ ತಿನಿಸುಗಳು,  ಜಲಕ್ರೀಡೆ ಹಾಗೂ ಸಂವೃದ್ಧವಾಗಿರುವ ಇತಿಹಾಸದಿಂದ ಪ್ರಪಂಚವನ್ನು ತನ್ನತ್ತ ಆಕರ್ಷಿಸುತ್ತಿದೆ. ಇದೆಲ್ಲದರ ಜತೆಗೆ ಬಜೆಟ್‌ ಫ್ರೆಂಡ್ಲಿ ದೇಶವಾಗಿದ್ದು, ಸಹೃದಯ ಜನರನ್ನು ಹೊಂದಿದೆ. ಮಲೇಷ್ಯಾದ ಪ್ರಸಿದ್ಧ ಸ್ಥಳಗಳಾದ ಕೌಲಲಾಂಪುರದ ಟ್ವಿನ್‌ ಟವರ್‌, ಮೆಲಕ, ಪೆನಾಂಗ್‌, ಲಂಕಾವಿ, ಇಲ್ಲಿನ ಸಮುದ್ರ ತೀರಗಳು, ಚಿಕ್ಕ ಪುಟ್ಟ ದ್ವೀಪಗಳು ಎಲ್ಲಕ್ಕಿಂತ ಹೆಚ್ಚಾಗಿ ಸೀಫ‌ುಡ್‌ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದ್ದು, ನೂರಾರು ಕೋಟಿ ರಿಂಗೆಟ್ಟುಗಳ ಆದಾಯವನ್ನು ಪ್ರತಿ ವರ್ಷ ತಂದುಕೊಡುತ್ತಿವೆ.

ಕೋವಿಡ್‌ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟ

ಕೋವಿಡ್‌-19ರಿಂದ ಇಡೀ ಪ್ರಪಂಚವೇ ನಲುಗಿದ್ದು  ಪ್ರವಾಸೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ವಿಮಾನ ಹಾರಾಟ ನಿರ್ಬಂಧಗಳಿಂದ, ಪ್ರವಾಸೋದ್ಯಮ ಚಟುವಟಿಕೆಗಳು ಬಹುತೇಕ ನಿಂತೇ ಹೋಗಿವೆ. ಕೇವಲ ಪ್ರವಾಸೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ಅನೇಕ ಸಂಸಾರಗಳು, ಹೊಟೇಲ್‌ ಉದ್ಯಮ, ಟೂರಿಸಂ ಏಜನ್ಸಿಗಳಿಗೆ ಆರ್ಥಿಕವಾಗಿ ದೊಡ್ಡ ಹೊಡೆತವನ್ನೇ ನೀಡಿದೆ.

Advertisement

2019ರಲ್ಲಿ ಸುಮಾರು 26 ಮಿಲಿಯನ್‌ ಜನರನ್ನು ಮಲೇಷ್ಯಾ ಪ್ರವಾಸೋದ್ಯಮ ಆಕರ್ಷಿಸಿದ್ದರೆ 2020ರಲ್ಲಿ ಇದು 4.3 ಮಿಲಿಯನ್‌ಗೆ ಇಳಿದಿದೆ. 2019ರಲ್ಲಿ ಪ್ರವಾಸೋದ್ಯಮದಿಂದ ಬಂದ ಆದಾಯ 86 ಬಿಲಿಯನ್‌ ಮಲೇಷ್ಯನ್‌ ರಿಂಗೆಟ್‌. ಆದರೆ 2020 ರಲ್ಲಿ ಸುಮಾರು ಹತ್ತು ಪಟ್ಟು ಇಳಿಕೆಯಾಗಿದ್ದು ಕೇವಲ 12.7 ಬಿಲಿಯನ್‌ ಗಳಿಸಿದೆ. ಗಮನಿಸಬೇಕಾದ  ಇನ್ನೊಂದು ವಿಷಯವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರವಾಸೋದ್ಯಮದ ಆದಾಯದ ಗಳಿಕೆ  ಇಷ್ಟು ಕುಸಿದಿರುವುದು ಇದೇ ಮೊದಲ ಬಾರಿ. ಇದಕ್ಕೆ ಮುಂಚಿನ ಪ್ರವಾಸೋದ್ಯಮ ಆದಾಯದ ಕನಿಷ್ಠ ಗಳಿಕೆ 2009ರಲ್ಲಿ 53 ಬಿಲಿಯನ್‌ ರಿಂಗೆಟ್ಟುಗಳಾಗಿತ್ತು.

ಪ್ರವಾಸೋದ್ಯಮಿಗಳೂ ಇಲ್ಲಿ ಫ್ರಂಟ್‌ ಲೈನ್‌ ವಾರಿಯರ್‌

ದೇಶದ ಆರ್ಥಿಕತೆಯ ಒಂದು ಭಾಗವಾಗಿರುವ ಪ್ರವಾಸೋದ್ಯಮ ದುಸ್ಥಿತಿಯಿಂದ ದೇಶದ ಬಹುಮುಖ್ಯ ಆದಾಯದ ಮೂಲ ನಿಂತುಹೋಗಿದೆ. ಸದ್ಯ ಇಲ್ಲಿನ ಸರಕಾರ ತನ್ನ 2021ರ ಬಜೆಟ್‌ ನಲ್ಲಿ ಸರಿಸುಮಾರು 50 ಮಿಲಿಯನ್‌ ಮಲೇಷ್ಯನ್‌ ರಿಂಗೆಟ್‌ ಹಣವನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ  ಜನರಿಗೆ ಹಾಗೂ ಮೂಲಸೌಕರ್ಯಗಳಿಗೆ ಮೀಸಲಿಟ್ಟಿದೆ. ಸುರಕ್ಷೆಗೆ ಹೆಚ್ಚು ಮಹತ್ವ ನೀಡುವ ಸರಕಾರ ಪ್ರವಾಸೋದ್ಯಮದವರನ್ನು ಫ್ರಂಟ್‌ ಲೈನ್‌ ವಾರಿಯರ್‌ ಎಂದು ಪರಿಗಣಿಸಿ ವ್ಯಾಕ್ಸಿನೇಷನ್‌ಗೆ ಪ್ರಮುಖ ಸ್ಥಾನ ಕೊಡುವಲ್ಲಿ ಮುಂದಾಗಿದೆ. ಇದಕ್ಕೆ ತಕ್ಕ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಸರಿಸುಮಾರು  20 ಮಿಲಿಯನ್‌ ಮಲೇಷ್ಯನ್‌ ರಿಂಗೆಟ್‌ ವೆಚ್ಚದಲ್ಲಿ ವ್ಯಾಕ್ಸಿನೇಷನ್‌ ಕಾರ್ಯಕ್ರಮವನ್ನು ಹೊರತಂದಿದ್ದು, ಇಲ್ಲಿನ ಪ್ರವಾಸೋದ್ಯಮ ಮತ್ತೆ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡು ಎಂದಿನಂತೆ ತನ್ನತ್ತ ಕೋಟಿ ಕೋಟಿ ಜನರನ್ನು ಆಕರ್ಷಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

 

ಅಕ್ಷಯ ರಾವ್‌,  ಮಲೇಷ್ಯಾ

Advertisement

Udayavani is now on Telegram. Click here to join our channel and stay updated with the latest news.

Next