ವಾರ್ಸಾ:ಪೋಲೆಂಡ್ ಕನ್ನಡಿಗರ ಸಂಘದವರು ಎ.14ರಂದು ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಬಾರಿಯ ಕಾರ್ಯಕ್ರಮವನ್ನು ಓರ್ಸಿ ಪೋಲಾ° ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರವೇಶ ದ್ವಾರದಿಂದ ಮುಖ್ಯ ಸಭಾಂಗಣದವರೆಗೂ ಯುಗಾದಿ ಹಬ್ಬಕ್ಕೆ ಹೋಲುವಂತಹ ಅಲಂಕಾರ ಮಾಡಲಾಗಿತ್ತು. ಮಾವಿನ ಎಲೆಗಳ ತೋರಣ ಅಲ್ಲಲ್ಲಿ ರಾರಾಜಿಸುತ್ತಿತ್ತು.
ಸಮೃದ್ಧಿ ಮತ್ತು ಸಂತೋಷಭರಿತ ವರ್ಷಕ್ಕಾಗಿ ದೇವರ ಆಶೀರ್ವಾದವನ್ನು ಪಡೆಯಲು ಮಂತ್ರಗಳನ್ನು ಪಠಿಸಿ, ಪೂಜೆಯನ್ನು ನೆರವೇರಿಸಲಾಯಿತು. ಜೀವನದಲ್ಲಿ ಸುಖ-ದುಃಖ ನೋವು-ನಲಿವುಗಳ ಜತೆ ಸಮತೋಲನ ಸಾಧಿಸಿಕೊಂಡು ಹೋಗಬೇಕೆಂಬ ಜೀವನ ಪಾಠವನ್ನು ಎಲ್ಲರೂ ಬೇವು-ಬೆಲ್ಲ ಮಿಶ್ರಣ ತಿನ್ನುವ ಮೂಲಕ ಅರಿತರು.
ಕನ್ನಡಿಗರ ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಹಾಡಿಹೊಗಳಲು ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಹಲವಾರು ವಾರಗಳ ಮುಂಚೆಯೇ ಕಲಾವಿದರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಭರದಿಂದ ಅಭ್ಯಾಸ ನಡೆಸಿದರು. ಗಾಯನ, ನೃತ್ಯ, ಮತ್ತು ಕಿರುನಾಟಕ ಒಳಗೊಂಡಂತೆ ವಿವಿಧ ಪ್ರದರ್ಶನಗಳು ನೋಡುಗರ ಮನಸೆಳೆದವು.
ನೆರೆದ ಎಲ್ಲ ಪ್ರೇಕ್ಷಕರನ್ನು ಖುಷಿಗೊಳಿಸಲು ಹಲವಾರು ಗುಂಪು ಚಟುವಟಿಕೆಗಳನ್ನು ನಡೆಸಿಕೊಡಲಾಯಿತು. ಆಕರ್ಷಕ ಬಹುಮಾನ ವಿತರಿಸಲಾಯಿತು. ಮಕ್ಕಳ ಜಾನಪದ ನೃತ್ಯ ಹಾಗೂ ಸಾಂಪ್ರದಾಯಿಕ ಉಡುಗೆ ತೊಟ್ಟವರಿಂದ ನಡೆದ ರಾಂಪ್ ವಾಕ್ ಎಲ್ಲರ ಕಣÕಳೆಯಿತು. ತುಂಬು ಸಭಾಂಗಣದಲ್ಲಿ ಕಿಕ್ಕಿರಿದ ಜನ ಶಿಳ್ಳೆ-ಚಪ್ಪಾಳೆಯೊಂದಿಗೆ ಕಾರ್ಯಕ್ರಮವನ್ನು ಆನಂದಿಸಿದರು. ಹಬ್ಬವೆಂದರೆ ಊಟಕ್ಕೆ ಬಹು ಪ್ರಾಮುಖ್ಯ. ಹಬ್ಬದ ಹೋಳಿಗೆ ಊಟವನ್ನು ಎಲ್ಲರೂ ಆಸ್ವಾದಿಸಿದರು.
ಮೂಲಭೂತವಾಗಿ ಯುಗಾದಿಯನ್ನು ಪೂರ್ಣ ಸಂತೋಷ ಹಾಗೂ ಧಾರ್ಮಿಕ ಮನೋಭಾವದಿಂದ ಆಚರಿಸಲಾಯಿತು. ಎಲ್ಲ ಸದಸ್ಯರು ಈ ಕಾರ್ಯಕ್ರಮವನ್ನು ಸುಗಮವಾಗಿ ಮತ್ತು ಸ್ಮರಣೀಯವಾಗಿರಿಸಲು ಬಹಳ ಶ್ರಮಪಟ್ಟರು.
ಪೋಲೆಂಡ್ ಕನ್ನಡಿಗರು ಕನ್ನಡದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೌಲ್ಯವನ್ನು ಹೊರದೇಶದಲ್ಲೂ ಹೆಚ್ಚಿಸಿದ್ದಾರೆ ಎಂಬುದು ಮನದಟ್ಟಾಗಿದೆ, 2024ರ ಯುಗಾದಿ ಹಬ್ಬ ಸದಾ ನೆನಪಿನಲ್ಲಿ ಉಳಿಯಲಿದೆ.