Advertisement

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

01:10 PM Oct 26, 2024 | Team Udayavani |

ಮೊನ್ನೆ ಒಂದು ಸುದ್ದಿ ಓದಿದೆ. ಅದನ್ನು ಓದಿದ ಕೂಡಲೇ ಮನಸ್ಸಿಗೆ ಬಂದ ಮೊದಲ ಪ್ರತಿಕ್ರಿಯೇ ಎಂದರೆ “ಥತ್‌ ! ಏನಾಗಿದೆ ಇವರುಗಳಿಗೆ?’ ಅಂತ. ಬಹುಶ: ಸುದ್ದಿಯ ಶೀರ್ಷಿಕೆ ಓದಿದಾಗ ನಿಮಗೂ ಹಾಗೆ ಅನ್ನಿಸುತ್ತಿತ್ತೇನೋ ! ಶೀರ್ಷಿಕೆ ಹೀಗಿದೆ “ಅಕ್ಕ ಬೆಡ್‌ ಶೀಟ್‌ ಕೊಡಲಿಲ್ಲ ಅಂತ ತಂಗಿ ಆತ್ಮಹತ್ಯೆಗೆ ಶರಣು’.

Advertisement

ಮೊದಲಿಗೆ ನಾ ಹೇಳಿದ ಪ್ರತಿಕ್ರಿಯೆ ತಲೆಗೆ ಬಂದರೂ ಸುದ್ದಿ ಓದಿ ತಿಳಿಯುವಾ ಅನ್ನಿಸಿ ಮುಂದೆ ಓದಿದಾಗ ಇನ್ನೂ ಕಿರಿಕಿರಿಯಾಯ್ತು. ಆತ್ಮಹತ್ಯೆಗೆ ಶರಣಾದ ಆ ತಂಗಿಯಾದವಳು “19 ವರ್ಷದ ಬಿಬಿಎಂ ಓದುವ ವಿದ್ಯಾರ್ಥಿ’ ಅಂತ. ತನ್ನನ್ನೇ ಮ್ಯಾನೇಜ್‌ ಮಾಡಿಕೊಳ್ಳದ ಈ ವ್ಯಕ್ತಿ ಮುಂದೆ ಒಂದು ಕಂಪೆನಿಯ ಬ್ಯುಸಿನೆಸ್‌ ಹೇಗೆ ಮ್ಯಾನೇಜ್‌ ಮಾಡುತ್ತಿದ್ದಳು ಅಂತ ಕಿರಿಕಿರಿಯಾಯ್ತು. ವಿಷಯ ಏನಿರಬಹುದು ಅಥವಾ ಮಾಧ್ಯಮದವರಲ್ಲಿ ಇನ್ನೂ ಏನಾದರೂ ವಿಷಯ ಇದೆಯೇ ಅಂತ ಓದುವಾಗ ಇನ್ನೂ ಹೆಚ್ಚಿನ ವಿಚಾರಗಳ ಅನಾವರಣವಾಯ್ತು.

ಮುಂದೆ ಓದುತ್ತಿದ್ದಂತೆ ಅರ್ಥವಾಗಿದ್ದು ದಿನನಿತ್ಯ ಮನೆಯಲ್ಲಿ ಗಂಡ-ಹೆಂಡತಿ ಕಿತ್ತಾಡುತ್ತಿದ್ದರಂತೆ. ಬಹುಶ: ಇದರಿಂದ ರೋಸಿದ್ದ ಹೆಣ್ಣು ಆತ್ಮಹತ್ಯೆಗೆ ಶರಣಾದಳು ಅಂತ ಸುದ್ದಿ ಬರೆದವರು ಅವರದ್ದೇ ಅನುಮಾನ ಹೊರಗೆ ಹಾಕಿದ್ದರು. ಸಾಮಾನ್ಯವಾಗಿ ಇಂಥಾ ವಿಷಯಗಳನ್ನು ಓದಿ ಅಲ್ಲೇ ಪಕ್ಕಕ್ಕೆ ಹಾಕುವುದು ಸರ್ವೇ ಸಾಮಾನ್ಯ, ಆದರೆ ಕೊಂಚ ಆಳವಾಗಿ ಆಲೋಚಿಸುವ ಆಲೋಚನೆ ಮೂಡಿಬಂತು.

