Advertisement

ಹಲ್ಲುಕಟ್ಟು ಹೊಂದಿರುವಾಗ ಹಲ್ಲುಗಳ ನೈರ್ಮಲ್ಯ

03:29 PM Jul 02, 2023 | Team Udayavani |

ಹಲ್ಲುಕಟ್ಟುಗಳು ಅಥವಾ ಬ್ರೇಸ್‌ಗಳು ನಿಮ್ಮ ಹಲ್ಲನ್ನು ಸರಿಹೊಂದಿಸಿ ಮುಖ ಸುಂದರವಾಗಿ ಕಾಣಲು ನೆರವಾಗುತ್ತವೆ. ಹಲ್ಲುಗಳನ್ನು ಹೊಂದಿರುವಾಗ ಹಲ್ಲು ಮತ್ತು ವಸಡುಗಳನ್ನು ಆರೋಗ್ಯಯುತ, ಮಡ್ಡಿರಹಿತವಾಗಿ ಕಾಪಾಡಿಕೊಳ್ಳಬೇಕಾದುದು ಅಗತ್ಯ. ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾಯುಕ್ತ ಮಡ್ಡಿ ಸಂಗ್ರಹವಾದರೆ ಮುಂದೆ ಅದು ಹಲ್ಲುಕುಳಿ, ಹುಳುಕಿಗೆ ಕಾರಣವಾಗುತ್ತದೆ. ಹಲ್ಲುಗಳನ್ನು ನಿಯಮಿತವಾಗಿ ಉಜ್ಜದೆ ಇದ್ದರೆ ಹುಳುಕು ಹಲ್ಲು ಉಂಟಾಗಬಹುದು.

Advertisement

ಹಲ್ಲುಕಟ್ಟು ಅಳವಡಿಸಿದ್ದರೆ ನಿಮಗೆ
ಹಲ್ಲುಜ್ಜಲು ಈ ಕೆಳಗಿನವು ಬೇಕು
– ಆಥೊìಡಾಂಟಿಕ್‌ ಟೂತ್‌ಬ್ರಶ್‌ (ಹಲ್ಲುಕಟ್ಟಿಗಾಗಿ ಇರುವ ವಿಶೇಷ ಬ್ರಶ್‌)
– ಬಿಳಿಯಾದ ಕಲೆಗಳು ಉಂಟಾಗುವುದನ್ನು ತಡೆಯಲು ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌
-ಡೆಂಟಲ್‌ ಫ್ಲಾಸ್‌
-ಬ್ರೇಸಸ್‌ ವ್ಯಾಕ್ಸ್‌

ಹಲ್ಲುಗಳನ್ನು ಎಷ್ಟು ಬಾರಿ
ಉಜ್ಜಬೇಕು ಮತ್ತು ಫ್ಲಾಸ್‌
ಮಾಡಬೇಕು?
ಹಲ್ಲುಗಳನ್ನು ಶುಚಿಯಾಗಿ ಮತ್ತು ವಸಡುಗಳನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ನಿಮ್ಮ ಹಲ್ಲುಗಳನ್ನು ದಿನಕ್ಕೆ ಕನಿಷ್ಟ ಐದು ಬಾರಿ, ಪ್ರತೀ ಬಾರಿ ಐದು ನಿಮಿಷಗಳ ಕಾಲದಂತೆ ಹಲ್ಲು ಮತ್ತು ವಸಡುಗಳನ್ನು ತೊಳೆದುಕೊಳ್ಳಬೇಕು. ಹಲ್ಲುಕಟ್ಟುಗಳನ್ನು ಧರಿಸಿದ್ದಾಗಲೂ ಇದನ್ನು ಪಾಲಿಸಬೇಕು. ಬೆಳಗ್ಗೆ ಎದ್ದ ಬಳಿಕ, ಪ್ರತೀ ಬಾರಿ ಆಹಾರ ಸೇವಿಸಿದಾಗ ಮತ್ತು ರಾತ್ರಿ ಮಲಗುವುದಕ್ಕೆ ಮುನ್ನ ಇದನ್ನು ಮಾಡಬೇಕು.
ಚಿಕಿತ್ಸೆಯ ಸಂದರ್ಭದಲ್ಲಿ ಯಾವಾಗಲೂ ಆಥೊìಡಾಂಟಿಕ್‌ ಟೂತ್‌ಬ್ರಶ್‌ ಮತ್ತು ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ ಉಪಯೋಗಿಸಬೇಕು. ಸಾಮಾನ್ಯ ಹಲ್ಲುಜ್ಜುವ ಬ್ರಶ್‌ಗೂ ಆಥೊìಡಾಂಟಿಕ್‌ ಬ್ರಶ್‌ಗೂ ಇರುವ ವ್ಯತ್ಯಾಸ ಎಂದರೆ, ಆಥೊìಡಾಂಟಿಕ್‌ ಬ್ರಶ್‌ನ ಮಧ್ಯಭಾಗ ಖಾಲಿಯಾಗಿದ್ದು, ಇದರಿಂದ ಹಲ್ಲುಕಟ್ಟುಗಳ ಸುತ್ತಲೂ ಶುಚಿಗೊಳಿಸಲು ಸಾಧ್ಯವಾಗುತ್ತದೆ.

