ಚಿಕ್ಕಬಳ್ಳಾಪುರ: ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ನಡೆಯಬೇಕಾದ ಪೋಡಿ ಪ್ರಕರಣಗಳ ವಿಲೇವಾರಿ ಆಮೆಗತಿಯಲ್ಲಿ ಸಾಗಿದ್ದು, ಬಹುಮಾಲೀಕತ್ವದಿಂದ ಏಕ ಮಾಲೀಕತ್ವದ ಕನಸು ಕಾಣುತ್ತಿರುವ ಜಿಲ್ಲೆಯ ಸಣ್ಣ ಪುಟ್ಟ ಹಿಡುವಳಿದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಹಲವಾರು ವರ್ಷಗಳಿಂದಲೂ ಕೂಡ ಒಂದೇ ಸರ್ವೆ ನಂಬರ್‌ನಲ್ಲಿ ಸಾಕಷ್ಟು ರೈತರು ಜಮೀನು ಇದ್ದು, ಏಕ ಮಾಲೀಕತ್ವದ ಪಹಣಿ ಪಡೆಯಲು ಹಲವು ವರ್ಷಗಳ ಹಿಂದೆಯೆ ಪೋಡಿ ಮಾಡಲು ಅರ್ಜಿ ಸಲ್ಲಿಸಿದರೂ ಏನು ಪ್ರಯೋಜನವಾದೇ ರೈತರ ಪರಿಸ್ಥಿತಿ ಅಧಿಕಾರಿಗಳಿಗೆ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.
3,569 ಅರ್ಜಿ ಬಾಕಿ: ಜಿಲ್ಲೆಯಲ್ಲಿ ಸೆಪ್ಪೆಂಬರ್ 19ರ ಅಂತ್ಯಕ್ಕೆ ಪೋಡಿಗಾಗಿ ಬರೋಬ್ಬರಿ 3,569 ಅರ್ಜಿಗಳು ಬಾಕಿ ಇದ್ದು, ಇವೆಲ್ಲಾ ಅರ್ಜಿಗಳು ವಿಲೇವಾರಿ ಆಗುವುದು ಯಾವಾಗ, ರೈತರಿಗೆ ಏಕ ಮಾಲೀಕತ್ವದ ಪಹಣಿ ಸಿಗುವುದು ಯಾವಾಗ ಎಂಬುದಕ್ಕೆ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು 3,943 ಅರ್ಜಿಗಳು ಪೋಡಿಗಾಗಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 305 ಅರ್ಜಿಗಳು ಮಾತ್ರ ವಿಲೇವಾರಿ ಮಾಡಿದ್ದು ಇನ್ನೂ 3,569 ಅರ್ಜಿಗಳು ವಿಲೇವಾರಿಗೆ ಎದುರು ನೋಡುತ್ತಿವೆ.
ಪೋಡಿ ಅಂದರೆ ಏನು?: ಒಂದೇ ಸರ್ವೆ ನಂಬರ್ ನಲ್ಲಿ ನಾಲೈದು ಮಂದಿ ಜಮೀನು ಹಕ್ಕುದಾರಿಗೆ ಇರುತ್ತದೆ. ಇದನ್ನು ಪೋಡಿ ಮೂಲಕ ಭೂಮಿ ವಿಭಜಿಸಿ ಹೊಸ ಸರ್ವೆ ನಂಬರ್‌ಗಳನ್ನು ಸೃಜಿಸಿ ರೈತರಿಗೆ ಏಕ ಮಾಲೀಕತ್ವ ಒದಗಿಸುವುದು ಪೋಡಿ ಮುಖ್ಯ ಉದ್ದೇಶ. ಇದರಿಂದ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹೆಚ್ಚು ಅನುಕೂಲ ವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಪೋಡಿ ಅಭಿಯಾನ ಆಮೆಗತಿಯಲ್ಲಿ ಸಾಗಿ ರೈತರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಹೇಳುವುದೇನು?: ಇನ್ನೂ ಜಿಲ್ಲೆ ಯಲ್ಲಿ ಸಾವಿರಾರು ಪೋಡಿ ಪ್ರಕರಣಗಳು ವಿಲೇವಾರಿಗೆ ಬಾಕಿ ಇರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ನೂರೆಂಟು ಸಮಸ್ಯೆ ಹೇಳುತ್ತಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮುಖ್ಯವಾಗಿ ಭೂ ಮಾಪಕರ ಕೊರತೆ ಹೆಚ್ಚಾಗಿದೆ. ಆದ್ದರಿಂದ ಪೋಡಿ ಪ್ರಕರಣಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.
ಬಹು ಮಾಲೀಕತ್ವದ ಪಹಣಿ ಇದ್ದರೆ ಸರ್ಕಾರದ ವಿವಿಧ ಸೌಲಭ್ಯ ಸಿಗುವುದು ಬಲು ಕಷ್ಟ : ಬಹು ಮಾಲೀಕತ್ವದ ಸರ್ವೆ ನಂಬರ್‌ಗಳಿಂದಾಗಿ ಜಮೀನು ತಮ್ಮದಾದರೂ ಕೂಡ ರೈತರಿಗೆ ಜಮೀನು ಮಾರಾಟದಿಂದ ಹಿಡಿದು ಭೂ ಪರಿವರ್ತನೆ ಮಾಡಿಸುವುದು ಅಥವಾ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ, ಬ್ಯಾಂಕ್‌ಗಳಿಂದ ಕೃಷಿ ಸಾಲ ಮತ್ತಿತರ ಯಾವ ಸೌಲಭ್ಯ ಕೂಡ ಪಡೆಯಲು ಅಡ್ಡಿಯಾಗುತ್ತಿದೆ. ಪೋಡಿಯಿಂದ ಭೂಮಿಯನ್ನು ವಿಭಜಿಸಿ ರೈತರಿಗೆ ಪ್ರತ್ಯೇಕ ಹೊಸ ಸರ್ವೆ ನಂಬರ್‌ಗಳನ್ನು ಸೃಷ್ಟಿಸಿ ರೈತರಿಗೆ ಏಕ ಮಾಲೀಕತ್ವದ ಪಹಣಿಗಳನ್ನು ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹಲವು ವರ್ಷಗಳಿಂದ ವೇಗದಲ್ಲಿದ್ದ ಪೋಡಿ ಅಭಿಯಾನ ಸರಿ ಸುಮಾರು ನಾಲ್ಕೈದು ವರ್ಷದಿಂದ ಆಮೆಗತಿಯಲ್ಲಿ ಸಾಗಿ ರೈತರನ್ನು ತೀವ್ರವಾಗಿ ಬಾಧಿಸುತ್ತಿದೆ.
-ಕಾಗತಿ ನಾಗರಾಜಪ್ಪ