ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಕಿರುಅರಣ್ಯ ಉತ್ಪನ್ನ ಸಂಗ್ರಹಿಸಲು ತೆರಳಿದ್ದ ವ್ಯಕ್ತಿ ಮೃತಪಟ್ಟು 3 ವರ್ಷ ಸಮೀಪಿಸುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಸೂಕ್ತ ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಏನಿದು ಪ್ರಕರಣ: ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನ ನಿವಾಸಿಯಾದ ಗುಂಡಲ ಮಾದೇಗೌಡ(60) ಎಂಬುವವರು 2019ರ ಮಾರ್ಚ್ 4ರಂದು ಪುರಾಣಿಪೋಡಿನ ಪಕ್ಕದಲ್ಲಿರುವ ಯರಕಟ್ಟೆಪೋಡಿಗೆ ಹೋಗುವ ಹಾದಿಯಲ್ಲಿ ಉಪ್ಪುಹಳ್ಳ ಬೋರೆಯ ಬಳಿ ಕಾಡು ಪ್ರಾಣಿ ದಾಳಿ ನಡೆಸಿದ್ದರಿಂದ ಮೃತಪಟ್ಟಿದ್ದರು. ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಮೃತ ವ್ಯಕ್ತಿಬಳಿಯಿದ್ದ ವಸ್ತುಗಳನ್ನು ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ರವಾನಿಸಿದ್ದರು. ವರದಿಯಲ್ಲಿ ಮೃತವ್ಯಕ್ತಿಯ ತಲೆಬುರುಡೆಗೆ ಗಾಯವಾಗಿದ್ದು,ಇದು ವನ್ಯಪ್ರಾಣಿಯ ದಾಳಿಯಿಂದಮೃತಪಟ್ಟಿರಬಹುದು ಎಂದು ವರದಿ ನೀಡಲಾಗಿತ್ತು.
ಪರಿಹಾರ ನೀಡಲು ನಿರಾಕರಣೆ: ಆದರೆ, ಅರಣ್ಯ ಇಲಾಖೆ ಇವರಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ಇದಕ್ಕೆ ಇಲಾಖೆ ನೀಡುವ ಕಾರಣ ಮೃತಪಟ್ಟ ವ್ಯಕ್ತಿ ವನ್ಯಪ್ರಾಣಿಯಿಂದಲೇ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಖಚಿತತೆ ಇಲ್ಲ. ವ್ಯಕ್ತಿ ಮೃತಪಟ್ಟಿರುವುದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಪ್ರದೇಶದ ಕೋರ್‌ಜೋನ್ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲದೆ ಇವರು ಗುಂಡಲ ಮಾದೇಗೌಡ ಎಂಬುದಕ್ಕೆಡಿಎನ್‌ಎ ವರದಿಯೂ ಇಲ್ಲ, ಸೂಕ್ತ ದಾಖಲೆ ಇಲ್ಲ. ಹೀಗಾಗಿ ಪರಿಹಾರ ನೀಡುವುದಿಲ್ಲ ಎಂದು ಇಲಾಖೆ ಸಬೂಬು ನೀಡುತ್ತಾ ಬಂದಿದೆ.
ಮಡದಿ, ಮಕ್ಕಳ ಅಳಲು: ಮೃತ ಮಾದೇಗೌಡರಿಗೆ ಪತ್ನಿ ನಂಜಮ್ಮ, ಮಗಳು ಮಾದೇವಿ ಹಾಗೂ ಮಗ ಜಡೆಯ ಇದ್ದಾನೆ. ಈ ಕುಟುಂಬ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಿ ಜೀವನ ನಡೆಸುತ್ತಿತ್ತು. ಜೀವನಕ್ಕೆ ಆಸರೆಯಾಗಿದ್ದ ನನ್ನ ಗಂಡ ಕಾಡುಪ್ರಾಣಿಯಿಂದ ಮೃತಪಟ್ಟಿದ್ದಾರೆ. ಇದಕ್ಕೆ ಈ ಸ್ಥಳದಲ್ಲಿ ಸಿಕ್ಕಿರುವ ಬಟ್ಟೆ, ಚಪ್ಪಲಿ, ಕೊಡಲಿ ಸಾಕ್ಷಿಯಾಗಿದೆ. ಇದಲ್ಲದೆ ಕೇವಲ ಮೂಳೆಗಳು ಮಾತ್ರ ಲಭಿಸಿವೆ. ಇವೆಲ್ಲ ನಮ್ಮ ಯಜಮಾನರದೆ ಆಗಿದೆ. ಜೊತೆಗೆ ಕಾಡಿನಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಸರ್ಕಾರವೇ ಸೌಲಭ್ಯ ನೀಡಿದೆ ಈ ಸಂದರ್ಭದಲ್ಲಿ ಕಾಡುಪ್ರಾಣಿ ದಾಳಿಗೆ ನನ್ನ ಪತಿ ಬಲಿಯಾಗಿದ್ದಾರೆ. ಆದರೆ, ಅರಣ್ಯಇಲಾಖೆ ನಮಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ. ನಾವು ಕಚೇರಿಗಳನ್ನು ಅಲೆದುಸಾಕಾಗಿದೆ ಪತ್ನಿ ನಂಜಮ್ಮ ಅಳಲು ತೋಡಿಕೊಂಡಿದ್ದಾರೆ.
ಗುಂಡಲ ಮಾದೇಗೌಡ ಮೃತಪಟ್ಟಿರುವುದು ಕಾಡುಪ್ರಾಣಿಗಳಿಂದಲೇ ಎಂಬುದಕ್ಕೆ ಸೂಕ್ತ ದಾಖಲೆಗಳಿಲ್ಲ.ಮರಣೋತ್ತರ ವರದಿ ವಿಳಂಬವಾಗಿರುವುದು ಕೂಡ ಸಮಸ್ಯೆಯಾಗುತ್ತದೆ. ಹಾಗಾಗಿ ಇವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ.
– ಡಾ|ಸಂತೋಷ್‌ಕುಮಾರ್‌ಉಪಅರಣ್ಯ ಸಂರಕ್ಷಣಾಧಿಕಾರಿ ಬಿಆರ್‌ಟಿ
-ಫೈರೋಜ್‌ಖಾನ್