Advertisement
ಒಂದು ಸಮುದಾಯದ ಮನೆ ಮನೆಗಳಲ್ಲಿ ಜನರಿಗೆ ಡೆಂಗ್ಯೂ ಕಾಯಿಲೆ ಹರಡುತ್ತಿದ್ದರೆ ಆ ಮನೆ, ಮನೆಗಳ ಪರಿಸರದಲ್ಲಿಯೇ ಈಡೀಸ್ ಈಜಿಪ್ಟೆ„ ಸೊಳ್ಳೆಗಳು ಉತ್ಪಾದನೆಗೊಂಡು ಮನೆಮಂದಿಗೆ ರೋಗ ಹರಡುತ್ತಿರುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಈಡೀಸ್ ಈಜಿಪ್ಟೆ„ ಸೊಳ್ಳೆಗಳು ಕೇವಲ 400ರಿಂದ 500 ಮೀಟರ್ ದೂರ ಮಾತ್ರ ಹಾರ ಬಲ್ಲವು. ಆದ್ದರಿಂದ ತಮ್ಮ ತಮ್ಮ ಮನೆಯ ಸುತ್ತಮುತ್ತ 500 ಮೀಟರ್ ಪರಿಸರ ಸ್ವತ್ಛವಾಗಿಟ್ಟುಕೊಂಡರೆ, ನೀರು ನಿಲ್ಲದಂತೆ ನೋಡಿಕೊಂಡರೆ ಆ ಪ್ರದೇಶದಲ್ಲಿ ಡೆಂಗ್ಯೂ ಹರಡುವುದನ್ನು ನಿಯಂತ್ರಣಕ್ಕೆ ತರಬಹುದು. ಮಲೇರಿಯಾಕಾರಕ ಅನಾಫಿಲಿಸ್ ಸೊಳ್ಳೆಗಳು ಸಾಮಾನ್ಯವಾಗಿ 3ರಿಂದ 5 ಕಿಲೋಮೀಟರ್ ದೂರ ಹಾರಬಲ್ಲವು.
Related Articles
Advertisement
ಡೆಂಗ್ಯೂ ಲಕ್ಷಣಗಳುಡೆಂಗ್ಯೂ ಹರಡುವ ಈಡೀಸ್ ಈಜಿಪ್ಟೆ„ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿಗೆ ಕಚ್ಚುವಂತಹವು. ಸೊಂಕಿರುವ ಸೊಳ್ಳೆ ಕಚ್ಚಿದ 5ರಿಂದ 7 ದಿನಗಳ ಅನಂತರ ರೋಗದ ಪ್ರಾಥಮಿಕ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಈ ರೋಗವನ್ನು ಕೆಳಕಂಡ ಕೆಲವು ಲಕ್ಷಣಗಳಿಂದ ಗುರುತಿಸಬಹುದು. 1. ಇದ್ದಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು.
2. ತೀವ್ರ ತರನಾದ ತಲೆನೋವು -ಹೆಚ್ಚಾಗಿ ಹಣೆಯ ಮುಂಭಾಗದಲ್ಲಿ ಕಾಣಿಸುವುದು
3. ಕಣ್ಣಿನ ಹಿಂಭಾಗದ ನೋವು -ಕಣ್ಣಿನ ಚಲನೆಯಿಂದ ನೋವು ಹೆಚ್ಚಾಗುತ್ತದೆ,
4. ಮೈಕೈ ನೋವು ಮತ್ತು ಕೀಲು ನೋವು, ವಾಕರಿಕೆ ಮತ್ತು ವಾಂತಿ.
