ಅಮೆರಿಕದ ನಗರಗಳಲ್ಲಿ ಬೇಸಗೆ ರಜೆಗೆ ವಿವಿಧ ರೀತಿಯ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಇಲ್ಲಿಯ ಬೇಸಗೆಯ ಸಂತೋಷ ನೋಡಿಯೇ ಖುಷಿ ಪಡಬೇಕು. ಮಕ್ಕಳಿಗೆ ಭರಪೂರ 2 ತಿಂಗಳು ರಜೆಯ ಮಜಾ. ಹೀಗಾಗಿ ಈ ದಿನಗಳನ್ನು ಇಲ್ಲಿಯ ಜನ ವಿಶೇಷವಾಗಿ ಉಪಯೋಗಿಸಿಕೊಳ್ಳುತ್ತಾರೆ. ಮಕ್ಕಳ ನೆಪದಲ್ಲಿ ಹೆತ್ತವರು, ಹಿರಿಯರು ಅಲ್ಲಿ ಇಲ್ಲಿನ ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ಭಾಗವಹಿಸಿ ಖುಷಿಪಡುತ್ತಾರೆ. ಈ ದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಜನರಿಂದ ಗಿಜೀ, ಗಿಜೀ ಎಂದು ತುಂಬಿರುತ್ತವೆ. ಹೊಟೇಲ್, ವಿಮಾನಗಳ ದರ ಕೇಳುವುದೇ ಬೇಡ ಅಷ್ಟು ದುಪ್ಪಟ್ಟು.
ನಮ್ಮ ಭಾರತೀಯರು ಸಹ ತಮ್ಮತಮ್ಮ ಹೆತ್ತವರನ್ನು ಈ ರಜಾ ದಿನಗಳಿಗಾಗಿ ಭಾರತದಿಂದ ಕರೆಸಿಕೊಂಡು ಅಮೆರಿಕವನ್ನು ಒಂದು ಸುತ್ತು ತೋರಿಸುತ್ತಾರೆ. ಮಕ್ಕಳಿಗೆ ಅಜ್ಜ-ಅಜ್ಜಿ ಜತೆಯಲ್ಲಿ ತಿರುಗುವ, ಪ್ರವಾಸ ಹೋಗುವ ಮಜಾವೇ ಬೇರೆ ಬಿಡಿ. ಹೀಗೆ ಈ ವಾರಾಂತ್ಯದಲ್ಲಿ ನಾವು ಸಹ ನಮ್ಮ ಹೆತ್ತವರೊಡಗೂಡಿ ಇಲ್ಲಿಯ ಮಿಡಲ್ ಟೌನ್ ನ ಓಹಿಯೋ ಚಾಲೆಂಜ್ ಹಾಟ್ ಏರ್‌ಬಲೂನ್ ಶೋಗೆ ಹೋಗಿದ್ದೆವು.
ಅಲ್ಲಿ ಈ ದೊಡ್ಡದೊಡ್ಡ ರಂಗುರಂಗಿನ ಬಣ್ಣದ ಬಲೂನ್‌ಗಳನ್ನು ನೋಡಿ ದಿಗ್ಭ್ರಮೆಯಾಯಿತು. ಇಷ್ಟು ದೊಡ್ಡದೊಡ್ಡ ಬಲೂನ್‌ಗಳ ಹಾರಾಟವನ್ನು ಇದೇ ಮೊದಲು ನೋಡಿದ್ದು. ಹಾಟ್ ಏರ್‌ಬಲೂನ್‌ನನ್ನು ಹಗುರವಾದ ವಸ್ತುಗಳಿಂದ ತಯಾರಿಸಿರುತ್ತಾರೆ. ಈ ಬಲೂನ್‌ಗಳನ್ನು ನೈಲಾನ್ ಬಟ್ಟೆಯಲ್ಲಿ ಮಾಡಿರುತ್ತಾರೆ. ಕೆಳ ಭಾಗವನ್ನು ಬೆಂಕಿ ಪ್ರತಿರೋಧಕ ವಸ್ತುಗಳಿಂದ ತಯಾರಿಸುತ್ತಾರೆ.
