ದೇವದುರ್ಗ: ಪ್ರಸಕ್ತ 2019-20ನೇ ಸಾಲಿನ ಮುಂಗಾರು ಮಳೆ ಕೊರತೆ ನಡುವೆಯೂ ಕೃಷಿ ಇಲಾಖೆಗೆ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ತಾಲೂಕಿನ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿದೆ.
ಆದರೆ ಈವರೆಗೆ ಮುಂಗಾರು ಮಳೆ ಆಗದ ಕಾರಣ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರು ಬಿತ್ತನೆ ಬೀಜ ಖರೀದಿಗೆ ಮುಂದಾಗಿಲ್ಲ. ಹೀಗಾಗಿ ರೈತ ಸಂಪರ್ಕ ಕೇಂದ್ರಗಳು ಬಿಕೋ ಎನ್ನುತ್ತಿವೆ.
ಬಿತ್ತನೆ ಗುರಿ: ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 81,718 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ವಾಡಿಕೆಗಿಂತ ಶೇ.40ರಷ್ಟು ಮಳೆ ಅಭಾವ ಎದುರಾಗಿದೆ. ಆಗಾಗ ಅಲ್ಪ ಪ್ರಮಾಣದಲ್ಲಿ ಮಳೆ ಆಗಿದ್ದರೂ ಭೂಮಿ ಹಸಿಯಾಗಿಲ್ಲ.
ದೇವದುರ್ಗ ಹೋಬಳಿ ವ್ಯಾಪ್ತಿಯಲ್ಲಿ 9,095 ಹೆಕ್ಟೇರ್ ಖುಷ್ಕಿ ಮತ್ತು 11,612 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಖುಷ್ಕಿ 7,286 ಹೆಕ್ಟೇರ್, ನೀರಾವರಿ 12,665 ಹೆಕ್ಟೇರ್, ಜಾಲಹಳ್ಳಿ ಹೋಬಳಿಯಲ್ಲಿ ಖುಷ್ಕಿ 100.30 ಹೆಕ್ಟೇರ್, ನೀರಾವರಿ 9,760 ಹೆಕ್ಟೇರ್, ಅರಕೇರಾ ಹೋಬಳಿ ವ್ಯಾಪ್ತಿಯಲ್ಲಿ ಖುಷ್ಕಿ 10,582 ಹೆಕ್ಟೇರ್, ನೀರಾವರಿ 10,688 ಹೆಕ್ಟೇರ್ ಸೇರಿ ಒಟ್ಟು ತಾಲೂಕಿನಲ್ಲಿ 81,718 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ.
ಬಿತ್ತನೆ ಬೀಜ ಪೂರೈಕೆ: ದೇವದುರ್ಗ ತಾಲೂಕಿನಲ್ಲಿ ದೇವದುರ್ಗ, ಜಾಲಹಳ್ಳಿ, ಗಬ್ಬೂರು, ಅರಕೇರಾ ಸೇರಿ ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಿವೆ. ದೇವದುರ್ಗ ತಾಲೂಕಿಗೆ 335 ಕ್ವಿಂಟಲ್ ಭತ್ತದ ಬೀಜ ಪೂರೈಕೆ ಆಗಿದೆ. ಈ ಪೈಕಿ ನಾಲ್ಕೂ ರೈತ ಸಂಪರ್ಕ ಕೇಂದ್ರಗಳಿಗೆ ತಲಾ 83.75 ಕ್ವಿಂಟಲ್ ಪೂರೈಸಲಾಗಿದೆ. 