Advertisement

Dengue: ಜನರ ಪ್ರಾಣ ಹೋಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ: ಶೋಭಾ ಕರಂದ್ಲಾಜೆ

12:24 AM Jul 08, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಗಾಗಿ ಪರಸ್ಪರ ಒಳಜಗಳದಲ್ಲಿ ಮುಳುಗಿರುವ ಸರಕಾರ, ಜನರನ್ನು ಮರೆತಿದೆ. ರಾಜ್ಯದಲ್ಲಿ ಡೆಂಗ್ಯೂ, ಝೀಕಾ ವೈರಸ್‌ ಹೆಚ್ಚುತ್ತಿದೆ. ಜನರ ಪ್ರಾಣ ಹೋಗುವ ಮುನ್ನ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

Advertisement

ರವಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಡೆಂಗ್ಯೂ ಉಲ್ಬಣಿಸುತ್ತಿದ್ದು, ಝೀಕಾ ವೈರಾಣು ಸಹ ಬಂದಿರುವ ಮಾಹಿತಿ ಇದೆ. ಪ್ರತಿ ಆಸ್ಪತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ದಾಖಲಾಗುತ್ತಿದ್ದಾರೆ. ಸರಿಯಾಗಿ ಔಷಧ ಸಿಗುತ್ತಿಲ್ಲ. ಔಷಧ ಶುಲ್ಕ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರಕಾರ ನಿಗದಿಪಡಿಸಿರುವ ದರವನ್ನು ಖಾಸಗಿಯವರು ಪಡೆಯುತ್ತಿಲ್ಲ, ಆದೇಶ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.

ಡೆಂಗ್ಯೂ ಕಾರಣದಿಂದ ಬೆಂಗಳೂರಿನಲ್ಲಿ ಚಿಕ್ಕ ಹುಡುಗ ಮರಣ ಹೊಂದಿದ್ದಾನೆ. ಡೆಂಗ್ಯೂ ನಿಯಂತ್ರಣ ಮಾಡುವ ವಿಚಾರದಲ್ಲಿ ಸರಕಾರದ ವ್ಯವಸ್ಥೆ ಹದಗೆಟ್ಟಿದೆ. ಆರೋಗ್ಯ ಇಲಾಖೆ ನಿದ್ರೆಗೆ ಜಾರಿದೆ. ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಯಾರೂ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಎಷ್ಟೋ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತು ಅಲ್ಲಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆ ಹಾಗೂ ರೋಗಾಣು ಹೆಚ್ಚುತ್ತಿದೆ. ಈ ಬಗ್ಗೆ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಮಲಗಿದ ಸರಕಾರ ಸ್ಪಂದಿಸಲ್ಲ
ಇದು ಸ್ಪಂದಿಸುವ ಸರಕಾರ ಅಲ್ಲ. ಮಲಗಿರುವ ಸರಕಾರವಿದು. ಬಂಡೆಕಲ್ಲಿನ ಮೇಲೆ ನೀರು ಹಾಕಿದರೆ ಪ್ರಯೋಜನ ಇಲ್ಲದಂತಾಗಿದೆ. ಕೇವಲ ಸಿಎಂ ಯಾರಾಗಬೇಕು, ಉಪ ಮುಖ್ಯಮಂತ್ರಿ ಯಾರಾಗಬೇಕು ಎಂಬ ಒಳಜಗಳ ನಡೆಯುತ್ತಿದೆ. ಪರಸ್ಪರ ಒಳಜಗಳದ ಕಾರಣದಿಂದ ಕರ್ನಾಟಕದ ಜನರನ್ನು ಮರೆತಿದೆ. ಇನ್ನಷ್ಟು ಪ್ರಾಣ ಹೋಗುವ ಮೊದಲು ಎಚ್ಚೆತ್ತುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಅತ್ಯಾಚಾರ, ಕೊಲೆ ಹೆಚ್ಚುತ್ತಿದೆ. ಯಾರೂ ಕೇಳುವವರು ಇಲ್ಲದಂತಾಗಿದೆ. ಜನ ಸಾಯುವ ಮೊದಲು ಇನ್ನಾದರೂ ಎಚ್ಚೆತ್ತುಕೊಳ್ಳಿ. ಜನರನ್ನು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಿ. ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next