Advertisement

ರಾಷ್ಟ್ರೀಯ ಮಟ್ಟದ ಟಿಪ್ಪು ಜನ್ಮದಿನಕ್ಕೆ ಆಗ್ರಹ

06:33 AM May 06, 2019 | Team Udayavani |

ದೇವನಹಳ್ಳಿ: ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ ಮತ್ತು ಹುತಾತ್ಮರಾದ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು. ಸಂಸತ್‌ ಮುಂಭಾಗದಲ್ಲಿ ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಮಾಜಿ ಶಾಸಕ ಹಾಗೂ ಕನ್ನಡ ಕನ್ನಡ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Advertisement

ನಗರದ ಟಿಪ್ಪು ಸುಲ್ತಾನ್‌ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್‌ ಪಾರ್ಕ್‌ನಲ್ಲಿ ಕನ್ನಡ ಪಕ್ಷದ ವಾಟಾಳ್‌ ಚಳವಳಿ ವತಿಯಿಂದ ಟಿಪ್ಪು ಸುಲ್ತಾನ್‌ ಹುತಾತ್ಮರಾದ ದಿನದ ಅಂಗವಾಗಿ ಟಿಪ್ಪು ಸುಲ್ತಾನ್‌ ಪ್ರತಿಮೆ ಹಾಗೂ ಟಿಪ್ಪು ಜನ್ಮ ಸ್ಥಳಕ್ಕೆ ಪುಷ್ಪ ಮಾಲೆ ಅರ್ಪಿಸಿ ಮಾತನಾಡಿದರು.

ಪ್ರವಾಸಿ ತಾಣ ಮಾಡಿ: ದೇವನಹಳ್ಳಿ ಐತಿಹಾಸಿಕ ಪ್ರದೇಶವಾಗಿರುವುದರಿಂದ ಸರ್ಕಾರ ಕೂಡಲೇ ಪ್ರವಾಸಿ ತಾಣವನ್ನಾಗಿ ಮಾಡಿ ಅಭಿವೃದ್ಧಿಪಡಿಸಬೇಕು. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೊಂದಿಗೆ ಚರ್ಚಿಸಿ ಕೂಡಲೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಮಂಜೂರು ಮಾಡಲು ಒತ್ತಾಯಿಸಲಾಗುವುದು. ಸರ್ಕಾರ ಅಭಿವೃದ್ಧಿಪಡಿಸುವುದಕ್ಕೆ ಏಕೆ ಮೀನಮೇಷ ಎಣಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಮತ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ: ಸರ್ಕಾರ ಕೇವಲ ಟಿಪ್ಪು ಜನ್ಮ ದಿನ ಆಚರಣೆ ಮಾಡಿದರೆ ಸಾಲದು. ರಾಜಕಾರಣಿಗಳು ಕೇವಲ ಮತ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ. ದೇವನಹಳ್ಳಿಯಲ್ಲಿ ಮಾತ್ರ ಟಿಪ್ಪು ಪ್ರತಿಮೆ ಮಾಡಿದ್ದಾರೆ ಹೊರತು ಬೇರೆ ಇನ್ನೆಲ್ಲೂ ಮಾಡಿಲ್ಲ. ಲಂಡನ್‌ನಲ್ಲಿ ಟಿಪ್ಪು ಕತ್ತಿಯನ್ನು ಒಬ್ಬರು ಖರೀಧಿಸಿದ್ದಾರೆ. ಆ ಕೆಲಸವನ್ನು ಸರ್ಕಾರ ಮಾಡಬಹುದಾಗಿತ್ತು ಎಂದು ಹೇಳಿದರು.

ಪ್ಯಾಕೇಜ್‌ ಘೋಷಣೆ ಮಾಡಿ: ಸರ್ಕಾರ ಪತ್ರ ವ್ಯವಹಾರ ಮಾಡಿ ತರಿಸಿಕೊಂಡಿರುವ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ವಸ್ತುಗಳನ್ನು ದೇವನಹಳ್ಳಿಯಲ್ಲಿ ಸಂಗ್ರಹಿಸಿ ಬೃಹತ್‌ ಟಿಪ್ಪು ಸುಲ್ತಾನ್‌ ವಸ್ತು ಸಂಗ್ರಹಣ ಕೇಂದ್ರವನ್ನು ನಿರ್ಮಿಸಬೇಕು. ಇದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

Advertisement

ಶ್ರೀರಂಗಪಟ್ಟಣ ಮತ್ತು ದೇವನಹಳ್ಳಿಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಪಂಚ ವಾರ್ಷಿಕ ಯೋಜನೆಗಳನ್ನು ತಯಾರಿಸಿ, ಪ್ಯಾಕೇಜ್‌ ಘೋಷಣೆ ಮಾಡಬೇಕು. ಈ ಬಗ್ಗೆ ಇನ್ನು ಹದಿನೈದು ದಿನಗಳಲ್ಲಿ ವಿಧಾನಸೌಧ ಆವರಣದಲ್ಲಿ ಮಲಗುವುದರ ಮೂಲಕ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು. ಕಳೆದ 15 ವರ್ಷಗಳಿಂದ ಟಿಪ್ಪು ಜನ್ಮ ದಿನಾಚರಣೆ ಮತ್ತು ಟಿಪ್ಪು ಹುತಾತ್ಮರಾದ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಕನ್ನಂಬಾಡಿಗೆ ಟಿಪ್ಪು ಶಂಕುಸ್ಥಾಪನೆ: ಕನ್ನಂಬಾಡಿ ಅಣೆಕಟ್ಟೆಗೆ ಶಂಕುಸ್ಥಾಪನೆ ಟಿಪ್ಪು ಸುಲ್ತಾನ್‌ ಮಾಡಿದ್ದಾರೆ. ಅದರ ದೊಡ್ಡ ಶಾಸನ ಕನ್ನಂಬಾಡಿ ಬಳಿಯಿದೆ. ಎಲ್ಲರೂ ಅದನ್ನು ನೋಡಬೇಕು. ಟಿಪ್ಪು ಜನ್ಮಸ್ಥಳದಲ್ಲಿನ ನಾಮಫಲಕದಲ್ಲಿ ಸ್ಮಾರಕ ಎಂದು ಬರೆದಿದ್ದಾರೆ. ಆದರೆ, ಯಾರ ಸ್ಮಾರಕ ಎಂದು ತಿಳಿಯುವುದಿಲ್ಲ. ಪುರಾತತ್ವ ಇಲಾಖೆ ಇಂತಹ ತಪ್ಪನ್ನು ಮಾಡಿದೆ. ಈ ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕನ್ನಡ ವಾಟಾಳ್‌ ಪಕ್ಷದ ಮುಖಂಡರಾದ ಮುಬಾರಕ್‌ ಬಾಷ, ಎಚ್‌.ಆರ್‌.ಪಾರ್ಥಸಾರಥಿ, ಜಿ.ಎಂ.ರಾಮು, ವಿಶ್ವನಾಥ್‌, ಮುನ್ನಾ, ಮಹಬೂಬ್‌, ಗ್ರಾಹಕರ ವೇದಿಕೆ ಸಂಚಾಲಕ ಬಿಜ್ಜವಾರ ಸುಬ್ರಹ್ಮಣ್ಯ, ಮಹಿಳಾ ಘಟಕದ ಸದಸ್ಯೆ ಕೃಷ್ಣವೇಣಿ, ಜಯಪ್ರಕಾಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next