Advertisement
ಮೊದಲಿಗೆ ಅಂದಿನ ದಿನದ ಬಾಗಿಲ ಬಗ್ಗೆ ಮಾತನಾಡೋಣ. ಅನಂತರ ಇಂದಿನ ಕೆತ್ತನೆ ಭರಿತ ಹತ್ತಾಳು ಎತ್ತರದ, ಯಾರಿಗೂ ತೆರೆಯದ, ಹೆಚ್ಚಾಗಿ ಬಳಸದ ಬಾಗಿಲ ಬಗ್ಗೆ ಮಾತನಾಡುವ. ಅಂದಿನ ಬಾಗಿಲುಗಳು ಹೇಗಿತ್ತು ಎಂದರೆ ತಲೆಯನ್ನು ಬಗ್ಗಿಸಿ ಒಳಗೆ ಬರಬೇಕು ಎಂಬಂತೆ. ನೀವೆಷ್ಟೇ ಹಿರಿಯರಾಗಿರಿ ಆದರೆ ನಮ್ಮ ಮನೆಯೊಳಗೆ ಬರುವ ಮುನ್ನ ತಲೆಬಾಗಿಸಿ ಬನ್ನಿ. ಅವರವರ ಮನೆಯ ಸಂಸ್ಕಾರ ಅವರವರಿಗೆ ಮುಖ್ಯ, ಅದನ್ನು ಗೌರವಿಸುವುದು ಎಲ್ಲರ ಧರ್ಮ. ತಲೆಬಾಗಿಸಿ ಒಳಗೆ ಬರುವುದು ಎಂದರೆ ನಮ್ಮ ತಾಣವನ್ನು ಗೌರವಿಸಿ ಒಳಬನ್ನಿ ಎಂಬಂತೆ. ಮತ್ತೂಂದು ರೀತಿಯಲ್ಲಿ ಹೇಳುವುದಾದರೆ ನಿಮ್ಮ ಗರ್ವ, ಅಹಂ, ಅಧಿಕಾರದ ಕುರ್ಚಿಯನ್ನು ಚಪ್ಪಲಿ ಬಿಡುವೆಡೆ ಬಿಟ್ಟು ಒಳಗೆ ಬನ್ನಿ. ಕೊನೆಯದಾಗಿ ಸಿಂಪಲ್ಲಾಗಿ ಹೇಳುವುದಾದರೆ, ಬಾಗಿಲು ಎಂಬ ಪದದ ಬಾಗಿಲಲ್ಲೇ ಹೇಳಿರುವಂತೆ ಬಾಗಿ ಒಳಬನ್ನಿ. ಕನ್ನಡ ಪದಗಳು ಅದೆಷ್ಟು ಅರ್ಥಗರ್ಭಿತ ಅಲ್ಲವೇ?
“ಒಂಬತ್ತು ಬಾಗಿಲ ಮನೆಯೋಳು, ತುಂಬಿದ ಸಂದಣಿ ಇರಲು,
ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿ ಹೋಯಿತು’
ಎಂದಿದ್ದಾರೆ. ದಾಸರು ಉಲ್ಲೇ ಖಿಸಿರುವ ಪಕ್ಷಿ ಒಂದು ಗಿಣಿ. ಮಾತನಾಡುವ ಗಿಣಿ ಎಂಬುದು ನಮ್ಮ ಪ್ರಾಣ “ಪಕ್ಷಿ’. ಒಂಬತ್ತು ಬಾಗಿಲ ಮನೆ ಎಂದರೆ ನಮ್ಮ ದೇಹ. ಒಂಬತ್ತು ಬಾಗಿಲುಗಳು ಎಂದರೆ ನವದ್ವಾರಗಳು. ನಮ್ಮ ಪ್ರಾಣವು ದೇಹದಿಂದ ಹೊರಕ್ಕೆ ಹೋಗುವಾಗ ಬಳಕೆಯಾಗುವುದೇ ಈ ಒಂದಲ್ಲ ಒಂದು ದ್ವಾರ. ಪ್ರಾಣ ಹೋಗುವ ಮುನ್ನ, ಟಿಸಿಲೊಡೆದಂತೆ ಒಡೆದು ಅಂಬರಕ್ಕೆ ಚಿಮ್ಮುತ್ತದೆ ಪ್ರಾಣ. ಅಂಬರಕ್ಕೇ ಏಕೆ ಚಿಮ್ಮಬೇಕು? ಅಲ್ಲೂ ಹರಿಧ್ಯಾನ ಬಿಡಲಿಲ್ಲ ದಾಸರು ಎಂಬುದು ವೇದ್ಯವಲ್ಲವೇ?
