Advertisement

ಕೆಸರುಗದ್ದೆಯಾದ ದೇರಳಕಟ್ಟೆ ರಸ್ತೆ 

11:16 AM Apr 09, 2018 | Team Udayavani |

ಉಳ್ಳಾಲ: ಉಳ್ಳಾಲದಲ್ಲಿ ರವಿವಾರ ಸಂಜೆ ಸುರಿದ ಮಳೆಗೆ ದೇರಳಕಟ್ಟೆಯಲ್ಲಿ ಸುಮಾರು 200ಮೀಟರ್‌ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಾಡಾಗಿದ್ದು, ಘನ ವಾಹನ ಸೇರಿದಂತೆ ಕಾರು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡಿದ ಘಟನೆ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆ ಬಳಿ ನಡೆದಿದೆ.

Advertisement

ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನ ಸಂಚರಿಸುತ್ತಿದ್ದು, ಆಸ್ಪತ್ರೆ ಎದುರು ವಾಹನ ದಟ್ಟಣೆಯ ಹಿನ್ನಲೆಯಲ್ಲಿ ದೇರಳಕಟ್ಟೆಯಿಂದ ಬ್ಯಾರಿಸ್‌ ಟರ್ನಿಂಗ್‌ ಪಾಯಿಂಟ್ ವರೆಗೆ ರಸ್ತೆ ಅಗಲೀಕರಣ (ಚತುಷ್ಪಥ ರಸ್ತೆ) ಕಾಮಗಾರಿ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಮಣ್ಣು ತುಂಬಿಸುವ ಕೆಲಸ ಆಗುತ್ತಿತ್ತು. ಆದರೆ ರವಿವಾರ ಸುರಿದ ಮಳೆಗೆ ರಸ್ತೆಯಲ್ಲಿದ್ದ ಮಣ್ಣು ಕೆಸರುಮಯವಾಗಿದ್ದು ವಾಹನಗಳು 200ಮೀ.ದೂರವನ್ನು ಕ್ರಮಿಸಲು ಸುಮಾರು 15ನಿಮಿಷ ಪರದಾಡುವ ಸ್ಥಿತಿ ನಿರ್ಮಾಣವಾಯಿತು. 

ಒಂದೆಡೆ ದ್ವಿಚಕ್ರ ವಾಹನಗಳು ಮಣ್ಣಿನಲ್ಲಿ ಹೂತರೆ, ಕೆಲವು ಕಡೆ ಕೆಸರಿಗಿಳಿದ ಸ್ಕೂಟರ್‌ ದೂಡಲು ಇಳಿದವರ ಕಾಲು ಮಣ್ಣಿನಲ್ಲಿ ಹೂತು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬಸ್‌ಗಳು ಸ್ಕಿಡ್‌ ಆಗಿ ಮುಂದಕ್ಕೆ ಚಲಿಸದೆ ನಿಂತ ಪರಿಣಾಮ ಸುಮಾರು ಒಂದು ತಾಸು ಕಾಲ ಸಂಚಾರ ವ್ಯತ್ಯಯವಾಯಿತು.

ಬದಲಿ ರಸ್ತೆಯಲ್ಲಿ ಸಂಚಾರ
ರಾತ್ರಿವರೆಗೂ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾದಾಗ ಕೋಟೆಕಾರು ಮಾಡೂರು ಮಾರ್ಗವಾಗಿ ವಾಹನಗಳು ಸಂಚರಿಸಿತು. ದೇರಳಕಟ್ಟೆಯಿಂದ ಮಂಗಳೂರು ಸಂಚರಿಸುವ ವಾಹನಗಳು ಈ ರಸ್ತೆಯಾಗಿ ಸಂಚರಿಸಿದರೆ, ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಸಂಚರಿಸುವ ವಾಹನಗಳ ಚಾಲಕರು ಮಾಹಿತಿಯ ಕೊರತೆಯಿಂದ ರಸ್ತೆ ದಾಟಲು ಪರದಾಡಬೇಕಾಯಿತು. ಸ್ಥಳೀಯರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next