ಬೆಂಗಳೂರು: ಒಂದು ಹದ್ದಿನಂತೆ ಆಗಸದಲ್ಲಿ ಹಾರುತ್ತಾ ಶತ್ರುವಿನ ಚಲನವಲನದ ಮೇಲೆ ಕಣ್ಣು ನೆಟ್ಟಿತ್ತು. ಅದು ಸೂಚನೆ ನೀಡುತ್ತಿದ್ದಂತೆ ಬೆನ್ನಲ್ಲೇ ರಣಹದ್ದುಗಳಂತೆ ಹಿಂಡಾಗಿ ಬಂದ “ಯೋಧರು’ ಆಗಸಕ್ಕೆ ಚಿಮ್ಮಿ ಆ ಶತ್ರುಗಳ ಮೇಲೆ ಬಾಂಬ್ ಸಿಡಿಸಿದರು.
ಅಷ್ಟೇ ಅಲ್ಲ, ಆತ್ಮಾಹುತಿ ಬಾಂಬ್ ಗಳಂತೆ ಶತ್ರುಗಳಿರುವ ಜಾಗಕ್ಕೇ ನುಗ್ಗಿ ನಾಶಗೊಳಿಸುವ ಮೂಲಕ “ಘಾತಕ’ವಾಗಿ ಪರಿಣಮಿಸಿದರು! – ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ದಕ್ಷ ತಂಡ ಅಭಿವೃದ್ಧಿಪಡಿಸಿದ ಲಿಡಾರ್ ಮತ್ತು ಸೆನ್ಸರ್ ಪೇಲೋಡ್ ತಂತ್ರಜ್ಞಾನ ಆಧಾರಿತ ಗುಂಪು ಡ್ರೋನ್‌ಗಳು ನಡೆಸಿದ ಶತ್ರುಗಳ ಮೇಲಿನ ಅಣುಕು ದಾಳಿ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯ ಇದು. ಕೃತಕ ಬುದ್ಧಿಮತ್ತೆಯಿಂದ ಪರಸ್ಪರ ಸಂವಹನ ಸಾಧಿಸಿ, ಕೆಲವೇ ಕ್ಷಣಗಳಲ್ಲಿ ಶತ್ರು ನಾಶಗೊಳಿಸಿದ ಡ್ರೋನ್‌ಗಳ ಕಾರ್ಯಕ್ಷಮತೆ ಭಾರತೀಯ ವಾಯುಸೇನೆಯ ಗಮನಸೆಳೆಯಿತು.
ಇದರೊಂದಿಗೆ ದೇಶೀಯ ನಿರ್ಮಿತ ಡ್ರೋನ್‌ಗಳು ಯಶಸ್ಸಿನ ಹಾದಿಯತ್ತ ಸಾಗುತ್ತಿರುವುದರ ಸುಳಿವು ನೀಡಿದವು. ಸಾಮಾನ್ಯವಾಗಿ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ದರ್ಬಾರು ಇರುತ್ತದೆ. ಆದರೆ, ಭಾನುವಾರ ಅಲ್ಲಿ ಡ್ರೋನ್‌ಗಳು ನೀಡಿದ ಪ್ರದರ್ಶನವು ಲೋಹದ ಹಕ್ಕಿಗಳಿಗೆ ಸವಾಲು ವೊಡ್ಡಿದಂತಿತ್ತು. ಇಡೀ ಪ್ರದರ್ಶನದಲ್ಲಿ ಒಟ್ಟಾರೆ ಒಂಬತ್ತು ಡ್ರೋನ್‌ಗಳ ತಂಡ ಭಾಗವಹಿಸಿತ್ತು. ತಂಡದ ನಾಯಕ ಲಿಡಾರ್ ಆಧಾರಿತ ತಂತ್ರಜ್ಞಾನದೊಂದಿಗೆ ಒಂದು ಸುತ್ತು ಕಣ್ಣುಹಾಯಿಸಿ ಬರುತ್ತದೆ. ಅಲ್ಲಿಂದಲೇ ಶತ್ರುವಿನ ಸುಳಿವು ನೀಡುತ್ತದೆ.
