ಬಹ್ರೈನ್: ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹ್ರೈನ್’ ಇಪ್ಪತ್ತನೇ ವರುಷಕ್ಕೆ ಕಾಲಿಟ್ಟಿದೆ. ನಾಡಿನ ಹಾಗೂ ದ್ವೀಪದ ಮೊಗವೀರ ಸಮುದಾಯದ ನೋವು-ನಲಿವುಗಳಿಗೆ ಸ್ಪಂದಿಸುತ್ತ ಇದೀಗ ಸಂಘಟನೆಯು ಎರಡು ದಶಕಗಳನ್ನು ಅರ್ಥಪೂರ್ಣವಾಗಿ ಪೊರೈಸುತ್ತಿದ್ದು, ಇತ್ತೀಚೆಗೆ ಸಂಘಟನೆಯ ಮಹಾಸಭೆಯು ಜರುಗಿ ಮೊಗವೀರ್ಸ್ ಬಹ್ರೈನ್‌ನ ಅಧ್ಯಕ್ಷೆಯಾಗಿ ಶಿಲ್ಪಾ ಶಮಿತ್ ಕುಂದರ್ ಅವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
“ಮೊಗವೀರ್ಸ್ ಬಹ್ರೈನ್’ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಸಂಘದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಈ ಹಿಂದೆ ಮೊಗವೀರ್ಸ್ ಬಹ್ರೈನ್‌ನ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಶಿಲ್ಪಾ ಶಮಿತ್ ಕುಂದರ್ ಅವರು ತಮ್ಮ ಸಮಾಜಮುಖಿ ಕಾರ್ಯವೈಖರಿಯಿಂದ ಎಲ್ಲರಿಗೂ ದ್ವೀಪದಲ್ಲಿ ಚಿರಪರಿಚಿತರಾಗಿದ್ದಾರೆ.
ಇವರು ಮೂಲತಃ ಮುಕ್ಕ ಮಿತ್ರಪಟ್ಣ ಶೇಖರ್ ಕೋಟ್ಯಾನ್ ಹಾಗೂ ವಸಂತಿ ಶೇಖರ್ ಕೋಟ್ಯಾನ್ ಅವರ ಪುತ್ರಿಯಾಗಿದ್ದು ಬಹ್ರೈನ್‌ನ ದ್ವೀಪರಾಷ್ಟ್ರದಲ್ಲಿ ಕಳೆದ ಎರಡು ದಶಕಗಳಿಂದ ನೆಲೆಸಿದ್ದು ಇಲ್ಲಿನ ಅಂತಾರಾಷ್ಟ್ರೀಯ ಬ್ಯಾಂಕ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇವರ ಪತಿ ಶಮಿತ್ ಕುಂದರ್‌ರವರು ಕೂಡ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಸುತ್ತಿದ್ದು ಪತ್ನಿಯ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿಲ್ಪಾ ನಾಡಿನಲ್ಲೂ ಕೂಡ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ನಿರಂತರ ನೆರವು ನೀಡುತ್ತಾ ಬಂದಿದ್ದಾರೆ.
ಸಂಘವು ತನ್ನ ಇಪ್ಪತ್ತನೇಯ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಇದಾಗಲೇ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದೆ. ಶಿಲ್ಪಾ ಅವರ ಸಾರಥ್ಯದಲ್ಲಿ ಸಮುದಾಯಕ್ಕೆ ಇನ್ನಷ್ಟು ಸೇವೆ ಒದಗಿ ಬರಲಿ ಎನ್ನುವುದೇ ಇಲ್ಲಿನ ಕನ್ನಡಿಗರ ಹಾರೈಕೆ.
ವರದಿ- ಕಮಲಾಕ್ಷ ಅಮೀನ್