ನನ್ನದೇ ಒಂದಷ್ಟು ಊಹಾಪೋಹಗಳನ್ನು ಈ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಊಹಿಸಿಕೊಂಡು, ಇದು ಎಷ್ಟು ಗಂಭೀರ ಸಮಸ್ಯೆ ಇರಬಹುದು ಎಂದು ನೋಡುವ ಇರಾದೆಯೂ ಮೂಡಿಬಂತು. ಈ ಹತ್ತೂಂಬತ್ತರ ಹೆಣ್ಣಿಗೆ ಅರಿವಿನ ಬುದ್ಧಿ ಬಂದಿದ್ದು ಮೂರು ವರ್ಷಕ್ಕೆ ಎಂದುಕೊಳ್ಳೋಣ. ಅರ್ಥಾತ್‌ ಈಕೆ ಹದಿನಾರು ವರ್ಷಗಳ ಕಾಲ ಮನೆಯಲ್ಲಿ ಕುರುಕ್ಷೇತ್ರದ ವಾತಾವರಣವನ್ನೇ ಕಂಡಿದ್ದಳು ಎಂದುಕೊಳ್ಳಬಹುದು. ಆತ್ಮಹತ್ಯೆಗೆ ಶರಣಾದ ಹೆಣ್ಣು ಎಂದರೆ ಬಹುಶ: ಇವಳು ಸೂಕ್ಷ್ಮ ಮನಸ್ಸಿನವಳು ಆಗಿರಬಹುದು. ಆಕೆ ಬೆಳೆಯುತ್ತಾ ಬಂದಂತೆ ದಿನನಿತ್ಯದ ಸಮರವು ಅವಳ ಮೇಲೆ ಏನು ಪರಿಣಾಮ ಬೀರಿತ್ತೋ ಏನೋ ಯಾರಿಗೆ ಗೊತ್ತು.

Advertisement

ಮನೆಯಲ್ಲಿ ಕಲಹಗಳು ಏಕಾಗಬಹುದು? ಮನೆಯಾತನದು ಒಂದು ಕೈ ಸಂಬಳ ಆದರೆ ಉಣ್ಣುವ ಕೈಗಳು ಅವನನ್ನೂ ಸೇರಿಸಿ ನಾಲ್ಕು. ಇದೊಂದು ಅವನ ಮನಸ್ಸಿನ ದಿನನಿತ್ಯದ ಒತ್ತಡ. ಮತ್ತೊಂದು ಸನ್ನಿವೇಶ ಎಂದರೆ, ದುಡಿಯುವವನು ಇವನೊಬ್ಬನೇ. ಸಂಜೆ ಮನೆ ಸೇರಿದರೆ ಮತ್ತೇನೂ ಕೆಲಸವಿಲ್ಲ. ಟಿವಿ ಹಾಕುವಂತಿಲ್ಲ, ಜೋರಾಗಿ ಮಾತನಾಡುವಂತಿಲ್ಲ, ಇವನಿಂದ ಮಾತಿಲ್ಲ, ಕಥೆಯಿಲ್ಲ, ನಗುವಿನ ಮಾತು ಮೊದಲೇ ಇಲ್ಲ. ಮರುದಿನ ಇವನು ಕೆಲಸಕ್ಕೆ ಹೋಗೋ ತನಕ ಮನೆಯಲ್ಲಿ ಕರ್ಫ್ಯೂಯೂ ವಾತಾವರಣ. ಒಮ್ಮೆ ಆತ ಹೊರಗೆ ಹೋದರೆ, ಅಲ್ಲಿಗೆ ನೆಮ್ಮದಿಯ ನಿಟ್ಟುಸಿರು. ಮಗದೊಂದು ಸನ್ನಿವೇಶ ಎಂದರೆ ಇವನೋ ಸಾಧುಪ್ರಾಣಿ. ಆದರೆ ಹೆಂಡತಿ ಜಗಳಗಂಟಿ ಅಥವಾ ವಿಪರೀತ ಖರ್ಚು ಮಾಡುವವಳು ಎಂದರೆ ಅಲ್ಲೊಂದು ಶೀತಲ ಯುದ್ಧ, ಮನಸ್ತಾಪ, ನೇರ ನಿಂದನೆ ಹೀಗೆ ಏನೂ ಇರಬಹುದು.

