Advertisement

ದಕ್ಷಿಣ ವಲಯಕ್ಕೆ ದೇವಧರ್‌ ಟ್ರೋಫಿ: ಫೈನಲ್‌ನಲ್ಲಿ ಪೂರ್ವ ವಲಯಕ್ಕೆ 45 ರನ್‌ ಸೋಲು

12:19 AM Aug 04, 2023 | Team Udayavani |

ಪುದುಚೇರಿ: ಅಜೇಯ ದಕ್ಷಿಣ ವಲಯ ತಂಡವು ಆಲ್‌ರೌಂಡ್‌ ಪ್ರದರ್ಶನ ನೀಡಿ ಪೂರ್ವ ವಲಯ ತಂಡವನ್ನು 45 ರನ್ನುಗಳಿಂದ ಸೋಲಿಸಿ 9ನೇ ಬಾರಿಗೆ ದೇವಧರ್‌ ಟ್ರೋಫಿ ಕ್ರಿಕೆಟ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ದಕ್ಷಿಣ ವಲಯವು ಮೂರು ವಾರಗಳ ಅಂತರದಲ್ಲಿ ಎರಡನೇ ದೇಶಿ ಕ್ರಿಕೆಟ್‌ ಪಂದ್ಯಾವಳಿಯ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತು. ದಕ್ಷಿಣ ವಲಯ ಕಳೆದ ತಿಂಗಳಷ್ಟೇ ಬೆಂಗ ಳೂರಿನಲ್ಲಿ ನಡೆದ ದುಲೀಪ್‌ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿತ್ತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಬಲಿಷ್ಠ ದಕ್ಷಿಣ ವಲಯವು ಆರಂಭಿಕ ಆಟಗಾರ ರೋಹನ್‌ ಕಣ್ಣುಮ್ಮಾಲ್‌ ಅವರ ಶತಕ ಹಾಗೂ ನಾಯಕ ಮಾಯಾಂಕ್‌ ಅಗರ್ವಾಲ್‌ ಮತ್ತು ನಾರಾಯಣ್‌ ಜಗದೀಶನ್‌ ಅವರ ಅರ್ಧಶತಕದಿಂದಾಗಿ 8 ವಿಕೆಟಿಗೆ 328 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಪೂರ್ವ ವಲಯ ಆರಂಭ ಮತ್ತು ಕೊನೆ ಹಂತದಲ್ಲಿ ಎಡವಿದ ಕಾರಣ 46.1 ಓವರ್‌ಗಳಲ್ಲಿ 283 ರನ್‌ ಗಳಿಸಲಷ್ಟೇ ಶಕ್ತವಾಗಿ 45 ರನ್ನುಗಳಿಂದ ಸೋಲನ್ನು ಒಪ್ಪಿಕೊಂಡಿತು.

ಆರಂಭಿಕ ಕುಸಿತ
ಗೆಲ್ಲಲು ಕಠಿನ ಗುರಿ ಪಡೆದ ಪೂರ್ವ ವಲಯ ಆರಂಭದಲ್ಲಿಯೇ ಕುಸಿದಿತ್ತು. ಕಾವೇರಪ್ಪ ಮತ್ತು ಕೌಶಿಕ್‌ ದಾಳಿಗೆ ತತ್ತರಿಸಿದ ಪೂರ್ವ 14 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಆಬಳಿಕ ಸುದೀಪ್‌ ಕುಮಾರ್‌ ಘರಮಿ, ಸೌರಭ್‌ ತಿವಾರಿ, ರಿಯಾನ್‌ ಪರಾಗ್‌ ಮತ್ತು ಕುಮಾರ್‌ ಕುಶಾಗ್ರ ಉತ್ತಮವಾಗಿ ಆಡಿದ್ದರಿಂದ ಚೇತರಿಸಿಕೊಂಡಿತು. 65 ಎಸೆತಗಳಿಂದ 95 ರನ್‌ ಹೊಡೆದ ಪರಾಗ್‌ ಅವರು ಕುಶಾಗ್ರ ಜತೆ ಆರನೇ ವಿಕೆಟಿಗೆ 105 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಪರಾಗ್‌ 8 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದರು. ಆಬಳಿಕ ಕುಮಾರ್‌ ಕುಶಾಗ್ರ ಎಚ್ಚರಿಕೆಯಿಂದ ಆಡಿದರೂ 68 ರನ್‌ ಗಳಿಸಿ ಔಟಾದರು. ಆಬಳಿಕ ಮತ್ತೆ ಕುಸಿತದ ಪೂರ್ವ ವಲಯ ರನ್ನಿಗೆ ಆಲೌಟಾಯಿತು.

