Advertisement

ಡೆಂಗ್ಯೂ: ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಕ ಫಾಗಿಂಗ್‌, ನಿಯಂತ್ರಣ ಕಾರ್ಯಾಚರಣೆ.

12:44 AM Jul 21, 2019 | Team Udayavani |

ಮಹಾನಗರ: ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ನಗರಾದ್ಯಂತ ಫಾಗಿಂಗ್‌, ಸೊಳ್ಳೆನಾಶಕ ರಾಸಾಯನಿಕ ಸಿಂಪರಣೆ ಸೇರಿದಂತೆ ವ್ಯಾಪಕ ನಿಯಂತ್ರಣ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

Advertisement

ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷ ದಂಡ್‌, ಅರೆಕೆರೆಬೈಲು, ಜಲಜಮ್ಮ ಕಂಪೌಂಡ್‌, ಅಲೆಮಾನ್‌ ಕಂಪೌಂಡ್‌, ಮುಳಿಹಿತ್ಲು, ಬೋಳಾರ, ಅಂಬಾನಗರ, ಹೊಗೆಬಜಾರ್‌, ಜಪ್ಪು ಮಾರುಕಟ್ಟೆ, ಓಣಿಕೆರೆ ಬಲ್ಮಠ, ಕೊಡಿಯಾಲಬೈಲು, ಕದ್ರಿ, ವೆಲೆನ್ಸಿಯಾ, ಯೆಯ್ನಾಡಿ ಹಾಗೂ ಸುರತ್ಕಲ್‌, ಕೃಷ್ಣಾಪುರ ಮೊದಲಾದ ಪ್ರದೇಶಗಳನ್ನು ಪ್ರಧಾನವಾಗಿಟ್ಟುಕೊಂಡು ಫಾಗಿಂಗ್‌ ನಡೆಸಲಾಗುತ್ತಿದ್ದು ಶನಿವಾರ ಪಾಲಿಕೆಯ ಸಿಬಂದಿ ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಿದ್ದಾರೆ.