ಅದಕ್ಕೆ ಅನುಗುಣವಾಗಿ ಒಂದೊಂದಾಗಿ ಸಿಡಿಮದ್ದು ಹೊತ್ತು ಶತ್ರುವಿನತ್ತ ಉಳಿದ ಡ್ರೋನ್‌ಗಳು ಸಾಗಿ, ಆ ಮದ್ದುಗಳನ್ನು ಶತ್ರುವಿನ ಪ್ರದೇಶದ ಮೇಲೆ ಹಾಕುತ್ತವೆ. “ಟ್ಯಾಂಕರ್ ಅಥವಾ ಯುದ್ಧವಿಮಾನ ಅಥವಾ ಶತ್ರು ಸೈನಿಕ ಆಗಿರಲಿ ಈ “ಯೋಧರು’ ಹೊಡೆದುರುಳಿಸಲಿದ್ದಾರೆ. ಇವು ನೂರು ಕಿ.ಮೀ.ವರೆಗೆ ಯಾವುದೇ ಅಡತಡೆ ಇಲ್ಲದೆ ಸಂಚರಿಸಲಿದ್ದು, ಇದಕ್ಕಾಗಿ ಮೂರೂವರೆ ತಾಸುಗಳಲ್ಲಿ ಕ್ರಮಿಸಲಿದೆ. 300 ಮೀಟರ್‌ವರೆಗೂ ಮೇಲೆ ಹಾರಬಲ್ಲವು ಹಾಗೂ ಕಡಿಮೆ ಶಬ್ದ ಮಾಡುತ್ತವೆ. ಇದರಿಂದ ವಿರೋಧಿಗಳಿಗೆ ಇದರ ಸುಳಿವು ಕಷ್ಟ. ಇದೆಲ್ಲಕ್ಕಿಂತ ಹೆಚ್ಚಾಗಿ ಇದು ದೇಶೀಯ ನಿರ್ಮಿತ ಡ್ರೋನ್‌ಗಳಾಗಿವೆ’ ಎಂದು ದಕ್ಷ ತಂಡದ ವಿಂಗ್ ಕಮಾಂಡರ್ ಕೆ.ಆರ್.ಶ್ರೀಕಾಂತ್ ಮಾಹಿತಿ ನೀಡಿದರು.
ಅಂದಹಾಗೆ ಭಾರತೀಯ ವಾಯುಸೇನೆಯು “ಆತ್ಮನಿರ್ಭರ ಭಾರತ’ ಕಾರ್ಯಕ್ರಮಕ್ಕೆ ಪೂರಕವಾಗಿ ದೇಶೀಯ ನಿರ್ಮಿತ ಡ್ರೋನ್ ಮತ್ತು ಅದರ ತಂತ್ರಜ್ಞಾನಗಳಿಗೆ ಉತ್ತೇಜನ ನೀಡುವ ಸಂಬಂಧ “ಗುಂಪು ಡ್ರೋನ್ ಸ್ಪರ್ಧೆ’ ಏರ್ಪಡಿಸಿತ್ತು. ಮೂರು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟಾರೆ 154 ತಂಡಗಳು ಭಾಗವಹಿಸಿದ್ದವು.
ಈ ಪೈಕಿ ತಜ್ಞರು 57 ತಂಡಗಳನ್ನು ಮೊದಲ ಹಂತಕ್ಕೆ ಆಯ್ಕೆ ಮಾಡಿದ್ದವು. ಅದರಲ್ಲಿ ಹಾರಾಟ ಮತ್ತು ತಂತ್ರಜ್ಞಾನಗಳ ಮೌಲ್ಯಮಾಪನದೊಂದಿಗೆ 20 ತಂಡಗಳು ಎರಡನೇ ಹಂತಕ್ಕೆ ಆಯ್ಕೆ ಮಾಡಲಾಯಿತು. 2019ರಲ್ಲಿ ಜೈಸಲ್ಮೇರ್‌ನಲ್ಲಿ ಇವುಗಳ ಪ್ರದರ್ಶನ ನಡೆದು, ಅಂತಿಮವಾಗಿ ಐದು ತಂಡಗಳು ಆಯ್ಕೆಯಾಗಿದ್ದವು.
