Advertisement

ದಂತ ವೈದ್ಯರ ಸಾವು ಆತ್ಮಹತ್ಯೆಯಿಂದ? ಕಾಸರಗೋಡಿನಿಂದ ಕುಂದಾಪುರಕ್ಕೆ ಬಸ್‌ನಲ್ಲಿ ಬಂದಿದ್ದರು

09:23 AM Nov 17, 2022 | Team Udayavani |

ಕುಂದಾಪುರ : ಬದಿಯಡ್ಕದ ಹಿರಿಯ ದಂತವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದ್ದು ಎಂದು ಬಹುತೇಕ ಖಚಿತಗೊಂಡಿದೆ. ಆದರೆ ಮರಣೋತ್ತರ ಪರೀಕ್ಷಾ ವರದಿ, ಎಫ್ಎಸ್‌ಎಲ್‌ ವರದಿ ಹಾಗೂ ಪೊಲೀಸರ ವಿವಿಧ ತಂಡಗಳ ತನಿಖಾ ವರದಿ ಬಂದ ಬಳಿಕ ಇದು ಅಂತಿಮವಾಗಿ ಖಚಿತವಾಗಲಿದೆ.

Advertisement

ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ತನಿಖೆ ಪೂರ್ಣವಾದ ಬಳಿಕವೇ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚಿಂದ್ರ ಹಾಕೆ ಅವರು ಡಾ| ಕೃಷ್ಣಮೂರ್ತಿ ಅವರ ಸಾವಿನ ತನಿಖೆಗೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌ ಕೆ. ಅವರ ಮೇಲುಸ್ತುವಾರಿಯಲ್ಲಿ ಕುಂದಾಪುರ ಸಿಪಿಐ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಮೂವರು ಎಸ್‌ಐಗಳು ಇರುವ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡ ಬದಿಯಡ್ಕಕ್ಕೂ ಭೇಟಿ ನೀಡಿತ್ತಲ್ಲದೇ ಡಾ| ಕೃಷ್ಣಮೂರ್ತಿ ಅವರು ಬದಿಯಡ್ಕದಿಂದ ಕುಂದಾಪುರ ತಲುಪಿದ ಬಗೆಯನ್ನು ಬೆನ್ನತ್ತಿದೆ.

ಬದಿಯಡ್ಕದಿಂದ ನಾಪತ್ತೆಯಾಗಿ ಕುಂದಾಪುರ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿರುವುದು ಕೂಡ ನಿಗೂಢವಾಗಿದ್ದು ಕುಟುಂಬಿ ಕರು ಹಾಗೂ ಸ್ನೇಹಿತರು ಸಂಶಯ ವ್ಯಕ್ತಪಡಿಸಿದ್ದರು.

ಬದಿಯಡ್ಕ‌ ಪೊಲೀಸರ ತನಿಖೆ
ವೈದ್ಯರ ಸಾವಿಗೆ ಸಂಬಂಧಿಸಿದಂತೆ ಬದಿಯಡ್ಕ‌ ಪೊಲೀಸ್‌ ತಂಡ ಕೂಡ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಈಗಾಗಲೇ ಘಟನೆಗೆ ಸಂಬಂಧಿಸಿ ಕೆಲವರನ್ನು ಬಂಧಿಸಿರುವ
ಪೊಲೀಸರು ಅವರಿಂದ ಇತರ ಮಾಹಿತಿಗಳನ್ನು ಪಡೆಯು ತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಸರಗೋಡಿನಿಂದ ಕುಂದಾಪುರಕ್ಕೆ ಬಸ್‌ನಲ್ಲಿ ಬಂದಿದ್ದರು
ಬದಿಯಡ್ಕದ ದಂತವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರು ಕೆಎಸ್ಸಾರ್ಟಿಸಿ ಬಸ್‌ ಮೂಲಕ ಕುಂದಾಪುರ ಬಸ್‌ ನಿಲ್ದಾಣ ತಲುಪಿದ್ದು ಬಳಿಕ ಶಾಸ್ತ್ರೀ ಸರ್ಕಲ್‌ಗೆ ಬಂದಿರುವುದು ಖಚಿತವಾಗಿದೆ.

Advertisement

ಅಲ್ಲಿಂದ ಮುಂದಕ್ಕೆ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿ ಪ್ರದೇಶಕ್ಕೆ ಭೇಟಿ ನೀಡಿದ ಬಗೆ ಎಂತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ನೇರ ಅಲ್ಲಿಗೇ ಹೋದರೇ?, ಅದಕ್ಕೂ ಮುನ್ನ ಬೇರೆಲ್ಲಿಗಾದರೂ ಹೋಗಿದ್ದರೇ?, ಅಲ್ಲಿಗೇ ಏಕೆ ಹೋದರು?, ನಿರ್ಜನ ಪ್ರದೇಶ ಎಂದು ಆ ಭಾಗವನ್ನು ಆಯ್ದುಕೊಂಡರೇ?, ಇಷ್ಟಕ್ಕೂ ನೂರಾರು ಕಿ.ಮೀ. ದೂರದ ಬದಿಯಡ್ಕದಿಂದ ಕುಂದಾಪುರಕ್ಕೆ ಯಾಕೆ ಬಂದರು ಮೊದಲಾದ ಸಂಶಯಗಳಿಗೆ ತನಿಖೆಯಿಂದ ಉತ್ತರ ಸಿಗಲಿದೆ.

ಇದಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ಫ‌ೂಟೇಜ್‌ಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಾವಿಗೆ ಮುನ್ನ ಅವರ ಕ್ಲಿನಿಕ್‌ನಲ್ಲಿ ನಡೆದ ಘಟನೆಗಳು ಹಾಗೂ ಅದರಿಂದ ಮಾನಸಿಕವಾಗಿ ಬೇಸತ್ತು, ಅವಮಾನಿತರಾಗಿ ಆತ್ಮಹತ್ಯೆಯಂತಹ ನಿರ್ಧಾರ ಮಾಡಿದರೇ ಎಂಬ ಬಗ್ಗೆ ತನಿಖೆ ಬೆಳಕು ಚೆಲ್ಲಲಿದೆ. ನಿಜಕ್ಕೂ ಭೂಮಾಫಿಯಾ, ಮೆಡಿಕಲ್‌ ಮಾಫಿಯಾದ ಕರಾಮತ್ತು ಈ ಘಟನೆಯಲ್ಲಿ ಇದೆಯೇ ಇಲ್ಲವೇ ಎಂಬ ಕುರಿತಾಗಿಯೂ ತನಿಖೆ ನಡೆಯಲಿದೆ. ಈ ಮೂಲಕ ಎಲ್ಲ ಸಂಶಯಗಳನ್ನು ದೂರೀಕರಿಸುವ ನಿಟ್ಟಿನಲ್ಲಿ ಪೊಲೀಸರ ತಂಡ ಶ್ರಮಿಸುತ್ತಿದೆ.

ಇದನ್ನೂ ಓದಿ : ಮಂಗಳೂರು : ಕೋಸ್ಟ್‌ಗಾರ್ಡ್‌ಗೆ “ಎಎಲ್‌ಎಚ್‌ ಹೆಲಿಕಾಪ್ಟರ್‌ ಸಿಜಿ 87′ ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next