ವಿಜಯಪುರ : ಚುನಾವಣೆ ಹಿನ್ನೆಲೆಯಲ್ಲಿ ಚಕ್‍ಪೋಸ್ಟ್ ಕರ್ತವ್ಯಕ್ಕೆ ಹಾಜರಾಗದೇ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ವಿ.ಬಿ.ದಾನಮ್ಮನವರ ಶುಕ್ರವಾರ ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.
ಚುನಾವಣೆಯ ಕರ್ತವ್ಯದ ಭಾಗವಾಗಿ ಚಕ್‍ಪೋಸ್ಟ್ ಕರ್ತವ್ಯಕ್ಕೆ ನಿಯೋಜಿಸಿದ್ದ ಬರಟಗಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಅಣ್ಣಪ್ಪ ಸೌದಿ ಹಾಗೂ ಕಳ್ಳಕವಟಗಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಅಲ್ಲಾಭಕ್ಷ ಇವರು ಕರ್ತವ್ಯಕ್ಕೆ ಹಾಜರಾಗದೇ ಅನಧಿಕೃತ ಗೈರಾಗಿದ್ದಾರೆ.
ಮಾ.23 ರಂದು ಅಣ್ಣಪ್ಪ ಅವರು ಅರ್ಜುಣಗಿ ಚಕ್‍ಪೋಸ್ಟ್‍ಗೂ, ಅಲ್ಲಾಭಕ್ಷ ಚಿಕ್ಕಗಲಗಲಿ ಚಕ್‍ಪೋಸ್ಟ್ ಕರ್ತವ್ಯಕ್ಕೂ ಹಾಜರಾಗಬೇಕಿತ್ತು. ಇವರಿಗಿಂತ ಮೊದಲ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸಿದ ಚಕ್‍ಪೋಸ್ಟ್ ಸಿಬ್ಬಂದಿ, ಮುಖ್ಯಸ್ಥರು ಮುಂದಿನ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಮಾಡಿದ್ದರು. ಆದರೆ ಈ ಇಬ್ಬರೂ ಕರೆ ಸ್ವೀಕರಿಸಿಲ್ಲ, ಕರ್ತವ್ಯಕ್ಕೂ ಹಾಜರಾಗಿಲ್ಲ.
ಚುನಾವಣಾ ಕರ್ತವ್ಯದಂಥ ಮಹತ್ವದ ಕರ್ತವ್ಯ ನಿರ್ವಹಣೆಯಲ್ಲಿ ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದರಿಂದ ಇಬ್ಬರಿಗೂ ಮಾ.28 ರಂದು ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಆದರೆ ಈ ಇಬ್ಬರೂ ನೋಟೀಸ್‍ಗೂ ಉತ್ತರಿಸದ ಕಾರಣ, ಇಬ್ಬರನ್ನೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ ಮಾ.31 ರಂದು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.
ಇಲಾಖೆ ವಿಚಾರಣೆ ಬಾಕಿ ಇರುವ ಕಾರಣ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡದಂತೆಯೂ ಸಸ್ಪೆಂಡ್ ಆಗಿರುವ ಶಿಕ್ಷಕರಿಗೆ ಸಸ್ಪೆಂಡ್ ಆದೇಶದಲ್ಲಿ ತಾಕೀತು ಮಾಡಲಾಗಿದೆ.