ಹಿರಿಯರ ವಾಣಿಯನ್ನು ನೆನೆಯುವಾಗಲೇ ಕುವೆಂಪು ಅವರನ್ನೂ ನೆನೆಯಲೇಬೇಕು. “ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ’ ಎಂಬುದು ಅದೆಷ್ಟು ಸತ್ವಯುತ ಪದಗಳು.
Related Articles
Advertisement
ಶುಕ್ರವಾರ ಎಂದರೆ ಮಹಾಲಕ್ಷ್ಮೀ ವಾರ. ಸಂಜೆಯ ವೇಳೆ ದೀಪ ಹೊತ್ತಿಸಿ ಆಕೆಯನ್ನು ಬರ ಮಾಡಿಕೊಳ್ಳಲು “ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂದು ಹಾಡುವ ಪದ್ಧತಿ ಬಹಳ ಹಿಂದಿನಿಂದಲೂ ನಮ್ಮಲ್ಲಿ ಬೆರೆತು ಹೋಗಿದೆ. ಇಲ್ಲಿ ಮಗದೊಂದು ಸೂಕ್ಷ್ಮವೂ ಇದೆ. ಅದೇನಪ್ಪ ಎಂದರೆ ದೀಪ ಬೆಳಗಿಸುವ ಹೊತ್ತಿಗೆ, ಮುಂಬಾಗಿಲನ್ನು ಸ್ವಲ್ಪವಾದರೂ ತೆರೆಯುವ ಪದ್ಧತಿ. ಸಂಜೆಯ ವೇಳೆ ಮನೆಗೆ ಬರುವ ಲಕ್ಷ್ಮೀಯು ಮುಂಬಾಗಿಲಿಂದ ಬರಲಿ ಎಂಬ ಸಾಂಕೇತಿಕ ದೃಷ್ಟಿಯಿಂದ ಹೀಗೆ ಮಾಡುತ್ತೇವೆ. ಇಂಥಾ ಬಾಗಿಲನ್ನು ಕೂರಿಸುವ ಚೌಕಟ್ಟಿನಲ್ಲೇ ಲಕ್ಷ್ಮೀ ಇದ್ದಾಳೆ ಎಂಬುದೂ ಸತ್ಯ. ಪ್ರಮುಖವಾಗಿ ಒಂದು ಬಾಗಿಲ ಚೌಕಟ್ಟು ಎಂಬುದಕ್ಕೆ ಪಾದದ ಭಾಗದ ಒಂದು ಹೊಸ್ತಿಲು ಮತ್ತು ತಲೆಯ ಭಾಗದ ತೊಲೆ. ತಲೆ ಬಾಗಿಸದೇ ಇದ್ದರೆ ಹಣೆಗೆ ಪೆಟ್ಟು. ತಲೆ ಬಾಗಿಸದೇ ನಡೆದರೆ ಹೊಸ್ತಿಲು ತಾಕುವುದೂ ಖರೆ. ಈ ಹೊಸ್ತಿಲು ಬಲು ಶ್ರೇಷ್ಠ. ಅಲ್ಲೇ ಲಕುಮಿಯು ವಾಸವಾಗಿರೋದು ಕೂಡ.
