Advertisement

ನಿಮ್ಮ ಬಾಯಿಯ ಆರೋಗ್ಯವನ್ನು ಉತ್ತಮಪಡಿಸುವ ದಂತ ನೈರ್ಮಲ್ಯ ಕ್ರಮಗಳು

11:06 AM Apr 14, 2021 | Team Udayavani |

ನಮ್ಮ ಹಲ್ಲುಗಳಿಗೆ ಯಾವ ವಿಧವಾದ ಟೂತ್‌ಬ್ರಶ್‌ ಚೆನ್ನಾಗಿ ಹೊಂದಿಕೆಯಾಗುತ್ತದೆ ಅಥವಾ ಹಲ್ಲುಗಳನ್ನು ಬಿಳುಪಾಗಿಸಲು ಇದ್ದಿಲಿನ ಬಳಕೆ ಒಳ್ಳೆಯದೇ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತಿವೆಯೇ? ಇಲ್ಲಿ ನಿಮ್ಮ ಹಲ್ಲು ಮತ್ತು ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವ ವಿಚಾರದಲ್ಲಿ ಕೆಲವು ತಪ್ಪು ಕಲ್ಪನೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ.

Advertisement

ಕೋವಿಡ್‌-19 ಸಾಂಕ್ರಾಮಿಕದ ಈ ಕಾಲದಲ್ಲಿ ದೈನಿಕ ಚಟುವಟಿಕೆಗಳನ್ನು ಆರಂಭಿಸುವ ತರಾತುರಿ ಮತ್ತು ಮನೆಯ ವಿವಿಧ ಕೆಲಸಕಾರ್ಯಗಳ ಒತ್ತಡ ಹಾಗೂ ವೃತ್ತಿಪರ ಚಟುವಟಿಕೆಗಳ ಅನಿವಾರ್ಯದ ನಡುವೆ ನಮ್ಮ ನಿರ್ಲಕ್ಷ್ಯಕ್ಕೆ ತುತ್ತಾಗುವ ಒಂದು ಚಟುವಟಿಕೆ ಎಂದರೆ ಅದು ಹಲ್ಲುಗಳ ಶುಚಿತ್ವ, ನೈರ್ಮಲ್ಯ. ಬಾಯಿಯ ಆರೋಗ್ಯವನ್ನು ಸಾಮಾನ್ಯವಾಗಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಬಾಯಿ, ಹಲ್ಲು ಮತ್ತು ವಸಡುಗಳನ್ನು ಶುಚಿಯಾಗಿ ಮತ್ತು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವುದು ವಿವಿಧ ಕಾಯಿಲೆಗಳು ತಲೆದೋರುವುದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಿರಬೇಕು.

ಬಾಯಿ ಮತ್ತು ಹಲ್ಲುಗಳ ನೈರ್ಮಲ್ಯವನ್ನು ಕಡೆಗಣಿಸಿದರೆ ದೀರ್ಘ‌ಕಾಲದಲ್ಲಿ ಅದು ನಮ್ಮ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ನಿಜಾಂಶ ಅನೇಕರಿಗೆ ತಿಳಿದಿಲ್ಲ. ದಂತ ಆರೋಗ್ಯದತ್ತ ದೀರ್ಘ‌ಕಾಲದ ನಿರ್ಲಕ್ಷ್ಯವು ಹೃದ್ರೋಗಗಳು, ಕ್ಯಾನ್ಸರ್‌, ಮಧುಮೇಹ, ಡಿಮೆನ್ಶಿಯಾ, ಆರ್ಥೆಟಿಸ್‌ ಅಥವಾ ಗರ್ಭಧಾರಣೆಯ ಸಮಸ್ಯೆಯ ಜತೆಗೆ ದಂತಕುಳಿಗಳು ಮತ್ತು ವಸಡಿನ ಕಾಯಿಲೆಗಳಿಗೂ ಕಾರಣವಾಗುತ್ತದೆ. ಆದ್ದರಿಂದ ದಂತ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸರಿಯಾಗಿ ಬ್ರಶ್‌ ಮಾಡುವುದು, ಫ್ಲಾಸಿಂಗ್‌ ನಡೆಸುವುದು ಬಹಳ ನಿರ್ಣಾಯಕವಾಗಿದೆ.