5. ಮೈ ಮೇಲೆ ನವಿರಾದ ಕೆಂಪು ಬಣ್ಣದ ತಡಿಕೆ ಕಾಣಿಸಿಕೊಳ್ಳುವುದು. ಪ್ಲೇಟ್‌ಲೆಟ್ ಕುಸಿತ
ಈ ರೋಗ ಉಂಟಾದಾಗ ಕೆಲವರಲ್ಲಿ ರಕ್ತ ಕಣಗಳು ಮುಖ್ಯವಾಗಿ ಪ್ಲೇಟ್‌ಲೆಟ್‌ಗಳು ಏಕಾಏಕಿ ಕಡಿಮೆಯಾಗಿ ದೇಹದ ವಿವಿಧ ಭಾಗಗಳಿಂದ (ಬಾಯಿ, ವಸಡು, ಮೂಗು, ಕರುಳು, ಚರ್ಮ) ರಕ್ತಸ್ರಾವ ಉಂಟಾಗಬಹುದು (DHF) ಮತ್ತು ಕೆಲವರಲ್ಲಿ ಹೆಚ್ಚು ಹೆಚ್ಚಾಗಿ ರಕ್ತನಾಳಗಳಿಂದ ಪ್ಲಾಸ್ಮಾ ದ್ರವ ಸೋರಿಕೆ ಉಂಟಾಗಿ ರೋಗಿಗೆ ನಿರ್ಜಲೀಕರಣ (De- Hydration) ಉಂಟಾಗಬಹುದು. ಆಗ ರೋಗಿಗೆ ರಕ್ತದ ಒತ್ತಡ ಕಡಿಮೆಯಾಗಿ ಶಾಕ್‌ನಂತಹ ಲಕ್ಷಣಗಳು, ಸ್ಥಿತಿ ಉಂಟಾಗಬಹುದು (DSS). ಮಕ್ಕಳು, ಗರ್ಭಿಣಿಯರು, ವೃದ್ಧರು ಹೃದಯರೋಗ ಇರುವವರಿಗೆ, ಸ್ಟಿರಾಯ್ಡ ಹಾಗೂ NSAI ಚಿಕಿತ್ಸೆಯಲ್ಲಿರುವವರಿಗೆ ಕರುಳಿನಲ್ಲಿ ಹುಣ್ಣಿನಿಂದ ಬಳಲುತ್ತಿರುವವರಿಗೆ, ಇತರ ಯಾವುದೇ ರಕ್ತಸ್ರಾವ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಡೆಂಗ್ಯೂ ಗಂಭೀರವಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಂಥವರು ಹೆಚ್ಚು ಜಾಗ್ರತೆ ವಹಿಸುವುದು ಅಗತ್ಯ. ಸಾಮಾನ್ಯವಾಗಿ ಡೆಂಗ್ಯೂ ಬಾಧಿತರಲ್ಲಿ ಶೇ.10ಕ್ಕಿಂತ
ಕಡಿಮೆ ಜನರಿಗೆ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಬಹುದು ಹಾಗೂ ಶೇ.1ಕ್ಕಿಂತ ಕಡಿಮೆ ರೋಗಿಗಳಿಗೆ ಅದು ಮಾರಣಾಂತಿಕವಾಗಬಹುದು. ಈ ಮೇಲ್ಕಂಡ ಸಾಮಾನ್ಯ ಡೆಂಗ್ಯೂ ಜ್ವರದ ಲಕ್ಷಣಗಳ ಜತೆಗೆ ಕೆಲವೊಮ್ಮೆ, ಕೆಲವರಿಗೆ ಕೆಳಗಿನ ಯಾವುದಾದರೂ ತೀವ್ರವಾದ ಲಕ್ಷಣಗಳು ಕಂಡುಬರಬಹುದು.
1. ತೀವ್ರ ತೆರನಾದ ಮತ್ತು ಒಂದೇ ಸಮನೆ ಹೊಟ್ಟೆ ನೋವು.
2. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು.
3. ರಕ್ತ ಸಹಿತ ಅಥವಾ ರಕ್ತರಹಿತವಾದ ವಾಂತಿಯು ಪದೇ ಪದೇ ಆಗುವುದು.
4. ಡಾಂಬರಿನಂತಹ ಕಪ್ಪು ಮಲ ವಿಸರ್ಜನೆ.
5. ವಿಪರೀತ ಬಾಯಾರಿಕೆ (ಬಾಯಿ ಒಣಗುವುದು)
6. ತಣ್ಣನೆಯ ಬಿಳುಚಿಕೊಂಡ ಚರ್ಮ.
7. ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು. ಡೆಂಗ್ಯೂ ವಿಧಗಳು
ಡೆಂಗ್ಯೂ ಖಾಯಿಲೆಯಲ್ಲಿ ಸಾಮಾನ್ಯವಾಗಿ ಮೂರು ಹಂತ-ವಿಧಗಳಿವೆ. 1. ಸಾಮಾನ್ಯ ಡೆಂಗ್ಯೂ ಜ್ವರ
2. ಡೆಂಗ್ಯೂ ಹಿಮರೆಜಿಕ್ ಫೀವರ್ (ಈಏಊ)- ದೇಹದಲ್ಲಿ ಅಲ್ಲಲ್ಲಿ ರಕ್ತಸ್ರಾವ ಆಗುವುದು.
3. ಡೆಂಗ್ಯೂ ಶಾಕ್ ಸಿಂಡ್ರೋಮ್ (ಈಖಖ)- ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಡೆಂಗ್ಯೂ ಸೊಂಕು ತಗಲಿದವರಿಗೆ ಸಾಮಾನ್ಯವಾಗಿ ಕಂಡುಬರುವುದು ಸಾಮಾನ್ಯ ಡೆಂಗ್ಯೂ ಜ್ವರ. ಡೆಂಗ್ಯೂ ಜ್ವರ DEN1 ವೈರಾಣುವಿನಿಂದ ಬಂದಿದ್ದರೆ ಬೇಗ ಗುಣವಾಗಬಹುದು. ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೂಮ್ಮೆ Den2 ವೈರಾಣು ಮತ್ತು Den3 ವೈರಾಣು ಅಥವಾ Den 4 ವೈರಾಣುವಿನಿಂದ ಸೋಂಕು ಬಂದರೆ ರೋಗದ ಲಕ್ಷಣಗಳು ತೀವ್ರವಾಗಬಹುದು. ಹೆಚ್ಚಿನ ಸಾಮಾನ್ಯ ಡೆಂಗ್ಯೂ ಪೀಡಿತರಿಗೆ ಡೆಂಗ್ಯೂ ಸೋಂಕು ತಗುಲಿರುವ ಅರಿವಿಲ್ಲದೇ ತನ್ನಿಂದ ತಾನೇ ಕೇವಲ ಜ್ವರದ ಮಾತ್ರೆ, ವಿಶ್ರಾಂತಿ ಸಾಕಷ್ಟು ಪ್ರಮಾಣದ ದ್ರವರೂಪದ ಆಹಾರ ಸೇವನೆಯಿಂದ ಕಡಿಮೆಯಾಗಬಹುದು. ರೋಗ ಚಿಕಿತ್ಸೆ
ಡೆಂಗ್ಯೂ, ಮಲೇರಿಯಾ, ಇಲಿಜ್ವರ, ಮೆದುಳು ಜ್ವರ, ಎಚ್1ಎನ್1, ಮಂಗನ ಕಾಯಿಲೆ ಅಂತಹ ಖಾಯಿಲೆಗಳಿರುವ ಪ್ರದೇಶದಲ್ಲಿ ಜ್ವರ ಬಂದಲ್ಲಿ ನಿರ್ಲಕ್ಷ್ಯ ಮಾಡಬಾರದು. ಡೆಂಗ್ಯೂ ರೋಗದ ಚಿಕಿತ್ಸೆಗೆ ನಿರ್ದಿಷ್ಟವಾದ ಔಷಧ ಇರುವುದಿಲ್ಲ. ಜ್ವರಕ್ಕೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು. ಡೆಂಗ್ಯೂ ಜ್ವರ ಶಂಕಿತರಿಗೆ ಆಸ್ಪಿರಿನ್ ಮತ್ತು ಬ್ರೂಫಿನ್, ಡಿಕ್ಲೊಫೆನಾಕ್, ಮಾತ್ರೆ- ಮದ್ದು ನೀಡಬಾರದು. ಈ ಔಷಧಗಳು ಡೆಂಗ್ಯೂ ಇರಬಹುದಾದ ರೋಗಿಗಳಲ್ಲಿ ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸಬಹುದು. ಜ್ವರ ಬಂದ ಎರಡು ದಿನಗಳಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಜ್ವರದ ಮಾತ್ರೆಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ರಕ್ತ ತಪಾಸಣೆ ಮಾಡಿಸಬೇಕು. ಕಂಪ್ಲೀಟ್ ಬ್ಲಿಡ್ ಕೌಂಟ್, ಪ್ಲೇಟ್‌ಲೆಟ್ ಕೌಂಟ್ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ವೈದ್ಯರಿಗೆ ರೋಗಿಗೆ ಬಂದಿರುವ ರೋಗದ ಸ್ವರೂಪದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಮಲೇರಿಯಾ ಬಾಧಿತ ಪ್ರದೇಶಗಳಲ್ಲಿ ಮಲೇರಿಯಾ ಪರೀಕ್ಷೆ, ಇಲಿ ಜ್ವರ ಇರುವ ಪ್ರದೇಶಗಳಲ್ಲಿ ಅದಕ್ಕೆ ಪ್ರತ್ಯೇಕ ರಕ್ತ ಪರೀಕ್ಷೆ ಮಾಡುವುದು ಕೂಡ ಅಗತ್ಯ. ಈ ಪರೀಕ್ಷೆಗಳಲ್ಲಿ ಯಾವುದೇ ಕಾಯಿಲೆ ಪತ್ತೆಯಾಗದಿದ್ದಲ್ಲಿ ಹಾಗೂ ಜ್ವರ ಕಡಿಮೆಯಾಗದಿದ್ದರೆ ಎರಡು- ಮೂರು ದಿನ ಬಿಟ್ಟು ಪುನಃ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ರಕ್ತಸ್ರಾವ ಅಥವಾ ಇತರ ಯಾವುದೇ ತೀವ್ರವಾದ ಲಕ್ಷಣಗಳು ಯಾವುದೇ ಸಮಯದಲ್ಲಿ ಕಂಡು ಬಂದಲ್ಲಿ ರೋಗಿಯನ್ನು ಅತೀ ತುರ್ತಾಗಿ ವಿಶೇಷ ಸೌಲಭ್ಯಗಳಿರುವ ಆಸ್ಪತ್ರೆಗೆ ದಾಖಲಿಸಿ ಡೆಂಗ್ಯೂ ರಕ್ತ ಪರೀಕ್ಷೆ ಮಾಡಿ ಸರಿಯಾದ ಚಿಕಿತ್ಸೆ (ಮುಖ್ಯವಾಗಿ ನಿರ್ಜಲೀಕರಣ ತಡೆಯುವುದು, ರಕ್ತಸ್ರಾವ ತಡೆಯುವುದು, ರಕ್ತದ ಒತ್ತಡವನ್ನು ಅಗತ್ಯ ಪರಿಧಿಯಲ್ಲಿಡುವುದು) ಒದಗಿಸಬೇಕು. ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದ್ರವರೂಪದ ಆಹಾರವನ್ನು ಹೆಚ್ಚು ಹೆಚ್ಚು ಕುಡಿಯಲು ಕೊಡಬೇಕು. ಡೆಂಗ್ಯೂ ರೋಗದ ನಿಖರ ಪತ್ತೆಗೆ ಜ್ವರ ಬಂದ 5 ದಿನದ ಒಳಗಾದರೆ ಎನ್‌ಎಸ್‌ಐ ಪರೀಕ್ಷೆ, 5 ದಿನದ ಅನಂತರವಾದರೆ IgM, IgG, ELISA, RT- PC ಪರೀಕ್ಷೆಗಳು ಸಹಾಯಕವಾಗಿವೆ. ಈ ಪರೀಕ್ಷೆಗಳನ್ನು ಎಲ್ಲ ಜ್ವರ ಪೀಡಿತರಿಗೆ ನೇರವಾಗಿ ಮಾಡಿಸುವ ಅಗತ್ಯವಿಲ್ಲ. ಏಕೆಂದರೆ ಈ ಪರೀಕ್ಷೆಗಳು ದುಬಾರಿ ಹಾಗೂ ಎಲ್ಲ ಕಡೆಗಳಲ್ಲಿ ಲಭ್ಯವಿಲ್ಲ. ಡಾ| ಅಶ್ವಿನಿ ಕುಮಾರ್ ಗೋಪಾಡಿ,
ಅಡಿಶನಲ್ ಪ್ರೊಫೆಸರ್, ಕಮ್ಯೂನಿಟಿ ಮೆಡಿಸಿನ್ ವಿಭಾಗ,
ಕೆಎಂಸಿ ಮಣಿಪಾಲ.