Advertisement

ಭಾರತೀಯರನ್ನು ಉನ್ನತ ಸ್ಥಾನಗಳಿಗೆ ನಿಯೋಜಿಸಿ: Chinese ಮೊಬೈಲ್‌ ಕಂಪನಿಗಳಿಗೆ ಕೇಂದ್ರ ಸೂಚನೆ

10:05 PM Jun 13, 2023 | Team Udayavani |

ನವದೆಹಲಿ: “ನಮ್ಮ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ನೀವು ನಿಮ್ಮ ಆಡಳಿತ ಮಂಡಳಿಯಲ್ಲಿ ಭಾರತೀಯರನ್ನೂ ನೇಮಿಸಿ”- ಹೀಗೆಂದು ಖಡಕ್‌ ಆಗಿ ಚೀನಾ ಮೊಬೈಲ್‌ ಕಂಪನಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ದೇಶದಲ್ಲಿ ಮೊಬೈಲ್‌ ಉತ್ಪಾದನೆ ಮಾಡುತ್ತಿರುವ ಯೋಮಿ, ಒಪ್ಪೊ, ರಿಯಲ್‌ಮೀ, ವಿವೋ ಕಂಪನಿಗಳ ಪ್ರಮುಖರ ಜತೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‌ ಸಚಿವಾಲಯ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಸೂಚ್ಯವಾಗಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಜತೆಗೆ ಭಾರತೀಯ ಕಂಪನಿಗಳನ್ನು ಸ್ಥಳೀಯವಾಗಿ ತಮ್ಮ ಪಾಲುದಾರರನ್ನಾಗಿ ಹೊಂದಬೇಕೆಂದು ಸೂಚಿಸಿದೆ. ಭಾರತೀಯ ಘಟಕಗಳಿಗೆ ಭಾರತೀಯ ಸಿಇಒ, ಮುಖ್ಯ ತಾಂತ್ರಿಕ ಅಧಿಕಾರಿ, ಕಾರ್ಯಾಚರಣೆ ಅಧಿಕಾರಿಯನ್ನು ನೇಮಿಸಬೇಕೆಂದು ಹೇಳಿದೆ ಎಂದು ಸೂಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್‌ ಟೈಮ್ಸ್‌” ವರದಿ ಮಾಡಿದೆ.

Advertisement

ತೆರಿಗೆ ತಪ್ಪಿಸಬೇಡಿ:
ಚೀನಾ ಕಂಪನಿಗಳು ಭಾರತದಲ್ಲಿ ತೆರಿಗೆ ತಪ್ಪಿಸಿಕೊಳ್ಳುತ್ತಿವೆ, ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ತಮ್ಮ ದೇಶಕ್ಕೆ ಸಾಗಿಸುತ್ತಿವೆ. ಇದರಿಂದ ಸ್ಥಳೀಯ ಬ್ಯಾಂಕ್‌ ಖಾತೆಗಳು ನಿಷ್ಕ್ರಿಯವಾಗಿವೆ. ಚೀನೀ ಕಂಪನಿಗಳು ಆನ್‌ಲೈನ್‌ನಲ್ಲಿ ವಿನಾಯ್ತಿ ಕೊಟ್ಟು ತಮ್ಮ ಉತ್ಪನ್ನಗಳನ್ನು ಮಾರುತ್ತಿವೆ.ಇದರಿಂದ ಸ್ಥಳೀಯ ಚಿಲ್ಲರೆ ಮಾರಾಟಗಾರರು ಸಮಸ್ಯೆಗೊಳಗಾಗಿದ್ದಾರೆ. ಇದನ್ನು ಸರಿಪಡಿಸಬೇಕೆಂದು ಎಂದು ಕಂಪನಿಗಳ ಪ್ರತಿನಿಧಿಗಳಿಗೆ ಸರ್ಕಾರ ತಾಕೀತು ಮಾಡಿದೆ.

ಫ್ರಾನ್ಸ್‌ನಲ್ಲೂ ಚೀನಾ ಕೈವಾಡ: ಆರೋಪ
ಜಗತ್ತಿನ ಎಲ್ಲ ದೇಶಗಳ ವ್ಯವಹಾರಗಳಲ್ಲಿ ಚೀನಾ ಕೈಯಾಡಿಸುತ್ತಿದೆ, ಪಿತೂರಿ ಮಾಡುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇವೆ. ಇದೀಗ ಫ್ರಾನ್ಸ್‌ನಲ್ಲೂ ಚೀನಾ ಹಸ್ತಕ್ಷೇಪದ ವರದಿ ಸಿದ್ಧವಾಗಿದೆ. ಫ್ರಾನ್ಸ್‌ನ ಸಂಸದೀಯ ಸಮಿತಿ ತಯಾರಿಸಿದ ವರದಿಯಲ್ಲಿ ಚೀನಾ ಬಹಳ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ, ದುರುದ್ದೇಶಪೂರಿತ ತಂತ್ರಗಾರಿಕೆ ಮಾಡುತ್ತಿದೆ, ದೇಶ ನೀತಿಗಳನ್ನೇ ಪ್ರತಿರೋಧಿಸುವ ರೀತಿಯಲ್ಲಿ ಅದರ ಕ್ರಮಗಳಿವೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next