Advertisement

ಕ್ರೀಡಾ ಇಲಾಖೆಯ “ಯುವ ಚೈತನ್ಯ ಯೋಜನೆ’

10:57 PM Nov 05, 2019 | mahesh |

ಉಡುಪಿ: ರಾಜ್ಯ ಸರಕಾರ 2018ರಲ್ಲಿ ಯುವ ಸಂಘಗಳಿಗೆ ಕ್ರೀಡಾ ಕಿಟ್‌ ವಿತರಿಸುವ ಉದ್ದೇಶದಿಂದ ಜಾರಿಗೆ ತಂದ “ಯುವ ಚೈತನ್ಯ’ ಯೋಜನೆ ಅನುದಾನ ಕೊರತೆಯಿಂದ ಒಂದೇ ವರ್ಷದಲ್ಲಿ ಚೈತನ್ಯ ಕಳೆದುಕೊಂಡು ಸ್ಥಗಿತಗೊಳ್ಳುವ ಸೂಚನೆಗಳು ಎದ್ದು ಕಾಣುತ್ತಿವೆ.

Advertisement

ಇಲಾಖೆ ಅನುದಾನ ಕಡಿತ!
ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುದಾನವನ್ನು ಮೊಟಕು ಗೊಳಿಸಿದ್ದರು. ಯುವಚೈತನ್ಯ ಯೋಜನೆಗೆ ಅಗತ್ಯವಿರುವ ಅನುದಾನ ಪ್ರತ್ಯೇಕವಾಗಿ ಮೀಸಲಿಡದ ಕಾರಣದಿಂದ ಯೋಜನೆ ವೇಗ ಕುಂಠಿತಗೊಂಡಿದೆ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಪ್ರತಿ ಜಿಲ್ಲೆಗೆ ಸುಮಾರು 100ರಿಂದ 150 ಕಿಟ್‌ ವಿತರಿಸಲಾಗುತ್ತಿತ್ತು. ಇದೀಗ ಜಿಲ್ಲೆಗೆ ಕೇವಲ 35 ಕ್ರೀಡಾಕಿಟ್‌ಗಳು ಬಂದಿವೆ.

ಮೊದಲ ಹಂತದಲ್ಲಿ 5,000 ಕಿಟ್‌ ಗುರಿ
ಆರೋಗ್ಯಯುತ ಸಮಾಜ ನಿರ್ಮಾಣ ಹಾಗೂ ಕ್ರೀಡೆ ಮೂಲಕ ಯುವ ಸಮುದಾಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವ ಚೈತನ್ಯ ಯೋಜನೆಯನ್ನು 2018ರಲ್ಲಿ ಜಾರಿಗೆ ತಂದಿದ್ದರು. 20 ಕೋ. ರೂ ಬಿಡುಗಡೆ ಮಾಡಿ ಪ್ರಥಮ ಹಂತವಾಗಿ ಉಡುಪಿ ಜಿಲ್ಲೆಯ 600 ಯುವ ಸಂಘಗಳು ಸೇರಿದಂತೆ ರಾಜ್ಯದಲ್ಲಿ 5,000 ಯುವ ಸಂಘಗಳಿಗೆ ತಲಾ 40,000 ರೂ. ಮೌಲ್ಯದ ಕ್ರೀಡಾ ಕಿಟ್‌ ವಿತರಿಸಲಾಗಿತ್ತು.

7 ಹಂತದಲ್ಲಿ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 7 ಹಂತದಲ್ಲಿ 1,020 ಯುವ ಸಂಘಕ್ಕೆ ಕ್ರೀಡಾಕಿಟ್‌ ವಿತರಿಸಲಾಗಿತ್ತು. ಜಿಲ್ಲೆಯಲ್ಲಿ ಮಾರ್ಚ್‌ 2018ರ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬಳಿಕ ಯಾವುದೇ ಸಂಘಗಳಿಗೆ ಕ್ರೀಡಾಕಿಟ್‌ ವಿತರಣೆಯಾಗಿಲ್ಲ. ಆದರೆ ಇಂದಿಗೂ ಕ್ರೀಡಾ ಕಿಟ್‌ ಬಯಸಿ ಹಲವು ಅರ್ಜಿಗಳು ಇಲಾಖೆಗೆ ಬರುತ್ತಿವೆ. ಆದರೆ ಇಲಾಖೆಯಿಂದ ವಿತರಿಸಲು ಅಗತ್ಯವಿರುವಷ್ಟು ಕಿಟ್‌ಗಳು ಪೂರೈಕೆಯಾಗುತ್ತಿಲ್ಲ.

