Advertisement

 ಸುಳ್ಯ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ 

02:04 PM Dec 16, 2017 | Team Udayavani |

ಸುಳ್ಯ: ತಾಲೂಕಿನಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ 15 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಅನುಮತಿ ದೊರೆತು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡರೆ ಸ್ಥಳೀಯವಾಗಿ ಮರಳು ಲಭ್ಯವಾಗಲಿದೆ. ಇದರಿಂದ ಮರಳಿನ ಅಭಾವ ದೂರವಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶುಕ್ರವಾರ ಸುಳ್ಯ ತಾಲೂಕು ಕಚೇರಿಗೆ ಅವರು ಮೊದಲ ಭೇಟಿ ನೀಡಿ ಮಾಧ್ಯಮದ ವರೊಂದಿಗೆ ಮಾತನಾಡಿದರು. ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ 15 ಬ್ಲಾಕ್‌ ಗಳನ್ನು ಗುರುತಿ ಸಿದ್ದು, ಜಿಲ್ಲಾ ಸಚಿವರ ಅನುಮತಿ ದೊರೆತ ಕೂಡಲೇ ಮರಳು ಲಭ್ಯವಾಗಲಿದೆ ಎಂದರು.

ಲಾರಿ, ಹಡಗಿಗೆ ಜಿಪಿಎಸ್‌
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಮರಳು ಸಾಗಿಸುವುದಕ್ಕೆ ಅನುಮತಿ ನಿರ್ಬಂಧಿಸಲಾಗುವುದು. ಎಲ್ಲ ಲಾರಿಗಳಿಗೆ ಮತ್ತು ಹಡಗುಗಳಿಗೆ ಜಿಪಿಎಸ್‌ ಅಳವಡಿಸಲು ಸೂಚಿಸ ಲಾಗಿದೆ. ಸ್ಥಳೀಯವಾಗಿ ಮರಳು ವಿತರಿಸಲು ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಸುಳ್ಯಕ್ಕೆ 110 ಕೆವಿ ವಿದ್ಯುತ್‌ ಸಬ್‌ ಸ್ಟೇಷನ್‌ನ ಸ್ಥಳ ಮಂಜೂರಾತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಸದ್ಯದಲ್ಲಿಯೇ ಟೆಂಡರ್‌ ಪೂರ್ಣಗೊಳ್ಳಲಿದೆ. ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಳಗ್ಗೆ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಲಾಗುವುದು. ಸಾರ್ವಜನಿಕರು ಭೇಟಿಯಾಗಿ ಅಹವಾಲನ್ನು ತಿಳಿಸಬಹುದು ಎಂದು ತಿಳಿಸಿದರು.

ಆಧಾರ್‌ ನೋಂದಣಿ ಸಮಸ್ಯೆ ಬಗ್ಗೆ ದೂರು
ನಗರ ಪಂಚಾಯಿತಿಯಲ್ಲಿರುವ ಆಧಾರ್‌ ನೋಂದಣಿ ಕೇಂದ್ರದ ಅವ್ಯವಸ್ಥೆ ಕುರಿತು ನಗರ ಪಂಚಾಯಿತ್‌ ಸದಸ್ಯ ಕೆ. ಗೋಕುಲ್‌ದಾಸ್‌, ಕಾಂಗ್ರೆಸ್‌ ಪ್ರಮುಖರಾದ ಧರ್ಮಪಾಲ ಕೊಯಿಂಗಾಜೆ, ನಂದರಾಜ ಸಂಕೇಶ್‌ ಮತ್ತಿತರರು ಜಿಲ್ಲಾಧಿಕಾರಿಗೆ ದೂರು ನೀಡಿದರು. ಕೆಲವು ಸಮಯದಿಂದ ಆಧಾರ್‌ ನೋಂದಣಿ ಕಾರ್ಯ ಕುಂಠಿತವಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಗಮನ ಸೆಳೆದರು. ಎಲ್ಲ ಯೋಜನೆಗಳಿಗೆ ಆಧಾರ್‌ ಕಡ್ಡಾಯವಾಗಿರುವ ಕಾರಣ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲು ಎರಡು ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಅಳವಡಿಸುವಂತೆ ಮನವಿ
ಮಾಡಿದಾಗ, ತಕ್ಷಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Advertisement

ಅಧಿಕಾರಿಗಳಿಂದ ಸ್ವಾಗತ
ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಪುತ್ತೂರು ಸಹಾಯಕ ಕಮಿಷನರ್‌ ರಘುನಂದನ್‌ ಮೂರ್ತಿ ಮತ್ತು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ತಾಲೂಕು ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಂದ ಅಹವಾಲನ್ನೂ ಸ್ವೀಕರಿಸಿದರು. ಉಪತಹಶೀಲ್ದಾರ್‌ ಲಿಂಗಪ್ಪ ನಾಯ್ಕ, ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next