ಹಲ್ಲುಕಟ್ಟು ಇಲ್ಲದೆ ಇದ್ದಾಗ ಹೇಗೆ ಹಲ್ಲು ಫ್ಲಾಸ್‌ ಮಾಡುವಿರೋ ಹಾಗೆಯೇ ಹಲ್ಲುಕಟ್ಟು ಅಳವಡಿಸಿದ್ದಾಗಲೂ ಫ್ಲಾಸ್‌ ಮಾಡಬೇಕು. ಒಂದೇ ಒಂದು ವ್ಯತ್ಯಾಸ ಎಂದರೆ ಫ್ಲಾಸನ್ನು ಆರ್ಚ್‌ವೈರ್‌ ಅಡಿಯಿಂದ ಮತ್ತು ಹಲ್ಲುಗಳ ನಡುವಿನಿಂದ ತೂರಿಸಿ ಫ್ಲಾಸ್‌ ಮಾಡಬೇಕು.

ಹಗಲಿನ ವೇಳೆಯಲ್ಲಿಯೂ ಫ್ಲಾಸ್‌ ಡಬ್ಬ ವನ್ನು ಜತೆಗೆ ಇರಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಹಲ್ಲು ಮತ್ತು ಹಲ್ಲುಕಟ್ಟಿನ ನಡುವೆ ಸಿಕ್ಕಿಹಾಕಿಕೊಂಡ ಆಹಾರದ ತುಣುಕುಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ.

Advertisement

ಪ್ಲೇಕ್‌ (ಮಡ್ಡಿ) ಎಂದರೇನು?
ಪ್ಲೇಕ್‌ ಅಥವಾ ಮಡ್ಡಿ ಎಂದರೆ ಹಲ್ಲುಗಳ ಮೇಲೆ ಸಂಗ್ರಹವಾಗುವ ಬ್ಯಾಕ್ಟೀರಿಯಾಯುಕ್ತ ಬಿಳಿ ಪೊರೆ. ಪ್ಲೇಕ್‌ನಲ್ಲಿ ಸಜೀವ ಸೂಕ್ಷ್ಮಜೀವಿಗಳು ಹಲ್ಲಿಗೆ ಅಂಟಿಕೊಂಡು ಬೆಳೆಯುತ್ತವೆ. ಸಕ್ಕರೆಯುಕ್ತ ಆಹಾರಗಳನ್ನು ಸೇವಿಸಿದಾಗ ಈ ಸೂಕ್ಷ್ಮಜೀವಿಗಳು ಆಮ್ಲವನ್ನು ಉತ್ಪಾದಿಸುತ್ತವೆ. ಈ ಆಮ್ಲದಿಂದ ಹಲ್ಲುಗಳ ಎನಾಮಲ್‌ ಕ್ಷಯಿಸುತ್ತದೆ ಮತ್ತು ಆಮ್ಲ ಹಲ್ಲುಗಳ ಮೇಲೆ ಉಳಿದುಕೊಳ್ಳುತ್ತದೆ. ಪ್ಲೇಕ್‌ನಿಂದಾಗಿಯೇ ವಸಡುಗಳಲ್ಲಿ ಹುಣ್ಣಾಗುವುದು ಮತ್ತು ದಂತ ಕುಳಿ ಉಂಟಾಗುವುದು.

