ಬೆಂಗಳೂರು: ಕಾಂಗ್ರೆಸ್ ಸರಕಾರದ ಚೊಚ್ಚಲ ಬಜೆಟ್ ಹಾಗೂ ತಮ್ಮ 14ನೇ ಬಜೆಟ್ ಮಂಡನೆ ಪ್ರಕ್ರಿಯೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯನವರು ಬುಧವಾರ (ಜೂ. 14)ದಿಂದ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ.
ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಭಾರೀ ಮೊತ್ತದ ಅನುದಾನ ಹಂಚಿಕೆ ಮಾಡಲು ದೊಡ್ಡ ಆರ್ಥಿಕ ಸಂಪನ್ಮೂಲ ಬೇಕಾಗುವುದರಿಂದ ಹೊಸ ಘೋಷಣೆಗಳು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ಹೊರೆ ಆಗದಂತಹ ಹೊಸ ಪ್ರಸ್ತಾವನೆಗಳನ್ನಷ್ಟೇ ತರುವಂತೆ ಆಯಾ ಇಲಾಖೆಗಳಿಗೆ ಆರ್ಥಿಕ ಇಲಾಖೆ ಸೂಚನೆ ರವಾನಿಸಿದೆ.
ಜೂನ್ 14ರಿಂದ 17ರ ವರೆಗೆ ನಾಲ್ಕು ದಿನ ಬಜೆಟ್ ಪೂರ್ವಭಾವಿ ಮ್ಯಾರಥಾನ್ ಸಭೆಗಳು ನಡೆಯಲಿವೆ. ಪ್ರತೀ ಇಲಾಖೆಗೆ 30ರಿಂದ 40 ನಿಮಿಷ ಕಾಲಾವಕಾಶ ನೀಡಲಾಗಿದೆ. ಸಮಯದ ಆಭಾವದ ಹಿನ್ನೆಲೆಯಲ್ಲಿ ಹೊಸ ಬಜೆಟ್ ಘೋಷಣೆ, ಯೋಜನೆ, ಕಾರ್ಯಕ್ರಮಗಳು ಮತ್ತು ಚಾಲ್ತಿ ಯೋಜನೆಗಳ ಪೈಕಿ ಯಾವುದನ್ನು ಕೈ ಬಿಡಬೇಕು, ಯಾವುದನ್ನು ಕಡಿತಗೊಳಿಸಬೇಕು ಎಂಬುದರ ಕುರಿತ ಚರ್ಚೆಗೆ ಮಾತ್ರ ಬಜೆಟ್ ಪೂರ್ವಭಾವಿ ಸಭೆ ಸೀಮಿತವಾಗಿರಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಅಲ್ಲದೇ, ಐದು ಗ್ಯಾರಂಟಿ ಯೋಜನೆಗಳನ್ನು ಅಳವಡಿಸಿಕೊಳ್ಳಲು ಕೆಲವೊಂದು ಚಾಲ್ತಿ ಯೋಜನೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕಾಗುತ್ತದೆ. ಅದೇ ರೀತಿ ಕೇಂದ್ರ ಸರಕಾರದ ಯೋಜನೆಗಳೊಂದಿಗೆ ಅತಿವ್ಯಾಪನೆ (ಓವರ್‌ಲ್ಯಾಪಿಂಗ್) ಆಗುವ ಅನೇಕ ಯೋಜನೆಗಳಿವೆ. ಆದ್ದರಿಂದ ಪ್ರತಿ ಇಲಾಖೆಯು ಅಗತ್ಯವಾಗಿ ಅಂತಹ ಆದ್ಯತಾವಲ್ಲದ ಕೈಬಿಡಬಹುದಾದ ಚಾಲ್ತಿ ಯೋಜನೆಗಳನ್ನು ಗುರುತಿಸಿ ಪಟ್ಟಿ ತಯಾರಿಸಬೇಕು ಎಂದು ಆರ್ಥಿಕ ಇಲಾಖೆ ಸೂಚನೆ ನೀಡಿದೆ.