ಕೆಲಸ ಮುಗಿಸಿ ಬಂದ ಗಂಡನಿಗೆ ಯಾಕಾದರೂ ಬಂದೆನೋ ಎಂಬ ವಾತಾವರಣ. ಹಾಗಂತ ದಿನನಿತ್ಯದಲ್ಲಿ ಇನ್ನೆಲ್ಲಿಗೆ ಹೋದಾನು. ಕೆಲವೊಮ್ಮೆ ಒಬ್ಬರಿಂದ, ಹಲವು ಬಾರಿ ಎರಡೂ ಒತ್ತಡ ಮನಗಳಿಂದಲೇ ಮನೆಯ ವಾತಾವರಣವು ಕಲುಷಿತವಾಗೋದು. ಕಲುಷಿತ ವಾತಾವರಣದ ಮನೆಯ ಗಾಳಿಯೂ ಬಿಸಿಯೇ. ಕುದಿವ ಮನಗಳು, ಧುಮಗುಟ್ಟುವ ಹೃದಯಗಳು, ಸಿಡಿಸಿಡಿ ಎನ್ನುವ ನಾಲಿಗೆಗಳು, ಕಾದ ಸೀಸದ ಕಿವಿಗಳು ಮಕ್ಕಳ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿಜ ಹೇಳಬೇಕು ಎಂದರೆ, ಮನೆಯ ವಾತಾವರಣವು ಮಕ್ಕಳ ಬೆಳವಣಿಗೆಯ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂಬುದು ಸುಳ್ಳಲ್ಲ.

ಈಗ ಆತ್ಮಹತ್ಯೆ ಮಾಡಿಕೊಂಡ ಹೆಣ್ಣು ಮಗಳ ವಿಷಯಕ್ಕೆ ಬರೋಣ. ಈ ಹೆಣ್ಣು ಬೆಳೆಯುತ್ತಾ ಬಂದಂತೆ, ಅವಳ ಅಕ್ಕಪಕ್ಕದ ಮನೆಯವರು ಅವಳ ಮನೆಯವರ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಿರಬಹುದು? ಬಹುಶ: ಜಗಳಗಂಟರು, ಜಗಳಗಂಟ, ಜಗಳಗಂಟಿ ಹೀಗೆ ಏನೇನೋ ಅಡ್ಡಹೆಸರು ಇಟ್ಟಿರಬಹುದು. ಅದು ಈಕೆಗೂ ಗೊತ್ತಿರಬಹುದು ಅಥವಾ ಅಕಸ್ಮಾತ್‌ ಕಿವಿಗೆ ಬಿದ್ದಿರಬಹುದು. ಆ ದಿನ ಬಹುಶ: ಅವಳ ಜೀವನದ ಕೆಟ್ಟ ದಿನವೇ ಆಗಿರಬಹುದು ಎಂದುಕೊಳ್ಳೋಣ. ಶಾಲೆಯಲ್ಲಿ ಅಪ್ಪ-ಅಮ್ಮನನ್ನು ಕರೆದುಕೊಂಡು ಬಾ ಎನ್ನುವುದರ ಜತೆಗೆ “ಫೀಸ್‌ ಕಟ್ಟುವುದು ತಡವಾಗಿದೆ, ಬಂದು ಹಣ ಕಟ್ಟಲಿ ಸಾಕು, ಜಗಳವಾಡೋದು ಬೇಡಾ’ ಎಂದೂ ಹೇಳಿದಾಗ ತನ್ನ ಸಹಪಾಠಿಗಳ ಎದುರಿಗೆ ಅವಳಿಗೆ ಅವಮಾನವೇ ಆಯ್ತು. ಮುಗ್ಧ ಮನದ ಟೀಚರ್‌ ಹೇಳಿದ್ದನ್ನೇ ಅಮ್ಮ ಅಥವಾ ಅಪ್ಪನ ಮುಂದೆ ಹೇಳಿದಾಗ, ಅವರು ಶಾಲೆಗೆ ಹೋಗಿ ಮಾಡುವ ಮೊದಲ ಕೆಲಸವೇ ಜಗಳ. ಮೊದಲೇ ಅವಮಾನವಾಗಿತ್ತು, ಈಗ ಮಗದೊಮ್ಮೆ. ಒಂದರ್ಥದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯ್ತು.