165 ಕ್ವಿಂಟಲ್ ತೊಗರಿ ಪೂರೈಕೆ ಆಗಿದ್ದು, ನಾಲ್ಕೂ ರೈತ ಸಂಪರ್ಕ ಕೇಂದ್ರಗಳಿಗೆ ತಲಾ 41.25 ಕ್ವಿಂಟಲ್ ಒದಗಿಸಲಾಗಿದೆ. 1 ಕ್ವಿಂಟಲ್ ಹೆಸರು ಬೀಜದಲ್ಲಿ ನಾಲ್ಕೂ ರೈತ ಸಂಪರ್ಕ ಕೇಂದ್ರಗಳಿಗೆ ತಲಾ 0.25 ಕ್ವಿಂಟಲ್ನಂತೆ ಪೂರೈಸಲಾಗಿದೆ. ಸಜ್ಜೆ 115 ಕ್ವಿಂಟಲ್ ಬಂದಿದ್ದು, ದೇವದುರ್ಗ ರೈತ ಸಂಪರ್ಕ ಕೇಂದ್ರಕ್ಕೆ 36 ಕ್ವಿಂಟಲ್, ಅರಕೇರಾಕ್ಕೆ 38, ಜಾಲಹಳ್ಳಿಗೆ 36 ಕ್ವಿಂಟಲ್, ಗಬ್ಬೂರು ಕೇಂದ್ರಕ್ಕೆ 5 ಕ್ವಿಂಟಲ್ ಪೂರೈಸಲಾಗಿದೆ. 1ಕ್ವಿಂಟಲ್ ಸೂರ್ಯಕಾಂತಿ ಬೀಜದಲ್ಲಿ ನಾಲ್ಕೂ ರೈತ ಸಂಪರ್ಕ ಕೇಂದ್ರಕ್ಕೆ ತಲಾ 0.25 ಕ್ವಿಂಟಲ್ ಪೂರೈಸಲಾಗಿದೆ. ಹುರುಳಿ 2 ಕ್ವಿಂಟಲ್ ಪೂರೈಕೆ ಆಗಿದ್ದು, ನಾಲ್ಕೂ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ತಲಾ 50 ಕೆಜಿಯಂತೆ ಒದಗಿಸಲಾಗಿದೆ. ಒಟ್ಟಾರೆ ನಾಲ್ಕು ಕೇಂದ್ರಗಳಿಗೆ 681.1 ಕ್ವಿಂಟಲ್ ವಿವಿಧ ಬೀಜ ಪೂರೈಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯತ್ತ ರೈತರ ಚಿತ್ತ: ಸತತ ಮೂರ್‍ನಾಲ್ಕು ವರ್ಷ ಬರ ಎದುರಿಸಿದ ತಾಲೂಕಿನಲ್ಲಿ ಪ್ರಸಕ್ತ ವರ್ಷವೂ ಮಳೆ ಕೈಕೊಡುವ ಲಕ್ಷಣಗಳು ಗೋಚರಿಸುತ್ತಿವೆ. ಆಗಾಗ ಗುಡುಗು, ಸಿಡಿಲು, ಭಾರೀ ಗಾಳಿ ಆರ್ಭಟದೊಂದಿಗೆ ಮಳೆ ಸುರಿದಿದ್ದರೂ ಭೂಮಿ ಹಸಿಯಾಗಿಲ್ಲ. ತಾಲೂಕಿನಲ್ಲಿ ಆಗಾಗ ಮೋಡ ಮುಸುಕಿದ ವಾತಾವರಣ ಕಂಡುಬಂದರೂ ರಭಸದ ಗಾಳಿಗೆ ಮೋಡಗಳು ಮಳೆ ಸುರಿಸದೇ ಓಡಿಹೋಗುತ್ತಿವೆ. ಬಿಸಿಲ ಧಗೆಯೂ ಮುಂದುವರಿದಿದೆ. ಆದರೂ ಮಳೆ ನಿರೀಕ್ಷೆಯಲ್ಲಿರುವ ತಾಲೂಕಿನ ರೈತರು ಈಗಾಗಲೇ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಂಡಿದ್ದಾರೆ. ವರುಣದೇವನ ಕೃಪೆಯಿಂದ ಸಮರ್ಪಕ ಮಳೆ ಸುರಿದು ಭೂಮಿ ಹಸಿಯಾದರೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.
•ನಾಗರಾಜ ತೇಲ್ಕರ್