ಬಹ್ರೈನ್: ಇಲ್ಲಿನ ರಫಾ ಕ್ಲಬ್‌ನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅನಿವಾಸಿ ಕುಲಾಲ ಸಮುದಾಯದ ಒಕ್ಕೂಟವಾದ “ಬಹ್ರೈನ್ ಕುಲಾಲ್ಸ…’ ಸಂಘಟನೆಯು “ಕುಂಭ ಟ್ರೋಫಿ -2023′ ಕ್ರಿಕೆಟ್ ಪಂದ್ಯಾಟವನ್ನು ದ್ವೀಪದ ನೂರಾರು ಕ್ರಿಕೆಟ್ ಪ್ರೇಮಿಗಳು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬೆಳಗ್ಗೆ 6 ಘಂಟೆಗೆ ವಿದ್ಯುಕ್ತ ಚಾಲನೆಯೊಂದಿಗೆ ಆರಂಭಗೊಂಡು ತಡರಾತ್ರಿ ಸಮಾರೋಪ ಸಮಾರಂಭದದೊಂದಿಗೆ ಮುಕ್ತಾಯಗೊಂಡ ಈ ಪಂದ್ಯಾಟದಲ್ಲಿ ದ್ವೀಪದ ಕರ್ನಾಟಕ ಮೂಲದ ಪುರುಷರ 12 ಹಾಗೂ ವನಿತೆಯರ 4 ಬಲಿಷ್ಠ ತಂಡಗಳು ಭಾಗವಹಿಸಿದ್ದವು.
ವಿಜೇತರು
ಪುರುಷರ ಹಾಗೂ ವನಿತೆಯರ ಎರಡೂ ವಿಭಾಗದಲ್ಲೂ “ಬಂಟ್ಸ್ ಬಹ್ರೈನ್ ‘ ತಂಡವು ಚಾಂಪಿಯನ್ ಆಗಿ ಮೂಡಿಬಂದು “ಕುಂಭ ಟ್ರೋಫಿ -2023′ ಅನ್ನು ತನ್ನ ಮುಡಿಗೇರಿಸಿಕೊಂಡಿತು.
ಅಂತಿಮ ಹಂತದ ಹಣಾಹಣಿಯಲ್ಲಿ ಉತ್ತಮ ಪೈಪೋಟಿ ನೀಡಿದ್ದ ಪುರುಷರ ಹಾಗೂ ವನಿತೆಯರ “ಬಹ್ರೈನ್ ಕುಲಾಲ್ಸ್…’ ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪುರುಷರ ಕ್ರಿಕೆಟ್ ಪಂದ್ಯಾಟದ ಅತ್ಯುತ್ತಮ ಕ್ಷೇತ್ರ ರಕ್ಷಕರಾಗಿ ಜಯರಾಜ್, ಅತ್ಯುತ್ತಮ ದಾಂಡಿಗನಾಗಿ ಡಿಸಿಲ್, ಅತ್ಯುತ್ತಮ ಎಸೆತಗಾರರಾಗಿ ಸುನಿಲ್ ಕುಲಾಲ್, ಅಂತಿಮ ಪಂದ್ಯಾಟದ ಅತ್ಯುತ್ತಮ ಆಟಗಾರನಾಗಿ ಭರತ್ ಶೆಟ್ಟಿ, ಸರಣಿ ಶ್ರೇಷ್ಠ ಆಟಗಾರನಾಗಿ ಸುನಿಲ್ ಕುಲಾಲ್‌ರವರು ಟ್ರೋಫಿ ಸ್ವೀಕರಿಸಿದರೆ, ವನಿತಾ ವಿಭಾಗದಲ್ಲಿ ಅತ್ಯುತ್ತಮ ಕ್ಷೇತ್ರ ರಕ್ಷಕಿಯಾಗಿ ವೀರ ಕೊಡರ್, ಅತ್ಯುತ್ತಮ ದಾಂಡಿಗಿತ್ತಿ ಕಬಿಯಾ ಬದೋನಿ, ಅತ್ಯುತ್ತಮ ಎಸೆತಗಾರ್ತಿಯಾಗಿ ಸಾಯಿ ಪರ್ಕಿ, ಅಂತಿಮ ಪಂದ್ಯಾಟದ ಅತ್ಯುತ್ತಮ ಆಟಗಾರ್ತಿಯಾಗಿ ಪವಿತ್ರ ಶೆಟ್ಟಿ ಹಾಗೂ ಸರಣಿ ಶ್ರೇಷ್ಠ ಆಟಗಾರ್ತಿಯಾಗಿ ಸಾಯಿ ಪರ್ಕಿಯವರು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
“ಬಹ್ರೈನ್ ಕುಲಾಲ್ಸ್ ‘ ಅಧ್ಯಕ್ಷರಾದ ಗುರುಪ್ರಸಾದ್ ಎಕ್ಕಾರ್ ಅವರ ಸಾರಥ್ಯದಲ್ಲಿ ಈ ಪಂದ್ಯಾಟವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಮುಖ್ಯ ಅತಿಥಿಗಳಾಗಿ ನಾಡಿನ ಕುಲಾಲ ಸಮುದಾಯದ ಸಾಧಕರಾದ ಸಮಾಜ ಸೇವಕರೂ ಹಾಗೂ ದಾಸ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರೂ ಆಗಿರುವ ಅನಿಲ್ ದಾಸ್ ಹಾಗೂ ಗಡಿ ರಕ್ಷಣ ಪಡೆಯ ನಿವೃತ್ತ ಡೆಪ್ಯುಟಿ ಕಮಾಂಡರ್ ಮತ್ತು ಅಮೂಲ್ಯ ಗ್ಯಾಸ್ ಏಜೆನ್ಸಿಯ ಆಡಳಿತ ನಿರ್ದೇಶಕರಾಗಿರುವ ಚಂದಪ್ಪ ಮೂಲ್ಯ ಅವರು ಆಗಮಿಸಿ ಪಾಲ್ಗೊಂಡು ಹೆಚ್ಚಿನ ಮೆರುಗು ನೀಡಿದರು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹ್ರೈನ್ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಮನ್ಸೂರ್, ಕನ್ನಡ ಸಂಘದ ಅಧ್ಯಕ್ಷರಾದ ಅಮರ್‌ನಾಥ್ ರೈ, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಆಸ್ಟಿನ್ ಸಂತೋಷ್, ರಾಜ್ ಕುಮಾರ್, ರಾಜೇಶ್ ಶೆಟ್ಟಿ , ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷರಾದ ಸತೀಶ್ ಆಚಾರ್ಯ, ಬಹ್ರೈನ್ ಬಿಲ್ಲವಾಸ್‌ನ ಅಧ್ಯಕ್ಷ ಹರೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೂಪೇಶ್ ಸುವರ್ಣ, ಮಾಜಿ ಅಧ್ಯಕ್ಷರಾದ ಅಜಿತ್ ಬಂಗೇರ, ಬಂಟ್ಸ್ ಬಹ್ರೈನ್‌ನ ಅಧ್ಯಕ್ಷ ಅರುಣ್ ಶೆಟ್ಟಿ, ಅಲ್ ಹಿಲಾಲ್ ಹಾಸ್ಪಿಟಲ್ ಸಂಸ್ಥೆಯ ವಲಾಯಧಿಕಾರಿಯಾಗಿರುವ ಆಸಿಫ್, ಕನ್ನಡ ಸಂಘದ ಮಾಜಿ ಉಪಾಧ್ಯಕ್ಷರಾದ ಡಿ.ರಮೇಶ್, ಹಿರಿಯ ಕನ್ನಡಿಗ ವಿಜಯ್ ನಾಯ್ಕ್ , ತುಳು ಸಿನೆಮಾರಂಗ ಡಾಟ್ ಕಾಮ್‌ನ ಅಮಿತ್ ದೇವಾಡಿಗ, ಬಹ್ರೈನ್ ಕುಲಾಲ್ಸ್ ನ ಉಪಾಧ್ಯಕ್ಷರಾದ ನಾಗರಾಜ್, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಮಾಣಿಲ, ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಕುಲಾಲ್ ಹಾಗೂ ಬಹ್ರೈನ್ ಕುಲಾಲ್ಸ್ ನ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಲಾಲ ಸಮಾಜದ ಸಾಧಕರಾದ ಅನಿಲ್ ದಾಸ್ ಹಾಗೂ ಚಂದಪ್ಪ ಮೂಲ್ಯರವರ ಪರಿಚಯವನ್ನು ಗಣೇಶ್ ಮನಿಲಾ ಹಾಗೂ ವಿಶಾಲ ಕಿಶೋರ್ ನೀಡಿದರು. ಇಬ್ಬರಿಗೂ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು. ಬಳಿಕ ಮಾತನಾಡಿದ ಸಾಧಕರಿಬ್ಬರೂ “ಇಂತಹ ಒಂದು ಅದ್ಭುತವಾದ ಪಂದ್ಯಾಟವನ್ನು ಆಯೋಜನೆ ಮಾಡಿರುವ ಬಹ್ರೈನ್‌ನ ಕುಲಾಲ ಸಂಘಟನೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾದುದ್ದು. ಕ್ರೀಡಾಕೂಟಗಳನ್ನು ಆಯೋಜಿಸಿವುದರಿಂದ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಗಟ್ಟಿಕೊಂಡು ಸಾಮರಸ್ಯದ ವಾತಾವರಣ ಏರ್ಪಡುತ್ತದೆ. ನಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಮೂಡಿಸುತ್ತದೆ’ ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಬಹ್ರೈನ್ ಕುಲಾಲ್ಸ್ ನ ಅಧ್ಯಕ್ಷರಾದ ಗುರುಪ್ರಸಾದ್ ಎಕ್ಕಾರ್‌ರವರು ಪಂದ್ಯಾಟವನ್ನು ಅಚ್ಚುಕಟ್ಟಾಗಿ ಆಯೋಜಿಸುವುದಕ್ಕೆ ಎಲ್ಲ ರೀತಿಯ ಬೆಂಬಲ ನೀಡಿರುವ ಪ್ರಾಯೋಜಕರುಗಳಿಗೂ, ಸ್ವಯಂಸೇವಕರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ಪ್ರಾಯೋಜಕರುಗಳಿಗೆ ಹಾಗೂ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಇತ್ತು ಗೌರವಿಸಲಾಯಿತು. ಅಲ್ಲದೆ ವಿಜೇತರಿಗೆ ಟ್ರೋಫಿಗಳ ಜತೆಗೆ ನಗದು ಬಹುಮಾನವನ್ನು ನೀಡಲಾಯಿತು. ಸಮಾರೋಪ ಕಾರ್ಯಕ್ರಮವನ್ನು ಕಮಲಾಕ್ಷ ಅಮೀನ್ ನಿರೂಪಿಸಿದರು.
ವರದಿ: ಕಮಲಾಕ್ಷ ಅಮೀನ್