ಅದರಲ್ಲಿ ನಾಲ್ಕು ತಂಡಗಳನ್ನು ವಿಜೇತರನ್ನಾಗಿ ಘೋಷಿಸಿದ್ದು, ಅದರಲ್ಲಿ “ಡ್ರೋನ್ ಆರ್ಕಿಟೆಕ್ಚರ್’ ವಿಭಾಗದಲ್ಲಿ ಚೆನ್ನೈನ ದಕ್ಷ ಅನ್‌ಮ್ಯಾನ್ಡ್ ಸಿಸ್ಟಮ್ಸ್ ಪ್ರೈ.ಲಿ., ಕೂಡ ಒಂದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಭಾರತೀಯ ವಾಯುಸೇನೆಯು ಪ್ರತಿ ತಂಡಗಳಿಗೆ ಅನುಕೂಲ ಆಗುವಂತೆ ಡ್ರೋನ್‌ಗಳ ತಯಾರಿಕೆ ಮತ್ತು ಪ್ರದರ್ಶನಕ್ಕೆ ತಗುಲುವ ವೆಚ್ಚವನ್ನು (25 ಲಕ್ಷ ರೂ.ವರೆಗೆ) ಮರುಪಾವತಿ ಮಾಡಿದೆ. ಅಷ್ಟೇ ಅಲ್ಲ, ಎರಡು ಮತ್ತು ಮೂರನೇ ಹಂತ ಪ್ರವೇಶಿಸಿದ ತಂಡಗಳಿಗೆ ಕ್ರಮವಾಗಿ ಎರಡೂವರೆ ಕೋಟಿ ರೂ. ನೀಡಿದೆ.
ವಿಭಾಗ ವಿಜೇತರು
ಗುಂಪು ಆರ್ಕಿಟೆಕ್ಚರ್ ನ್ಯೂಸ್ಪೇಸ್ ರಿಸರ್ಚ್ ಆಂಡ್ ಟೆಕ್ನಾಲಜಿ ಪ್ರೈ.ಲಿ.,
ಡ್ರೋನ್ ಆರ್ಕಿಟೆಕ್ಚರ್ ದಕ್ಷ ಅನ್‌ಮ್ಯಾನ್ಡ್ ಸಿಸ್ಟಮ್ಸ್ ಪ್ರೈ.ಲಿ.,
ಸಂವಹನ ಆರ್ಕಿಟೆಕ್ಚರ್ ಡಿಟಿಯು ಫ್ಲೇರ್ ಅನ್‌ಮ್ಯಾನ್ಡ್ ಸಿಸ್ಟಮ್ಸ್ ಪ್ರೈ.ಲಿ.,
ಉತ್ತಮ ವಿನ್ಯಾಸ ಆವಿಷ್ಕಾರ ವೇದ ಡಿಫೆನ್ಸ್ ಸಿಸ್ಟಮ್ಸ್ ಪ್ರೈ.ಲಿ.,
“ಹಾರ್ಡ್‌ವೇರ್ ಇನ್ನೂ ದೇಶೀಯಗೊಳಿಸುವ ಅಗತ್ಯವಿದೆ’
“ಡ್ರೋನ್ ಉದ್ಯಮದ ಬೆಳವಣಿಗೆಯನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಲು ಅದರ ಹಾರ್ಡ್‌ವೇರ್ ಅಂಶಗಳನ್ನು ದೇಶೀಯಗೊಳಿಸುವ ಅಗತ್ಯವಿದೆ’ ಎಂದು ನ್ಯೂಸ್ಪೇಸ್ ರಿಸರ್ಚ್ ಆಂಡ್ ಟೆಕ್ನಾಲಜಿ ಪ್ರೈ.ಲಿ., ನಿರ್ದೇಶಕ ಸಮೀರ್ ಜೋಶಿ ಅಭಿಪ್ರಾಯಪಟ್ಟರು.
