Advertisement

ಮಹಿಳೆಯರ ಪ್ರವೇಶ ಖಂಡಿಸಿ ಧರಣಿ

02:24 PM Oct 13, 2018 | |

ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯೆ ಪ್ರವೇಶ ವಿರೋಧಿಸಿ ಅ.14ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಅಯ್ಯಪ್ಪ ದೇವಸ್ಥಾನಗಳ ಸಂಘಟನೆ ನಿರ್ಧರಿಸಿದೆ.
ಸುಪ್ರೀಂಕೋರ್ಟ್‌ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು. 

Advertisement

ನ್ಯಾಯಾಲಯದ ಆದೇಶದಿಂದ ಶಬರಿಮಲೆ ದೇವಸ್ಥಾನದ ನಂಬಿಕೆ, ಪರಂಪರೆಗೆ ಧಕ್ಕೆಯಾಗಿದೆ. ಇದನ್ನು ರಕ್ಷಿಸಲು ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಸಂಘಟನೆ ಸಂಚಾಲಕ ಕೆ.ವಿ.ಗಿರೀಶ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಬರಿಮಲೆಯ ಸಂಪ್ರದಾಯ ಮತ್ತು ಆಚರಣೆಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಭಾನುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಮೂಹಿಕ ಪ್ರಾರ್ಥನಾ ರ್ಯಾಲಿ ಆಯೋಜಿಸಿದ್ದೇವೆ. ನಂತರ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆ. ಫ್ರೀಡಂ ಪಾರ್ಕ್‌ನಿಂದ ರಾಜಭವನದವರೆಗೆ ಮೌನ ರ್ಯಾಲಿ ನಡೆಸಲು ತೀರ್ಮಾನಿಸಿದ್ದೇವೆ. ಗತಕಾಲದ ಸಂಪ್ರದಾಯ ಎತ್ತಿಹಿಡಿಯುವ, ಕೋಟ್ಯಂತರ ಅಯ್ಯಪ್ಪಭಕ್ತರ ನಂಬಿಕೆ ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಲು ಕೇರಳ ಮತ್ತು ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
 
ಸುಪ್ರೀಂ ಕೋರ್ಟ್‌ ಆದೇಶಕ್ಕೆ ಗೌರವ ನೀಡುತ್ತೇವೆ. ಆದರೆ, ನ್ಯಾಯಾಲಯದ ಆದೇಶದಲ್ಲಿ ಹಲವು ಅಸ್ಪಷ್ಟ ಅಂಶಗಳಿದ್ದು, ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿ ಸಂದರ್ಭದಲ್ಲಿ ಇವುಗಳನ್ನು ವಿಮರ್ಶೆಗೆ ಒಳಪಡಿಸಬೇಕು. ಕೇರಳ ಸರ್ಕಾರ ತುರ್ತು ವಿಧಾನಸಭೆ ಅಧಿವೇಶನ ಕರೆದು ಈ ಎಲ್ಲಾ ಸಾಧಕ – ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಬರಿಮಲೆಯಲ್ಲಿನ ಸಂಪ್ರದಾಯಗಳು ಅಸಧಾರಣ ಮತ್ತು ಐತಿಹಾಸಿಕವಾಗಿದೆ. ಇಲ್ಲಿನ ನಾಲ್ಕು ಶತಮಾನಗಳ ಪುರಾತನ ಸಂಪ್ರದಾಯಗಳು, ನಂಬಿಕೆ, ದೈನಂದಿನ ಆಚರಣೆಗಳು ಎಲ್ಲ ಜಾತಿ, ಧರ್ಮದವರಿಗೆ ಸ್ವೀಕಾರಾರ್ಹವಾಗಿದೆ. ಅಯ್ಯಪ್ಪ ಧರ್ಮ ನಿರ್ದಿಷ್ಟವಾಗಿ ದಕ್ಷಿಣ ಭಾರತೀಯರು ಹಾಗೂ ಸಾಮಾನ್ಯವಾಗಿ ದೇಶ, ವಿದೇಶಗಳ ಭಕ್ತಾದಿಗಳು ಅನುಸರಿಸುತ್ತಿದ್ದು, ಇವರ ಆಚರಣೆಗಳನ್ನು ರಕ್ಷಿಸಬೇಕು ಎಂದು ಸರ್ಕಾರಗಳಿಗೆ ಮನವಿ ಮಾಡಿದರು.
 