ಫಾಗಿಂಗ್‌ ನಿರಂತರವಾಗಿ ಮುಂದುವರಿಯಲ್ಲಿದ್ದು ಡೆಂಗ್ಯೂ ಮತ್ತು ಜ್ವರ ಹೆಚ್ಚು ಕಾಣಿಸಿಕೊಂಡಿರುವ ಹಾಗೂ ಸಂಭಾವ್ಯ ಪ್ರದೇಶಗಳನ್ನು ಆದ್ಯತೆಯಾಗಿಟ್ಟುಕೊಂಡು ನಡೆಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ನಿಟ್ಟಿನಲ್ಲೂ ರಾಸಾಯನಿಕ ಸಿಂಪರಣೆ ಕಾರ್ಯನಡೆಸಲಾಗುತ್ತಿದೆ. ಪಾಲಿಕೆಯ ಎಂಪಿಡಬ್ಲ್ಯು ಸಿಬಂದಿ, ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ನಸಿಂìಗ್‌ ಕಾಲೇಜುಗಳ ವಿದ್ಯಾರ್ಥಿಗಳು ನಗರದ ವಿವಿಧ ವಾರ್ಡ್‌ಗಳಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಲಾ ಇಬ್ಬರು ಸದಸ್ಯರನ್ನು ಒಳಗೊಂಡಿರುವ 200 ತಂಡಗಳನ್ನು ರಚಿಸಲಾಗಿದೆ. ಫಾಗಿಂಗ್‌, ಕೀಟನಾಶಕ ರಾಸಾಯಿಕ ಸಿಂಪರಣೆ, ಜಾಗೃತಿ ಸಹಿತ ಡೆಂಗ್ಯೂ ನಿಯಂತ್ರಣ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಣ ಉಸ್ತುವಾರಿಗೆ 4 ತಂಡಗಳು
ಮಹಾನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಾಚರಣೆ ಉಸ್ತುವಾರಿಗೆ ಜಿಲ್ಲಾಧಿಕಾರಿಯವರು ನೇಮಿಸಿರುವ ಹಿರಿಯ ಅಧಿಕಾರಿಗಳ ನೇತೃತ್ವದ 4 ತಂಡಗಳು ಕಾರ್ಯೋನ್ಮುಖವಾಗಿವೆ. ಪ್ರೊಬೆಸನರಿ ಐಎಎಸ್‌ ಅಧಿಕಾರಿ ರಾಹುಲ್‌ ಶಿಂಧೆ ಹಾಗೂ ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್‌ ಅವರ ನೇತೃತ್ವದಲ್ಲಿ ಕಾರ್ಯಯೋಜನೆ ಹಾಗೂ ಅಂಕಿ ಅಂಶಗಳ ಸಂಗ್ರಹ ತಂಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮತ್ತು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ ಕುಲಾಲ್‌ ಅವರ ನೇತೃತ್ವದಲ್ಲಿ ರೋಗ ಉತ್ಪತಿ ತಾಣಗಳ ನಿರ್ಮೂಲನ ತಂಡ, ಮನಪಾ ಉಪಾಯುಕ್ತೆ ಗಾಯತ್ರಿ ನಾಯಕ್‌, ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಹಾಗೂ ಲೇಡಿಗೋಶನ್‌ ಆಸ್ಪತ್ರೆಯ ಆರ್‌ಎಂಒ ಡಾ| ದುರ್ಗಾಪ್ರಸಾದ್‌ ಅವರ ನೇತೃತ್ವದ ಮಾಹಿತಿ ಮತ್ತು ಸಂವಹನ ತಂಡ ಹಾಗೂ ಪಾಲಿಕೆ ಆಯುಕ್ತ ಮಹಮ್ಮದ್‌ ನಜೀರ್‌ ಹಾಗೂ ಪರಿಸರ ಎಂಜಿನಿಯರ್‌ ಮಧು ಅವರ ನೇತೃತ್ವದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ಛತಾ ಕಾರ್ಯಉಸ್ತುವಾರಿ ತಂಡಗಳನ್ನು ರಚಿಸಲಾಗಿದೆ. ಈ ಅಧಿಕಾರಿಗಳು ತಮ್ಮ ತಂಡಕ್ಕೆ ವಹಿಸಿಕೊಟ್ಟಿರುವ ಕಾರ್ಯಗಳನ್ನು ಸಿಬಂದಿಗಳ ಮೂಲಕ ಸಮರ್ಪಕವಾಗಿ ನಿರ್ವಹಿಸಿ ಪ್ರತಿದಿನ ಸಂಜೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಭೆ ಸೇರಿ ವರದಿಗಳನ್ನು ಜಿಲ್ಲಾಧಿಕಾರಿಯವರಿಗೆ ನೀಡಬೇಕಿದೆ.

Advertisement

ಜಾಗೃತಿ ಕಾರ್ಯಕ್ರಮ
ಡೆಂಗ್ಯೂ ರೋಗ ನಿಯಂತ್ರಣ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಮಹಾನಗರ ವ್ಯಾಪ್ತಿಯಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಕರಪತ್ರಗಳನ್ನು ಮುದ್ರಿಸಲಾಗಿದ್ದು ಇವುಗಳನ್ನು ಮನೆಮನೆಗಳಿಗೆ ವಿತರಿಸಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಶಾಲೆಗಳಿಗೂ ತೆರಳಿ ವಿದ್ಯಾರ್ಥಿಗಳಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು. ಇದಲ್ಲದೆ ವಾಹನಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ವ್ಯಾಪಕ ಕ್ರಮ
ಮನಪಾ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಈಗಾಗಲೇ ವ್ಯಾಪಕ ಕಾರ್ಯಾಚರಣೆಗಳು ನಡೆಯುತ್ತಿವೆ. ಜ್ವರ ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 200 ತಂಡಗಳನ್ನು ರಚಿಸಲಾಗಿದ್ದು ಮನೆಮನೆ ಭೇಟಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 - ಡಾ| ಮಂಜಯ್ಯ ಶೆಟ್ಟಿ ,
ಮನಪಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next