Advertisement

ಕನ್ನಡದ ಕಾಯಕ ನಿರಂತರವಾಗಿರಲಿ: ಟಿ.ಎಸ್‌.ನಾಗಾಭರಣ

12:53 PM Jun 16, 2021 | Team Udayavani |

ಕನ್ನಡದ ಕೆಲಸ ಒಂದು ದಿನದ್ದಲ್ಲ ಅದು ನಿರಂತರ ವಾಗಿರಬೇಕು. ನಮಗರಿವಿಲ್ಲದ ಭಾಷೆ, ಪರಿಸರದಲ್ಲಿ ನಮ್ಮ ಭಾಷೆಯನ್ನು ಬೆಳೆಸುವ ಕಾರ್ಯದಲ್ಲಿ ಟೊರೊಂಟೊ ಕನ್ನಡ ಸಂಘದ ಸದಸ್ಯರು ತೊಡಗಿ ಕೊಂಡಿರುವುದಕ್ಕೆ ಎಲ್ಲರಿಗೂ ಅಭಾರಿ ಎಂದು ಕನ್ನಡ ಅಭಿವೃದ್ಧಿ ಪಾಾÅಧಿಕಾರದ ಅಧ್ಯಕ್ಷರಾದ ಟಿ.ಎಸ್‌. ನಾಗಾಭರಣ ಹೇಳಿದರು.

Advertisement

ಅವರು ಟೊರೊಂಟೊ ಕನ್ನಡ ಸಂಘದ ವತಿಯಿಂದ ಮೇ 29ರಂದು ವರ್ಚುವಲ್‌ನಲ್ಲಿ ನಡೆದ ಕನ್ನಡ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಭಾಷೆಯ ಜತೆ ನಮ್ಮತನವನ್ನು ನಾವು ರೂಢಿಸಿ ಕೊಂಡು ಹೋಗುತ್ತೇವೆ. ಇದರಿಂದ ಭಾಷೆಯ ಬೆಳವಣಿಗೆಯಾಗುತ್ತದೆ. ಟೊರೊಂಟೊ ಕನ್ನಡ ಶಾಲೆಯ ಎಲ್ಲ ಶಿಕ್ಷಕರು ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ಒಂದು ಅದ್ಭುತವಾದ ಕಾರ್ಯ ಕ್ರಮವನ್ನು ಹೊರದೇಶದಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಚಾರ. ಯಾವುದೇ ಪ್ರಕಾರವಾದ ಪಠ್ಯ, ಪರಿಸರ, ಪಾಠೊಪಕರಣದ ಅಗತ್ಯವಿದ್ದಾಗ ಅದನ್ನು ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ.

ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಜಟಿಲ ಸಂದರ್ಭದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿರುವುದು ಬಹುಮುಖ್ಯ. ನಮ್ಮ ವಿಚಾರಧಾರೆಗಳು ಏನಾದರಾಗಲಿ ಎಲ್ಲರೂ ಜತೆಯಾಗಿ ಮನುಕುಲದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಆರಂಭದಲ್ಲಿ ಕುಮಾರ್‌ ವ್ಯಾಸ್‌ ಗಣೇಶನ ಸ್ತುತಿಯನ್ನು, ಪೃಥ್ವಿ ಪ್ರಮೋದ್‌ ಶೇಟ್‌ ಹಚ್ಚೇವು ಕನ್ನಡ ದೀಪ ಹಾಡನ್ನು ಹಾಡಿದರು. ಟಿ.ಎಸ್‌. ನಾಗಾಭರಣ ಹಾಗೂ ಅವರ ಪತ್ನಿ ನಾಗಿಣಿ ನಾಗಾಭರಣ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಕೆ.ಎ.ಎಸ್‌. ಅಧಿಕಾರಿ ಡಾ| ಮುರಳೀಧರ್‌ ಮಾತನಾಡಿ, ವಿದೇಶದಲ್ಲಿ ನೆಲೆಸಿರುವ ಮಕ್ಕಳು ಕನ್ನಡ ಕಲಿತರೆ ಏನು ಪ್ರಯೋಜನ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಲವೊಂದು ಯೋಜನೆಗಳನ್ನು ರೂಪಿಸಿದೆ. ಇಲ್ಲಿ ಮೆಡಿಕಲ್‌ ಓದಲು ಬಂದರೆ ಕನ್ನಡ ಕಡ್ಡಾಯವಾಗಿ ಓದಲೇಬೇಕು. ವೃತ್ತಿ ಶಿಕ್ಷಣದಲ್ಲೂ ಎರಡು ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಹೀಗಾಗಿ ಹೊರದೇಶದಲ್ಲಿದ್ದು ಕನ್ನಡ ಕಲಿತರೆ ಮುಂದೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಇಂದು ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಭಾಷಾ ಕಲಿಕೆಗೆ ಇದು ತುಂಬಾ ಉಪಯುಕ್ತವಾಗುತ್ತಿದೆ ಎಂದರು.

