ಮಾಗಡಿ: ಪ್ರಕೃತಿಯ ಮಡಿಲಿನಲ್ಲಿರುವ ಐತಿಹಾಸಿಕ ಕಲ್ಯಾಬೆಟ್ಟ ಪ್ರವಾಸಿಗರ ಆಕರ್ಷಕ ತಾಣ. ಇಲ್ಲಿನ ಕಲ್ಲುಗಳು ಒಂದೊಂದು ಕಥೆ ಹೇಳುತ್ತಿವೆ. ಆದರೂ ಚಾರಿತ್ರಿಕ ಕಲ್ಯಾಬೆಟ್ಟ ಮಾತ್ರ ಪ್ರವಾಸೋದ್ಯಮ ಇಲಾಖೆಗೆ ಸೇರದೆ ಇರುವುದು ವಿಪರ್ಯಾಸ. ಕಾಲನ ಲೀಲೆಗೆ ಕಳೆಗುಂದುತ್ತಾ, ದಿನೇ ದಿನೇ ವಿನಾಶದ ಅಂಚು ತಲುಪುತ್ತಿರುವ ಕಲಿಗಣನಾಥನ ಗುಹೆ ಸಂರಕ್ಷಿಸಬೇಕಿದೆ.
ಕಲ್ಲುಗಳೇ ಇತಿಹಾಸ ಸಾರುತ್ತಿದೆ: ಮಾಗಡಿ ತಾಲೂಕಿನ ಚಾರಿತ್ರಿಕ ಕಲ್ಯಾಬೆಟ್ಟವನ್ನು ದೂರದಿಂದ ನೋಡಿದರೆ ಬರೀ ಕಲ್ಲುಗಳಿಂದ ಕೂಡಿರುವ ಕಲ್ಲುಬಂಡೆಗಳು ಎಂದು ಬಾಸವಾಗುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ಅಲ್ಲಿನ ಒಂದೊಂದು ಕಲ್ಲುಗಳ ಒಂದೊಂದು ಕತೆಯ ಇತಿಹಾಸದ ಪುಟ ತೆರೆದುಕೊಳ್ಳುತ್ತದೆ. ಕಲ್ಯಾ ಕೆರೆ, ಗ್ರಾಮ, ಬೆಟ್ಟ ಮತ್ತಿತರೆ ಸ್ಮಾರಕಗಳು ಮಾಗಡಿಯ ಹಿರಿಮೆ ಸಾರುತ್ತದೆ. ಬೌದ್ಧ, ಜೈನ, ವೈಷ್ಣವ ಹಾಗೂ ಶೈವರ ಪವಿತ್ರವಾದ ಸ್ಥಳವಾಗಿ ಮೆರೆದಿದ್ದ ಕಲ್ಯಾಗ್ರಾಮ ಮತ್ತು ಬೆಟ್ಟ ಇಂದಿಗೂ ಅಭಿವೃದ್ಧಿ ಕಂಡಿಲ್ಲ.
ಸರ್ವಶೀಲೆ ಚೆನ್ನಮ್ಮನ ಗದ್ದುಗೆ: ಕ್ರಾಂತಿಕಾರಿ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಅನೇಕ ಮಂದಿ ಶಿವಶರಣರು ಈ ಕಲ್ಯಾಬೆಟ್ಟದಲ್ಲಿ ತಂಗಿದ್ದರು. ಇದರಲ್ಲಿ ಸಕಲ ಕಲಾ ವಿದ್ಯಾ ಪಾರಂಗತಳಾದ ಸರ್ವಶೀಲೆ ಚೆನ್ನಮ್ಮ ಕೂಡ ಇದ್ದರು. ಆಂಧ್ರಪ್ರದೇಶದ ಪ್ರಖ್ಯಾತ ಪಂಚಭಾಷಾ ಮಹಾಕವಿ ಪಾಲ್ಕುರಿಕೆ ಸೋಮನಾಥ, ಚೆನ್ನಮ್ಮನನ್ನು ನೋಡಲು ಆಂಧ್ರಪ್ರದೇಶದಿಂದ ಎತ್ತಿನಗಾಡಿಯಲ್ಲಿ ಒಂದಿದ್ದ, ಚೆನ್ನಮ್ಮ ಪಾಂಡಿತ್ಯಕ್ಕೆ ಮನಸೋತ ಪಾಲ್ಕುರಿಕೆ ಸೋಮನಾಥ ಇಲ್ಲೇ ಉಳಿದುಕೊಂಡಿದ್ದರು. ಕೊನೆಗೆ ಇಲ್ಲೇ ಐಕ್ಯರಾದರು.
ಇದಕ್ಕೆ ಸಾಕ್ಷಿಯಾಗಿ ಪಾಲ್ಕುರಿಕೆ ಸೋಮನಾಥನ ಗದ್ದುಗೆ ಮತ್ತು ಸರ್ವಶೀಲೆ ಚೆನ್ನಮ್ಮನ ಗದ್ದುಗೆಯೂ ಸಹ ಬೆಟ್ಟದಲ್ಲಿದೆ. ಈ ಗದ್ದುಗೆ ಬಳಿ ಬಿಲ್ವಪತ್ರೆ ಮರವಿದ್ದು, ನಿತ್ಯ ಬಿಲ್ವಪತ್ರೆ ಎಲೆಗಳು ಈ ಸಮಾಧಿಯ ಮೇಲೆ ಬೀಳುತ್ತಿರುವುದು ಇಲ್ಲಿನ ವೈಶಿಷ್ಟ.