ಇದು ಮುಖ್ಯವಾಗಿ ಮೂರೂ ಭಾಗಗಳಿಂದ ಕೊಡಿರುತ್ತದೆ. ಬಲೂನ್ ಹೊರಭಾಗ( ಬಲೂನ್), ಬರ್ನರ್ ಮತ್ತು ಪ್ರಯಾಣಿಕರು ಕುರುವ ಬುಟ್ಟಿ. ಚಿಕ್ಕದು, ದೊಡ್ಡದು ಹೀಗೆ ವಿವಿಧ ಅಳತೆಯ ಬಲೂನ್‌ಗಳು ಇರುತ್ತೆ. ನಾವು ನೋಡಿದ ಇಲ್ಲಿಯ ಒಂದೊಂದು ಬಲೂನ್‌ಗಳು ದೊಡ್ಡ ಮನೆಯಷ್ಟು ದೊಡ್ಡದಾಗಿ ಮತ್ತು ಅತ್ಯಂತ ಎತ್ತರ ಇದ್ದವು. ಸುಮಾರು 20-25 ವಿವಿಧ ಬಗೆಯ ಬಣ್ಣದ, ರೂಪದ ಬಲೂನ್‌ಗಳನ್ನೂ ನೋಡಿ ಪ್ರತಿಯೊಬ್ಬರೂ ಮೂಕವಿಸ್ಮಿತಾರದರು. ಅವುಗಳ ಹಾರಾಟವು ಅಷ್ಟೇ ಸುಂದರವಾಗಿತ್ತು.
ಸುಂದರವಾದ ಸೂರ್ಯ ಮುಳುಗುವ ಸಮಯದ ಆ ಕೆಂಧೂಳ ಆಕಾಶಕ್ಕೆ ಬಣ್ಣಬಣ್ಣದ ಪುಟ್ಟ ಪುಟ್ಟ ಬಣ್ಣದ ದೀಪಗಳನ್ನು ಜೋಡಿಸಿಟ್ಟಂತೆ ಕಣ್ಣಿಗೆ ಕಾಣುತ್ತಿತ್ತು. ಈ ಪ್ರಪಂಚದಲ್ಲಿ ಮೊದಲು ಈ ಬಿಸಿ ಗಾಳಿ ಬಲೂನ್‌ನ್ನು ತಯಾರಿಸಿ ಹಾರಿಸಿದ್ದು ಫ್ರಾನ್ಸ್‌ನಲ್ಲಿ (1783)ರಲ್ಲಿ. ಪೈಲಟ್‌ನ ಕೈಚಳಕ ಇಲ್ಲಿ ಮುಖ್ಯವಾಗುತ್ತದೆ.
ಅವನು ಬಲೂನ್ ಹೇಗೆ ಮೇಲೆ, ಹೇಗೆ ಕೆಳಗೆ ಬರಬೇಕು ಎಂಬುದನ್ನು, ಬಿಸಿ ಗಾಳಿಯನ್ನು ಯಾವಾಗ ಹೇಗೆ ಬಲೂನ್‌ಗೆ ಏರಿಸಿ ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಹಾರುವುದು, ದಿಕ್ಕುಗಳನ್ನೂ ಹೇಗೆ ಬದಲಿಸಬೇಕು ಎಂಬ ಅವನ ಜಾಣ್ಮೆಗೆ ಜೈ. ಇದಂತೂ ವಿಸ್ಮಯವೇ ಸರಿ. ಅಲ್ಲಿ ಸೇರಿದ್ದ ಸಾವಿರಾರು ಜನರು ಹಾಟ್ ಏರ್‌ಬಲೂನ್ ಹಾರಾಟವನ್ನು ಅಚ್ಚರಿಯ ರೀತಿಯಲ್ಲಿ ಕಣ್ಣು ತುಂಬಿಸಿಕೊಳ್ಳುತ್ತಿದ್ದರು. ಮಕ್ಕಳಂತೂ ನಾವು ಯಾವಾಗ ಹೀಗೆ ಬಲೂನ್‌ನಲ್ಲಿ ಮೇಲೆ ಹಾರುವುದು ಎಂದು ಯೋಸಚಿಸುತ್ತಿದ್ದರೋ ಏನೋ!.
ಹಾರಾಟ ಮುಗಿದ ಮೇಲೆ ಎಲ್ಲ ಬಲೂನ್‌ಗಳನ್ನು ಒಂದು ಬದಿಗೆ ಸಾಲಾಗಿ ನಿಲ್ಲಿಸಿದಾಗ ಪ್ರತಿಯೊಬ್ಬರೂ ಅವುಗಳ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯೋ ಬ್ಯುಸಿ. ಯಾರೊಬ್ಬರಿಗೂ ಸಮಾಧಾನವೇ ಇಲ್ಲ. ತಮ್ಮತಮ್ಮ ಮಕ್ಕಳನ್ನು ಬಲೂನ್ ಮುಂದೆ ನಿಲ್ಲಿಸಿ ಬೆಸ್ಟ್ ಫೋಟೋ ತೆಗೆಯುವ ತವಕ. ಮಕ್ಕಳಿಗೆ ಇದು ಯಾವುದು ಬೇಕಾಗದೆ ಬಲೂನ್ ಕಣ್ತುಂಬಿಕೊಳ್ಳುವುದು ಮಾತ್ರವೇ ಸಮಾಧಾನ. ಹೀಗೆ ಆ ಸಂಜೆ ಪ್ರತಿಯೊಬ್ಬರಿಗೂ ರಂಗುರಂಗಿನ ಬೇರೊಂದು ಲೋಕದಲ್ಲಿ ತೇಲಾಡಿದ ಅನುಭವ. ನಮ್ಮ ಹೆತ್ತವರು ಸಹ ಈ ರೀತಿಯ ಅತೀ ದೊಡ್ಡ ಬಲೂನ್ ಆಕಾಶದಲ್ಲಿ ಹಾರುವುದನ್ನು ಇದೆ ಮೊದಲು ಕಂಡಿದ್ದು ಅನಿಸುತ್ತದೆ. ಅವರು ಸಹ ಮನುಷ್ಯನ ಈ ಒಂದು ಚಮತ್ಕಾರನ್ನು ತೀರಾ ಹತ್ತಿರದಿಂದ ಕಂಡು ಖುಷಿಪಟ್ಟರು.
