ಮುದ್ದೇಬಿಹಾಳ: ಉಕ್ರೇನ್-ರಷ್ಯಾ ನಡುವಣ ಯುದ್ಧದಿಂದಾಗಿ ಕಳೆದ 6 ತಿಂಗಳಿಂದ ಭಾರತವು ಬೇರೆ ದೇಶಗಳಿಂದ ಎಣ್ಣೆ ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಈ ಹಿನ್ನೆಲೆ ಸ್ವಾವಲಂಬನೆ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಬೆನ್ನೆಲುಬಾಗಿರುವ ರೈತರು ಎಣ್ಣೆ ಕಾಳುಗಳ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ಕರೆ ನೀಡಿದ್ದಾರೆ.
ಇದು ದೇಶದ ಅಡುಗೆ ಎಣ್ಣೆ ಕೊರತೆ ನಿಭಾಯಿಸಲು ಸಹಕಾರಿಯಾಗಿದೆ. ಪ್ರಧಾನಿಯವರ ಕರೆಯನ್ನು ಗಂಭೀರವಾಗಿ ಪರಿಗಣಿಸಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಗಳನ್ನು ಅದರಲ್ಲೂ ಮುಖ್ಯವಾಗಿ ಸೂರ್ಯಕಾಂತಿ ಬೆಳೆಯನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳೆದು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಹಾಗೂ ಕೃಷಿ ಉನ್ನತಿ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಶಿಧರ ಹಾಲ್ಯಾಳ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಉಕ್ರೇನ್‌ನಿಂದ ಎಣ್ಣೆ ಆಮದು ಮಾಡಿಕೊಳ್ಳುವ ನಮ್ಮ ದೇಶಕ್ಕೆ ಯುದ್ಧದಿಂದಾಗಿ ಆಮದು ನಿಂತು ಹೋಗಿದೆ. ಇದರಿಂದಾಗಿ ಎಣ್ಣೆಯಲ್ಲಿ ಹೆಚ್ಚಿನ ಬೆಲೆ ಏರಿಕೆ ಕಂಡುಬಂದಿದೆ. ಸೂರ್ಯಕಾಂತಿ ಈ ಭಾಗದ ಪ್ರಮುಖ ಎಣ್ಣೆಕಾಳಿನ ಬೆಳೆಯಾಗಿದೆ. ಈ ವರ್ಷ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಏಕೆಂದರೆ ರೈತರು ಕಳೆದ ವರ್ಷ ತೊಗರಿ ಬೆಳೆದಿದ್ದು, ಹವಾಮಾನ ವೈಪರಿತ್ಯದಿಂದ ಇಳುವರಿ ಕುಂಠಿತವಾಗಿರುತ್ತದೆ. ಆದ್ದರಿಂದ ರೈತರು ಸೂರ್ಯಕಾಂತಿ ಬೆಳೆಯಲು ಆಸಕ್ತಿ ವಹಿಸಬೇಕು. ರೈತರು ಸೂರ್ಯಕಾಂತಿ ಬೆಳೆಯನ್ನು ಕಟಾವು ಮಾಡಿ ಹಿಂಗಾರು ಹಂಗಾಮಿಗೆ ಎರಡನೇಯ ಬೆಳೆಯಾಗಿ ಬಿಳಿಜೋಳ, ಕಡಲೆ ಬೆಳೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಉತ್ಪಾದನೆ-ತಾಂತ್ರಿಕ ಸಲಹೆ: ಎಣ್ಣೆಕಾಳು ಬೆಳೆ ಸೂರ್ಯಕಾಂತಿಯ ಉತ್ಪಾದನೆ ಮತ್ತು ತಾಂತ್ರಿಕತೆ ಕುರಿತು ಮನಗೂಳಿ ಮತ್ತು ಹಾಲ್ಯಾಳ ಅವರು ರೈತರಿಗೆ ಉಪಯುಕ್ತ ಸಲಹೆ ನೀಡಿದ್ದು ಇಂತಿದೆ. ಹವಾಮಾನ ಬದಲಾವಣೆಗೆ ಹೊಂದಿಕೊಂಡು ಬೆಳೆಯುವ ಶಕ್ತಿ ಇರುವುದರಿಂದ ಸೂರ್ಯಕಾಂತಿಯನ್ನು ವರ್ಷದ ಎಲ್ಲ ಹಂಗಾಮಿನಲ್ಲಿ ಎಲ್ಲ ತರಹದ ಮಣ್ಣಿನಲ್ಲಿ ಬೆಳೆಯಬಹುದು. ಗಂಗಾ ಕಾವೇರಿ, ಕಾವೇರಿ ಚಾಂಪ್, ಸಂಕ್ರಾಂತಿ, ಐಟಿಸಿ, ಸ್ಯಾಂಡೋಜ್ ಸೂರ್ಯಕಾಂತಿಯ ಪ್ರಮುಖ ತಳಿಗಳಾಗಿವೆ.
