Advertisement

ಕಲ್ಪತರು ನಾಡಿಗೆ ಉಪಮುಖ್ಯಮಂತ್ರಿ ಸ್ಥಾನ

02:41 PM May 24, 2018 | Team Udayavani |

ತುಮಕೂರು: ಅಂತು ಇಂತೂ ಕಲ್ಪತರು ನಾಡಿಗೆ ಉಪಮುಖ್ಯಮಂತ್ರಿ ಸ್ಥಾನ ಲಭ್ಯ ವಾಯಿತು. 2013ರ ಚುನಾವಣೆಯಲ್ಲಿ ಮುಖ್ಯ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಸೋಲಿನಿಂದ ಕೈ ತಪ್ಪಿದ್ದ ಮುಖ್ಯಮಂತ್ರಿ ಸ್ಥಾನ 2018ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉಪಮುಖ್ಯಮಂತ್ರಿಯಾಗಿ ಪ್ರಮಾಣ
ವಚನ ಸ್ವೀಕರಿಸಿದ್ದು ಜಿಲ್ಲೆಯ ಪ್ರಥಮ ಉಪ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಬಂದಿದೆ.

Advertisement

ತುಮಕೂರು ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನ ಲಭ್ಯವಾಗುತ್ತಲೇ ಜಿಲ್ಲಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮ ಪಟ್ಟರು. ಎರಡು ಬಾರಿ ಜಿಲ್ಲೆಗೆ ಮುಖ್ಯ ಮಂತ್ರಿ ಸ್ಥಾನ ಲಭ್ಯವಾಗದಿದ್ದರೂ ಉಪ ಮುಖ್ಯಮಂತ್ರಿ ಸ್ಥಾನವಾದರೂ ಲಭ್ಯ ವಾಯಿತಲ್ಲ ಎನ್ನುವ ಸಮಾಧಾನವನ್ನು ಪಡುತ್ತಿದ್ದಾರೆ ಜಿಲ್ಲೆಯ ಜನ. 

ಪರಮೇಶ್ವರ್‌ ರಾಜಕೀಯ ಬೆಳವಣಿಗೆ: ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್‌ ರಾಜಕೀಯಕ್ಕೆ ಬಂದಿದ್ದೇ ಒಂದು ವಿಶೇಷ. ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮುಗಿಸಿ ತುಮಕೂರಿಗೆ ಬಂದಾಗ ಅವರ ತಂದೆ ಗಂಗಾಧರಯ್ಯನವರು ಸ್ಥಾಪನೆ ಮಾಡಿದ್ದ ಸಿದ್ದಾರ್ಥ ಮೆಡಿಕಲ್‌ ಕಾಲೇಜು ಉದ್ಘಾಟನೆಗೆ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಬಂದ ವೇಳೆಯಲ್ಲಿ ಪರಮೇಶ್ವರ್‌ ಅವರನ್ನು ರಾಜಕೀಯಕ್ಕೆ ಆಹ್ವಾನ ಮಾಡಿದರು. 

1989 ರಲ್ಲಿ ರಾಜಕೀಯ ಪ್ರವೇಶ: ಡಾ. ಜಿ. ಪರಮೇಶ್ವರ್‌ 1989ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ತಂದೆ ಶಿಕ್ಷಣ ತಜ್ಞ ಗಂಗಾಧರಯ್ಯ ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದ ಪರಮೇಶ್ವರ್‌ ಮೊದಲ ಬಾರಿಗೆ ಮಧುಗಿರಿ ವಿಧಾನ ಸಭಾ ಕ್ಷೇತ್ರದಿಂದ 1989ರಲ್ಲಿ ಶಾಸಕರಾಗಿ ಆಯ್ಕೆಯಾದರು.

ಸೋಲು ಗೆಲುವನ್ನು ಸಮಾನವಾಗಿ ಕಂಡುಕೊಂಡು ಬಂದಿರುವ ಪರಮೇಶ್ವರ್‌ ಗೆ 1994ರಲ್ಲಿ ಮಧುಗಿರಿ ವಿಧಾನ ಸಭಾ ಕ್ಷೇತ್ರದಲ್ಲೇ ಸೋಲು ಕಂಡರು. ನಂತರ 1999 ರಲ್ಲಿ ಮತ್ತೆ ವಿಧಾನ ಸಭೆ ಪ್ರವೇಶ ಮಾಡಿದರು. 2004ರಲ್ಲಿ ಮಧುಗಿರಿ ಕ್ಷೇತ್ರದಿಂದಲೇ ಗೆದ್ದು ಉನ್ನತ ಶಿಕ್ಷಣ ಸಚಿವರಾಗಿ ವಿಶ್ವವಿದ್ಯಾನಿಲಯವನ್ನು ತುಮಕೂರಿಗೆ ತಂದು ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸಿದ ಕೀರ್ತಿ ಪರಮೇಶ್ವರ್‌ಗೆ ಸಲ್ಲುತ್ತದೆ. 

