ಹುಬ್ಬಳ್ಳಿ: ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಸಾರ್ವಜನಿಕ ಸಮ್ಮುಖದಲ್ಲಿ ಚರ್ಚೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮೂರುಸಾವಿರ ಮಠದ ಜಗದ್ಗುರುಗಳ ಪೂರ್ವಾನುಮತಿ ಪಡೆದಿಲ್ಲ. ಅಲ್ಲದೆ ಪೊಲೀಸ್ ಆಯುಕ್ತರು ಕಾನೂನು, ಸುವ್ಯವಸ್ಥೆ ಹಿತದೃಷ್ಟಿಯಿಂದ ಮಠದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದು ಸೂಕ್ತವಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ನಿಯೋಜನೆಗೊಂಡ ಉಭಯತರ ಚರ್ಚೆಗೆ ಮಠದಿಂದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೆಂದು ಮೂರುಸಾವಿರ ಮಠದ ಉನ್ನತ ಸಮಿತಿಯ ಸದಸ್ಯರಾದ ಶಂಕರಣ್ಣ ಮುನವಳ್ಳಿ, ಸಂಚಾಲಕ ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ.
ಉಭಯತರು ವೀರಶೈವ ಲಿಂಗಾಯತ ಧರ್ಮದ ಕುರಿತು ಸಾರ್ವಜನಿಕ ಸಮ್ಮುಖದಲ್ಲಿ ಚರ್ಚೆಗೆ ಮೂರುಸಾವಿರಮಠದ ಆವರಣದಲ್ಲಿ ಡಿ. 30ರಂದು ಬೆಳಗ್ಗೆ 11:00 ಗಂಟೆಗೆ ನಿಗದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಉಭಯತರು ಸ್ಥಳ ನಿಗದಿ ಮಾಡುವ ಪೂರ್ವದಲ್ಲಿ ಮೂರುಸಾವಿರ ಮಠದ ಜಗದ್ಗುರುಗಳ ಪೂರ್ವಾನುಮತಿ ಪಡೆದಿಲ್ಲ. ಜೊತೆಗೆ ಮಠವು ಈಗ ತಾನೆ ವಿವಾದದಿಂದ ಕೊಂಚ ಹೊರಬಂದಿದೆ. ಇಂತಹ ಸ್ಥಿತಿಯಲ್ಲಿ ಮತ್ತೂಂದು ವಿವಾದಾತ್ಮಕ ವಿಷಯದ ಚರ್ಚೆಗಾಗಿ ಮಠವನ್ನೇ ಆಯ್ದುಕೊಂಡಿರುವುದು ವಿಷಾದನೀಯ ಎಂದರು.
ಮೂರುಸಾವಿರ ಮಠದಲ್ಲಿ ಬಹಿರಂಗ ಚರ್ಚೆಗೆ ಸ್ಥಳ ನಿಯೋಜನೆ ಮಾಡುವ ಪೂರ್ವದಲ್ಲಿ ಅಧಿಕೃತ ಪರವಾನಗಿ ಪಡೆದಿರುವ ಬಗ್ಗೆ ಹು-ಧಾ ಪೊಲೀಸ್ ಆಯುಕ್ತರು ಮಠಕ್ಕೆ ಪತ್ರದ ಮುಖಾಂತರ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಪೊಲೀಸ್ ಬಂದೋಬಸ್ತ್ಗೆ ನಿಯೋಜನೆಗೊಂಡ ಪೊಲೀಸರಿಗೆ ವೆಚ್ಚವನ್ನು ಮಠವೇ ಭರಿಸಬೇಕೆಂದು ತಿಳಿಸಿದ್ದಾರೆ. ಜೊತೆಗೆ, ಅವಳಿ ನಗರದಲ್ಲಿ ಮಹದಾಯಿ ಯೋಜನೆಯ ಹೋರಾಟಗಳು ನಡೆಯುತ್ತಿರುವುದರಿಂದ ಅದಕ್ಕಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದು ಸೂಕ್ತವಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ನಿಯೋಜನೆಗೊಂಡ ಉಭಯತರ ಚರ್ಚೆಗೆ ಮಠದ ಹಿತದೃಷ್ಟಿಯಿಂದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.