ಸೂರ್ಯಕಾಂತಿ ಬೆಳೆಗೆ ಪ್ರಮುಖವಾಗಿ ಬರಬಹುದಾದ ರಸ ಹೀರುವ ಕೀಟದ ಬಾಧೆ ತಪ್ಪಿಸಲು ಪ್ರತಿ ಕೆಜಿ ಬೀಜಕ್ಕೆ 2 ಎಂಎಲ್ ಕ್ಲೋರೋಪೈರಿಪಾಸ್‌ದಿಂದ ಬೀಜೋಪಚಾರ ಮಾಡಬೇಕು. ಪ್ರತಿ ಎಕರೆಗೆ 2 ಟನ್ ಸಾವಯವ ಕೊಟ್ಟಿಗೆ ಗೊಬ್ಬರ ಬಿತ್ತನೆಗೆ 2-3 ವಾರ ಮುಂಚಿವಾಗಿ ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ 14 ಕೆಜಿ ಸಾರಜನಕ, 20 ಕೆಜಿ ರಂಜಕ, 14 ಕೆಜಿ ಪೋಟ್ಯಾಸ್ ಒದಗಿಸುವ ರಸಗೊಬ್ಬರವನ್ನು ಕೊಡಬೇಕು. ಪ್ರತಿ ಎಕರೆಗೆ 2 ಕೆಜಿ ಬೀಜಗಳನ್ನು ಸಾಲಿನಿಂದ ಸಾಲಿಗೆ 60 ಸೆಂ.ಮೀ. ಅಂತರದಲ್ಲಿ ಹಾಗೂ ಸಸಿಯಿಂದ ಸಸಿಗೆ 30 ಸೆಂಮಿ ಅಂತರದಲ್ಲಿ ಕೈಗೊಳ್ಳಬೇಕು. ಸೂರ್ಯಕಾಂತಿ ಬೆಳೆಯನ್ನು ಜುಲೈ ಮೊದಲ ವಾರದಿಂದ ಆಗಸ್ಟ್ 15ರವರೆಗೆ ಬಿತ್ತಬಹುದಾಗಿದೆ.
ಮುಂಗಾರು ಹಂಗಾಮಿನಲ್ಲಿ ಅಂತರ ಬೆಳೆಯಾಗಿ ಬೆಳೆಯಲು ಕ್ರಮ ಕೈಗೊಳ್ಳಬೇಕು. ಸೂರ್ಯಕಾಂತಿ ಹೂವಾಡುವ ಹಂತದಲ್ಲಿ ಪರಾಗಸ್ಪರ್ಶ ಬೆಳೆ ಆಗಿರುವುದರಿಂದ ಪರಾಗಸ್ಪರ್ಶಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಆದುದರಿಂದ ಮಸಲಿನ್ ಬಟ್ಟೆಯಿಂದ ಎಲ್ಲಾ ಹೂವುಗಳ ಮೇಲೆ ಪರಾಗಸ್ಪರ್ಶ ಮಾಡುವದರಿಂದ ಕಾಳು ಕಟ್ಟುವಿಕೆ ಹೆಚ್ಚಾಗಿ ಜೊಳ್ಳು ಹಿಡಿಯುವುದಿಲ್ಲ. ಮೇಲಾಗಿ ಕಾಳುಗಳು ಗಟ್ಟಿ, ದಪ್ಪವಾಗಿ ಇಳುವರಿ ಹೆಚ್ಚುತ್ತದೆ. ಸರಿಯಾದ ಬೇಸಾಯ ಕ್ರಮಗಳನ್ನು ಸಕಾಲದಲ್ಲಿ ಅಳವಡಿಸಿಕೊಂಡರೆ ಎಕರೆಗೆ 8-10 ಕ್ವಿಂಟಲ್ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.