Advertisement
ಆದರೆ ಇಲ್ಲಿ ಬಂದು ನೆಲಸಿ ಇಲ್ಲಿನ ನೆಲದಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳಸಿ, ನಮ್ಮ ಪರಂಪರೆಯ ಒಂದು ಭದ್ರವಾದ ಬುನಾದಿಯನ್ನೇ ಹಾಕಿಕೊಟ್ಟು, ತಾವು ನೆಲಸಿದರೆ ಲ್ಲ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಅಂತಹ ಒಬ್ಬ ಅಪರೂಪದ ಮಸ್ಕತ್ತಿನ ಕನ್ನಡಿಗ ನಮ್ಮ ಕಲ್ಮಂಜೇ ಲಕ್ಷ್ಮೀ ನಾರಾಯಣ ಆಚಾರ್ಯರು.
ವೈಯಕ್ತಿಕ ಜೀವನ ಉಡುಪಿಯಲ್ಲಿ ಕಾವೇರಮ್ಮ ಮತ್ತು ಹಯವದನಾಚಾರ್ಯರ ಮಗನಾಗಿ ಜನಿಸಿದ ಆಚಾರ್ಯರ ವಿದ್ಯಾಭ್ಯಾಸ ಉಡುಪಿಯಲ್ಲಿ ಆಯಿತು. ಬಾಲ್ಯದಲ್ಲಿಯೇ ವೈದಿಕ ಪರಂಪರೆಯಲ್ಲಿ, ಆಚರಣೆಗಳಲ್ಲಿ ಆಸಕ್ತಿ ಬೆಳೆಯಲು ಅವರ ತಾತ ಕಾರಣರಾದರು. 1988ರಲ್ಲಿ ಮಸ್ಕತ್ತಿಗೆ ಆಗಮಿಸಿದರು. ಅವರ ಪುತ್ರ ಇಲ್ಲಿಯೇ ಹುಟ್ಟಿ ಬೆಳೆದ. ಇವರು ರುವಿಯ ಒಮಾನ್ ಎಕ್ಸಪ್ರಸ್ ಹೊಟೇಲಿನಲ್ಲಿ ಮ್ಯಾನೇಜರ್ ಆಗಿ, ಇಲ್ಲಿನ ಅನೇಕ ಖಾಸಗಿ ಕಂಪೆನಿಗಳಲ್ಲಿ ಲೆಕ್ಕ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಾ 2019ರಲ್ಲಿ ನಿವೃತ್ತಿ ಹೊಂದಿದರು. ಅಷ್ಟರಲ್ಲಿಯೇ ಅವರ ಪುತ್ರ ಇಲ್ಲಿಯೇ ಉದ್ಯೋಗ ಆರಂಭಿಸಿದ್ದರಿಂದ ತಮ್ಮ ವಾಸವನ್ನು ನಿವೃತ್ತಿಯ ಅನಂತರವೂ ಪತ್ನಿಯೊಂದಿಗೆ ತಮ್ಮ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಮುಂದುವರಿಸಿದ್ದರು.
Related Articles
Advertisement
ಭಕ್ತರೂ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತಾಗಲು ಹೊಸ ಸೇವೆಗಳನ್ನು ಆರಂಭಿಸಿದರು. 1997ರಲ್ಲಿ ಸಮಾನ ಮನಸ್ಕರೊಂದಿಗೆ ಇವರು ಆರಂಭಿಸಿದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಹೋತ್ಸವವು ಕಳೆದ ಇಪ್ಪತ್ತೇಳು ವರ್ಷಗಳಿಂದ ಪ್ರತೀ ವರ್ಷವೂ ತಪ್ಪದೇ ನಡೆಯುತ್ತ ಬಂದಿದೆ.
ಓಂಕಾರ ಸಮಿತಿ (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಎಂಬ ಸಮಾನ ಮನಸ್ಕರ ಗುಂಪು 2011ರಲ್ಲಿ ರೂಪುಗೊಂಡು ಇಲ್ಲಿ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವನ್ನು ಆರಂಭಿಸಿದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸುಮಾರು 10 ವರ್ಷಗಳ ಕಾಲ ಇವರು ನಡೆಸುವ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು.