ಭಾರತೀಯ ವಾಯುಸೇನೆ ಹಮ್ಮಿಕೊಂಡಿದ್ದ ಮೆಹರ್‌ಬಾಬಾ ಸ್ವಾರ್ಮ್ ಡ್ರೋನ್ ಚಾಲೆಂಜ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡ್ರೋನ್ ಉದ್ಯಮದ ಬೆಳವಣಿಗೆಗೆ ನಮ್ಮಲ್ಲಿ ವಿಪುಲ ಅವಕಾಶಗಳಿವೆ. ಡ್ರೋನ್‌ನ “ಕೋರ್ ಆರ್ಕಿಟೆಕ್ಚರ್’ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ಅದನ್ನು ದೇಶೀಯವಾಗಿ ನಿರ್ಮಿಸಬಹುದು.
ಆದರೆ, ಡ್ರೋನ್ ಮೋಟಾರು, ನೆವಿಗೇಷನ್, ರೆಕ್ಕೆಗಳು ಸೇರಿದಂತೆ ಮತ್ತಿತರ ಹಾರ್ಡ್‌ವೇರ್ ಅಂಶಗಳಿಗೆ ಈಗಲೂ ಚೀನಾದಂತಹ ದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಆ ಹಾರ್ಡ್‌ವೇರ್ ಅಂಶಗಳನ್ನು ದೇಶೀಯಗೊಳಿಸಲು ಸಾಧ್ಯವಾದರೆ, ಈ ಉದ್ಯಮವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಬಹುದು’ ಎಂದರು. ಈ ನಿಟ್ಟಿನಲ್ಲಿ ಕೇಂದ್ರದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆ ಪೂರಕವಾಗಿದೆ ಎಂದೂ ಹೇಳಿದರು.
ಪ್ರತಿ ವರ್ಷ ಡ್ರೋನ್ ಸ್ಪರ್ಧೆ: ಏರ್ ಚೀಫ್ ಮಾರ್ಷಲ್
ದೇಶೀಯವಾಗಿ ಗುಂಪು ಡ್ರೋನ್‌ಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೆಹರ್ ಬಾಬಾ ಸ್ವಾರ್ಮ್ ಡ್ರೋನ್ ಚಾಲೆಂಜ್’ ಅನ್ನು ಪ್ರತಿ ವರ್ಷ ಏರ್ಪಡಿಸಲಾಗುವುದು ಎಂದು ಭಾರತೀಯ ವಾಯುಸೇನೆಯ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧುರಿ ತಿಳಿಸಿದರು.
ವಿಜೇತರಿಗೆ ಪ್ರಶಸ್ತಿ ಮತ್ತು ಫಲಕ ಪ್ರದಾನ ಮಾಡಿ ಮಾತನಾಡಿದ ಅವರು, ದೇಶೀಯ ಪ್ರತಿಭೆಗಳಿಗೆ ಕಲ್ಪಿಸಿದ ಈ ವೇದಿಕೆಯಲ್ಲಿ ಉತ್ತಮ ಸ್ಪಂದನೆ ದೊರಕಿದ್ದು, ಪ್ರತಿ ವರ್ಷ ಈ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಈ ಮೂಲಕ ಆತ್ಮನಿರ್ಭರ ಭಾರತದಡಿ ದೇಶೀಯವಾಗಿ ನಿರ್ಮಿಸಿದ ವಿನೂತನ ತಂತ್ರಜ್ಞಾನಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.