ಬಹುಶ: ಜಗಳಗಂಟರು ಎಂಬ ಕಾರಣಕ್ಕೆ ಈಕೆಗೆ ಸ್ನೇಹಿತೆಯರೇ ಇಲ್ಲದಿರಬಹುದು. ಚಿಕ್ಕಂದಿನಲ್ಲಿ ಬಹುಶ: ಒಂದಿಬ್ಬರು ಸ್ನೇಹಿತೆಯರು ಇದ್ದಿರಬಹುದೇನೋ ಆದರೆ ಕೊಂಚ ಬೆಳೆಯುತ್ತಾ ಬಂದಂತೆ ಆ ಸ್ನೇಹಿತೆಯರೂ ದೂರವಾಗಿರಬಹುದು. ಮನೆಯಲ್ಲಿ ಬರೀ ಗಲಭೆ ಆದರೆ ಮನದಲ್ಲಿ ಮಾತ್ರ ಶೂನ್ಯತೆ. ಇಂಥಾ ಮನಗಳು ದಿನನಿತ್ಯದಲ್ಲಿ ಏನೇನೆಲ್ಲ ಅನುಭವಿಸುತ್ತಾರೋ ಅದು ತಲೆಯಲ್ಲೇ ಉಳಿಯುತ್ತದೆ, ಹೃದಯದಲ್ಲೇ ಕದಡುತ್ತದೆ ಆದರೆ ತುಟಿಯ ದಾಟಿ ಬಾರದ ಮಾತುಗಳು ತನ್ನನ್ನು ತಾನು ಸಾಂತ್ವನಗೊಳಿಸಿಕೊಳ್ಳಲು ತಮ್ಮಲ್ಲೇ ಮತ್ತೂಬ್ಬರನ್ನು ಸೃಷ್ಟಿಸಿಕೊಳ್ಳುತ್ತದೆ.

ಇಂಥಾ ಮನಗಳು ಎಂದೂ ಅವಳಿ-ಜವಳಿಯೇ. ಈಗ ಮನೆಯ ಮಗದೊಬ್ಬ ಸದಸ್ಯೆಯ ಬಗ್ಗೆ ಒಂದೆರಡು ಊಹಾಪೋಹ ನಡೆಸೋಣ. ಈಕೆಗಿಂತ ಎಷ್ಟು ವರ್ಷ ಹಿರಿಯವಳೋ, ಆ ಅಕ್ಕ ಗೊತ್ತಿಲ್ಲ. ಅವಳ ಗುಣವೂ ಅಪ್ಪ-ಅಮ್ಮನಂತೆಯೇ ಇತ್ತೇನೋ! ಅಕ್ಕ ಮದುವೆಯಾಗಿ ಗಂಡನೊಂದಿಗೆ ಕಿತ್ತಾಡಿ ಅಮ್ಮನ ಮನೆಗೆ ಬಂದಿರಬಹುದೇನೋ! ಅಥವಾ ಅಕ್ಕ ಸುಂದರಿಯಾಗಿದ್ದು, ಈ ತಂಗಿಯಾದವಳು ಸಾಧಾರಣ ರೂಪಿಯೂ ಆಗಿರಬಹುದು. ದಿನನಿತ್ಯದಲ್ಲಿ ಆ ಅಕ್ಕ ಆದವಳು ತಂಗಿಯನ್ನು ಹಂಗಿಸಿದ್ದು ಅವಳ ಮನಸ್ಸು ನೋವಿನಿಂದಲೇ ನೊಂದಿರಬಹುದು ಅಥವಾ ಸರ್ವೇ ಸಾಧಾರಣವಾದ ವಿಷಯ ಎಂದರೆ ದೊಡ್ಡವಳಾದ ಅಕ್ಕ ಉಪಯೋಗಿಸಿದ ಬಟ್ಟೆಬರೆ, ಪಠ್ಯಪುಸ್ತಕ, ಜ್ಯಾಮೆಟ್ರಿ ಡಬ್ಬ ಹೀಗೆ ಎಲ್ಲವೂ ಸೆಕೆಂಡ್‌ ಹ್ಯಾಂಡ್‌ ಆಗಿದ್ದಿರಬಹುದು.