ಅಮೆರಿಕದಲ್ಲಿ ಈ ರೀತಿಯ ಪ್ರಸಿದ್ಧ ಬಿಸಿ ಗಾಳಿ ಬಲೂನ್ ಶೋಗಳನ್ನು ವಿವಿಧ ಪ್ರದೇಶಗಲ್ಲಿ ಪ್ರತೀ ವರುಷ ಬೇಸಗೆಯಲ್ಲಿ ಏರ್ಪಡಿಸುತ್ತಾರೆ. ಅವುಗಳೆಂದರೆ ನ್ಯೂ ಮೆಕ್ಸಿಕೋ, ನೆವಾಡಾ, ಟೆಕ್ಸಸ್, ನ್ಯೂರ್ಯಾಕ್ ನಗರಗಳ ಅತೀ ದೊಡ್ಡ ಬಲೂನ್ ಶೋ.
ಭಾರತದಲ್ಲೂ ಪ್ರತೀ ವರ್ಷ ಚೆನ್ನೈ, ಫುಲಾಚಿ, ಕಾಶಿ, ಜೈಪುರ ಗೋವಾ ಮುಂತಾದ ಭಾಗಗಳಲ್ಲಿ ದೊಡ್ಡ ರೀತಿಯಲ್ಲಿ ಈ ಬಿಸಿ ಗಾಳಿ ಬಲೂನ್ ಹಾರಾಟಗಳನ್ನು ಆಯೋಜಿಸುತ್ತಾರೆ. ಹಾಗೆಯೇ ಅಂದು ಸಂಜೆಯಾದ ಮೇಲೆ ನಡೆದ ವಿವಿಧ ಕಾರ್ಯಕ್ರಮಗಳು ತುಂಬಾ ವೈವಿಧ್ಯವಾಗಿದ್ದವು. ಅದರಲ್ಲಿ ಮುಖ್ಯವಾದದ್ದು ಪ್ಯಾರಾಚೂಟ್‌ನಲ್ಲಿ ಹಾರುವವರು ಆಕಾಶದಲ್ಲಿ ಪಟಾಕಿಗಳನ್ನು ಸಿಡಿಸಿದ್ದು. ನಾವುಗಳು ಭೂಮಿಯ ಮೇಲೆ ಪಟಾಕಿಗಳನ್ನು ಆಕಾಶಕ್ಕೆ ಆರಿಸುವುದನ್ನ ಮಾತ್ರ ನೋಡಿದ್ದೇವು. ಆದರೆ ಇವರುಗಳು 4-5 ಪ್ಯಾರಾಚೂಟ್‌ನಲ್ಲಿ ಹಾರುತ್ತ, ಹಾರುತ್ತ ಭೂಮಿಗೆ ಇಳಿಯುವ ಸಮಯದಲ್ಲಿ ತಮ್ಮಲ್ಲಿರುವ ವಿವಿಧ ಬಗೆಯ ಬಣ್ಣಬಣ್ಣದ ಪಟಾಕಿಗಳನ್ನು ಹಾರಿಸುತ್ತ, ಹಾರಿಸುತ್ತ ಬೆಳಕಿನ ಚಿತ್ತಾರವನ್ನು ಆಕಾಶದಲ್ಲಿ ರಚಿಸುದ್ದು “ದ ಬೆಸ್ಟ್ ಶೋ’ ಅನಿಸಿತು. ಅದು ಎಷ್ಟು ಅಪಾಯವೆ ಆದರೂ ತಮ್ಮ ಕೈ ಛಳಕ ಮತ್ತು ಪರಿಶ್ರಮದ ಕಲಿಕೆಯಿಂದ ಅದ್ಭುತವಾದದ್ದನ್ನು ಭೂಮಿಯಿಂದ 10 – 14 ಸಾವಿರ ಅಡಿ ಎತ್ತರದಲ್ಲಿ ಮಾಡಿ ತೋರಿಸಿದರು.
