ಮುದ್ದೇಬಿಹಾಳ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ವಿಜಯಪುರ ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಅಕಾಲಿಕವಾಗಿರುವ ಮಳೆ ನೈಸರ್ಗಿಕ ಮಾನ್ಸೂನುಗಳಿಂದಾದುದಲ್ಲ ಬದಲಾಗಿ ಸೈಕ್ಲೋನ್ ಪರಿಣಾಮದಿಂದಾದ ಮಳೆಯಾಗಿರುತ್ತದೆ. ಆದ್ದರಿಂದ ರೈತರಿಗೆ ಸದ್ಯ ಬಿತ್ತುಣಿಕೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ಮತ್ತು ಮಾಗಿ ಉಳುಮೆ ಮಾಡಲು ಅವಕಾಶ ಇದೆ.
ಪ್ರಸ್ತುತ ಭೂಮಿಯ ತೇವಾಂಶ ಸಂಪೂರ್ಣ ಹೊಂದಿದ್ದರೂ ಕೂಡ ಮುಂಗಾರು ಬಿತ್ತನೆಗೆ ಇದು ಸೂಕ್ತ ಸಮಯವಲ್ಲ. ಈಗ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ಮುಂಗಾರು ಮಾನ್ಸೂನ್‌ಗಳು ಸ್ವಲ್ಪ ತಡವಾಗಿ ರಾಜ್ಯಕ್ಕೆ ಆಗಮಿಸುವ ಸೂಚನೆ ಇದೆ. ಇವೆಲ್ಲ ಪರಿಗಣಿಸಿ ರೈತರು ಸದ್ಯ ಬಿತ್ತನೆಗೆ ಮುಂದಾಗದೆ ಮುಂದೂಡಿ ಸಂಪೂರ್ಣ ಮಳೆಯಾಗಿ ಉತ್ತಮ ತೇವಾಂಶ ಕಂಡು ಬಂದಾಗ ಮಾತ್ರ ಬಿತ್ತನೆ ಮಾಡುವದು ಸೂಕ್ತ. ಇದರಿಂದ ಬೆಳೆಯ ಮೊಳಕೆಯ ಪ್ರಮಾಣ ಹೆಚ್ಚಾಗಿ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಮತ್ತು ಕೃಷಿ ಉನ್ನತಿ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಶಿಧರ ಹಾಲ್ಯಾಳ ಅವರು ಪ್ರಕಟಣೆ ನೀಡಿದ್ದು, ಮುಂಗಾರು ಹಂಗಾಮು ಆರಂಭವಾಗಲಿರುವುದರಿಂದ ರೈತರು ಜಿಲ್ಲೆಯ ಹೆಚ್ಚಿನ ರೈತರ ವಾಣಿಜ್ಯ ಬೆಳೆಯಾಗಿರುವ ತೊಗರಿ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಬಗ್ಗೆ ರೈತರು ಬೇಸಾಯ ಕ್ರಮಗಳನ್ನು ಅರಿತುಕೊಂಡಿರಬೇಕು ಎಂದು ತಿಳಿಸಿದ್ದಾರೆ.
