Advertisement

ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ ಪತ್ತೆ

02:25 AM May 31, 2018 | Team Udayavani |

ಪುಂಜಾಲಕಟ್ಟೆ: ಡೆಂಗ್ಯೂ ಜ್ವರದ ಹಾವಳಿ ಆರಂಭವಾಗಿದ್ದು, ಬಂಟ್ವಾಳ ತಾಲೂಕಿನ ಉಳಿ ಮತ್ತು ದೇವಸ್ಯಮೂಡೂರು ಗ್ರಾಮಗಳಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗಿದೆ. ಉಳಿ ಗ್ರಾಮದ ಹೂರಿಂಜ, ಕಟ್ಟದ ಪಡ್ಪು ಕಡೆಗಳಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗಿದೆ. ಹೂರಿಂಜದ ಇಬ್ಬರು ಮತ್ತು ದೇವಸ್ಯಮೂಡೂರಿನ ಒಬ್ಬರು ದೈವಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಡೆಂಗ್ಯೂ ಜ್ವರ ಕಂಡುಬಂದಿದೆ. ಆದರೆ ಇಲ್ಲಿ ಇನ್ನೂ ಅನೇಕರಿಗೆ ಡೆಂಗ್ಯೂ ಬಾಧಿಸಿರುವುದು ವರದಿಯಾಗಿದೆ.

Advertisement

ದೈವಸ್ಥಳ ಪ್ರಾ.ಆ. ಕೇಂದ್ರದಿಂದ ವರದಿಯಾದಂತೆ ಈವರೆಗೆ ಒಟ್ಟು 3 ಪ್ರಕರಣಗಳು ದೃಢಪಟ್ಟಿವೆ. ಆದರೆ ಖಾಸಗಿ ವೈದ್ಯರಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿರುವವರ ಬಗ್ಗೆ ನಿಖರ ವಿವರ ದೊರಕಿಲ್ಲ. ಕೆಲವರು ಆರಂಭದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೆ, ಕೆಲವರು ಮಂಗಳೂರು, ಬಿ.ಸಿ. ರೋಡ್‌, ತುಂಬೆ, ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ. ಡೆಂಗ್ಯೂ ಅರಿವಿಲ್ಲದವರು ಕೇವಲ ಜ್ವರವೆಂದು ನಿರ್ಲಕ್ಷ್ಯಮಾಡಿ ಕೊನೆಗೆ ಅಪಾಯಕಾರಿ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ. ಡೆಂಗ್ಯೂ ದೃಢಪಟ್ಟ ತತ್‌ ಕ್ಷಣ ವೈದ್ಯಾಧಿಕಾರಿಗಳು, ಪರೀಕ್ಷಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಾ.ಆ. ಕೇಂದ್ರ, ಉಳಿ ಗ್ರಾ.ಪಂ. ವತಿಯಿಂದ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಫಾಗಿಂಗ್‌ ನಡೆಸಲಾಗಿದೆ ಎಂದು ಪಂ.ಅ. ಅಧಿಕಾರಿ ಶ್ರೀಧರ ಅವರು ತಿಳಿಸಿದ್ದಾರೆ.

ಮುಂಜಾಗ್ರತೆ ಅಗತ್ಯ
ಡೆಂಗ್ಯೂ ನಿರ್ಮೂಲನಕ್ಕೆ ಫಾಗಿಂಗ್‌ ನಡೆಸುವುದು ತಾತ್ಕಾಲಿಕ ಪರಿಹಾರವಾದರೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನೀರು ನಿಲ್ಲದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕಾಗಿದೆ. ರಬ್ಬರ್‌, ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ.

ಜಾಗೃತಿ, ಫಾಗಿಂಗ್‌
ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಕರಪತ್ರ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ. ಜ್ವರ ಪೀಡಿತ ಪ್ರದೇಶದಲ್ಲಿ ಫಾಗಿಂಗ್‌ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖಾ ಸಿಬಂದಿ ಮನೆಗಳಿಗೆ ತೆರಳಿ ಡೆಂಗ್ಯೂ ತಡೆಗೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾಹಿತಿ ನೀಡಲಾಗುತ್ತಿದೆ. ಪತ್ತೆಯಾದ ಮೂರೂ ಪ್ರಕರಣಗಳಲ್ಲಿಯೂ ರೋಗಿಗಳು ಚೇತರಿಸಿಕೊಂಡಿದ್ದಾರೆ.
– ಡಾ| ಪುಷ್ಪಲತಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದೈವಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next