ಬ್ರೇಸಸ್‌ ವ್ಯಾಕ್ಸ್‌
ಹಲ್ಲುಕಟ್ಟು ಅಳವಡಿಸಿದಾಗ ಅವು ಪರಸ್ಪರ ಉಜ್ಜಿಕೊಂಡು ಉಂಟಾಗುವ ನೋವನ್ನು ಕಡಿಮೆ ಮಾಡಲು ಬ್ರೇಸಸ್‌ ವ್ಯಾಕ್ಸ್‌ ಅಥವಾ ಆಥೊìಡಾಂಟಿಕ್‌ ವ್ಯಾಕ್ಸ್‌ ಹಚ್ಚಲಾಗುತ್ತದೆ. ನಿಮ್ಮ ಬಾಯಿ ಮತ್ತು ಹಲ್ಲುಕಟ್ಟಿನ ತಂತಿಗಳ ನಡುವೆ ಅಂತರ ಕಾಪಾಡಿಕೊಳ್ಳಲು ಇದನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ ಈ ಅಂತರದಿಂದಾಗಿ ಬಾಯಿಯಲ್ಲಿ ಹುಣ್ಣಾಗಿದ್ದರೆ ಗುಣ ಹೊಂದಲು ಸಮಯ ಸಿಗುತ್ತದೆ.
– ಹಲ್ಲುಕಟ್ಟುಗಳ ತಂತಿಗಳು ಉಜ್ಜಬಲ್ಲ ನಿಮ್ಮ ಬಾಯಿಯ ಒಳಗಿನ, ತುಟಿಗಳ ಸನಿಹದ ಸ್ಥಳಗಳನ್ನು ಗುರುತಿಸಿ.
– ವ್ಯಾಕ್ಸ್‌ ಸ್ವಲ್ಪ ತೆಗೆದುಕೊಂಡು ಹಸ್ತಗಳ ನಡುವೆ ಉಜ್ಜಿಕೊಳ್ಳಿ. ವ್ಯಾಕ್ಸ್‌ ಅಥವಾ ಮೇಣವನ್ನು ಬಿಸಿ ಮಾಡಲು ಕನಿಷ್ಠ ಐದು ನಿಮಿಷಗಳ ಕಾಲ ಹೀಗೆ ಮಾಡಿ. ಜೋಳದ ಬೀಜದಷ್ಟು ಗಾತ್ರದ ಮೇಣದ ಉಂಡೆ ಸಾಕು. ಮೇಣದ ದೊಡ್ಡ ಉಂಡೆ ಬೇಡ.
– ನೋವು ಇರುವ ಸ್ಥಳದಲ್ಲಿ ಮೇಣದ ಸಣ್ಣ ಉಂಡೆಯನ್ನು ಇರಿಸಿ. ಮೃದುವಾಗಿ ಉಜ್ಜಿ. ತಡೆ ಅಥವಾ ಅಂತರವನ್ನು ರೂಪಿಸಲು ಕಿರಿಕಿರಿ ಉಂಟು ಮಾಡುವ ಹಲ್ಲುಕಟ್ಟುಗಳು ಅಥವಾ ತಂತಿಗಳ ಮೇಲೆ ಮೇಣದ ಉಂಡೆ ಇರಿಸಿ.