Advertisement

ಮಧುಗಿರಿ ಯಿಂದ ಕೊರಟಗೆರೆಗೆ: ನಂತರ ಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ ಮಧುಗಿರಿ ವಿಧಾನ ಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಯಿತು. ಪರಮೇಶ್ವರ್‌ ಅವರು ಮಧುಗಿರಿಯಿಂದ ತಮ್ಮ ರಾಜಕೀಯವನ್ನು ಕೊರಟಗೆರೆಗೆ ವರ್ಗಾಯಿಸಿದರು. 

ಕೆಪಿಸಿಸಿ ಅಧ್ಯಕ್ಷ ಸ್ಥಾನ: 2008ರಲ್ಲಿ ನಡೆದ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾದರು. ನಂತರ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ 2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಆದರೆ ಆ ಚುನಾವಣೆಯಲ್ಲಿ ಅವರು ಸೋಲು ಕಂಡರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೂ ಪರಮೇಶ್ವರ್‌ ಸೋತ ಪರಿಣಾಮ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾದರು.

ಪಕ್ಷ ವರಿಷ್ಠರ ಆದೇಶದಂತೆ ಅವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿಕೊಂಡು ಗೃಹ ಸಚಿವ ಖಾತೆಯನ್ನು ನೀಡಿದರು. ಈ ವೇಳೆಯಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚು ಅನುಧಾನ ತಂದು ಅಭಿವೃದ್ಧಿಪಡಿಸಿದರು. ಮತ್ತೆ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದರು.
 
ಡಿಸಿಎಂ ಹುದ್ದೆಗೆ ತೃಪ್ತಿ: ಈ ಬಾರಿ ನಡೆದ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಅವರ ಅಭಿಮಾನಿಗಳು ಪ್ರಚಾರ ಮಾಡಿದ್ದರು. ಅವರ ಅಭಿವೃದ್ಧಿ ಕೆಲಸಗಳು ಮತ್ತು ನಿರಂತರ ಕ್ಷೇತ್ರದ ಮತದಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು ಅವರ ಗೆಲುವಿಗೆ ಸಹಕಾರಿಯಾಗಿ ಕೊರಟಗೆರೆ ವಿಧಾನ ಸಭಾ
ಕ್ಷೇತ್ರದಿಂದ ಪರಮೇಶ್ವರ್‌ ಗೆದ್ದರು. 

ರಾಜ್ಯದಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳು ಗೆಲ್ಲದ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ಸೇರಿ ಸರ್ಕಾರ ರಚಿಸಿದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪರಮೇಶ್ವರ್‌ಗೆ
ದೊರಕಿರುವುದು ಮಾತ್ರ ಉಪ ಮುಖ್ಯ ಮಂತ್ರಿ ಸ್ಥಾನ ಜಿಲ್ಲೆಯ ಮೊದಲ ಉಪ ಮುಖ್ಯಮಂತ್ರಿ ರಾಜ್ಯದಲ್ಲಿ ಎರಡನೇ ದೊಡ್ಡ ಜಿಲ್ಲೆ ಎಂದೇ ಹೆಸರಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆ 11 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ. ಸ್ವಾತಂತ್ರ ಬಂದು 70 ವರ್ಷ ಕಳೆದರೂ ಜಿಲ್ಲೆಗೆ ಮುಖ್ಯ ಮಂತ್ರಿ ಸ್ಥಾನವಾಗಲಿ ಉಪ ಮುಖ್ಯ ಮಂತ್ರಿ
ಸ್ಥಾನವಾಗಲಿ ದೊರೆತಿಲ್ಲ. ಈ ಹಿಂದೆ 1962ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ತಾಳಕೆರೆ ಟಿ. ಸುಬ್ರಹ್ಮಣ್ಯಂ ಅವರನ್ನು ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದರು. ಆ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರಿಂದ ಜಿಲ್ಲೆಗೆ ದೊರಬೇಕಾಗಿದ್ದ ಮುಖ್ಯಮಂತ್ರಿ ಸ್ಥಾನವು ಆಗ ಅವರಿಗೆ ಒಲಿಯಲಿಲ್ಲ.

 2013 ರಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಡಾ. ಜಿ. ಪರಮೇಶ್ವರ್‌ ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರು. ಅವರು ಸೋಲು ಕಂಡು ಕಲ್ಪತರು ನಾಡಿಗೆ ದೊರಕ ಬೇಕಾಗಿದ್ದ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತು. 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು. ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ. ಜಿ. ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆತಿರುವುದು ಜಿಲ್ಲೆಯ ನಾಗರೀಕರಿಗೆ ಹರ್ಷ ಉಂಟಾಗಿದೆ.

„ ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next