ಒಂದು ಮನೆಗೆ ಕನಿಷ್ಠ ಎಂದರೆ ಎಷ್ಟು ಬಾಗಿಲು ಇರಬಹುದು? ಒಂದೇ ಬಾಗಿಲು ಎಂದರೆ ಅದು ಮುಂಬಾಗಿಲು ಎಂಬುದು ಖಚಿತ. ಎರಡು ಎಂದರೆ ಹಿಂಬಾಗಿಲು ಅಥವಾ ಬದಿಯ ಬಾಗಿಲು. ನಮ್ಮ ಮನೆಗೆ ಮೂರು ಬಾಗಿಲುಗಳು ಇವೆ. ಮುಂಬಾಗಿಲು, ಹಿಂಬಾಗಿಲು ಮತ್ತು ಬದಿಯ ಬಾಗಿಲು. ಮೂರು ಬಾಗಿಲು ಇದ್ದ ಮನೆಗಳಲ್ಲೆಲ್ಲ “ಮನೆಯೊಂದು ಮೂರು ಬಾಗಿಲು ‘ ಅಂತ ಮೂರು ಕಥೆಗಳು ಇರಲೇಬೇಕಿಲ್ಲ ಬಿಡಿ. ನನ್ನ ಅನಿಸಿಕೆಯ ಪ್ರಕಾರ, ಒಂದು ಮನೆಯ ಮುಂಬಾಗಿಲು ಪೂರ್ವಕ್ಕೆ ಇರಬೇಕು ಎಂಬುದು ವಾಸ್ತುಪ್ರಕಾರ ಅನ್ನಿಸುತ್ತೆ. ಪೂರ್ವಕ್ಕೆ ಮಾತ್ರ ಇರಬೇಕು ಎಂದು ಇರದಿದ್ದರೂ ದಕ್ಷಿಣಾಭಿಮುಖವಾಗಿ ಇರಬಾರದು ಎಂಬುದು ನಾವೂ ಮನೆಕೊಂಡಾಗ ನೋಡಿದ್ದು. ಹೀಗೇಕೆ ಎಂಬುದನ್ನು ಬಲ್ಲವರು ತಿಳಿಸಿ.
ನಾನು ಅಮೆರಿಕಾದಲ್ಲಿ ಕಂಡಂತೆ, ದಕ್ಷಿಣಾಭಿಮುಖವಾಗಿ ಇರುವ ಮುಂಬಾಗಿಲಿನ ಮನೆಯನ್ನು ನಾವು ಬೇಡಾ ಎಂಬುದೇ ಚೀನ ಮೂಲದವರ ಪರಮಶ್ರೇಷ್ಠ ಅಭಿಪ್ರಾಯ. ಅಂದರೆ ಚೀನ ಮಂದಿ ದಕ್ಷಿಣಾಭಿಮುಖವಾಗಿ ಇರುವ ಮುಂಬಾಗಿಲ ಮನೆಯನ್ನೇ ಖರೀದಿಸುತ್ತಾರೆ. ಬಹಳಾ ಹಿಂದೆ ಚೀನದ ಚಕ್ರವರ್ತಿಗಳು ಉತ್ತರ ದಿಕ್ಕಿನಲ್ಲಿ ಕೂತು ದಕ್ಷಿಣ ದಿಕ್ಕಿನತ್ತ ಮುಖ ಮಾಡುತ್ತಿದ್ದರಂತೆ. ತಾವು ದಕ್ಷಿಣಾಭಿಮುಖವಾಗಿ ಇರುವ ಮುಂಬಾಗಿಲಿನ ಮನೆಯನ್ನು ಖರೀದಿಸಿದರೆ ತಮಗೂ ಚಕ್ರವರ್ತಿ ಯೋಗ ಬರುತ್ತದೆ ಎಂಬುದೇ ಅವರ ನಂಬುಗೆ.