ಕಣ್ಣುಮ್ಮಾಲ್‌ ಶತಕ
ದಕ್ಷಿಣ ವಲಯದ ಆರಂಭ ಉತ್ತಮ ವಾಗಿತ್ತು. ಆರಂಭಿಕರಾದ ರೋಹನ್‌ ಕಣ್ಣುಮ್ಮಾಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಮೊದಲ ವಿಕೆಟಿಗೆ 24.4 ಓವರ್‌ಗಳಲ್ಲಿ 181 ರನ್‌ ಪೇರಿಸಿ ಭರ್ಜರಿ ಅಡಿಪಾಯ ಹಾಕಿಕೊಟ್ಟರು. ಈ ಹಂತದಲ್ಲಿ 75 ಎಸೆತಗಳಿಂದ 107 ರನ್‌ ಹೊಡೆದಿದ್ದ ಕಣ್ಣುಮ್ಮಾಲ್‌ ಔಟಾದರು. ಆಬಳಿಕ ಅಗರ್ವಾಲ್‌ ಮತ್ತು ಜಗದೀಶನ್‌ ಉತ್ತಮವಾಗಿ ಆಡಿದ್ದರಿಂದ ತಂಡದ ಮೊತ್ತ 300ರ ಗಡಿ ದಾಟಿತು. ಅಗರ್ವಾಲ್‌ 63 ಮತ್ತು ಜಗದೀಶನ್‌ 53 ರನ್‌ ಹೊಡೆದರು.

ದಕ್ಷಿಣ ವಲಯ 8 ವಿಕೆಟಿಗೆ 328 (ರೋಹನ್‌ ಕಣ್ಣುಮ್ಮಾಲ್‌ 107, ಮಾಯಾಂಕ್‌ ಅಗರ್ವಾಲ್‌ 63, ಜಗದೀಶನ್‌ 54, ರೋಹಿತ್‌ ನಾಯ್ಡು 26, ಸಾಯಿ ಕಿಶೋರ್‌ 24 ಔಟಾಗದೆ, ಶಾಬಾಜ್‌ ಅಹ್ಮದ್‌ 55ಕ್ಕೆ 2, ರಿಯಾನ್‌ ಪರಾಗ್‌ 68ಕ್ಕೆ 2, ಉತ್ಕರ್ಷ್‌ ಸಿಂಗ್‌ 50ಕ್ಕೆ 2); ಪೂರ್ವ ವಲಯ 46.1 ಓವರ್‌ಗಳಲ್ಲಿ 283 (ಸುದೀಪ್‌ ಕುಮಾರ್‌ ಘರಮಿ 41, ಸೌರಭ್‌ ತಿವಾರಿ 28, ರಿಯಾನ್‌ ಪರಾಗ್‌ 95, ಕುಮಾರ್‌ ಕುಶಾಗ್ರ 68, ವಾಷಿಂಗ್ಟನ್‌ ಸುಂದರ್‌ 60ಕ್ಕೆ 3, ವಿದ್ವತ್‌ ಕಾವೇರಪ್ಪ 61ಕ್ಕೆ 2, ವಾಸುಕಿ ಕೌಶಿಕ್‌ 49ಕ್ಕೆ 2, ವಿಜಯಕುಮಾರ್‌ ವೈಶಾಖ್‌ 59ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next