ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡ ಸುಪ್ರೀತಾ, ತನ್ನ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಳು. ತಾಯಿ ಟೈಲರ್ ವೃತ್ತಿಯನ್ನು ಮನೆಯಲ್ಲೇ ಪುಟ್ಟದೊಂದು ಹೊಲಿಗೆ ಮಷಿನ್ ಇಟ್ಟುಕೊಂಡು ತನಗೆ ದೊರಕುವ ಅಲ್ಪ-ಸ್ವಲ್ಪ ಬಟ್ಟೆಗಳನ್ನು ಹೊಲಿದು ಕೊಟ್ಟು ಅದರಿಂದ ಬರುವ ಸಣ್ಣ ಆದಾಯದಿಂದ ತಮ್ಮ ಜೀವನ ಸಾಗಿಸುತ್ತಿದ್ದಳು. ಸುಪ್ರೀತಾ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಟೈಲರ್ ವೃತ್ತಿಯೇ ಇವರ ಜೀವನಕ್ಕೆ ಆಧಾರವಾಗಿರುವುದರಿಂದ ಅದರಿಂದ ಸಿಗುವ ಅಲ್ಪ ಮೊತ್ತ ಕೇವಲ ಮೂರು ಹೊತ್ತು ಊಟಕ್ಕೂ ಸಾಲುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕಷ್ಟ ಪಟ್ಟು ಆಕೆಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು, ನಾಡಿನ ನಾಳೆಗೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು ಎಂಬ ಮಹದಾಸೆ ಸುಪ್ರೀತಾಳ ತಾಯಿಗೆ ಇತ್ತು. ಸುಪ್ರೀತಾ ಕೂಡಾ ಅಷ್ಟೇ ಚತುರೆ, ಜಾಣೆ, ಬುದ್ಧಿವಂತೆಯಾಗಿದ್ದಳು.
ಆಟ, ಓಟ ಸೇರಿದಂತೆ ಪಾಠದಲ್ಲೂ ಮುಂದೆ ಇದ್ದಳು, ಕೇವಲ ಎರಡೇ ಎರಡು ಜತೆಯ ಬಟ್ಟೆ ತೊಟ್ಟು ಶಾಲೆಗೆ ಬರುತ್ತಿದ್ದ ಆಕೆಯ ಉಡುಪಿನಲ್ಲಿ ಅಲ್ಲಲ್ಲಿ ಪ್ಯಾಚ್ ಕಾಣಿಸುತ್ತಿದ್ದರೂ, ತೊಡುವ ವಸ್ತ್ರಗಳು ಶುಭ್ರ ಮತ್ತು ಸ್ವಚ್ಛ ತೆಯಿಂದಲೇ ಕೂಡಿರುತ್ತಿತ್ತು. ಒಂದು ದಿನ ಶಾಲೆಯಲ್ಲಿ ವಾರ್ಷಿಕೋತ್ಸವದ ನಿಮಿತ್ತವಾಗಿ ಎಲ್ಲರೂ ಅಲಂಕಾರ ಭರಿತವಾಗಿ, ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಬರಬೇಕು ಎಂಬ ಶಾಲಾ ಅಧ್ಯಾಪಕರ ಅಪ್ಪಣೆಯಂತೆ ಎಲ್ಲ ವಿದ್ಯಾರ್ಥಿಗಳು ರಂಗು-ರಂಗಿನ, ಉಡುಗೆ-ತೊಡುಗೆಯೊಂದಿಗೆ ಆಗಮಿಸಿದ್ದರು.
ಹೊಟ್ಟೆಗೆ ಭರ್ತಿ ಹಿಟ್ಟಿಲ್ಲದ ಪರಿಸ್ಥಿತಿಯಲ್ಲಿ ಹೊಸ ಬಟ್ಟೆ ಖರೀದಿಸಲು ಆರ್ಥಿಕ ಸಮಸ್ಯೆ ಸುಪ್ರೀತಾಗೆ ತಲೆದೂರಿರುವುದು ವಾಸ್ತವವೇ ಆದರೂ, ಶಾಲೆಗೆ ಹೋಗಲೇಬೇಕು, ಕಾರ್ಯಕ್ರಮಕ್ಕೆ ಭಾಗಿಯಾಗಲೇ ಬೇಕು ಇಂತಹ ಸಂದಿಗ್ನತೆ. ಸಹಪಾಠಿಗಳೆಲ್ಲರೂ ವಿಧ-ವಿಧವಾದ, ನವ-ನವೀನ ಉಡುಪಿನೊಂದಿಗೆ ಕಂಗೊಳಿಸುತ್ತಾರೆ,ನಾನು ಅವರುಗಳ ಜತೆಗೆ ಹೇಗೆ ಕಾಲ ಕಳೆಯಲಿ? ಅವರುಗಳ ಕೊಂಕು ನುಡಿ, ತಮಾಷೆಯ ಮಾತುಗಳಿಗೆ ಕಿವಿಯಾಗಬೇಕು ಎಂಬ ಆಲೋಚನೆಗಳನ್ನೆಲ್ಲ ಬದಿಗಿಟ್ಟು,ಅಮ್ಮನ ಬಳಿ ವಿಷಯ ಪ್ರಸ್ತಾಪ ಮಾಡುತ್ತಾಳೆ.