ಹಲ್ಲುಕಟ್ಟುಗಳ ಆರೈಕೆ
ಹಲ್ಲುಕಟ್ಟುಗಳು ತುಂಡಾಗದೆ ಇರುವುದಕ್ಕಾಗಿ ನೀವು ಈ ಕೆಳಗಿನವುಗಳನ್ನು ಸೇವಿಸಬಾರದು
– ಜೋಳ
– ಐಸ್‌ (ಅದನ್ನು ಚೀಪಬೇಡಿ)
– ಹಸಿ, ಇಡಿಯಾದ ಕ್ಯಾರೆಟ್‌ ಮತ್ತು ಗಟ್ಟಿಯಾದ ಸೇಬು
-ನೆಲಗಡಲೆ
-ಗಟ್ಟಿಯಾದ ಕ್ಯಾಂಡಿ
– ಹಲ್ಲುಕಟ್ಟುಗಳಿಗೆ ಅಂಟಿಕೊಳ್ಳಬಹುದಾದ ಯಾವುದೇ ರೀತಿಯ ಚೂಯಿಂಗ್ ಗಮ್‌ಗಳು
-ಗಟ್ಟಿಯಾದ ಮಾಂಸಾಹಾರ
-ಗಟ್ಟಿಯಾದ ತಿರುಳು/ತಳವುಳ್ಳ ಪಿಜಾl

ನೀವು ಎಷ್ಟು ದೀರ್ಘ‌ಕಾಲ ಬೇಕಾದರೂ ಹಲ್ಲುಕಟ್ಟುಗಳನ್ನು ಧರಿಸಿಕೊಂಡಿರಿ; ನಿಮ್ಮ ಆಥೊìಡಾಂಟಿಸ್ಟ್‌ರ ಸಲಹೆ ಮತ್ತು ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಿದರೆ ಫ‌ಲಿತಾಂಶ ಉತ್ತಮವಾಗಿರುತ್ತದೆ. ಆಹಾರ ಸೇವನೆಗೆ ಸಂಬಂಧಿಸಿ ಪಾಲಿಸಬೇಕಾದ ನಿಯಮಗಳು, ವರ್ಜಿಸಬೇಕಾದ ಆಹಾರ ಮತ್ತು ಹಲ್ಲುಕಟ್ಟು ಸಂಬಂಧಿ ನೋವಿಗೆ ಶಿಫಾರಸಾದ ಚಿಕಿತ್ಸೆಯನ್ನು ಪಡೆಯುವುದನ್ನೂ ಇದು ಒಳಗೊಂಡಿದೆ. ಹಲ್ಲುಕಟ್ಟು ಅಳವಡಿಸಿರುವ ಅವಧಿಯಲ್ಲಿ ಶಿಫಾರಸು ಮಾಡಿರುವ ವೇಳಾಪಟ್ಟಿಯ ಪ್ರಕಾರ ಆಥೊìಡಾಂಟಿಸ್ಟ್‌ ಬಳಿ ತಪಾಸಣೆಗೆ ತೆರಳಬೇಕು. ಇಷ್ಟಲ್ಲದೆ ಚಿಕಿತ್ಸೆ ಅವಧಿಯಲ್ಲಿ ನಿಮ್ಮ ಹಲ್ಲುಕಟ್ಟುಗಳು ಎಂದಾದರೂ ತುಂಡಾದರೆ ಹಾನಿಯನ್ನು ತಪ್ಪಿಸಲು ತತ್‌ಕ್ಷಣವೇ ದಂತವೈದ್ಯರನ್ನು ಭೇಟಿ ಮಾಡಬೇಕು.

-ಡಾ| ದಿವ್ಯಾ ಎಸ್‌.
ಅಸೋಸಿಯೇಟ್‌ ಪ್ರೊಫೆಸರ್‌
ಆರ್ಥೋಡೊಂಟಿಕ್ಸ್ ವಿಭಾಗ
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next