ತೊಗರಿ ಬೇಸಾಯ ಕ್ರಮಗಳು: ತೊಗರಿಯನ್ನು ಜೂನ್ ತಿಂಗಳಿಂದ ಜುಲೈ ತಿಂಗಳ ಒಳಗೆ ಬಿತ್ತನೆ ಮಾಡುವದು ಸೂಕ್ತ. ತೊಗರಿಯಲ್ಲಿ ಟಿ.ಎಸ್ -3, ಆರ್.ಜಿ.ಆರ್.ಬಿ-811, 152, ಬಿ.ಎಸ್. ಎಂ.ಎಸ್-736, ಎಸ್-1 ಮತ್ತು ಜಿ.ಸಿ-11-39 ಪ್ರಮುಖ ತಳಿಗಳಾಗಿವೆ. ಬಿತ್ತನೆಗೆ ಮೊದಲು ಸೂಕ್ತವಾದ ತೊಗರಿ ತಳಿಯನ್ನು ಆಯ್ಕೆಮಾಡಿ ಕೊಳ್ಳಬೇಕು. ಬಿತ್ತನೆಗೆ ಮುನ್ನ ಟ್ರೈಕೊಡರ್ಮಾದಿಂದ ಬೀಜೋಪಚಾರ ಮಾಡಬೇಕು. 1 ಕೆಜಿ ಬೀಜಕ್ಕೆ 4-6 ಗ್ರಾಂ ಲೇಪನ ಮಾಡಬೇಕು. ತೊಗರಿ ಬಿತ್ತನೆಗೆ ಪ್ರತಿ ಎಕರೆಗೆ 4 ರಿಂದ 5 ಕೆಜಿ ಬೀಜಗಳು ಬೇಕಾಗುತ್ತವೆ. 2.5 ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಟಿ.ಎಸ್ -3 ಆರ್ ತಳಿಯ ಬೀಜಗಳಾದರೆ 4×4 ಸಾಲಿನಿಂದ ಸಾಲಿಗೆ 1.5 ರಿಂದ 2 ಅಡಿವರೆಗೆ ಬೀಜದಿಂದ ಬೀಜಕ್ಕೆ ಅಂತರ ಕಾಯ್ದುಕೊಳ್ಳಬೇಕು. ಜಿ.ಆರ್ .ಜಿ-811 ತಳಿ ಬೀಜಗಳಾದರೆ ಸಾಲಿನಿಂದ ಸಾಲಿಗೆ 6 ಅಡಿ ಹಾಗೂ ಬೀಜದಿಂದ ಬೀಜಕ್ಕೆ 2 ಅಡಿ ಅಂತರ ಕಾಯ್ದುಕೊಳ್ಳಬೇಕು. ಅಂತರ್ ಬೆಳೆಯಾಗಿ ಸೂರ್ಯಕಾಂತಿ, ಸಜ್ಜೆ, ನವಣೆ ಬಿತ್ತನೆ ಮಾಡಬಹುದು.
ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 10 ಕೆಜಿ ಸಾರಜನಕ, 20 ಕೆಜಿ ರಂಜಕ, 8 ಕೆಜಿ ಗಂಧಕ, 6 ಕೆಜಿ ಜಿಂಕ್ ಸಲ್ಪೇಟ್ ಹಾಗೂ 1 ಕೆಜಿ ಬೋರಾನ್ ಬೇಕಾಗುತ್ತದೆ. ಜಿ.ಆರ್.ಜಿ-811, 152 ತಳಿಗಳ ಸಸಿಗಳನ್ನು ತಯಾರು ಮಾಡಿ ಸಾಲಿನಿಂದ ಸಾಲಿಗೆ 6 ಅಡಿ, ಸಸಿಯಿಂದ ಸಸಿಗೆ 2 ಅಡಿ ಅಂತರದಲ್ಲಿ ಸಸಿಯನ್ನು ನಾಟಿ ಮಾಡಬೇಕು. ಬೀಜಗಳನ್ನು ಕೈಯಿಂದ ಊರುವುದಾದರೇ ಇದೆ ಅಂತರದಲ್ಲಿ ಬೀಜಗಳನ್ನು ಊರಬೇಕು. ಸಸಿ ನಾಟಿಗಳಿಂದ ಶೇ.10 ರಿಂದ 20 ರಷ್ಟು ಇಳುವರಿ ಹೆಚ್ಚಿಗೆ ಆಗಿರುವದೆಂದು ತಾಂತ್ರಿಕವಾಗಿ ತಿಳಿದು ಬಂದಿರುತ್ತದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪದ್ದತಿಯನ್ನು ಅಳವಡಿಸಿ ಕೊಳ್ಳಬೇಕು ಎಂದು ಮನಗೂಳಿ ಮತ್ತು ಹಾಲ್ಯಾಳ ತಿಳಿಸಿದ್ದಾರೆ.