ಚಳ್ಳಕೆರೆ: ನಗರದ ಸಾರ್ವಜನಿಕ ಆಸ್ಪತ್ರೆ, ವಿವಿಧ ಇಲಾಖೆಗಳ ಕಚೇರಿ ಹಾಗೂ ಶಾಲೆಗಳಿಗೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಶುಕ್ರವಾರ ಭೇಟಿ ನೀಡಿ ಸೌಲಭ್ಯ, ದಾಖಲಾತಿಗಳನ್ನು ಪರಿಶೀಲಿಸಿದರು. ವೆಂಕಟೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಎಸ್‌ಜೆಂ ಪಾಲಿಟೆಕ್ನಿಕ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಕರೇಕಲ್ ಕೆರೆ ಬೆಂಕಿ ದುರಂತದ ನೊಂದ ಜನರಿಗೆ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಡಾ| ಜಿ.ತಿಪ್ಪೇಸ್ವಾಮಿ ಮತ್ತು ವೈದ್ಯರೊಂದಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಪ್ರಯೋಗಾಲಯ, ಔಷಧ ವಿತರಣಾ ಕೇಂದ್ರ, ಔಷಧ ದಾಸ್ತಾನು ಕೇಂದ್ರ, ಐಸಿಯು ಘಟಕ, ಬಾಣಂತಿ ವಾರ್ಡ್, ಹೆರಿಗೆ ಕೇಂದ್ರಗಳನ್ನು ಪರಿಶೀಲಿಸಿದರು.
ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯ ಆರೋಗ್ಯದ ಬಗ್ಗೆ ಉತ್ತಮ ಚಿಕಿತ್ಸೆ ನೀಡಬೇಕು, ರೋಗಿಯೊಂದಿಗೆ ಸೌಹಾರ್ಧತೆಯಿಂದ ವರ್ತಿಸಬೇಕು. ಸರ್ಕಾರದಿಂದ ಔಷಧ ಹಾಗೂ ಇತರೆ ಅಗತ್ಯ ವಸ್ತುಗಳು ಸಕಾಲದಲ್ಲಿ ಸರಬರಾಜು ಆಗದೇ ಇದ್ದಲ್ಲಿ ಮಾಹಿತಿ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಸಾರ್ವಜನಿಕರ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಈ ಆಸ್ಪತ್ರೆ ಗುಣಾತ್ಮಕ ರೋಗ ನಿವಾರಣಾ ಕೇಂದ್ರವಾಗಬೇಕು. ನಿಮ್ಮ ಸೇವೆಯ ಬಗ್ಗೆ ಎಲ್ಲ ಜನರಲ್ಲೂ ಆತ್ಮವಿಶ್ವಾಸ ಮೂಡುವಂತಿರಬೇಕು ಎಂದರು. ಈ ಸಂದರ್ಭದಲ್ಲಿ ಡಾ| ಸತೀಶ್ ಆದಿಮನಿ, ಅಮಿತ್ ಗುಪ್ತ, ಡಾ| ಜಯಲಕ್ಷ್ಮೀ, ಡಾ| ಬಿ.ಆರ್. ಮಂಜಪ್ಪ, ಡಾ| ಪ್ರಜ್ವಲ್ ಧನ್ಯ, ಮ್ಯಾಟ್ರನ್ ಸಾಂತಮ್ಮ, ಕಿರಣ್, ಶುಶ್ರೂಷಕಿಯರಾದ ಪಾರ್ವತಮ್ಮ, ನಾಗರತ್ನ, ಪುಟ್ಟರಂಗಮ್ಮ, ಎಂ.ಸಿ. ಪೂರ್ಣಿಮಾ, ಹೊನ್ನಾವತಿ, ಓಂಕಾರಮ್ಮ, ಸುಮಿತ್ರಮ್ಮ, ನಿರ್ಮಲ, ಹರೀಶ್ ಮುಂತಾದವರು ಉಪಸ್ಥಿತರಿದ್ದರು.