ಕೊನೆಗೆ ಡ್ರೋನ್ ಶೋ, ಪಟಾಕಿಗಳ ರಂಗುರಂಗು ಬಿರುಸು ಕಿಡಿಗಳಿಂದ ಆಕಾಶದಲ್ಲಿ ಅದ್ಭುತವಾದ ವಿವಿಧ ಬಗೆಯ ಚಿತ್ತಾರವನ್ನು ರಚಿಸುತ್ತ ಜನಮನವನ್ನ ಆಯೋಜಕರು ಗೆದ್ದರು. ನೆರೆದ್ದಿದ್ದ ಪ್ರತಿಯೊಬ್ಬರೂ ಹರ್ಷೋದ್ಘಾರ ಮಾಡಿ ತಮ್ಮ ವಂದನೆಗಳನ್ನು ಚಪ್ಪಾಳೆಯ ಮೂಲಕ ಪ್ರತಿಯೊಬ್ಬ ಕಾರ್ಯಕ್ರಮದ ಕಾರ್ಯಕರ್ತರಿಗೆ ಅರ್ಪಿಸಿದರು. ಇದಕ್ಕೂ ಮೊದಲು ಇದ್ದ ವಿವಿಧ ಬಗೆಯ ಹಳೆ-ಹೊಸ ಕಾರುಗಳ ಪ್ರದರ್ಶನ ಪ್ರತಿಯೊಬ್ಬರ ಮನಸ್ಸನ್ನು ಆಕರ್ಷಿಸಿತು.
ಎಲ್ಲರಿಗೂ ತಿಳಿದ ರೀತಿಯಲ್ಲಿ ತಿನ್ನುವುದಕ್ಕೆ, ಕೊಳ್ಳುವುದಕ್ಕೂ ಏನು ಕಡಿಮೆ ಇಲ್ಲದ ರೀತಿಯಲ್ಲಿ ನೂರಾರು ಚಿಕ್ಕಚಿಕ್ಕ ಫುಡ್ ಮತ್ತು ಪನ್‌ಸ್ಟಾಲುಗಳು ಪ್ರತಿಯೊಬ್ಬರ ನಿರೀಕ್ಷೆಯನ್ನು ಸುಳ್ಳು ಮಾಡದ ರೀತಿಯಲ್ಲಿ ಭರ್ತಿ ತುಂಬಿ ತುಳುಕುತ್ತಿದ್ದವು. ಮಕ್ಕಳು ಚಿಕ್ಕಚಿಕ್ಕ ಆಟಗಳನ್ನು ಆಡುತ್ತಾ ನಲಿದಾಡಿದರು.
ಅಲ್ಲಿ ಸೇರಿದ್ದ ಜನ ಸಮೂಹ ಕಂಡು ನಮ್ಮ ಹೆತ್ತವರು, ನಮ್ಮ ಭಾರತದಂತೆ ಎಲ್ಲರು ಒಮ್ಮೆಲೇ ಮನೆಗಳಿಗೆ ತೆರೆಳಲು ಕಾರು ತೆಗೆದೇ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಎಂದು ಅನುಮಾನ ಪಟ್ಟಿದ್ದೆ ಬಂತು. ಆದರೆ ಇಲ್ಲಿನ ಅಚ್ಚುಕಟ್ಟು ಆಯೋಜನೆ ಒಂದು ನಿಮಿಷವೂ ಎಲ್ಲಿಯೂ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳದ ರೀತಿಯಲ್ಲಿ ನಮ್ಮನಮ್ಮ ಕಾರುಗಳನ್ನು ಅಲ್ಲಿನ ಪಾರ್ಕ್ ಜಾಗದಿಂದ ಮುಖ್ಯ ರಸ್ತೆಗೆ ತಂದಾಗ ಹೆತ್ತವರು ವಿಸ್ಮಯದ ಕಣ್ಣು ಬಿಟ್ಟು ನನ್ನನೊಮ್ಮೆ ನೋಡಿದರು! ಬಹಳ ದಿನವಾದ ಮೇಲೆ ನಾವೆಲ್ಲರೂ ಒಂದು ಅತ್ಯುತ್ತಮವಾದ ಕಾರ್ಯಕ್ರಮವನ್ನು ನೋಡಿದೆವು ಎಂಬ ತೃಪ್ತಿಯಾಯಿತು.
*ತಿಪ್ಪೇರುದ್ರಪ್ಪ ಎಚ್.ಈ., ಮಿಯಾಮೀಸ್ಬರ್ಗ್