ಅಕ್ಕನನ್ನು ನೋಡಲು ಬಂದವನೊಬ್ಬ ಅವಳನ್ನು ಒಪ್ಪದೇ ತಂಗಿಯನ್ನು ಒಪ್ಪಿದ ಎಂದರೆ ಅಲ್ಲೂ ಸೆಕೆಂಡ್‌ ಹ್ಯಾಂಡ್‌ ಎಂಬ ಮನೋಭಾವ ಅವಳಲ್ಲಿ ಉಂಟಾಗಿರಬಹುದು. ಇಂಥಾ ಸಂದರ್ಭದಲ್ಲಿ, ಬಿಡುವಿನ ವೇಳೆಯಲ್ಲಿ, ಟ್ಯೂಷನ್‌ ಹೇಳಿಕೊಟ್ಟು ಏನೋ ನಾಲ್ಕು ಕಾಸು ಸಂಪಾದಿಸಿ ಹೊಸ ಬೆಡ್‌ ಶೀಟ್‌ ಕೊಂಡಿರಬಹುದು. ಅದನ್ನು ಅಕ್ಕ ಆದವಳು ಕೀಟಲೆಯಿಂದ ಅವಳನ್ನು ಆಡಿಸಿರಬಹುದು. ಅಥವಾ “ತಾನು ಅಕ್ಕ’ ತಾ ಬಳಸಿದ ಅನಂತರವೇ ತಂಗಿಯಾದವಳು ಬಳಸಬೇಕು ಅಂತ ಅವಳಿಂದ ಕಿತ್ತುಕೊಂಡಿರಬಹುದು.

ಎಂದಿನಿಂದ ಅವಳ ಮನಸ್ಸು ಹತಾಶೆಯಿಂದ ನರಳಿತ್ತೋ, ಎಲ್ಲವೂ ಕ್ರೋಢೀಕರಿಸಿ ಅಂದು ಅವಳ ಜೀವನದ ಕೆಟ್ಟ ದಿನವಾಗಿರಬಹುದು. ತೀರಾ ಕೆಟ್ಟ ನಿರ್ಧಾರ ತೆಗೆದುಕೊಂಡು ತನ್ನ ಜೀವನದ ಯಾತ್ರೆ ಮುಗಿಸಿರಬಹುದು. ಇದರಲ್ಲಿ ತಪ್ಪು ಯಾರದ್ದು? ಅವಳ ನಿರ್ಧಾರದ್ದೇ? ಮನೆಯ ವಾತಾವರಣದ್ದೇ? ಪ್ರಮುಖವಾಗಿ, ಒಬ್ಬರ ಜೀವನದಲ್ಲಿ ಏನೇನಾಗಿರಬಹುದು ಎಂಬ ಅರಿವೇ ಇಲ್ಲದೇ, ಬೇಗನೆ ಯಾವುದೇ ನಿರ್ಧಾರಕ್ಕೆ ಬರಬಾರದು.