ವಿರಾಮದ ಸಮಯದಲ್ಲಿ ನಮ್ಮ ಹಲ್ಲುಗಳನ್ನು ಶುಭ್ರವಾಗಿ ಇರಿಸಿಕೊಳ್ಳಲು ಯಾವ ಬಗೆಯ ಟೂತ್‌ಬ್ರಶ್‌ ಉಪಯೋಗಿಸಬೇಕು ಅಥವಾ ಇದ್ದಿಲು ಬಳಸಿ ಹಲ್ಲುಜ್ಜಬೇಕೇ ಎಂಬ ಆಲೋಚನೆಗಳು ಮನಸ್ಸಿನಲ್ಲಿ ಹಾದುಹೋಗಬಹುದು. ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಈ ಕೊರೊನಾ ಕಾಲದಲ್ಲಿ ಹೊಸ ಸಹಜತೆಯಾಗಿ ರೂಢಿಯಾಗಿದೆ. ಕ್ವಾರಂಟೈನ್‌ ಅವಧಿಯಲ್ಲಿ ಸಾಕಷ್ಟು ವಿರಾಮದ ಸಮಯವೂ ಇರುತ್ತದೆ. ಹೀಗಾಗಿ ದಂತ ಆರೋಗ್ಯದ ಬಗ್ಗೆ ಇರಬಹುದಾದ ತಪ್ಪು ಕಲ್ಪನೆಗಳನ್ನು ಬಗೆಹರಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದೆ.

ತಪ್ಪು ಕಲ್ಪನೆ 1: ಹಾರ್ಡ್‌ ಬ್ರಶ್‌ ಬ್ರಿಸ್ಟಲ್‌ಗ‌ಳು ಒಳ್ಳೆಯದು :

Advertisement

ನಿಜ: ಮೃದು ಬ್ರಿಸ್ಟಲ್‌ಗ‌ಳುಳ್ಳ, ಬಾಯಿಯ ಎಲ್ಲ ಮೂಲೆಗಳು, ಕಡೆ ಹಲ್ಲುಗಳು ಮತ್ತು ದವಡೆಯ ಮೂಲೆಯನ್ನು ಕೂಡ ಮುಟ್ಟಬಲ್ಲ ಸಣ್ಣ ತಲೆಯ ಬ್ರಶ್‌ಗಳನ್ನು ಉಪಯೋಗಿಸಿ. ಹಾರ್ಡ್‌ ಬ್ರಿಸ್ಟಲ್‌ಗ‌ಳು ಸಲ್ಲು ಮತ್ತು ವಸಡಿಗೆ ಹಾನಿ ಉಂಟುಮಾಡುತ್ತವೆ.

ತಪ್ಪು ಕಲ್ಪನೆ 2: ಪರಿಣಾಮಕಾರಿ ಹಲ್ಲುಜ್ಜುವಿಕೆಗೆ ಹೆಚ್ಚು ಟೂತ್‌ಪೇಸ್ಟ್‌ ಉಪಯೋಗಿಸಬೇಕು

ನಿಜ: ಟೂತ್‌ಬ್ರಶ್‌ನ ಮೇಲೆ ಸಣ್ಣ ತುಣುಕು ಅಥವಾ ಸರಿಯಾದ ಪ್ರಮಾಣದಲ್ಲಿ ಟೂತ್‌ಪೇಸ್ಟನ್ನು ಹಾಕಿಕೊಳ್ಳಬೇಕು. ಪೇಸ್ಟ್‌ ಬ್ರಿಸ್ಟಲ್‌ಗ‌ಳ ನಡುವೆ ಇಳಿದಿರಬೇಕು. ಟೂತ್‌ಪೇಸ್ಟ್‌ ಇರುವುದು ಫ್ಲೇವರ್‌ ಮತ್ತು ಫ್ರೆಶ್‌ನೆಸ್‌ಗಾಗಿ ಮಾತ್ರ. ಬ್ರಶ್‌ ಮಾಡುವ ವಿಧಾನ ಮತ್ತು ತಂತ್ರವೇ ಪ್ರಧಾನ.