ಕ್ರೀಡಾಕಿಟ್‌ನಲ್ಲಿ ಏನಿತ್ತು?
40,000 ರೂ. ಮೌಲ್ಯದ ಕ್ರೀಡಾ ಕಿಟ್‌ನಲ್ಲಿ ಮೂರು ವಾಲಿಬಾಲ್‌, ನೆಟ್‌, ಎರಡು ಕಂಬಗಳು, ಎರಡು ತ್ರೋಬಾಲ್‌, ಮೂರು ಫ‌ುಟ್‌ಬಾಲ್‌, ಎರಡು ಸೆಟ್‌ ಸ್ಟಂಪ್‌, ಡಿಸ್ಕಸ್‌, ಸ್ಕಿಪ್ಪಿಂಗ್‌ ರೋಪ್‌, ಆರು ಟೆನಿಸ್‌ ಬಾಲ್‌, ಆರು ಟೆನಿಕಾಯಿಟ್‌ ರಿಂಗ್‌ ಹಾಗೂ ಕ್ರೀಡಾ ಸಾಮಗ್ರಿ ತುಂಬಿಕೊಳ್ಳಲು ದೊಡ್ಡ ಬ್ಯಾಗ್‌ ಜತೆಗೆ ಸಾಗಾಟಕ್ಕೆ ತಗಲುವ 500 ರೂ. ವೆಚ್ಚವನ್ನು ಭರಿಸಲಾಗುತ್ತಿತ್ತು.

Advertisement

ಯುವಜನರಿಗೆ ಲಾಭ ಸಿಗಲಿ
ಯುವ ಚೈತನ್ಯ ಯೋಜನೆ ನೀಡುವ ಕ್ರೀಡಾ ಕಿಟ್‌ ಮತ್ತೆ ವಿತರಿಸಬೇಕು. ಇದರ ಲಾಭ ಗ್ರಾಮೀಣ ಭಾಗದ ಯುವಜನರಿಗೆ ಸಿಗುವಂತಾಗಬೇಕು. ಯುವ ಜನರು ಬಿಡುವಿನ ವೇಳೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜ ವಿರೋಧಿ ಚಟುವಟಿಕೆಯಿಂದ ದೂರವಿರಲು ಸಾಧ್ಯ.
-ರಾಘವೇಂದ್ರ, ಬ್ರಹ್ಮಾವರ

15 ಕಿಟ್‌ ವಿತರಣೆ
ಕಳೆದ ಸಾಲಿನ “ಯುವ ಚೈತನ್ಯ ಯೋಜನೆ’ಯಡಿಯಲ್ಲಿ 35 ಕ್ರೀಡಾಕಿಟ್‌ಗಳು ಈಗ ದ.ಕ. ಜಿಲ್ಲೆಗೆ ಬಂದಿವೆ. ಅದರಲ್ಲಿ ಈಗಾಗಲೇ 15 ಕಿಟ್‌ ವಿತರಿಸಲಾಗಿದೆ.
-ಪ್ರದೀಪ್‌ ಡಿ’ಸೋಜಾ, ಕ್ರೀಡೆ ಹಾಗೂ ಯುವಜನ ಸಶಕ್ತೀಕರಣ ಇಲಾಖೆ ಉಪ ನಿರ್ದೇಶಕ (ಪ್ರಭಾರ ), ದ.ಕ.

ಹೆಚ್ಚಿದ ಅರ್ಜಿ ಸಲ್ಲಿಕೆ ಪ್ರಮಾಣ
ಜಿಲ್ಲೆಗೆ ಕಳೆದ ವರ್ಷದ 35 ಕಿಟ್‌ ಜುಲೈ ತಿಂಗಳಿನಲ್ಲಿ ಬಂದಿವೆ. ಈ ಬಾರಿಯ ಪಟ್ಟಿ ಇನ್ನೂ ತಯಾರಿಸಿಲ್ಲ. ಜಿಲ್ಲೆಯಲ್ಲಿ ಕ್ರೀಡಾಕಿಟ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಕ್ರೀಡೆ ಹಾಗೂ ಯುವಜನಸಶಕ್ತೀಕರಣ ಇಲಾಖೆ
ಸಹಾಯಕ ನಿರ್ದೇಶಕ, ಉಡುಪಿ

ಶಾಲಾ ಮಟ್ಟದಲ್ಲಿ ವಿತರಣೆಯಾಗಲಿ
ಕಳೆದ ಬಾರಿ ಕ್ರೀಡಾ ಕಿಟ್‌ನಲ್ಲಿ ಸಾಕಷ್ಟು ಲೋಪದೋಷಗಳು ಇದ್ದವು. ಅದನ್ನು ಸರಿಪಡಿಸಿಕೊಂಡು ಗುಣಮಟ್ಟದ ಕ್ರೀಡಾ ಕಿಟ್‌ನ್ನು ಶಾಲಾ ಮಟ್ಟದಲ್ಲಿ ವಿತರಿಸುವಂತಾಗಬೇಕು.
-ದಿನಕರ್‌ ಬಾಬು, ಜಿ.ಪಂ. ಅಧ್ಯಕ್ಷರು, ಉಡುಪಿ ಜಿಲ್ಲೆ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next