ಬಂದರು: ಮೀನುಗಾರಿಕೆ ಬಂದರಿನಲ್ಲಿ ಮೀನು ಕಟ್ಟಿಂಗ್ ನಡೆಸುವವರು ಮೂಲ ಸೌಕರ್ಯವಿಲ್ಲದೆ ಸಂಕಟ ಎದುರಿಸುತ್ತಿದ್ದಾರೆ.
ಆದರೆ ಚಿಲ್ಲರೆ ಮೀನು ವ್ಯಾಪಾರ ಹಾಗೂ ಕಟ್ಟಿಂಗ್ ಮಾಡಲು ಮೀನುಗಾರಿಕೆ ದಕ್ಕೆಯಲ್ಲಿ ಕಾನೂನಿನ ಪ್ರಕಾರ ಅವಕಾಶವಿಲ್ಲ ಎಂಬ ಕಾರಣ ನೀಡಿ ಮೂಲಸೌಲಭ್ಯ ಕಲ್ಪಿಸಲು ಮೀನುಗಾರಿಕೆ ಇಲಾಖೆ ಹಿಂದಡಿ ಇಟ್ಟಿದೆ.
ಮಂಗಳೂರು ದಕ್ಕೆಯಲ್ಲಿ ಚಿಲ್ಲರೆ ಮೀನು ಖರೀದಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮೀನು ಕಟ್ಟಿಂಗ್ ಮಾಡುವ ವ್ಯವಸ್ಥೆ ಈ ಹಿಂದಿನಿಂದಲೂ ಬಳಕೆಯಲ್ಲಿದೆ. ಹೀಗಾಗಿ ಮೀನು ಕಟ್ಟಿಂಗ್ ಅನ್ನೇ ನಂಬಿಕೊಂಡು ಸುಮಾರು 100ಕ್ಕೂ ಅಧಿಕ ಮಂದಿ ಇಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ಬೇಕಾದ ಸೂಕ್ತ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗೆ ಒದ್ದೆಯಾಗಿಕೊಂಡೇ ಇಲ್ಲಿ ಮೀನು ಕಟ್ಟಿಂಗ್ ನಡೆಸುವಂತಾಗಿದೆ.
ಮೀನುಗಾರ ಮಹಿಳೆಯೊಬ್ಬರು “ಸುದಿನ’ ಜತೆಗೆ ಮಾತನಾಡಿ, “ನಾವು ಜೀವನೋಪಾಯಕ್ಕಾಗಿ ಹಲವಾರು ವರ್ಷಗಳಿಂದ ಮೀನು ಕತ್ತರಿಸುವ ಕೆಲಸ ಮಾಡುತ್ತಿದ್ದೇವೆ. ಸುಮಾರು 70ಕ್ಕೂ ಅಧಿಕ ಜನರು ನಿತ್ಯ ಇಲ್ಲಿ ಮೀನು ಕತ್ತರಿಸುವ ಕೆಲಸ ಮಾಡುತ್ತಾರೆ. ಮೂಲ ಸೌಕರ್ಯ ಎಂಬುದು ಇಲ್ಲಿ ಇಲ್ಲ’ ಎನ್ನುತ್ತಾರೆ.
ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಮಾತನಾಡಿ, “ಮೀನು ಕಟ್ಟಿಂಗ್ ಮಾಡುವವರ ನೋವು ಕೇಳುವವರೇ ಇಲ್ಲ. ಗಾಳಿ ಮಳೆಗೆ ರಸ್ತೆಯಲ್ಲೇ ನಿಂತು ಅವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಆಗಮಿಸಿದ್ದಾಗ ಈ ವಿಚಾರ ಅವರ ಗಮನಕ್ಕೆ ತರಲಾಗಿತ್ತು. ಸರಿಪಡಿಸುವ ಭರವಸೆ ನೀಡಿದ್ದರು’ ಎಂದರು.
ಅನುಮತಿ ಇಲ್ಲ: ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಚಿಲ್ಲರೆ ಮೀನು ವ್ಯಾಪಾರ, ಕಟ್ಟಿಂಗ್ ಮಾಡಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿಯೂ ಈ ಬಗ್ಗೆ ತೀರ್ಮಾನವಾಗಿದೆ. ಹೀಗಾಗಿ ಚಿಲ್ಲರೆ ಮೀನು ವ್ಯಾಪಾರ ಹಾಗೂ ಕಟ್ಟಿಂಗ್ ನಡೆಸುವಂತಿಲ್ಲ. -ಹರೀಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ದ.ಕ.
ನೀರಿಲ್ಲ ! ಹಳೆ ಬಂದರಿನ ಮೀನುಗಾರಿಕೆ ದಕ್ಕೆಯಲ್ಲಿ ಮೀನು ಕತ್ತರಿಸಲು ಮಹಿಳೆಯರು ನೀರಿಗಾಗಿ ಪರದಾಡುವಂತಾಗಿದೆ. ಜಲರಾಶಿಯ ಎದುರೇ ಇದ್ದರೂ ಅವರಿಗೆ ಮೀನು ಸ್ವತ್ಛಗೊಳಿಸಲು ನೀರಿಗೆ ತತ್ವಾರ ಬಂದಿದೆ. ಮೀನು ಸ್ವತ್ಛಗೊಳಿಸಲು, ನೀರಿನ ವ್ಯವಸ್ಥೆ ಇಲ್ಲ. ಸಮುದ್ರದಿಂದ ಬಕೆಟ್‌ನಲ್ಲಿ ನೀರು ತರಬೇಕಿದೆ ಎನ್ನುವುದು ಮಹಿಳೆಯೊಬ್ಬರ ಅಭಿಪ್ರಾಯ.