ಅವಳ ತಾಯಿಯೂ ಕೂಡಾ ಆ ಸಮಯಕ್ಕೆ ಅಸಹಾಯಕತೆಗೆ ಒಳಗಾದರೂ, ಒಂದು ಕ್ಷಣ ಆಲೋಚಿಸಿ ತನ್ನ ತಾಳ್ಮೆ, ಜಾಣ್ಮೆಯಿಂದ ಸುಪ್ರೀತಾಳ ಹಳೆಯ ಹರಿದು ಹೋದ ಬಟ್ಟೆಗಳನ್ನೆಲ್ಲ ಒಟ್ಟುಗೂಡಿಸಿ ಹೊಲಿದು, ತಾನೇ ಹೊಸ ಮಾದರಿಯಲ್ಲಿ ಒಂದು ಉಡುಗೆಯನ್ನು ತಯಾರು ಮಾಡುತ್ತಾಳೆ. ಅದು ಸುಂದರ ಮತ್ತು ವಿಭಿನ್ನತೆಯಿಂದ ಕೂಡಿರುತ್ತದೆ. ಅದನ್ನೇ ಖುಷಿಯಿಂದ ತೊಟ್ಟು ಸುಪ್ರೀತಾ ಶಾಲೆಗೇ ಆಗಮಿಸುತ್ತಾಳೆ.ಎಲ್ಲರ ಬಾಯಲ್ಲೂ ಆಹಾರವಾಗಿ ಅಪಹಾಸ್ಯಕ್ಕೆ ಒಳಗಾದರೂ, ಎಂದಿನಂತೆ ಆನಂದದಿಂದಲೇ ಇರುತ್ತಾಳೆ ಸುಪ್ರೀತಾ. ಮಧ್ಯಾಹ್ನದ ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳುತ್ತದೆ ಅದರಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂಬ ಶಿಕ್ಷಕರ ಒತ್ತಾಯದ ಮೇರೆಗೆ ಸುಪ್ರೀತಾ ಕೂಡಾ ಕ್ಯಾಟ್ ವಾಕ್ ಸ್ಪರ್ಧೆಗೆ ಸೇರುತ್ತಾಳೆ ಹಾಗೂ ಯಾರೂ ನಿರೀಕ್ಷೆ ಮಾಡದಂತೆ ಪ್ರಥಮ ಬಹುಮಾನ ತನ್ನದಾಗಿಕೊಳ್ಳುತ್ತಾಳೆ.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬಂದ ದೊಡ್ಡ ದೊಡ್ಡ ಫ್ಯಾಷನ್ ಡಿಸೈನರ್‌ಗಳು ಇವಳನ್ನು ಕೊಂಡಾಡುತ್ತಾರೆ, ಉಡುಗೆಯನ್ನು ತಯಾರು ಮಾಡಿ ಕೊಟ್ಟ ಈಕೆಯ ತಾಯಿಗೆ ಬೆಂಗಳೂರಿಗೆ ಬುಲಾವ್ ಬರುತ್ತದೆ. ತಾಯಿಗೆ ಉಡುಗೆ ತಯಾರಿಸಿ ಕೊಡಲು ದೊಡ್ಡ ದೊಡ್ಡ ಆಫರ್‌ಗಳು ಬರುತ್ತವೆ. ಒಂದಿನಿತು ಬಿಡುವಿಲ್ಲದೆ ಬ್ಯುಸಿ ಆಗುತ್ತಾರೆ ಅಲ್ಪ ಸಮಯದಲ್ಲಿ ಜನಪ್ರಿಯರಾಗುತ್ತಾರೆ ಹಾಗೂ ಆರ್ಥಿಕ ಪರಿಸ್ಥಿತಿ ದೂರವಾಗುತ್ತದೆ. ತಾಯಿ ಹಾಗೂ ಮಗಳು ಹಳ್ಳಿ ಬಿಟ್ಟು ಬೆಂಗಳೂರಿನಲ್ಲಿ ನೆಲೆಸುತ್ತಾರೆ. ಅವರ ಜೀವನ ಸುಧಾರಣೆ ಕಂಡು ಹೊಸ ಬದುಕನ್ನು ಆರಂಭಿಸುತ್ತಾರೆ.
*ಶಿವಕುಮಾರ್ ಹೊಸಂಗಡಿ, ದುಬೈ