Advertisement

ಬೆಳ್ಳಕ್ಕಿಗಳ ನಿರ್ಗಮನ; ಮುಂಗಾರು ಮುಕ್ತಾಯದ ಸೂಚನೆ!

04:53 PM Oct 10, 2022 | Team Udayavani |

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಈ ವರ್ಷ ಬೆಳ್ಳಕ್ಕಿಗಳು ಮೇ 31 ಕ್ಕೆ ಆಗಮಿಸಿ, ಹಂತ ಹಂತವಾಗಿ 123 ದಿನಗಳಲ್ಲಿ ತಮ್ಮ ಪುಟ್ಟ ಪುಟ್ಟ ಸಂಸಾರವನ್ನು ಯಾವುದೇ ಚಿಂತೆ- ತೊಡಕುಗಳಿಲ್ಲದೇ ನಿರ್ವಹಿಸಿಕೊಂಡು ಇದೀಗ ಹಾರಿ ಹೋಗಿವೆ. ಈ ಮೂಲಕ ಮುಂಗಾರು ಮುಕ್ತಾಯವಾಗಿದೆ ಎಂದೇ ಪಕ್ಷಿ ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ.

Advertisement

ನಿಸರ್ಗ ನಿರ್ಮಿತ ಸುರಕ್ಷಿತ ಪಕ್ಷಿಗಳ ತಾಣ ಮುಂಡಿಗೆಕೆರೆಗೆ ಬೆಳ್ಳಕ್ಕಿಗಳು ಮಾನ್ಸೂನ್‌ ಆಗಮನ ಸೂಚನೆಯೊಂದಿಗೆ ಇಳಿದು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಗಳಾದ ನಂತರ ನಿಯಮಿತವಾಗಿ ಎಲ್ಲ ಮರಿಗಳಿಗೆ ಹುಳ, ಹುಪ್ಪಡಿಗಳನ್ನು ಸಮೀಪದ ಹೊಲಗಳಿಂದ ಹುಡುಕಿ ತಂದು ತುತ್ತನ್ನು ನೀಡಿ ಅವುಗಳ ಆರೈಕೆ ಮಾಡಿ, ಮಳೆ ಇರಲಿ, ಬಿಸಿಲಿರಲಿ ರಕ್ಷಣೆ ನೀಡಿ ಸಲಹುವುದು ವಾಡಿಕೆ.  ಈ ವರ್ಷ ಸುಮಾರು 200 ರಿಂದ 210 ಗೂಡುಗಳು ಲೆಕ್ಕಕ್ಕೆ ಸಿಕ್ಕಿದ್ದು ಸುಮಾರು 1900ಕ್ಕೂ ಅಧಿಕ ಪಕ್ಷಿಗಳು ಇದ್ದವು ಎನ್ನುತ್ತಾರೆ ಪಕ್ಷಿಪ್ರಿಯ, ಸೋಂದಾ ಜಾಗೃತಿ ವೇದಿಕೆ ರತ್ನಾಕರ ಹೆಗಡೆ ಬಾಡಲಕೊಪ್ಪ ತಿಳಿಸಿದ್ದಾರೆ.

ಸುಮಾರು 350 ರಿಂದ 400 ವರ್ಷಗಳ ಹಿಂದಿನಿಂದಲೂ ಇಲ್ಲಿಗೆ ಆಗಮಿಸುವುದು, ನಿರ್ಗಮಿಸುವುದು ನಿಯಮಿತವಾಗಿ ನಡೆದು ಬಂದಿದ್ದರೂ, ಸುತ್ತಲಿನ ಗ್ರಾಮವಾಸಿಗಳಿಗೆ ಇದರ ಅರಿವೇ ಇರಲಿಲ್ಲಾ. ಸುಮಾರು 4 ಎಕರೆ – 14 ಗುಂಟೆ ಕ್ಷೇತ್ರದಲ್ಲಿರುವ ಮುಂಡಿಗೆಕೆರೆಗೆ ಪಕ್ಷಿಗಳು ಆಗಮಿಸುವುದನ್ನು 1980ರಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ಪಿ.ಡಿ. ಕಂಡುಹಿಡಿದು ಹೊರ ಜಗತ್ತಿಗೆ ಪರಿಚಯಿಸಿದ್ದರ ಬಳಿಕ ಮುಂಚೂಣಿಗೆ ಬಂದಿದ್ದವು. 2022ರ ಮಾ.1 ರಿಂದ ಸೆ.30 ರವರೆಗೆ ಪಕ್ಷಿಧಾಮದಲ್ಲಿ 105 ದಿನಗಳ ಕಾಲ ಮಳೆ ಬಿದ್ದಿದ್ದು, ಈ ವರೆಗೆ 2513.8 ಮಿ.ಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್‌ ತಿಂಗಳು ಬೆಳ್ಳಕ್ಕಿಗಳ ವಂಶಾಭಿವೃದ್ಧಿಯ ಕೊನೆಯ ಘಟ್ಟವಾಗಿದ್ದು. ಈ ದಿನಗಳಲ್ಲಿ ಸೂರ್ಯದೇವನ ಪ್ರಖರ ಕಿರಣಗಳಿಂದ ಕಂಗೆಟ್ಟ ಪುಟಾಣಿಗಳಿಗೆ ವರುಣದೇವ ಪನ್ನೀರ ಸಿಂಚನದಂತೆ ಆಗಾಗ ಮಳೆ ಸುರಿಸಿ, ಅವುಗಳ ದಾಹ ತೀರಿಸಿ, ರಕ್ಷಣೆಗೆ ನಿಂತಿರುವುದು ಮುಂಡಿಗೆಕೆರೆಯಲ್ಲಿ ಕಂಡುಬರುವ ಮನಮೋಹಕ ದೃಶ್ಯ ನಿಸರ್ಗದ ಕೊಡುಗೆಗೆ ಸಾಕ್ಷಿಯಾಗಿದೆ. ಬೆಳ್ಳಕ್ಕಿ ಸಂಸಾರವನ್ನು ಇನ್ನೊಮ್ಮೆ ಕಣ್ಣುತುಂಬಿಕೊಳ್ಳಲು ಮುಂದಿನ ಮೇ ತಿಂಗಳವರೆಗೆ ಕಾಯಬೇಕಾಗಿದೆ ಎಂದೂ ಹೇಳುತ್ತಾರೆ ಬಾಡಲಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next