ಜತೆಗೆ, ಇಂಥಾ ಒಂದು ಘಟನೆಯಾಯ್ತು ಎಂದ ಕೂಡಲೇ, ಅವರ ಮನೆಯವರ ವಿಷಯವನ್ನು ಕೆದಕಿ ಕುಹಕವಾಡಬಾರದು. ಒಂದಂತೂ ನಿಜ, ಜೀವನದಲ್ಲಿ ಇಂಥಾ ವಿಷಯಗಳು ನಡೆಯುತ್ತಲೇ ಇರುತ್ತದೆ, ಹಾಗಂತ ಎಲ್ಲವನ್ನೂ ಇಷ್ಟು ಕೂಲಂಕುಷವಾಗಿ ನೋಡಲು ಸಮಯವಿದೆಯೇ? ಖಂಡಿತ ಇಲ್ಲ, ಹಾಗಾಗಿ ಇಂಥಾ ಆಲೋಚನೆಗಳನ್ನು ನಮ್ಮ ಸಮೀಪವರ್ತಿಗಳಿಗೆ ಮೀಸಲಿಟ್ಟರೆ ಸಾಕು. ಇಲ್ಲಿ ಒಂದಷ್ಟು ಕಲಿಕೆಗಳಂತೂ ಇದೆ, ಏನಿರಬಹುದು?

ಮನೆಯೇ ಮೊದಲ ಪಾಠಶಾಲೆ ಎಂದರೆ ಕೇವಲ ಪಾಠದ ವಿಷಯಕ್ಕೆ ಹೇಳಿಲ್ಲ ಬದಲಿಗೆ ಪರಿಸರಕ್ಕೂ ಹೌದು. ಮನೆಯ ಹಿರಿಯರು ಅನ್ನಿಸಿಕೊಂಡವರು ಮತ್ತೋರ್ವರಿಗೆ ಮರ್ಯಾದೆಯನ್ನು ನೀಡುವುದನ್ನು ಮಕ್ಕಳು ನೋಡಿ ಕಲಿಯುತ್ತಾರೆ. ಒಬ್ಬರು ಮತ್ತೊ ಬ್ಬರನ್ನು ಕೀಳಾಗಿ ಕಂಡರೆ, ಮಕ್ಕಳಿಗೆ ನಾವೂ ಹೀಗೆಯೇ ಇರಬೇಕು ಅನ್ನಿಸುತ್ತದೆ. ಒಬ್ಬರು ಕಾಲುಚಾಚಿಕೊಂಡು ಕೂತು ಮತ್ತೊಬ್ಬರು ಕೆಲಸದಲ್ಲೇ ಮುಳುಗಿದ್ದರೆ, ಅದನ್ನೇ ಮಕ್ಕಳೂ ಕಲಿಯುತ್ತಾರೆ. ಸಹ ಬಾಳ್ವೆ ಬಲು ಮುಖ್ಯ. ವ್ಯಕ್ತಿ ಗೌರವ ಬಲು ಮುಖ್ಯ. ಹಿರಿಯರು ಮಕ್ಕಳಿಗೆ ಮಾದರಿಯಾಗಬೇಕು. ಕಲಿಯುವಿಕೆಗೆ ಕೊನೆಯಿಲ್ಲ.

ತಪ್ಪುಗಳನ್ನು ಯಾರೂ ಮಾಡುತ್ತಾರೆ, ಅದಕ್ಕೆ ವಯಸ್ಸಿನ ಮೇಲೆ ಅವಲಂಬನೆ ಇಲ್ಲ. ತಪ್ಪನ್ನು ತಿದ್ದಿಕೊಳ್ಳಲು ಸಹ ಯಾವ ವಯಸ್ಸೂ ಅಡ್ಡ ಬರುವುದಿಲ್ಲ. ಏನಿದ್ದರೂ ಇಂದಿನಿಂದಲೇ ತಿದ್ದಿಕೊಳ್ಳೋಣ. ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

* ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next