ಸಂಘಟನೆಯ ಸಹ ಸಂಚಾಲಕ ಹಾಗೂ ಹಿರಿಯ ನಟ ಶಿವರಾಂ ಮಾತನಾಡಿ, ಕಾನೂನು ಜಾರಿಗೊಳ್ಳುವ ಮುನ್ನ ಸಂಪ್ರದಾಯಗಳು ಹುಟ್ಟಿಕೊಂಡಿತ್ತು. ಎಲ್ಲ ಜಾತಿ, ಧರ್ಮಗಳ ನಂಬಿಕೆಗಳನ್ನು ರಕ್ಷಿಸಿ ಉಳಿಸಬೇಕು. ಸಾವಿರಾರು ವರ್ಷಗಳಿಂದ ವೇದ, ಉಪನಿಷತ್ತುಗಳಿವೆ. ಆದರೆ ಕಾನೂನು ಇತ್ತೀಚಿನ ಪರಿಕಲ್ಪನೆ. ಸುಪ್ರೀಂ ಕೋರ್ಟ್‌ ಆದೇಶದಿಂದ ಅಯ್ಯಪ್ಪಭಕ್ತರಿಗೆ ಘಾಸಿಯಾಗಿದೆ. ಹೀಗಾಗಿ ಇದೀಗ ಹೋರಾಟ ನಡೆಸುವುದೊಂದೇ ಮಾರ್ಗ ಎಂದು ಹೇಳಿದರು.

ಜಂಟಿ ಸಂಚಾಲಕ ಜಿ.ಜಯಪ್ರಕಾಶ್‌ ಮಾತನಾಡಿ, ಭಕ್ತಾದಿಗಳ ನಂಬಿಕೆ ಮತ್ತು ಆಚರಣೆಗಳನ್ನು ನ್ಯಾಯಾಲಯಗಳು ನಿರ್ಧರಿಸ ಬಾರದು. ಶಬರಿಮಲೆ ಕುರಿತು ತೀರ್ಪು ಹಲವು ಪ್ರಶ್ನೆ ಹುಟ್ಟುಹಾಕಿದೆ. ಹೀಗಾಗಿ ಎಲ್ಲ ಸಂಘಟನೆಗಳು ಇಂತಹ ಮಹತ್ವದ ಆಂದೋಲನಕ್ಕೆ ಕೈ ಜೋಡಿಸಬೇಕು ಎಂದರು.

Advertisement

ಶಬರಿಮಲೆ ಉಳಿಸಿ- ಧರ್ಮ ರಕ್ಷಿಸಿ ಪ್ರತಿಭಟನೆ
ಬೆಂಗಳೂರು: ರಾಜಧಾನಿಯ ಅಯ್ಯಪ್ಪ ಭಕ್ತ ಮಂಡಳಿಗಳು ಮತ್ತು ಹಿಂದೂ ಸಂಘಟನೆಗಳ ಆಶ್ರಯದಲ್ಲಿ ಅ.14ರಂದು ಶಬರಿಮಲೆ ಉಳಿಸಿ-ಧರ್ಮ ರಕ್ಷಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಶಬರಿಮಲೆ ಉಳಿಸಿ ಎಂಬ ಪ್ರಮುಖ ಬೇಡಿಕೆಯ ಜತೆಗೆ ಚರ್ಚಗಳಲ್ಲಿ ನಡೆಯುವ ಲೈಂಗಿಕ ಶೋಷಣೆ, ಬಲತ್ಕಾರಗಳ ಬಗ್ಗೆಯೂ ತನಿಖೆ ನಡೆಸಬೇಕು. ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವ ಅಬಿದ್‌ ಪಾಶಾ ಗ್ಯಾಂಗ್‌ ಮೇಲೆ ಕಾನೂನು ಕ್ರಮ ಜರುಗಿಸದ ಪೋಲಿಸ್‌ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಂತರ್ಜಾಲದ ಮೂಲಕ ವೇಶ್ಯಾ ವಾಟಿಕೆ ನಡೆಸುವ ವೆಬ್‌ಸೈಟ್‌ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕುಂಬಮೇಳದ ಭಕ್ತರ ಮೇಲೆ ಹಾಕುವ ಸರಚಾರ್ಜ ರದ್ದು ಮಾಡಬೇಕು ಎಂಬ ಒತ್ತಾಯ ವನ್ನು ಪ್ರತಿಭಟನೆ ಮೂಲಕ ಸರ್ಕಾರದ ಮುಂದಿಡಲಿದ್ದೇವೆ ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next