ನಿವೃತ್ತ ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ| ಪುರುಷೋತ್ತಮ ಬಿಳಿನೆಲೆ ಮಾತನಾಡಿ, ಮಕ್ಕಳ ಕಣ್ಣಿಗೆ ಕನ್ನಡ ಕಾಣಬೇಕು, ಕಿವಿಗೆ ಬೀಳಬೇಕು. ಆಗ ಮಾತ್ರ ಹೊರದೇಶದಲ್ಲಿ ಮಕ್ಕಳಿಗೆ ಕನ್ನಡದ ಮೇಲೆ ಪ್ರೀತಿ ಮೂಡಿಸಲು ಸಾಧ್ಯವಿದೆ ಎಂದರು.

ನಿಸಾರ್‌ ಅಹ್ಮದ್‌ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಉಲ್ಲೇಖೀಸಿ ಅದರ ಕುರಿತು ಚಿತ್ರ ಬರೆಯಲು ಮಕ್ಕಳಿಗೆ ಹೇಳಬೇಕು. ಇದರಿಂದ ಮಕ್ಕಳ ಮನೋವಿಕಾಸಕ್ಕೆ ಪ್ರೇರಣೆ ನೀಡಬಹುದು. ಒಂದು ಪದ್ಯ ತಮ್ಮ ಊರನ್ನೇ ಸೃಷ್ಟಿಸುತ್ತದೆ. ಕನ್ನಡವನ್ನು ಉಳಿಸಲು ಬಹುಮುಖ್ಯ ಸಾಧನವೆಂದರೆ ನಾಟಕಗಳು. ಇದರೊಂದಿಗೆ ವಚನಗಳು, ಕೀರ್ತನೆಗಳನ್ನು ರೂಪಕಗಳಾಗಿ ಅವರಿಂದ ಮಾಡಿಸಬೇಕು. ಇದರಿಂದ ಕನ್ನಡ ಬೆಳೆಯುವುದು. ಇದಕ್ಕಾಗಿ ಮಕ್ಕಳನ್ನು ನಾವು ಮೊದಲು ಕನ್ನಡಿಗರಾಗಿ ಮಾಡಬೇಕು. ಅನಂತರ ಅವರು ಎಲ್ಲಿಗೆ ಬೇಕಾದರೂ ಹೋಗಲಿ, ಎÇÉೇ ವಾಸ ಮಾಡಲಿ. ಆದರೆ ಅವರು ಕನ್ನಡಿಗರಾಗಿಯೇ ಉಳಿಯುತ್ತಾರೆ ಎಂದು ಹೇಳಿದರು.

ಕನ್ನಡ ಕೀಲಿಮಣಿಯನ್ನು ತಯಾರಿಸಿದ ಕ- ನಾಡ ಸಂಸ್ಥೆಯ ಸಂಸ್ಥಾಪಕರಾದ ಡಾ ಗುರುಪ್ರಸಾದ್‌ ಅವರು  ಕನ್ನಡ ಕಲಿ ಕೀಬೋರ್ಡ್‌ ಕುರಿತು ವಿವರಿಸಿದರು.  ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಶಾಚಂದ್ರು, ಅಶ್ವಿ‌ನಿ ಮಂಜುನಾಥ್, ರಘು ಕಟ್ಟಿನಕೆರೆ, ಶೋಭಾ ಹೆಗ್ಡೆ,  ಶ್ರುತಿ ಅಭಿರಾಮ‍್, ಸುಧಾ ಸುಬ್ಬಣ್ಣ, ವೀಣಾ ದೇಸಾಯಿ ಅವರನ್ನು ಗೌರವಿಸಲಾಯಿತು.

ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಕೃಷ್ಣಮೂರ್ತಿ ಅವರು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಸುಬ್ರಹ್ಮಣ್ಯ ಶಿಶಿಲ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಸಂಘದ ಏಳು ಶಾಲೆಗಳ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು. ಅನಂತರ ಕನ್ನಡ ಕಲಿತ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕುದ್ರೋಳಿ ಗಣೇಶ್‌ ಅವರಿಂದ ಇಂದ್ರಜಾಲ ಪ್ರದರ್ಶನ ನಡೆಯಿತು.

ಟೊರೊಂಟೊ

Advertisement

Udayavani is now on Telegram. Click here to join our channel and stay updated with the latest news.

Next