ಕಲಿಗಣನಾಥ ದೇವಾಲಯವಿದೆ: ಈ ಕಲ್ಯಾಬೆಟ್ಟದಲ್ಲಿ ದೊಡ್ಡದೊಡ್ಡ ಬಂಡೆಗಳಿದ್ದು, ಪ್ರಾಚೀನ ಕಾಲದ ಕಲಿಗಣನಾಥ ದೇಗುಲವಿದೆ. ದೇಗುಲದಲ್ಲಿರುವ ಕಲ್ಲೇಶ್ವರಸ್ವಾಮಿ ನಿತ್ಯ ಪೂಜೆ ನಡೆದುಕೊಂಡುಬಂದಿದೆ. ಕಲ್ಯಾಗ್ರಾಮ ವಿವಿಧ ಧರ್ಮ ಸಾಹಿತ್ಯ, ಸಂಸ್ಕೃತಿಯ ನೆಲೆಯಾಗಿತ್ತು.
ಸಾತ್ವಿಕರು, ಜಾnನಿಗಳು, ಸಾಹಿತಿಗಳು, ಕವಿಗಳ, ತವರೂರಾಗಿದ್ದ ಕಲ್ಯಾ ಗ್ರಾಮ ಪ್ರಾಚೀನ ಕಾಲದಲ್ಲಿ ಕಲಾವತಿ ಪಟ್ಟಣವೆಂದೇ ಖ್ಯಾತಿ ಪಡೆದಿದ್ದು, ಇದೊಂದು ವಾಣಿಜ್ಯ ವ್ಯಾಪಾರದ ಕೇಂದ್ರವಾಗಿತ್ತು ಎಂದು ಇತಿಹಾಸದಿಂದ ತಿಳಿಯುತ್ತದೆ. ಇಲ್ಲಿನ ವಿವಿಧ ಶಿಲಾಶಾಸನಗಳು, ಸಂಸ್ಕೃತಿ, ವೀರಗಲ್ಲುಗಳು ಇತಿಹಾಸ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಕಲ್ಲಿನ ಬೆಟ್ಟ ಹೂವಿನ ಬೆಟ್ಟವಾಗಲಿ: ಇಂಥ ಅಮೂಲ್ಯವಾದ ಕಲಾ ಸಂಪತ್ತು, ಸಾಂಸ್ಕೃತಿಕ ಪರಂಪರೆ ಹಿರಿಮೆ ಹೊಂದಿರುವ ಕಲ್ಯಾಬೆಟ್ಟಕ್ಕೆ ಅನೇಕ ಸಾಹಿತಿಗಳು, ಚಿಂತಕರು, ಕಲಾವಿದರು ಈ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಹಿರಿಯ ಸಾಹಿತಿ ಡಾ.ಚಿದಾನಂದಮೂರ್ತಿ ಅವರು ಒಂದೆರಡು ಬಾರಿ ಭೇಟಿ ನೀಡಿದ್ದು ಪ್ರಕೃತಿ ಸೊಬಗಿಗೆ ಮನಸೋತಿದ್ದಾರೆ.
ಕಲ್ಯಾ ಬೆಟ್ಟದಲ್ಲಿ ಪಂಚಭಾಷಾ ಕವಿ ಪಾಲ್ಕುರಿಕೆ ಸೋಮನಾಥನ ಮನೆಯಿದೆ ಎಂದು ಲೇಖನ ಬರೆದು ಮಾಧ್ಯಮಗಳಿಗೂ ವಿಷಯ ತಿಳಿಸಿದ್ದರು. ಹಿಂದೆ ಸಚಿವೆಯಾಗಿದ್ದ ರಾಣಿಸತೀಶ್ ಅವರು ಕಲ್ಯಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಈ ಕಲ್ಯಾಬೆಟ್ಟವನ್ನು ನೋಡಿ ಇದೊಂದು ಹೂವಿನ ಬೆಟ್ಟವನ್ನಾಗಿ ಪರಿವರ್ತಿಸಲು ಸರ್ಕಾರ ಅಗತ್ಯ ಕ್ರಮ ವಹಿಸುವುದಾಗಿ ಹೇಳಿದ್ದರು. ಅವರ ಚಿಂತನೆ ಇನ್ನೂ ಕಾರ್ಯರೂಪಕ್ಕೆ ಬಾರದೆ ಇರುವುದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.
ಪ್ರಾಕೃತಿಕ ಸಂಪತ್ತನ್ನು ಉಳಿಸಿ: ಕಲ್ಯಾಬೆಟ್ಟವನ್ನು ಕಡೆಗಣಿಸದೆ ಇಲ್ಲಿನ ಪ್ರಾಕೃತಿ ಸಂಪತ್ತು, ಶಾಸನ, ಪ್ರಾಚೀನ ಪರಂಪರೆ ಉಳಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕಲ್ಯಾಬೆಟ್ಟ ಫಲ-ಪುಷ್ಪಗಳ ವನವಾಗಿ ಪ್ರಕೃತಿ ಒಡಲಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತುಂಬಲಿ. ಸರ್ಕಾರದ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ವಿನಾಶದ ಅಂಚಿನಲ್ಲಿರುವ ಈ ಬೆಟ್ಟವನ್ನು ಸಂರಕ್ಷಿಸಬೇಕಿದೆ. ಕಲ್ಯಾಬೆಟ್ಟ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಬೇಕಿದೆ ಎಂಬುದು ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಕಲಾ ಆಸಕ್ತರ ಆಶಯವಾಗಿತ್ತು.