ಹಿರಿಯರ ಪ್ರಕಾರ ಕಾಲವನ್ನು ವ್ಯರ್ಥವಾಗಿ ಕಳೆಯುವುದು ನಮಗೆ ನಾವು ಮೋಸ ಮಾಡಿಕೊಳ್ಳುವುದೇ ಆಗಿದೆ. ಸಮಯದ ಮಹತ್ವದ ಬಗ್ಗೆ ಬಹಳಷ್ಟು ಕತೆ, ದೃಷ್ಟಾಂತಗಳನ್ನು ನಾವು ಕೇಳಿರುತ್ತೇವೆ. ನಮ್ಮ ಹಿರಿಯರಂತೂ “ಸುಮ್ಮನೆ ಕಾಲ ಕಳೆಯಬೇಡಿ’ ಎಂದು ಹೇಳುತ್ತಲೇ ಇರುತ್ತಾರೆ. ಇದೇ ಸಾಲಿನಲ್ಲಿ ಶಿಕ್ಷಕರು, ಆಫೀಸ್‌ನ “ಬಾಸ್’ಗಳೂ ಇರುತ್ತಾರೆ.
ಆದರೆ ಸಮಯದ ಪರಿವೆಯಿಲ್ಲದೆ ಕಾಲ ಕಳೆಯುವವರಿಗೆ ಇದೊಂದು ಯಾತನಾಮಯ ಸಲಹೆ ಅನಿಸುತ್ತಿರುತ್ತದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗ್ಳಂತೂ ಇಂದು ಅನುತ್ಪಾದಕತೆಯ ತಲೆಮಾರನ್ನೇ ಸೃಷ್ಟಿಸುತ್ತಿವೆ ಎಂದರೆ ತಪ್ಪಾಗಲಾರದು. ಉತ್ಪಾದಕತೆಗೆ ಬಳಕೆಯಾಗಬೇಕಾದ ತಂತ್ರಜ್ಞಾನವಿಂದು ಚಿಕ್ಕವರು, ದೊಡ್ಡವರು ಎನ್ನದೇ ದೊಡ್ಡ ಪ್ರಮಾಣದ ಜನರನ್ನು ಸೋಮಾರಿಗಳನ್ನಾಗಿ, ಒಂದು ಬಗೆಯ ವ್ಯಸನಗ್ರಸ್ತರನ್ನಾಗಿ ಮಾಡಿದೆ.
ಪರಿಣಾಮ, ಸಮಯವನ್ನು ವ್ಯರ್ಥವಾಗಿ ಕಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಯದ ಮಹತ್ವವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳದ ಹೊರತು ಒಳಿತಿನ ಭವಿಷ್ಯ ನಮಗೆ ಸಿಗಲಾರದು.
ಏನೇ ಕೆಲಸ, ಉತ್ಪನ್ನ ಮಾಡಬೇಕೆಂದರೂ ನಾವು ಎಲ್ಲದರ ಬಗ್ಗೆ ಯೋಚಿಸುತ್ತೇವೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಎಷ್ಟು ಸಮಯ ಬೇಕು ಎಂದು ಯೋಚಿಸುವುದೇ ಅಪರೂಪ.
ವ್ಯಾಪಾರ ಮಾಡಲು ಸಮಯ ಎಷ್ಟು ಬೇಕು? ಎನ್ನುವ ಪ್ರಶ್ನೆ ನಮ್ಮನ್ನು ಕಾಡುವುದೇ ಇಲ್ಲ. ಯಾಕೆಂದರೆ, ನಾವ್ಯಾರೂ ಸಮಯಕ್ಕೆ ಬೆಲೆ ಕಟ್ಟುವುದೇ ಇಲ್ಲ. ಬಹುತೇಕರು ಸಮಯವನ್ನು ಉತ್ಪಾದಕತೆಗಾಗಿ ಕಳೆಯುವುದಕ್ಕಿಂತ ಅನುತ್ಪಾದಕವಾಗಿ ವ್ಯಯಿಸುವುದರಲ್ಲೇ ಮಹದಾನಂದ ಕಾಣುತ್ತಾರೆ.
ಅಂತಹ ಆನಂದ ಅವರಿಗೆ ಬಹಳ ದಿನ ಇರುವುದಿಲ್ಲ. ಏಕೆಂದರೆ, ದಿನದಿಂದ ದಿನಕ್ಕೆ ಸಾಮಾಜಿಕವಾಗಿ ನಾವು ಕಷ್ಟದ ದಿನಗಳನ್ನು, ಅದು ಒಡ್ಡುವ ಸವಾಲುಗಳನ್ನು ಎದುರಿಸಲೇ ಬೇಕಾಗುತ್ತದೆ. ಅದರಿಂದ ಪಾರಾಗಲು ಸಾಧ್ಯವೇ ಇಲ್ಲ. ಬೇರೊಬ್ಬರಿಗಲ್ಲದಿದ್ದರೂ ನಮ್ಮ ಅಗತ್ಯಗಳಿಗಾಗಿ ನಾವು ದುಡಿಯಲೇಬೇಕು. ಅದಕ್ಕೆ ಬೇಕಾದ ಸಮಯವನ್ನೂ ಹೊಂದಿಸಿಕೊಳ್ಳಬೇಕು.