ತಪ್ಪು ಕಲ್ಪನೆ 3:  ದೀರ್ಘ‌ಕಾಲ ಬ್ರಶ್‌  ಮಾಡುವುದು ಆರೋಗ್ಯಕರ :

ನಿಜ: ಗರಿಷ್ಠ ಐದು ನಿಮಿಷಗಳ ಕಾಲ ಬ್ರಶ್‌ ಮಾಡಿದರೆ ಸಾಕು. ಬಾಯಿಯಲ್ಲಿ ಬಾಕಿ ಉಳಿದಿರುವ ಆಹಾರ ತುಣುಕುಗಳ ಮೇಲೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಪ್ಪಿಸಲು ರಾತ್ರಿ ಹೊತ್ತು ಮಲಗುವುದಕ್ಕೆ ಮುನ್ನ ಬ್ರಶ್‌ ಮಾಡಬೇಕು ಎಂಬುದು ದಂತವೈದ್ಯರ ವಿಶೇಷ ಸೂಚನೆಯಾಗಿರುತ್ತದೆ.

ಈ ಬ್ಯಾಕ್ಟೀರಿಯಾ ಬೆಳವಣಿಗೆ ಹಲ್ಲುಗಳ ಪದರಕ್ಕೆ ಹಾನಿ ಉಂಟುಮಾಡುತ್ತದೆ, ಇದರಿಂದಾಗಿ ದಂತಕ್ಷಯ ಮತ್ತು ಹುಳುಕು ಆರಂಭವಾಗುತ್ತದೆ.

ತಪ್ಪು ಕಲ್ಪನೆ 4: ದಂತಪುಡಿ ಅಥವಾ ಇದ್ದಿಲು ಹಲ್ಲುಗಳು ಶುಭ್ರವಾಗಿ ಇರಲು ಪರಿಣಾಮಕಾರಿ :

ನಿಜ: ಅಲ್ಲ! ಹಲ್ಲುಪುಡಿ ಮತ್ತು ಇದ್ದಿಲಿನಲ್ಲಿ ಹಲ್ಲುಗಳು ಕ್ಷಯಿಸುವುದಕ್ಕೆ ಕಾರಣವಾಗುವ ತೀಕ್ಷ್ಣ ಅಂಶಗಳು ಇರುತ್ತವೆ. ಇದರಿಂದ ಹಲ್ಲುಗಳ ಪದರಕ್ಕೆ ಹಾನಿಯಾಗಿ ತೀಕ್ಷ್ಣ ಸಂವೇದಿತ್ವ ಉಂಟಾಗುತ್ತದೆ. ಹಲ್ಲುಪುಡಿಯನ್ನು ಉಜ್ಜುವ ಪ್ರಕ್ರಿಯೆಯಲ್ಲಿ ಹಲ್ಲುಗಳ ಪದರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಹಲ್ಲುಜ್ಜುವುದಕ್ಕೆ ಯಾವಾಗಲೂ ಟೂತ್‌ಪೇಸ್ಟ್‌ ಉಪಯೋಗಿಸಿ.

ತಪ್ಪು ಕಲ್ಪನೆ 5: ಫ್ಲಾಸಿಂಗ್‌ ಕಡ್ಡಾಯ :

ನಿಜ: ಫ್ಲಾಸಿಂಗ್‌ ಮಾಡುವುದು ಕಡ್ಡಾಯವೇನಲ್ಲ. ಆದರೆ ಹಲ್ಲುಗಳ ನಡುವೆ ಅಂತರ ಇರುವವರು ಇದನ್ನು ಮಾಡಿದರೆ ಹಲ್ಲುಜ್ಜುವ ಬ್ರಶ್‌ನ ಬ್ರಿಸ್ಟಲ್‌ಗ‌ಳು ತಲುಪದ ಸಂದುಗಳು ಕೂಡ ಶುಚಿಯಾಗುತ್ತವೆ. ಹಲ್ಲುಜ್ಜುವ ವಿಧಾನ ಸಮರ್ಪಕವಾಗಿದ್ದರೆ ಫ್ಲಾಸಿಂಗ್‌ ಮಾಡಬೇಕಾದ ಅಗತ್ಯವಿಲ್ಲ. ಈ ಐದು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಅನುಸರಿಸಿದರೆ ನಮ್ಮ ಬಾಯಿಯ ಆರೋಗ್ಯವನ್ನು ದೀರ್ಘ‌ಕಾಲ ಚೆನ್ನಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

 

ಆನಂದದೀಪ್‌ ಶುಕ್ಲಾ

ಅಸೋಸಿಯೇಟ್‌ ಪ್ರೊಫೆಸರ್‌

ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ

ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next