Advertisement

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

10:29 PM Jul 05, 2024 | Team Udayavani |

ಹುಣಸೂರು (ಮೈಸೂರು ಜಿಲ್ಲೆ) :  ಡೆಂಗ್ಯೂ ಚಿಕಿತ್ಸೆಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳನ್ನು ಮೀಸಲಿರಿಸಿ, ಪ್ರತ್ಯೇಕ ವಾರ್ಡ್,  ಅಗತ್ಯ ಔಷಧ ದಾಸ್ತಾನು ಇಡಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹದೇವ ಸ್ವಾಮಿಯವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಸೂಚಿಸಿದರು.
ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಅವರು ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮೈಸೂರು ನಂತರ ಹುಣಸೂರು ಅತಿ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದರು.

Advertisement

ಹುಣಸೂರು ತಾಲೂಕಿನಲ್ಲಿ ಜು.5ರ ಶುಕ್ರವಾರ 10 ಪ್ರಕರಣ ಸೇರಿದಂತೆ ಒಟ್ಟು 96 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 13 ಪ್ರಕರಣ ಸಕ್ರಿಯವಾಗಿದೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಪ್ರಕರಣಗಳು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ, ಆದರೂ ಹುಣಸೂರಿನಲ್ಲಿ ಇತರೆ ಸಾಮಾನ್ಯ ಜ್ವರ ಪ್ರಕರಣ ಹೆಚ್ಚು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದರು.

10 ಹಾಸಿಗೆಗಳ ತೀವ್ರ  ನಿಗಾ ಘಟಕ ಆರಂಭ:
ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ತುರ್ತು ನಿಗಾ ಘಟಕ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ 5 ಹಾಸಿಗೆ ಸಿದ್ಧತೆಗೆ ಆದೇಶಿಸಲಾಗಿದೆ. ಇದಲ್ಲದೆ ಡೆಂಗಿ ಜ್ವರ ಚಿಕಿತ್ಸೆಗೆ ದಿನದ ೨೪ಗಂಟೆ ನಿಗಾವಹಿಸಲು ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದು, ಇವರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರು ಹಾಗೂ ಸಮುದಾಯ ಆರೋಗ್ಯ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು.
ಆರೋಗ್ಯ ಇಲಾಖೆ ಸುಪರ್ಧಿಯಲ್ಲಿರುವ ಮೈಸೂರು ಜಿಲ್ಲಾ ಔಷಧಿ ದಾಸ್ತಾನು ಗೋದಾಮಿನಲ್ಲಿ ವಿವಿಧ ಕಾಯಿಲೆಗಳಿಗೆ ಸಂಬಅಧಿಸಿದ ಅಗತ್ಯ ೪೬೩ ವಿವಿಧ ಔಷಧಿಗಳು ದಾಸ್ತಾನು ಮಾಡಲಾಗಿದೆ, ಹುಣಸೂರು ಆಸ್ಪತ್ರೆಗೆ ಕೊರತೆ ಇರುವ ಔಷಧಿ ಸರಬರಾಜು ಮಾಡಲು ಬೇಡಿಕೆ ಸಲ್ಲಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿದ್ದೇನೆಂದರು.

ಆಡಳಿತಾಧಿಕಾರಿಗೆ ತರಾಟೆ:
ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್ ನಲ್ಲಿ ಅವಧಿ ಮೀರಿದ್ದ ಔಷಧಿ ಹಾಗೂ ಗ್ಲೂಕೋಸ್ ದಾಸ್ತಾನು ವೀಕ್ಷಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿಯ ತರಾಟೆಗೊಳಪಡಿಸಿ ಔಷಧಿ ದಾಸ್ತಾನು ಸಮರ್ಪಕವಾಗಿ ನಿರ್ವಹಿಸಬೇಕು, ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು. ಡಿಎಚ್ ಒರೊಂದಿಗೆ ಡಾ.ಗಿರೀಶ್,ಡಾ.ಗುರುಮಲ್ಲಪ್ಪ ಜೊತೆಯಲ್ಲಿದ್ದರು.

ಸ್ವಯಂ ಚಿಕಿತ್ಸೆ ಪ್ರಾಣಕ್ಕೆ ಕುತ್ತು:
ಆರೋಗ್ಯ ಸಿಬ್ಬಂದಿ ನಾಗೇಂದ್ರ ಜ್ವರಕ್ಕೆ ಸ್ವಯಂ ಚಿಕಿತ್ಸೆ ಮಾಡಿಕೊಂಡು ಹೆಚ್ಚಾದ ನಂತರ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ಹೀಗಾಗದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್ ಮತ್ತಿತರ ಜ್ವರಕ್ಕೆ ಹೆಚ್ಚಿನ ಚಿಕಿತ್ಸೆ, ವಿಶ್ರಾಂತಿ ಬೇಕಿದ್ದು, ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಡಿಎಚ್‌ಒ ಸಾರ್ವಜನಿಕರಲ್ಲಿ ಮನವಿ  ಮಾಡಿದರು.

Advertisement

8 ಕೋಟಿ ರೂ. ಅನುದಾನ ಬಿಡುಗಡೆ:
ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿರುವ ಸರಕಾರಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು ಸರಕಾರ ಎಂಟು ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರ ಉಳಿಕೆ ಕಾಮಗಾರಿ ಮುಗಿಸಿ, ಇಲ್ಲಿನ ಆಸ್ಪತ್ರೆ  ಸ್ಥಳಾಂತರಿಸಿ  ಅಲ್ಲೇ ಚಿಕಿತ್ಸೆ ಆರಂಭಿಸುವುದಾಗಿ ಡಿಎಚ್‌ಒ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next