ಬಾಗಿಲನ್ನು ತೆರೆದಿಟ್ಟೇ ಮಲಗುತ್ತಿದ್ದರು ಎಂಬುದು ರಾಮರಾಜ್ಯ ಸಂಕೇತ. ಮನೆಯ ಬಾಗಿಲಿಗೆ ರಂಗೋಲಿಯು ಶೋಭಾಯಮಾನ ಎಂಬುದು ಇಂದಿಗೂ ನಾವು ಪಾಲಿಸಿಕೊಂಡು ಬಂದಿದ್ದೇವೆ. ಮನೆಯ ಬಾಗಿಲ ಮುಂದೆ ಸೆಗಣಿ ಸಾರಿಸಿ ಅನಂತರ ರಂಗೋಲಿ ಹಾಕುವ ಪದ್ಧತಿ ಬಹುಶ: ಹಳ್ಳಿಯ ಕಡೆ ಇರಬಹುದು. ಇಂದಿನ ಮುಂಬಾಗಿಲ ಕಥೆಯೇ ಬೇರೆ ಬಿಡಿ.ಮನೆಯ ಬಾಗಿಲು single ಅಥವಾ double door ಆಗಿದ್ದು, ಅದು ಹತ್ತಾಳು ಎತ್ತರ ಇರಬಹುದು. ಹತ್ತಾಳು ಎಂಬುದು ಉತ್ಪ್ರೇಕ್ಷೆ ಬಿಡಿ. ಅಂಥಾ ಬಾಗಿಲ ಮೇಲೆ ಇರುವ ಕೆತ್ತನೆಗಳು ಯಾವ ಗುಡಿಯ ಹೆಬ್ಟಾಗಿಲಿಗೂ ಕಡಿಮೆ ಇರುವುದಿಲ್ಲ. ಇಷ್ಟೆಲ್ಲ ವೈಭವ ಇರುವ ಬಾಗಿಲು ಪೂರ್ವಕ್ಕೆ ಇರುವುದಿಲ್ಲ. ನೇರವಾದ ಬಿಸಿಲು ಬಿದ್ದರೆ ಬಾಗಿಲು ಹಾಳಾಗುತ್ತದೆ ಎಂದು. ಇದೆಲ್ಲದರ ಆಚೆ, ಆ ಸೊಬಗಿನ ಬಾಗಿಲಿಗೆ ಕಬ್ಬಿಣದ ಗ್ರಿಲ್ ಹಾಕಿ ಬಂಧಿಸಿರುತ್ತೇವೆ ಕೂಡ. ಇದು ತಪ್ಪೋ ಒಪ್ಪೋ ಗೊತ್ತಿಲ್ಲ ಏಕೆಂದರೆ, ಕಾಲವೇ ಹೀಗಿದೆ, ಏನು ಮಾಡೋಕ್ಕಾಗುತ್ತದೆ? ಮನೆಯ ಬಾಗಿಲು ತಟ್ಟಿ, ನೀರು ಕೇಳಿ, ಮನೆಯಾಕೆ ಬೆನ್ನು ತಿರುಗಿಸಿ ಒಳಗೆ ಹೋದಲೂ ಎಂದರೆ ಹಿಂದಿನಿಂದ ಆಕ್ರಮಣ್ ಮಾಡುವ ಈ ದಿನಗಳಲ್ಲಿ, ಬಾಗಿಲು ತೆರೆದು, ನಸುನಕ್ಕು ಸ್ವಾಗತಿಸುವ ಧೈರ್ಯ ಯಾರಿಗಾದರೂ ಹೇಗೆ ಬಂದೀತು?ಕಾಲ ಅಂದಿನಿಂದ ಇಂದಿನವರೆಗೆ ಅದೆಷ್ಟು ಬದಲಾಗಿದೆ ಅಂತ ನೋಡಿಕೊಂಡೇ ಬಂದಿರುವ ಈ ಬಾಗಿಲು ಎಷ್ಟು ನೋವು ನುಂಗಿ ನಿಂತಿರಬಹುದು ಅಲ್ಲವೇ? ಏನಂತೀರಾ? *ಶ್ರೀನಾಥ್ ಭಲ್ಲೆ, ರಿಚ್ಮಂಡ್