ಬಹಳ ಕ್ರೂರಿ ಹಾಗೂ ಅತೀ ಆಸೆಯಿಂದ ಕೂಡಿರುವ ಸಿಂಹ ಪ್ರತೀ ದಿನವು ಬೇರೆ ಬೇರೆ ಪ್ರಾಣಿಗಳನ್ನು ಕೊಂದು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿತ್ತು. ಕಾಡಿನಲ್ಲಿರುವ ಉಳಿದೆಲ್ಲ ಪ್ರಾಣಿಗಳು ಸಿಂಹವನ್ನು ಕಂಡರೆ ಭಯ ಪಡುತ್ತಿದ್ದವು. ಹಾಗಾಗಿ ಉಳಿದೆಲ್ಲ ಪ್ರಾಣಿಗಳು ಒಗ್ಗೂಡಿಕೊಂಡು ಒಂದು ದಿನ ಸಿಂಹದ ಬಳಿ ಹೋಗಿ “ಓ ಸಿಂಹರಾಜನೇ, ನೀನು ಹೀಗೆಯೇ ಒಂದೊಂದು ಪ್ರಾಣಿಯನ್ನು ತಿಂದರೆ, ಒಂದು ದಿನ ನಾವೆಲ್ಲ ನಾಶವಾಗುತ್ತೇವೆ. ಹಾಗಾಗಿ ನಾವೆಲ್ಲ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ನಾವೇ ದಿನಕ್ಕೊಂದು ಪ್ರಾಣಿಯನ್ನು ನಿನ್ನಲ್ಲಿಗೆ ಕಳುಹಿಸುತ್ತೇವೆ’ ಎಂದವು. ಸಿಂಹವೂ ಈ ಮಾತಿಗೆ ಒಪ್ಪಿಕೊಂಡಿತು.
ಮರುದಿನದಿಂದ ತಮ್ಮ ಸರದಿಯಂತೆ ಒಂದೊಂದು ಪ್ರಾಣಿ ಸಿಂಹದ ಬಳಿಗೆ ತೆರಳುತ್ತಿತ್ತು. ಹೀಗೆ ಒಂದು ದಿನ ಮೊಲದ ಸರದಿ ಬಂತು. ಆ ಮೊಲವು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಹೇಗಾದರೂ ಮಾಡಿ ಸಿಂಹಕ್ಕೆ ಪಾಠ ಕಲಿಸಬೇಕೆಂದು ಉಪಾಯ ಮಾಡಿ, ಅದು ಸಿಂಹದ ಬಳಿಗೆ ಹೋಗಲೇ ಇಲ್ಲ. ಕಾದು ಕಾದು ಸುಸ್ತಾದ ಸಿಂಹವು ಮೊಲದ ಬಳಿಗೆ ಬಂದು ನನ್ನ ಆಹಾರವಾಗಿ ನೀನು ಯಾಕೆ ಇನ್ನೂ ಬರಲಿಲ್ಲ? ಎಂದು ಸಿಟ್ಟಿನಲ್ಲಿ ಕೇಳಿದಾಗ, ಮೊಲವು “ನಾನು ಹಾದಿ ಮಧ್ಯದಲ್ಲಿರಬೇಕಾದರೆ ಅಲ್ಲೇ ಪಕ್ಕದಲ್ಲಿದ್ದ ಬಾವಿಯೊಂದರಿಂದ ಘರ್ಜನೆ ಕೇಳಿಬಂತು. ಹತ್ತಿರ ಹೋಗಿ ನೋಡುವಾಗ ಅಲ್ಲಿ ಇನ್ನೊಂದು ಸಿಂಹವಿತ್ತು ಮತ್ತು ಅದು ತಾನೇ ಈ ಕಾಡಿನ ಹೊಸ ರಾಜ ಎಂದು ಹೇಳುತ್ತಿತ್ತು. ತಾನು ಹೇಳಿದಂತೆ ಕೇಳಬೇಕು, ನೀನು ಮನೆಗೆ ಹೋಗು ಎಂದು ಹೇಳಿತು’ ಎಂದು ಉತ್ತರಿಸಿತು.
ಇದರಿಂದ ಕೋಪಗೊಂಡ ಸಿಂಹ ಎಲ್ಲಿದೆ ಆ ಬಾವಿ ಹೇಳು, ನನ್ನನ್ನು ಆ ಬಾವಿಯ ಬಳಿ ಕರೆದುಕೊಂಡು ಹೋಗು, ಒಂದಾ ಆ ಸಿಂಹವಿರಬೇಕು ಅಥವಾ ನಾನು. ಇಂದೇ ಇತ್ಯರ್ಥವಾಗಲಿ ಎಂದಿತು. ಮೊಲ ಸಿಂಹವನ್ನು ಬಾವಿಯ ಬಳಿ ಕರೆದುಕೊಂಡು ಹೋದಾಗ ಯಾವುದೇ ಬೇರೆ ಸಿಂಹದ ಘರ್ಜನೆ ಕೇಳಿಸದೇ ಇದ್ದಾಗ ಮೊಲದಲ್ಲಿ, ನೀನು ಹೇಳಿದ್ದು ನಿಜವೇ ಹೌದು ತಾನೆ? ಎಂದು ಮರುಪ್ರಶ್ನೆ ಮಾಡಿತು. ಅದಕ್ಕೆ ಮೊಲ ಅಷ್ಟು ಅನುಮಾನವಿದ್ದರೆ ಬಾವಿಯನ್ನು ಇಣುಕಿ ನೋಡುವಂತೆ ಸಿಂಹಕ್ಕೆ ಹೇಳಿತು. ಮೂರ್ಖ ಸಿಂಹವು ಮರುಯೋಚಿಸದೆ ಬಾವಿಯನ್ನು ಇಣುಕುತ್ತಿದ್ದಂತೆ ಮೊಲ ಸಿಂಹವನ್ನು ಬಾವಿಗೆ ತಳ್ಳಿಹಾಕಿ ಅಹಂಕಾರಿ ಸಿಂಹವನ್ನು ಕೊನೆಗಾಣಿಸಿತು. ಇದರಿಂದ ಕಾಡಿನಲ್ಲಿದ್ದ ಉಳಿದೆಲ್ಲ ಪ್ರಾಣಿಗಳಿಗೂ ತುಂಬಾ ನಿರಾಳವಾಗಿ ವಾಸಿಸ ತೊಡಗಿದವು.
ನಾವು ನಮ್ಮ ಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಯೋಚಿಸಿ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ನಾವು ಕೂಡ ಮೊಲದಂತಾಗಬೇಕೇ ವಿನಃ ಕೇವಲ ಸಿಂಹದ ಅಹಂಕಾರವನ್ನಿಟ್ಟುಕೊಂಡಿದ್ದರೆ ಕೊನೆಗೆ ಸಿಂಹದಂತೆ ಮೂರ್ಖರಾಗಬೇಕಾಗುತ್ತದೆ. ಹಾಗಾಗಿ ನಮ್ಮ ಅಳಿವು – ಉಳಿವಿನ ಆಯ್ಕೆ ನಮ್ಮಲ್ಲಿಯೇ ಇದೆ.