ಸತ್ಯನಾರಾಯಣ ಪೂಜೆ ಮತ್ತು ಆಚಾರ್ಯರು2006ರಲ್ಲಿ ಅವರ ತಂದೆಯ ಸಲಹೆಯಂತೆ ಮನೆಗಳಿಂದ ಆಹ್ವಾನ ಬಂದಾಗ ಹೋಗಿ ಸತ್ಯನಾರಾಯಣ ಪೂಜೆಯನ್ನು ಮಾಡಿಸಲು ತೊಡಗಿದ ಆಚಾರ್ಯರು ಮುಂದಿನ ವರ್ಷಗಳಲ್ಲಿ ಮಸ್ಕತ್ತಿನಲ್ಲಿ ಸತ್ಯನಾರಾಯಣ ಪೂಜೆಗೆ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದರು. ಅವರ ಸ್ಪಷ್ಟ ಮಂತ್ರೋಚ್ಛಾರಣೆ, ಕನ್ನಡ, ತುಳು, ಹಿಂದಿ- ಹೀಗೆ ಯಾವ ಭಾಷೆಯಲ್ಲಿ ಬೇಕಾದರೂ ಕಥೆ ಹೇಳುವ ಸಾಮರ್ಥ್ಯ, ಪೂಜೆಗೆ ಬಂದವರೆನ್ನೆಲ್ಲ ಸೇರಿಸಿಕೊಂಡು ವಿಷ್ಣು ಸಹಸ್ರನಾಮ, ಭಜನೆಗಳನ್ನು ಮಾಡಿಸುವ ಅವರ ಕ್ರಮಗಳೆಲ್ಲ ಅವರನ್ನು ಮಸ್ಕತ್ ಕನ್ನಡಿಗರ ಕುಲಪುರೋಹಿತರನ್ನಾಗಿಸಿತು. ಪೂಜೆ ಎಂದರೆ ಆಚಾರ್ಯರು, ಆಚಾರ್ಯರೆಂದರೆ ಪೂಜೆ ಎಂಬಂತೆ ಇಲ್ಲಿ ನೆಲಸಿದ ನಮ್ಮೆಲ್ಲರ ಮನೋಭಾವವಾಯಿತು. ಇಂತಹ ಅಸಂಖ್ಯ ಪೂಜೆಗಳನ್ನು 2023ರ ಅಕ್ಕಟೋಬರ್ ತನಕ ಬಿಡುವಿಲ್ಲದೆ ಆಚಾರ್ಯರು ಮಾಡಿಸಿದರು. ಉಡುಪಿ ಬ್ರಾಹ್ಮಣ ಸಮಾಜ ( UBS)
2016ರಲ್ಲಿ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಆರಂಭವಾದ ಈ ಸಂಘವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಾಮಾಜ ಸೇವೆಯನ್ನು ಮಾಡುತ್ತ ಒಮಾನ್ ಕನ್ನಡಿಗರನ್ನು, ಪ್ರಮುಖವಾಗಿ ಕರಾವಳಿ ಕರ್ನಾಟಕದ ಭಾಗದ ಜನರನ್ನು ಒಂದುಗೂಡಿಸುವಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಉಡುಪಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಲಕ್ಷ್ಮೀನಾರಾಯಣ ಆಚಾರ್ಯರು. ಉಡುಪಿ ಬ್ರಾಹ್ಮಣ ಮಹಿಳೆಯರಿಗೆ ಭಜನೆ ಹಾಡುವಂತೆ ಹುರಿದುಂಬಿಸಿ ಇವರ ಒಂದು ಭಜನ ಮಂಡಳಿಯನ್ನು ಆರಂಭಿಸುವಲ್ಲಿ ಆಚಾರ್ಯರ ಪಾತ್ರ ದೊಡ್ಡದಾಗಿದೆ. ಸ್ನೇಹಿತರು ಕಂಡಂತೆ ಆಚಾರ್ಯರು
ಆಚಾರ್ಯರು ತುಂಬಾ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳ ಜೀವನ ನಡೆಸುತ್ತಿದ್ದರು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ತಮ್ಮ ಬೆಳಗ್ಗಿನ ಪೂಜೆಯನ್ನೆಲ್ಲ ಮುಗಿಸುವ ತನಕ ನೀರನ್ನೂ ಕುಡಿಯಿತ್ತಿರಲಿಲ್ಲವಂತೆ. ಏಕಾದಶಿ , ಸಂಕಷ್ಟ ಚತುರ್ಥಿಯ ಉಪವಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಆದರೆ ಅವರ ನಿಯಮ ಅನುಷ್ಠಾನಗಳು ಅವರ ಜೀವನ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಷ್ಟೇ ಆಸ್ಥೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಆಚಾರ್ಯರು ಅಜಾತಾಶತ್ರುವಾಗಿದ್ದರು. ಅವರ ಮಸ್ಕತ್ತಿನ ನಾಲ್ಕು ದಶಕಗಳ ಜೀವನದ ಒಡನಾಡಿಯಾಗಿದ್ದ ಶಶಿಧರ ಶೆಟ್ಟರು ಹೇಳುವಂತೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವ ಸಕಾರಾತ್ಮಕ ಛಲ ಆಚಾರ್ಯರಲ್ಲಿ ಇತ್ತು. ಅವರ ದೀರ್ಘಕಾಲದ ಸ್ನೇಹಿತರಲ್ಲಿ ಒಬ್ಬರಾದ ರಾಜಶ್ರೀ ಮತ್ತು ಕೃಷ್ಣಪ್ರಸಾದ್ ಅವರು ಹೇಳುವಂತೆ ಓಮಾನಿನಲ್ಲಿಯಾಗಲಿ ಅಥವಾ ಭಾರತದಲ್ಲಾಗಲೀ ತುಂಬಾ ಜನರ ಸಂಪರ್ಕವನ್ನು ಹೊಂದಿದ್ದ ಅವರು ಯಾರಿಗಾದರೂ ಸಹಾಯ ಬೇಕೆಂದಾಗ ಥಟ್ ಎಂದು ಸಹಕರಿಸುತ್ತಿದ್ದರು. ಅವರ ನೆರಮನೆಯಲ್ಲಿದ್ದ ಪಾವನ ಕೌಸ್ತುಬ್ ಹೇಳುವಂತೆ ಆಚಾರ್ಯರು ಜೀವನದ ಎಲ್ಲ ಅನುಭವಗಳನ್ನು ಅಷ್ಟೇ ಲವವಿಕೆಯಿಂದ ಅನುಭವಿಸುತ್ತಿದ್ದರು. ತಮ್ಮ ನೆರೆಹೊರೆಯವರೊಂದಿಗೆ ಸೇರಿ ಸಂಭ್ರಮಿಸುವ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ ಆಡುವ ವಿನೋದದ ಆಟಗಳಲ್ಲಿ, ನಾಟಕಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಭಾಗವಹಿಸುತ್ತ ತಮ್ಮ ಪತ್ನಿಯನ್ನೂ ಈ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಇಂತಹ ವಿಶಿಷ್ಟ ವ್ಯಕ್ತಿತ್ವದ ಆಚಾರ್ಯರು 2023ರ ಡಿಸೆಂಬರ್ 8ರಂದು ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇನ್ನಿಲ್ಲ ಅಂತ ಅಂದುಕೊಳ್ಳಲು ತುಂಬಾ ಕಷ್ಟವೆನಿಸುತ್ತದೆ. ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಭಾವನಾತ್ಮಕ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆಯಲ್ಲಿ ಅಚ್ಚಳಿಯದೆ ಇರುವ ನೆನಪುಗಳನ್ನು ಉಳಿಸಿದ್ದಾರೆ. ನಮ್ಮ ಮನೆಗಳಲ್ಲಿ ನಾವು ಸತ್ಯನಾರಾಯಣ ಪೂಜೆ ಮಾಡಿದಾಗ ನಮ್ಮ ಕಣ್ಮುಂದೆ ಬಂದೇ ಬರುತ್ತಾರೆ.